ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗುತ್ತಿಗೆ ಕೋಚ್‌ಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪೈಕಿ ಫೆನ್ಸಿಂಗ್ ಕೋಚ್ ಲಕ್ಷ್ಮೇಶ ಭಿಕ್ಷೆ ಬೇಡಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಜ.05): ವಿವಿಧ ಬೇಡಿಕೆ ಹಾಗೂ ಗುತ್ತಿಗೆ ತರಬೇತುದಾರರನ್ನು ಕರ್ತವ್ಯದಲ್ಲಿ ಮುಂದುವರಿಸುವಂತೆ ಆಗ್ರಹಿಸಿ ಕೋಚ್‌ಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ.
ಈ ವೇಳೆ ಫೆನ್ಸಿಂಗ್ ಕೋಚ್ ಲಕ್ಷ್ಮೇಶ, ಸಾರ್ವಜನಿಕವಾಗಿ ರಸ್ತೆಯಲ್ಲಿ ಭಿಕ್ಷೆ ಬೇಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಗಮನಸೆಳೆದರು. 2019ರಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರ ನೇಮಕ ಮಾಡಿಕೊಂಡಿದ್ದ 73 ಮಂದಿ ಕೋಚ್‌ಗಳಿಗೆ ವೇತನ ನೀಡಲು ಕ್ರೀಡಾ ಇಲಾಖೆ ಬಳಿ ಅವಶ್ಯಕವಾದ ಹಣ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋಚ್ ರವಿಶಾಸ್ತ್ರಿಯಿಂದ ದೂರವಿರಿ: ಜಡ್ಡುಗೆ ನೆಟ್ಟಿಗರ ಕಿವಿಮಾತು..!
ಈ ಸಲುವಾಗಿ ಕ್ರೀಡಾ ಇಲಾಖೆಗೆ ಹಣ ಸಂಪಾದನೆ ಮಾಡಿಕೊಡಲು ಭಿಕ್ಷೆ ಬೇಡುವುದಾಗಿ ಕೋಚ್ ಲಕ್ಷ್ಮೇಶ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು. ಈ ವೇಳೆ ಸತ್ಯಾಗ್ರಹ ನಿರತ ಮೌರ್ಯ ವೃತ್ತದಿಂದ ಕ್ರೀಡಾ ಇಲಾಖೆ ವರೆಗಿನ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ಬಳಿ ಕೋಚ್ ಲಕ್ಷ್ಮೇಶ ಭಿಕ್ಷೆ ಬೇಡಿದರು. ಮುಂದಿನ ದಿನಗಳಲ್ಲಿ ಮತ್ತಷ್ಟು ವಿನೂತನ ಹೋರಾಟಕ್ಕೆ ಮುಂದಾಗುವುದಾಗಿ ಕೋಚ್ ಲಕ್ಷ್ಮೇಶ ಇದೇ ಸಂದರ್ಭದಲ್ಲಿ ಹೇಳಿದರು. ಕರ್ತವ್ಯದಿಂದ ವಜಾಗೊಂಡಿರುವ ಕೋಚ್‌ಗಳು ಕಳೆದ ಶನಿವಾರದಿಂದ ಇಲ್ಲಿನ ಮೌರ್ಯ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ಸುಳಿದಿಲ್ಲ.
ಪ್ರತಿಭಟನಾ ನಿರತ ಕೋಚ್‌ಗಳ ಬೇಡಿಕೆಗಳೇನು?
1.ಕರ್ತವ್ಯದಿಂದ ತೆಗೆದುಹಾಕಿದ ಕೋಚ್‌ಗಳನ್ನು ಕೂಡಲೇ ಕರ್ತವ್ಯಕ್ಕೆ ಸೇರಿಸಿಕೊಳ್ಳಬೇಕು.
2. ತೆಗೆದುಹಾಕಿದ ದಿನದಿಂದ ಇಲ್ಲಿಯವರೆಗೂ ಕೋವಿಡ್ ಹಿನ್ನೆಲೆಯಲ್ಲಿ 2 ತಿಂಗಳ ಸಂಬಳ ನೀಡಬೇಕು.
3. ಪಿ.ಎಫ್. ಮತ್ತು ಇಎಸ್‌ಐ ಸೌಲಭ್ಯಗಳನ್ನು ಒದಗಿಸಬೇಕು.
4. ಗುತ್ತಿಗೆ ತರಬೇತುದಾರರಿಗೆ ಸ್ಥಳ ನಿಯುಕ್ತಿಗೊಳಿಸುವಾಗ ಕೌನ್ಸಿಲಿಂಗ್ ನಡೆಸಬೇಕು.
5. ನಿಗದಿತ ಸಮಯಕ್ಕೆ ಸರಿಯಾಗಿ ಕೋಚ್‌ಗಳಿಗೆ ವೇತನ ಪಾವತಿಸಬೇಕು.
6. ಗುತ್ತಿಗೆ ಕೋಚ್‌ಗಳನ್ನು 1 ದಿನ ಗೈರು ಮಾಡಿ ಮುಂದಿನ ವರ್ಷಕ್ಕೆ ಕರ್ತವ್ಯದಲ್ಲಿ ಮುಂದುವರೆಸಬೇಕು.