ವಿಂಬಲ್ಡನ್: ಫೆಡರರ್ 9ನೇ ಪ್ರಶಸ್ತಿ ಕನಸು ಭಗ್ನ

By Suvarna News  |  First Published Jul 12, 2018, 10:33 AM IST

ಚೊಚ್ಚಲ ಬಾರಿಗೆ ವಿಂಬಲ್ಡನ್ ಸೆಮೀಸ್ ಪ್ರವೇಶಿಸಿದ ಆ್ಯಂಡರ್‌ಸನ್, 1983ರಲ್ಲಿ ಸೆಮೀಸ್‌ಗೇರಿದ್ದ ಕೆವಿನ್ ರೆರ್ರಾನ್ ಬಳಿಕ ವಿಂಬಲ್ಡನ್‌ನಲ್ಲಿ ಅಂತಿಮ 4ರ ಘಟ್ಟಕ್ಕೇರಿದ ದ. ಆಫ್ರಿಕಾದ ಮೊದಲಿಗ ಎನಿಸಿಕೊಂಡರು.


ಲಂಡನ್[ಜು.12]: 2018ರ ವಿಂಬಲ್ಡನ್ ಆಘಾತದ ಮೇಲೆ ಆಘಾತ ನೀಡುತ್ತಿದೆ. ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ 10 ಆಟಗಾರ್ತಿಯರು ಹೊರಬಿದ್ದ ಬಳಿಕ, ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತ, ಹಾಲಿ ಚಾಂಪಿಯನ್ ರೋಜರ್ ಫೆಡರರ್ ಹೊರಬಿದ್ದಿದ್ದಾರೆ. ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ವಿಜರ್‌ಲೆಂಡ್‌ನ ಟೆನಿಸ್ ಮಾಂತ್ರಿಕ, ದ.ಆಫ್ರಿಕಾದ ಕೆವಿನ್ ಆ್ಯಂಡರ್‌ಸನ್ ವಿರುದ್ಧ 6-2, 7-6(7/5), 5-7, 4-6, 11-13 ಸೆಟ್ ಗಳಲ್ಲಿ ಸೋಲುಂಡು ನಿರ್ಗಮಿಸಿದರು. ಇದರೊಂದಿಗೆ ಫೆಡರರ್‌ರ 9ನೇ ವಿಂಬಲ್ಡನ್ ಟ್ರೋಫಿ ಕನಸು ಈ ವರ್ಷದ ಮಟ್ಟಿಗೆ ಭಗ್ನಗೊಂಡಿತು.

ಬರೋಬ್ಬರಿ 5 ಗಂಟೆಗಳ ನಡೆದ ಪಂದ್ಯದಲ್ಲಿ ಮೊದಲೆರಡು ಸೆಟ್ ಗೆದ್ದು, ಮ್ಯಾಚ್ ಪಾಯಿಂಟ್ ವರೆಗೂ ಬಂದಿದ್ದ ಫೆಡರರ್ ಸೋಲುಂಡಿದ್ದು ಅಭಿಮಾನಿಗಳಿಗೆ ಭಾರೀ ಆಘಾತ ನೀಡಿತು. ವಿಂಬಲ್ಡನ್‌ನಲ್ಲಿ ಸತತ 35 ಸೆಟ್ ಗೆದ್ದು ತಮ್ಮ ದಾಖಲೆಯನ್ನು ಉತ್ತಮಗೊಳಿಸಿಕೊಂಡಿದ್ದ ಫೆಡರರ್, ಬಳಿಕ ಸತತ 3 ಸೆಟ್ ಸೋತು ನಿರಾಸೆ ಅನುಭವಿಸಿದ್ದು ಕ್ರೀಡೆಯಲ್ಲಿ ಏನು ಬೇಕಿದ್ದರೂ ಸಾಧ್ಯ ಎನ್ನುವುದನ್ನು ಮತ್ತೊಮ್ಮೆ ತೋರಿಸಿತು.  ಚೊಚ್ಚಲ ಬಾರಿಗೆ ವಿಂಬಲ್ಡನ್ ಸೆಮೀಸ್ ಪ್ರವೇಶಿಸಿದ ಆ್ಯಂಡರ್‌ಸನ್, 1983ರಲ್ಲಿ ಸೆಮೀಸ್‌ಗೇರಿದ್ದ ಕೆವಿನ್ ರೆರ್ರಾನ್ ಬಳಿಕ ವಿಂಬಲ್ಡನ್‌ನಲ್ಲಿ ಅಂತಿಮ 4ರ ಘಟ್ಟಕ್ಕೇರಿದ ದ. ಆಫ್ರಿಕಾದ ಮೊದಲಿಗ ಎನಿಸಿಕೊಂಡರು.

Tap to resize

Latest Videos

ಜೋಕೋಗೆ ಸುಲಭ ಗೆಲುವು: ಮಾಜಿ ಚಾಂಪಿಯನ್ ನೋವಾಕ್ ಜೋಕೋವಿಚ್, ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್’ನ ಕೇ ನಿಶಿಕೋರಿ ವಿರುದ್ಧ 6-3, 3-6, 6-2, 6-2 ಸೆಟ್‌ಗಳಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದರು. 2016ರ ಫ್ರೆಂಚ್ ಓಪನ್ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಸೆಮೀಸ್‌ಗೇರಿರುವ ಜೋಕೋವಿಚ್‌ಗಿದು ಒಟ್ಟಾರೆ 32ನೇ ಸೆಮೀಸ್ ಪಂದ್ಯವಾಗಲಿದೆ. ಮೊಣಕೈ ಗಾಯದಿಂದ ಚೇತರಿಸಿಕೊಂಡಿರುವ 12 ಬಾರಿ ಗ್ರ್ಯಾಂಡ್‌ಸ್ಲಾಂ ಚಾಂಪಿಯನ್, ಮತ್ತೊಮ್ಮೆ ಪ್ರಶಸ್ತಿ ಎತ್ತಿಹಿಡಿಯಲು ತವಕಿಸುತ್ತಿದ್ದಾರೆ. 
 

click me!