Pro Kabaddi League 2022 ಈ ಸಲ ಕಂಠೀರವ ಕ್ರೀಡಾಂಗಣದಲ್ಲೇ ಪ್ರೊ ಕಬಡ್ಡಿ..?

By Kannadaprabha News  |  First Published Sep 20, 2022, 1:21 PM IST

ಬೆಂಗಳೂರು ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ
2019ರ ಬಳಿಕ ಮತ್ತೊಮ್ಮೆ ಕಂಠೀರವ ಸ್ಟೇಡಿಯಂನಲ್ಲಿ ಪ್ರೊ ಕಬಡ್ಡಿ ಪಂದ್ಯಗಳಿಗೆ ಅವಕಾಶ
ಕಳೆದ ವರ್ಷದ ಪಿಕೆಎಲ್ ಟೂರ್ನಿಗೆ ಕಂಠೀರವಕ್ಕೆ ಆತಿಥ್ಯ ಹಕ್ಕು ಸಿಕ್ಕಿರಲಿಲ್ಲ


ಬೆಂಗಳೂರು(ಸೆ.20) ಬೆಂಗಳೂರಿನ ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಗುವ ನಿರೀಕ್ಷೆ ಇದೆ. ಈ ವರ್ಷ ಪ್ರೊ ಕಬಡ್ಡಿ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲೇ ನಡೆಯುವುದು ಬಹುತೇಕ ಖಚಿತವೆನಿಸಿದೆ. ಬೆಂಗಳೂರು ಬುಲ್ಸ್‌ ತನ್ನ ತವರಿನಲ್ಲೇ ಹೆಚ್ಚಿನ ಪಂದ್ಯಗಳನ್ನು ಆಡಲಿದೆ. 2019ರಲ್ಲಿ ಕಂಠೀರವದಲ್ಲಿ ಪಂದ್ಯಗಳು ನಡೆದಿದ್ದವು. ಆದರೆ ಕಳೆದ ಆವೃತ್ತಿಯು ಸಂಪೂರ್ಣವಾಗಿ ಬೆಂಗಳೂರಲ್ಲೇ ನಡೆದರೂ ಕಂಠೀರವಕ್ಕೆ ಆತಿಥ್ಯ ಹಕ್ಕು ಸಿಕ್ಕಿರಲಿಲ್ಲ. ಖಾಸಗಿ ಹೋಟೆಲ್‌ನ ಆವರಣದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿತ್ತು.

9ನೇ ಆವೃತ್ತಿಯ ಪ್ರೊ ಕಬಡ್ಡಿ ಅಕ್ಟೋಬರ್‌ 7ರಿಂದ ಆರಂಭಗೊಳ್ಳಲಿದ್ದು, ಲೀಗ್‌ ಹಂತದ ಪಂದ್ಯಗಳು ಬೆಂಗಳೂರು, ಪುಣೆ ಹಾಗೂ ಹೈದರಾಬಾದ್‌ನಲ್ಲಿ ನಡೆಯಲಿವೆ ಎಂದು ಆಯೋಜಕರು ಘೋಷಿಸಿದ್ದಾರೆ. ಈ ಬಗ್ಗೆ ‘ಕನ್ನಡಪ್ರಭ’ ರಾಜ್ಯ ಕ್ರೀಡಾ ಇಲಾಖೆಯನ್ನು ಸಂಪರ್ಕಿಸಿದಾಗ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದುಬಂತು.

Tap to resize

Latest Videos

‘ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡುವಂತೆ ಪ್ರೊ ಕಬಡ್ಡಿ ಆಯೋಜಕರಿಂದ ಪ್ರಸ್ತಾಪ ಬಂದಿದೆ. ಇಲಾಖೆ ಈ ಬಗ್ಗೆ ಗಂಭೀರವಾಗಿ ಗಮನ ಹರಿಸುತ್ತಿದ್ದು, ಅನುಮತಿ ನೀಡುವ ಬಗ್ಗೆ ಸಭೆಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿನ ಆವೃತ್ತಿಗಳಿಗಿಂತ ಸ್ವಲ್ಪ ಹೆಚ್ಚಿನ ಬಾಡಿಗೆಗೆ ಕ್ರೀಡಾಂಗಣವನ್ನು ಬಳಸಿಕೊಳ್ಳಲು ಅವಕಾಶ ನೀಡಬಹುದು. ಆಯೋಜಕರೊಂದಿಗೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 2017ರಲ್ಲಿ ಕಂಠೀರವದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ಸಿಕ್ಕಿರಲಿಲ್ಲ. ಆ ವರ್ಷ ಬೆಂಗಳೂರು ಬುಲ್ಸ್‌ ತನ್ನ ತವರಿನ ಪಂದ್ಯಗಳನ್ನು ನಾಗ್ಪುರದಲ್ಲಿ ಆಡಿತ್ತು.

ಮುಂಬರುವ ಅಕ್ಟೋಬರ್ 07ರಿಂದ ಡಿಸೆಂಬರ್ ಮಧ್ಯಭಾಗದ ವರೆಗೂ 2022ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಪಂದ್ಯಗಳು ನಡೆಯಲಿದ್ದು, 12 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಇದೀಗ ಪ್ರೊ ಕಬಡ್ಡಿ ಲೀಗ್‌ನ ಅಭಿಮಾನಿಗಳಿಗೆ ಆಯೋಜಕರು ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಪ್ರೇಕ್ಷಕರು ಮೈದಾನಕ್ಕೆ ಬಂದು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ಅವಕಾಶ ನೀಡಿದೆ. ಕಳೆದ ಆವೃತ್ತಿಯಲ್ಲಿ ಮನೆಯಲ್ಲೇ ಕೂತು ಪಂದ್ಯ ವೀಕ್ಷಿಸಿದ್ದ ಕಬಡ್ಡಿ ಅಭಿಮಾನಿಗಳು ಈ ಬಾರಿ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್‌ನಲ್ಲಿ ಸ್ಟೇಡಿಯಂಗೆ ಬಂದು ಪಂದ್ಯ ವೀಕ್ಷಿಸಬಹುದಾಗಿದೆ.

World Wrestling Championships: ಅಥ್ಲೀಟ್‌ಗಳು ಕೂಡಾ ಮನುಷ್ಯರೇ, ರೋಬೋಟ್‌ ಅಲ್ಲ: ವಿನೇಶ್‌ ಫೋಗಾಟ್‌

ಕಂಠೀರವದಲ್ಲಿ ಐಎಸ್‌ಎಲ್‌ ಫುಟ್ಬಾಲ್‌ ಪಂದ್ಯಗಳು

ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಬಹುಕೋಟಿ ವೆಚ್ಚದಲ್ಲಿ ಹೊಸದಾಗಿ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸಲಾಗಿದೆ. ಈ ಹಿಂದೆ ಐಎಸ್‌ಎಲ್‌ ಫುಟ್ಬಾಲ್‌ ಪಂದ್ಯಗಳು ಕಂಠೀರವದಲ್ಲಿ ನಡೆದಾಗ ಟ್ರ್ಯಾಕ್‌ ಹಾಳು ಮಾಡಿದ ಪ್ರಸಂಗಗಳು ನಡೆದಿದ್ದವು. ಈ ಬಾರಿ ಕ್ರೀಡಾ ಇಲಾಖೆಯು ಕಠಿಣ ಷರತ್ತುಗಳೊಂದಿಗೆ ಕ್ರೀಡಾಂಗಣವನ್ನು ಬಿಟ್ಟುಕೊಡಲು ನಿರ್ಧರಿಸಿದೆ. ಜೊತೆಗೆ ಪಂದ್ಯವಿದ್ದಾಗ ಮಾತ್ರ ಬಾಡಿಗೆಗೆ ನೀಡಲಿದ್ದು, ಉಳಿದ ಸಮಯದಲ್ಲಿ ಕ್ರೀಡಾಂಗಣವನ್ನು ಬಳಸಲು ಐಎಸ್‌ಎಲ್‌ ಆಯೋಜಕರಿಗೆ ಅನುಮತಿ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.

click me!