ನಾಳೆಯಿಂದ ಪ್ರೊ ಕಬಡ್ಡಿ ಆರಂಭ: ಹೇಗಿವೆ 12 ತಂಡಗಳ ಬಲಾಬಲ..?

By Web DeskFirst Published Oct 6, 2018, 10:34 AM IST
Highlights

ನೋಡ ನೋಡುತ್ತಿದ್ದಂತೆ ದಿನಗಳು ಉರುಳಿ ವರ್ಷ ಕಳೆದಿದೆ. ಬಹು ನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ 6ನೇ ಆವೃತ್ತಿಗೆ ಕ್ಷಣಗಣನೆ ಆರಂಭಗೊಂಡಿದ್ದು, ನಾಳೆ ಪಂದ್ಯಾವಳಿಗೆ ಇಲ್ಲಿ ಚಾಲನೆ ದೊರೆಯಲಿದೆ. ಕಳೆದ ಬಾರಿಯಂತೆ ಈ ವರ್ಷವೂ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಚೆನ್ನೈ(ಅ.06]: ನೋಡ ನೋಡುತ್ತಿದ್ದಂತೆ ದಿನಗಳು ಉರುಳಿ ವರ್ಷ ಕಳೆದಿದೆ. ಬಹು ನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ 6ನೇ ಆವೃತ್ತಿಗೆ ಕ್ಷಣಗಣನೆ ಆರಂಭಗೊಂಡಿದ್ದು, ನಾಳೆ ಪಂದ್ಯಾವಳಿಗೆ ಇಲ್ಲಿ ಚಾಲನೆ ದೊರೆಯಲಿದೆ. ಕಳೆದ ಬಾರಿಯಂತೆ ಈ ವರ್ಷವೂ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಹ್ಯಾಟ್ರಿಕ್ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತನ್ನ ನಾಗಾಲೋಟವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದರೆ, ಬೆಂಗಳೂರು, ಹೈದರಾಬಾದ್, ಚೆನ್ನೈ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಡಲು ಹಾತೊರೆಯುತ್ತಿವೆ. 

ಮುಂಬೈ, ಜೈಪುರ ತಂಡಗಳಿಗೆ ಮತ್ತೊಮ್ಮೆ ಚಾಂಪಿಯನ್ ಆಗುವ ತವಕ. ಈ ಬಾರಿ ತಂಡಗಳಲ್ಲಿ ಭಾರೀ ಬದಲಾವಣೆಯಾಗಿದೆ. ಹೊಸ ಪ್ರತಿಭೆಗಳು ಮುಖ್ಯ ವೇದಿಕೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಹಿರಿಯ ಆಟಗಾರರು ತಮ್ಮಲ್ಲಿ ಇನ್ನೂ ಆಟ ಬಾಕಿ ಇದೆ ಎನ್ನುವುದನ್ನು ಸಾಬೀತು ಪಡಿಸುವ ಒತ್ತಡದಲ್ಲಿದ್ದಾರೆ. ಉಳಿದ ಕ್ರೀಡೆಗಳಿಗೆ ಹೋಲಿಸಿದರೆ, ಕಬಡ್ಡಿಯಲ್ಲಿ ಅತಿವೇಗವಾಗಿ ಆಟಗಾರರು ತೆರೆ ಮರೆಗೆ ಸರಿಯುತ್ತಿದ್ದಾರೆ. ಮೊದಲ ಆವೃತ್ತಿಯಲ್ಲಿ ಆಡಿದ ಅನೇಕ ಆಟಗಾರರು ಇಂದು ಕಾಣೆಯಾಗಿದ್ದಾರೆ. ಇನ್ನೂ ಅನೇಕರಿಗೆ ಹಿಂದೆ ಸಿಗುತ್ತಿದ್ದ ಮಹತ್ವ ಸಿಗುತ್ತಿಲ್ಲ. ವಿದೇಶಿ ಆಟಗಾರರ ಪ್ರಾಬಲ್ಯ ಹೆಚ್ಚುತ್ತಿದ್ದು, ದೇಸಿಪಟುಗಳ ಮೇಲೆ ಆವೃತ್ತಿಯಿಂದ ಆವೃತ್ತಿಗೆ ಒತ್ತಡ ಅಧಿಕಗೊಳ್ಳುತ್ತಿದೆ. ಸವಾಲಿನ ಎದುರು ತೊಡೆ ತಟ್ಟಲು ತಂಡಗಳು ಹೇಗೆ ಸಿದ್ಧಗೊಂಡಿವೆ, 12 ತಂಡಗಳ ಬಲಾಬಲದ ಸಂಕ್ಷಿಪ್ತ ವಿವರ ಇಲ್ಲಿದೆ.

ತಂಡ: ಬೆಂಗಳೂರು ಬುಲ್ಸ್
ನಾಯಕ: ರೋಹಿತ್ ಕುಮಾರ್
ಪ್ರತಿ ಬಾರಿಯೂ ಒಂದಲ್ಲ ಒಂದು ವಿಭಾಗದಲ್ಲಿ ದುರ್ಬಲವಾಗಿರುವ ಬೆಂಗಳೂರು ಬುಲ್ಸ್ ಈ ಆವೃತ್ತಿಯಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸಿದೆ. ರೋಹಿತ್ ಕುಮಾರ್ ಜತೆ ಕಾಶಿಲಿಂಗ್ ಅಡಕೆ ರೈಡಿಂಗ್‌ನಲ್ಲಿ ಆಕರ್ಷಣೆ ಎನಿಸಿದ್ದಾರೆ. ಡಿಫೆನ್ಸ್ ನಲ್ಲಿ ತಂಡ ಮೇಲ್ನೋಟಕ್ಕೆ ಪ್ರಬಲ ಎನಿಸಿದರೂ ಇನ್ನೂ ಅನುಮಾನಗಳಿವೆ.

ತಂಡ: ತಮಿಳ್ ತಲೈವಾಸ್
ನಾಯಕ: ಅಜಯ್ ಠಾಕೂರ್
ಐಪಿಎಲ್‌ನ ಸಿಎಸ್‌ಕೆ ತಂಡದಿಂದ ಸ್ಫೂರ್ತಿ ಪಡೆದಿರುವ ತಲೈವಾಸ್ ಅನುಭವಿಗಳಿಗೆ ಹೆಚ್ಚು ಮಣೆ ಹಾಕಿದೆ. ಪ್ರೊ ಕಬಡ್ಡಿಯಲ್ಲಿ ದೊಡ್ಡ ಹೆಸರು ಮಾಡಿರುವ ಅಜಯ್ ಠಾಕೂರ್, ಮಂಜೀತ್ ಚಿಲ್ಲಾರ್, ಜಸ್ವೀರ್ ಸಿಂಗ್, ಸುಕೇಶ್ ಹೆಗ್ಡೆಯಂತಹ ಸಾಕಷ್ಟು ಅನುಭವಿ ಆಟಗಾರರು ತಲೈವಾಸ್ ತಂಡದಲ್ಲಿದ್ದಾರೆ. 

ತಂಡ: ದಬಾಂಗ್ ಡೆಲ್ಲಿ
ನಾಯಕ: ಜೋಗಿಂದರ್ ನರ್ವಾಲ್
ಯಾರೇ ಬಂದರೂ, ಯಾರೆ ಹೋದರು ಡೆಲ್ಲಿ ಹಣೆಬರಹ ಮಾತ್ರ ಬದಲಾಗಿಲ್ಲ. ಅನುಭವಿ ಡಿಫೆಂಡರ್ ಜೋಗಿಂದರ್ ಈ ಬಾರಿ ನಾಯಕತ್ವ ವಹಿಸಿದ್ದು, ಅದೃಷ್ಟ ಬದಲಿಸುವ ಪಣತೊಟ್ಟಿದ್ದಾರೆ. ಇರಾನ್ ಆಲ್ರೌಂಡರ್ ಮಿರಾಜ್ ಶೇಖ್, ಡಿಫೆನ್ಸ್‌ನಲ್ಲಿ ತಂಡ ಬಲಿಷ್ಠವಾಗಿದೆ. ಶಬ್ಬೀರ್ ಬಾಪು ತಂಡದ ತಾರಾ ರೈಡರ್.

ತಂಡ: ಹರಿಯಾಣ ಸ್ಟೀಲರ್ಸ್
ನಾಯಕ: ಸುರೇಂದರ್ ನಾಡಾ
ಭಾರತದ ತಾರಾ ಡಿಫೆಂಡರ್ ಸುರೇಂದರ್ ನಾಡಾ, ಪ್ರೊ ಕಬಡ್ಡಿಯ ಅತ್ಯಂತ ದುಬಾರಿ ಆಟಗಾರ ಮೋನು ಗೋಯತ್ ಬಲ ಹರ್ಯಾಣಗಿದೆ. ಆದರೆ ಇನ್ನುಳಿದ ಆಟಗಾರರು ಹೇಳಿಕೊಳ್ಳುವಷ್ಟು ದೊಡ್ಡ ತಾರೆಯರಲ್ಲ. ತಾರೆಗಳಿಗೆ ಮಣೆ ಹಾಕದಿದ್ದರೂ ಸ್ಟೀಲರ್ಸ್‌ ಅಪ್ಪಟ ಪ್ರತಿಭೆಗಳನ್ನು ತೆಕ್ಕೆಗೆ ಹಾಕಿ ಕೊಂಡಿರುವುದಾಗಿ ಬೀಗುತ್ತಿದೆ.

ತಂಡ: ಬೆಂಗಾಲ್ ವಾರಿಯರ್ಸ್
ನಾಯಕ: ಸುರ್ಜೀತ್ ಸಿಂಗ್
ಸ್ಥಿರ ಪ್ರದರ್ಶನಕ್ಕೆ ಹೆಸರುವಾಸಿಯಾಗಿರುವ ಬೆಂಗಾಲ್ ಈ ವರ್ಷವೂ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸುರ್ಜೀತ್ ಡಿಫೆನ್ಸ್‌ನಲ್ಲಿ ತಂಡದ ಪಾಲಿಗಿದ್ದರೆ, ಜಾನ್ ಕುನ್ ಲೀ ಹಾಗೂ ಮಣಿಂದರ್ ಸಿಂಗ್ ರೈಡಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಆದರೆ ತಂಡಕ್ಕೆ ಗಾಯದ ಸಮಸ್ಯೆಯದ್ದೇ ಚಿಂತೆ.

ತಂಡ: ಗುಜರಾತ್ ಫಾರ್ಚೂನ್’ಜೈಂಟ್ಸ್
ನಾಯಕ: ಸುನಿಲ್ ಕುಮಾರ್
ಕಳೆದ ಆವೃತ್ತಿಯ ರನ್ನರ್-ಅಪ್ ಗುಜರಾತ್, ಈ ವರ್ಷವೂ ಅಚ್ಚರಿಯ ಫಲಿತಾಂಶ ನೀಡಲು ಕಾಯುತ್ತಿದೆ. ಆದರೆ ಕಳೆದ ಬಾರಿ ಇರಾನ್‌ನ ಫಜಲ್ ಹಾಗೂ ಅಬೋಜರ್ ಎರಡು ಕಾರ್ನರ್‌ಗಳಲ್ಲಿ ಗೋಡೆಗಳಂತೆ ನಿಂತು ತಂಡವನ್ನು ಮೇಲೆತ್ತಿದರು. ಆದರೆ ಈ ಬಾರಿ ಇಬ್ಬರೂ ಇಲ್ಲ. ಗುಜರಾತ್ ಅನನುಭವಿಗಳಿಂದ ಕೂಡಿದೆ.

ತಂಡ: ಜೈಪುರ ಪಿಂಕ್’ಪ್ಯಾಂಥರ್ಸ್
ನಾಯಕ: ಅನೂಪ್ ಕುಮಾರ್
ಭಾರತೀಯ ಕಬಡ್ಡಿಯ ಪೋಸ್ಟರ್ ಬಾಯ್ ಅನೂಪ್ ಕುಮಾರ್ ಸತತ 5 ವರ್ಷ ಯು ಮುಂಬಾ ತಂಡದಲ್ಲಿದ್ದರು. ಭಾರತ ತಂಡದಿಂದ ಹೊರಬಿದ್ದ ಅವರನ್ನು ಮುಂಬಾ ಸಹ ಉಳಿಸಿಕೊಳ್ಳಲಿಲ್ಲ. ಆದರೆ ಜೈಪುರ ತಂಡದ ಚುಕ್ಕಾಣಿ ಹಿಡಿದಿರುವ ಅನೂಪ್‌ಗೆ ಮೋಹಿತ್, ದೀಪಕ್ ಹೂಡಾ, ಭಾಜಿರಾವ್, ಸೆಲ್ವಮಣಿಯಂತವರ ಬೆಂಬಲವಿದೆ.

ತಂಡ: ಯು ಮುಂಬಾ
ನಾಯಕ: ಫಜಲ್ ಅಟ್ರಾಚಲಿ
ಈ ಹಿಂದಿನ ಗುಣಮಟ್ಟ ಉಳಿಸಿಕೊಳ್ಳದಿದ್ದರೂ ಮುಂಬಾ ತಂಡದಲ್ಲಿ ಇರಾನ್‌ನ ಪ್ರಮುಖ ಆಟಗಾರರಿರುವುದು ತಂಡ ಅಪಾಯಕಾರಿ ಎನಿಸಲು ಕಾರಣವಾಗಿದೆ. ಇರಾನಿಯರನ್ನು ನಿರ್ಲಕ್ಷ್ಯಿಸಿದರೆ ಫಲಿತಾಂಶ ಏನಾಗಲಿದೆ ಎನ್ನುವ ಅನುಭವ ಭಾರತೀಯರಿಗೆ ಏಷ್ಯನ್ ಗೇಮ್ಸ್ ನಲ್ಲಿ ಗೊತ್ತಾಗಿದೆ. 

ತಂಡ: ಪುಣೇರಿ ಪಲ್ಟಾನ್
ನಾಯಕ: ಗಿರೀಶ್ ಎರ್ನಾಕ್
ಯುವ ಡಿಫೆಂಡರ್ ಗಿರೀಶ್‌ಗೆ ನಾಯಕತ್ವದ ಪಟ್ಟ ನೀಡಿರುವ ಪುಣೇರಿ, ಪ್ರೊ ಕಬಡ್ಡಿಯಲ್ಲಿ ಪ್ರತಿ ಬಾರಿಯೂ ಹೋರಾಟದ ಪ್ರದರ್ಶನ ತೋರುವ ತಂಡ. ಲೀಗ್‌ನ ದುಬಾರಿ ರೈಡರ್‌ಗಳಲ್ಲಿ ಒಬ್ಬರಾದ ನಿತಿನ್ ತೋಮರ್ ತಂಡದಲ್ಲಿದ್ದಾರೆ. ರಾಜೇಶ್ ಮೋಂಡಲ್, ಸಂದೀಪ್ ನರ್ವಾಲ್‌ರಂತಹ ಅನುಭವಿಗಳ ಬಲ ತಂಡಕ್ಕಿದೆ.

ತಂಡ: ಯುಪಿ ಯೋಧಾ
ನಾಯಕ: ರಿಶಾಂಕ್ ದೇವಾಡಿಗ
ಕರ್ನಾಟಕದ ಆಟಗಾರರು ಹೆಚ್ಚಿರುವ ತಂಡ ಯುಪಿ ಯೋಧಾ. ಕನ್ನಡ ಮೂಲದ ಮುಂಬೈ ಆಟಗಾರ ರಿಶಾಂಕ್ ತಂಡದ ನಾಯಕ. ಅನುಭವಿ ರೈಡರ್‌ಗೆ ರಾಜ್ಯದ ಪ್ರಶಾಂತ್ ರೈ ಸಾಥ್ ನೀಡಲಿದ್ದಾರೆ. ಜೀವ ಕುಮಾರ್ ಅಂಕಣದಲ್ಲಿದ್ದಾರೆ ಎಂದರೆ ರೈಡರ್’ಗಳು ಹೆದರುತ್ತಾರೆ. ಯೋಧಾ ಯುದ್ಧ ಗೆದ್ದರೆ ಅಚ್ಚರಿಯಿಲ್ಲ.

ತಂಡ: ತೆಲುಗು ಟೈಟಾನ್ಸ್
ನಾಯಕ: ವಿಶಾಲ್ ಭಾರದ್ವಾಜ್
ತಾರಾ ರೈಡರ್ ರಾಹುಲ್ ಚೌಧರಿಯನ್ನು ಹೊಂದಿರುವ ಟೈಟಾನ್ಸ್, ಯುವ ಡಿಫೆಂಡರ್ ವಿಶಾಲ್ ಹೆಗಲಿಗೆ ನಾಯಕತ್ವದ ಹೊಣೆ ಹೊರಿಸಿದೆ. ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಯಶಸ್ಸು ಕಾಣದ ತೆಲುಗು ತಂಡ, ಈ ಬಾರಿ ಡಿಫೆನ್ಸ್‌ನಲ್ಲಿ ಬಲಿಷ್ಠವಾಗಿದೆ. ಅಬೋಜರ್ ಮಿಘಾನಿ ತಂಡದಲ್ಲಿದ್ದಾರೆ. ರಾಹುಲ್ ಮಿಂಚಿದರೆ ಯಶಸ್ಸು ಖಚಿತ.

ತಂಡ: ಪಾಟ್ನಾ ಪೈರೇಟ್ಸ್
ನಾಯಕ: ಪ್ರದೀಪ್ ನರ್ವಾಲ್
ರೈಡ್ ಮಷಿನ್ ಪ್ರದೀಪ್ ನರ್ವಾಲ್ ಇದ್ದಾಗ, ತಂಡದಲ್ಲಿ ಯಾರಿದ್ದಾರೆ ಯಾರಿಲ್ಲ ಎನ್ನುವುದು ಹೆಚ್ಚು ಮಹತ್ವ ಪಡೆದುಕೊಳ್ಳುವುದಿಲ್ಲ. ಏಕಾಂಗಿಯಾಗಿ ಲೀಗ್‌ನ ಎಲ್ಲಾ ತಂಡಗಳನ್ನು ಬೆಚ್ಚಿಬೀಳಿಸುವ ಸಾಮರ್ಥ್ಯ ಪ್ರದೀಪ್‌ಗಿದೆ. ದಾಖಲೆ ವೀರ ನರ್ವಾಲ್‌ಗೆ ಜೈದೀಪ್, ಜವಾಹರ್’ರಂತಹ ಪ್ರತಿಭಾನ್ವಿತರು ಡಿಫೆನ್ಸ್‌ನಲ್ಲಿ ಸಾಥ್ ನೀಡಲಿದ್ದಾರೆ.

ವರದಿ: ಸ್ಪಂದನ್ ಕಣಿಯಾರ್, ಕನ್ನಡಪ್ರಭ

click me!