6ನೇ ಬಾರಿ ಎಟಿಪಿ ಫೈನಲ್ಸ್‌ ಪ್ರಶಸ್ತಿ ಗೆದ್ದು ಫೆಡರರ್ ದಾಖಲೆ ಸರಿಗಟ್ಟಿದ ಜೋಕೋವಿಚ್‌

By Kannadaprabha News  |  First Published Nov 22, 2022, 10:00 AM IST

6ನೇ ಬಾರಿಗೆ ಪ್ರತಿಷ್ಠಿತ ಎಟಿಪಿ ಫೈನಲ್ಸ್‌ ಸಿಂಗಲ್ಸ್‌ ಟೂರ್ನಿಯಲ್ಲಿ ನೊವಾಕ್ ಜೋಕೋವಿಚ್ ಚಾಂಪಿಯನ್
ನಾರ್ವೆಯ ಕ್ಯಾಸ್ಪೆರ್‌ ರುಡ್‌ ವಿರುದ್ಧ ಭರ್ಜರಿ ಜಯ
ಅಂದಾಜು 38.4 ಕೋಟಿ ರುಪಾಯಿ ಬಹುಮಾನ ತಮ್ಮದಾಗಿಸಿಕೊಂಡ ಸರ್ಬಿಯಾದ ಟೆನಿಸಿಗ


ಟ್ಯೂರಿನ್‌(ಇಟಲಿ): ಮಾಜಿ ವಿಶ್ವ ನಂ.1 ಸರ್ಬಿಯಾದ ನೊವಾಕ್‌ ಜೋಕೋವಿಚ್‌ ದಾಖಲೆಯ 6ನೇ ಬಾರಿಗೆ ಪ್ರತಿಷ್ಠಿತ ಎಟಿಪಿ ಫೈನಲ್ಸ್‌ ಸಿಂಗಲ್ಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ರೋಜರ್‌ ಫೆಡರರ್‌ರ ದಾಖಲೆಯನ್ನು ಸರಿಗಟ್ಟಿದ್ದಾರೆ. ಜೋಕೋವಿಚ್‌ ಭಾನುವಾರ ನಡೆದ ಫೈನಲ್‌ನಲ್ಲಿ ನಾರ್ವೆಯ ಕ್ಯಾಸ್ಪೆರ್‌ ರುಡ್‌ ವಿರುದ್ಧ 7-5, 6-3 ಸೆಟ್‌ಗಳಲ್ಲಿ ಗೆದ್ದರು. ಇದರೊಂದಿಗೆ 4.7 ಮಿಲಿಯನ್‌ ಯುಎಸ್‌ ಡಾಲರ್‌(ಅಂದಾಜು 38.4 ಕೋಟಿ ರು.) ಬಹುಮಾನ ಮೊತ್ತ ತಮ್ಮದಾಗಿಸಿಕೊಂಡರು.

35 ವರ್ಷದ ನೊವಾಕ್ ಜೋಕೋವಿಚ್, 2015ರ ಬಳಿಕ ಮೊದಲ ಬಾರಿಗೆ ಪ್ರತಿಷ್ಠಿತ ಎಟಿಪಿ ಫೈನಲ್ಸ್‌ ಸಿಂಗಲ್ಸ್‌ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಇದರೊಂದಿಗೆ ಪ್ರತಿಷ್ಠಿತ ಎಟಿಪಿ ಫೈನಲ್ಸ್‌ ಸಿಂಗಲ್ಸ್‌ ಪ್ರಶಸ್ತಿ ಜಯಿಸಿದ ಅತ್ಯಂತ ಹಿರಿಯ ಟೆನಿಸ್ ಆಟಗಾರ ಎನ್ನುವ ಕೀರ್ತಿಗೂ ಸರ್ಬಿಯಾದ ಟೆನಿಸಿಗ ಪಾತ್ರರಾಗಿದ್ದಾರೆ.

Tap to resize

Latest Videos

ಪ್ರೊ ಕಬಡ್ಡಿ: ಯೋಧಾಸ್‌, ತಲೈವಾಸ್‌ಗೆ ಗೆಲುವು

ಹೈದರಾಬಾದ್‌: 9ನೇ ಪ್ರೊ ಕಬಡ್ಡಿಯಲ್ಲಿ ಯು.ಪಿ.ಯೋಧಾಸ್‌ 8ನೇ ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಸೋಮವಾರ ಯೋಧಾಸ್‌, ಗುಜರಾತ್‌ ವಿರುದ್ಧ 35-31 ಅಂಕಗಳಲ್ಲಿ ಜಯಿಸಿತು. ಸತತ 4ನೇ ಸೋಲು ಕಂಡ ಗುಜರಾತ್‌ 11ನೇ ಸ್ಥಾನದಲ್ಲೇ ಬಾಕಿಯಾಗಿದೆ. ಇನ್ನು ಮತ್ತೊಂದು ಪಂದ್ಯದಲ್ಲಿ ಬೆಂಗಾಲ್‌ ವಿರುದ್ಧ ತಮಿಳ್‌ ತಲೈವಾಸ್‌ 35-30ರಲ್ಲಿ ಜಯಿಸಿತು.

FIFA World Cup ಇರಾನ್ ವಿರುದ್ದ ಇಂಗ್ಲೆಂಡ್ ಸೂಪರ್ 6, ಇಂಗ್ಲೆಂಡ್ ಅಬ್ಬರಕ್ಕೆ ಇರಾನ್ ತಬ್ಬಿಬ್ಬು

ಇಂದಿನ ಪಂದ್ಯಗಳು: ಮುಂಬಾ-ತಲೈವಾಸ್‌, ಸಂಜೆ 7.30ಕ್ಕೆ, ಟೈಟಾನ್ಸ್‌-ಪಾಟ್ನಾ, ರಾತ್ರಿ 8.30ಕ್ಕೆ

ಪ್ರೊ ಕಬಡ್ಡಿ: ಪ್ರದೀಪ್‌ 1500 ರೈಡ್‌ ಅಂಕ!

ಹೈದರಾಬಾದ್‌: ದಾಖಲೆಗಳ ವೀರ ಪ್ರದೀಪ್‌ ನರ್ವಾಲ್‌ ಪ್ರೊ ಕಬಡ್ಡಿ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದು, 1500 ರೈಡ್‌ ಅಂಕ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಅವರು 147 ಪಂದ್ಯಗಳಲ್ಲಿ 74 ಬಾರಿ ಸೂಪರ್‌ 10 ಅಂಕ ಸಂಪಾದಿಸಿದ್ದಾರೆ. ಉಳಿದಂತೆ ಮಣೀಂದರ್‌, ರಾಹುಲ್‌ ಚೌಧರಿ, ದೀಪಕ್‌ ಹೂಡಾ ಮಾತ್ರ 1000ಕ್ಕೂ ಹೆಚ್ಚು ರೈಡ್‌ ಅಂಕ ಗಳಿಸಿದ್ದಾರೆ.

ಫೆಬ್ರವರಿ 4ರಿಂದ 2ನೇ ಆವೃತ್ತಿಯ ಪ್ರೈಮ್‌ ವಾಲಿಬಾಲ್‌ ಲೀಗ್‌

ನವದೆಹಲಿ: 2ನೇ ಆವೃತ್ತಿಯ ಪ್ರೈಮ್‌ ವಾಲಿಬಾಲ್‌ ಲೀಗ್‌ 2023ರ ಫೆ.4ರಿಂದ ಆರಂಭವಾಗಲಿದ್ದು, ಬೆಂಗಳೂರು, ಹೈದರಾಬಾದ್‌ ಹಾಗೂ ಕೊಚ್ಚಿಯಲ್ಲಿ ಪಂದ್ಯಗಳು ನಡೆಯಲಿವೆ. ರೌಂಡ್‌ ರಾಬಿನ್‌ ಮಾದರಿಯ ಟೂರ್ನಿಯಲ್ಲಿ ಫೈನಲ್‌ ಸೇರಿ 31 ಪಂದ್ಯಗಳು ನಡೆಯಲಿದ್ದು, ಫೈನಲ್‌ಗೆ ಕೊಚ್ಚಿ ಅತಿಥ್ಯ ವಹಿಸಲಿದೆ. ಲೀಗ್‌ನಲ್ಲಿ ಬೆಂಗಳೂರು ಸೇರಿ 8 ತಂಡಗಳಿವೆ.

ಭಾರತದ 5 ಫುಟ್ಬಾಲ್‌ ಕ್ಲಬ್‌ಗಳಿಂದ ಫಿಕ್ಸಿಂಗ್‌?

ಪಣಜಿ: ಭಾರತೀಯ ಫುಟ್ಬಾಲ್‌ ಕ್ಲಬ್‌ಗಳು ಮ್ಯಾಚ್‌ ಫಿಕ್ಸಿಂಗ್‌ ನಡೆಸಿರುವ ಬಗ್ಗೆ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ತನಿಖೆ ಆರಂಭಿಸಿದೆ. ಈಗಾಗಲೇ ದೆಹಲಿಯಲ್ಲಿರುವ ಭಾರತೀಯ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌)ನ ಮುಖ್ಯ ಕಚೇರಿಗೆ ಸಿಬಿಐ ಅಧಿಕಾರಿಗಳು ತೆರಳಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. 

ಕ್ಲಬ್‌ಗಳ ಹೂಡಿಕೆದಾರರು, ಜಾಹೀರಾತು ಸಂಸ್ಥೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಐ-ಲೀಗ್‌ನ ಕೆಲ ಕ್ಲಬ್‌ಗಳಲ್ಲಿ ಸಿಂಗಾಪೂರ ಮೂಲದ ಬುಕ್ಕಿ ವಿಲ್ಸನ್‌ ರಾಜ್‌ ಪೆರುಮಾಳ್‌ ಎಂಬಾತ ಹೂಡಿಕೆ ಮಾಡಿದ್ದಾನೆ ಎನ್ನಲಾಗಿದ್ದು, 5 ಕ್ಲಬ್‌ಗಳು ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.

click me!