11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಹರ್ಯಾಣ ಸ್ಟೀಲರ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಫೈನಲ್ ಪ್ರವೇಶಿಸಿವೆ. ಸೆಮಿಫೈನಲ್‌ನಲ್ಲಿ ಯುಪಿ ಯೋಧಾಸ್ ಹಾಗೂ ದಬಾಂಗ್ ಡೆಲ್ಲಿ ಸೋತು ಹೊರಬಿದ್ದವು. ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.
ಪುಣೆ: 11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಹರ್ಯಾಣ ಸ್ಟೀಲರ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಫೈನಲ್ ಪ್ರವೇಶಿಸಿವೆ. ಶುಕ್ರವಾರ ಯುಪಿ ಯೋಧಾಸ್ ಹಾಗೂ ದಬಾಂಗ್ ಡೆಲ್ಲಿ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದವು.
ಕಳೆದ ಬಾರಿ ರನ್ನರ್-ಅಪ್ ಹರ್ಯಾಣ ಮೊದಲ ಸೆಮಿಫೈನಲ್‌ನಲ್ಲಿ ಯೋಧಾಸ್ ವಿರುದ್ಧ 28-25 ಅಂಕಗಳಲ್ಲಿ ಜಯಗಳಿಸಿತು. ಆರಂಭದಿಂದಲೂ ಇತ್ತಂಡಗಳಿಂದ ತೀವ್ರ ಪೈಪೋಟಿ ಕಂಡುಬಂತು. ಮೊದಲಾರ್ಧಕ್ಕೆ ಹರ್ಯಾಣ 12-11ರಿಂದ ಮುನ್ನಡೆಯಲ್ಲಿತ್ತು. ಆದರೆ ಕೊನೆಯಲ್ಲಿ ಸತತ ಅಂಕ ಗಳಿಸಿದ ಹರ್ಯಾಣ, ಸತತ 2ನೇ ಬಾರಿ ಫೈನಲ್‌ಗೇರಿತು. ತಾರಾ ರೈಡರ್‌ಗಳಾದ ಶಿವಂ 7, ವಿನಯ್ 6, ಡಿಫೆಂಡರ್ ರಾಹುಲ್ 5 ಅಂಕ ಗಳಿಸಿದರು.
undefined
ಮತ್ತೊಂದು ಸೆಮೀಸ್‌ನಲ್ಲಿ ದಬಾಂಗ್ ಡೆಲ್ಲಿಯನ್ನು ಪಾಟ್ನಾ 32-28 ಅಂಕಗಳಿಂದ ಸೋಲಿಸಿತು. ಮೊದಲಾರ್ಧದಲ್ಲೇ ಪಾಟ್ನಾ 17-10ರಿಂದ ಮುನ್ನಡೆಯಲ್ಲಿದ್ದರೂ, ಒಂದು ಹಂತದಲ್ಲಿ ಡೆಲ್ಲಿ ಅಂಕ ಗಳಿಕೆಯಲ್ಲಿ ಮೇಲುಗೈ ಸಾಧಿಸಿತು. ಆದರೆ ಒತ್ತಡ ಕೊನೆಯಲ್ಲಿ ಮತ್ತೆ ಪುಟಿದೆದ್ದ ಪಾಟ್ನಾ, 4 ಅಂಕದಿಂದ ಜಯಗಳಿಸಿತು. ಪಾಟ್ನಾದ ಅಯಾನ್, ದೇವಾಂಕ್ ತಲಾ 8 ಅಂಕ ಗಳಿಸಿದರು.
ಬಾಕ್ಸಿಂಗ್ ಡೇ ಟೆಸ್ಟ್ ವಿವಾದ: ವಿರಾಟ್ ಕೊಹ್ಲಿ ಜೋಕರ್ ಪಟ್ಟ ಕಟ್ಟಿದ ಆಸೀಸ್ ಮಾಧ್ಯಮ!
ನಾಳೆ ಫೈನಲ್
ಹರ್ಯಾಣ ಹಾಗೂ ಪಾಟ್ನಾ ಭಾನುವಾರ ಫೈನಲ್‌ನಲ್ಲಿ ಸೆಣಸಾಡಲಿವೆ. ಕಳೆದ ಬಾರಿ ಪುಣೇರಿ ವಿರುದ್ಧ ಫೈನಲ್‌ನಲ್ಲಿ ಸೋತಿದ್ದ ಹರ್ಯಾಣ, ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 3 ಬಾರಿ ಚಾಂಪಿಯನ್ ಪಾಟ್ನಾ 5ನೇ ಬಾರಿ ಫೈನಲ್‌ಗೇರಿದೆ.
29ಕ್ಕೆ ಬೆಂಗಳೂರಲ್ಲಿ ಆರ್ಚರಿ ಆಯ್ಕೆ ಟ್ರಯಲ್ಸ್
ಬೆಂಗಳೂರು: ಫೆ.10ರಿಂದ 17ರ ವರೆಗೂ ಬಂಗಾಳದ ಬೋಲ್ಪುರ್‌ನಲ್ಲಿ ನಡೆಯಲಿರುವ 44ನೇ ರಾಷ್ಟ್ರೀಯ ಕಿರಿಯರ ಆರ್ಚರಿ ಚಾಂಪಿಯನ್‌ಶಿಪ್‌ಗೆ ರಾಜ್ಯ ತಂಡವನ್ನು ಆಯ್ಕೆ ಮಾಡಲು ಡಿ.29ರಂದು ಆಯ್ಕೆ ಟ್ರಯಲ್ಸ್ ನಡೆಯಲಿದೆ ಎಂದು ಕರ್ನಾಟಕ ಅಮೆಚೂರ್ ಆರ್ಚರಿ ಸಂಸ್ಥೆ ತಿಳಿಸಿದೆ.
ಅಂದು ಬೆಳಗ್ಗೆ 8.30ಕ್ಕೆ ನಗರದ ಕಂಠೀರವ ಕ್ರೀಡಾಂಗಣದಲ್ಲಿರುವ ಆರ್ಚರಿ ಗ್ರೌಂಡ್‌ನಲ್ಲಿ ಟ್ರಯಲ್ಸ್ ನಡೆಯಲಿದ್ದು, ಜ.1, 2004ರಂದು ಅಥವಾ ಆನಂತರ ಜನಿಸಿದವರು ಪಾಲ್ಗೊಳ್ಳಬಹುದಾಗಿದೆ. ಟ್ರಯಲ್ಸ್‌ಗೆ ನೋಂದಾಯಿಸಲು ಡಿ.28 ಕೊನೆಯ ದಿನವಾಗಿದ್ದು, 080-22275656 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಸ್ಯಾಮ್ ಕಾನ್ಸ್‌ಟಾಸ್ ಜೊತೆ ಕಿರಿಕ್, ಕೊಹ್ಲಿಗೆ ಭಾರೀ ದಂಡ ವಿಧಿಸಿದ ಐಸಿಸಿ!
ಟೋಕಿಯೋದಲ್ಲಿ ಚಿನ್ನ ಗೆದ್ದವರಿಗೆ ಖೇಲ್ ರತ್ನ, ಈಗ ಏಕಿಲ್ಲ?: ಸಿಂಗ್
ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಆರ್ಚರಿಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹರ್ವಿಂದರ್ ಸಿಂಗ್ ಪ್ರಶಸ್ತಿ ವಿತರಣೆಯಲ್ಲಿ ಕೇಂದ್ರ ಕ್ರೀಡಾ ಇಲಾಖೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳಿಗೆ ಖೇಲ್ ರತ್ನ ನೀಡಲಾಯಿತು. ಆದರೆ ಪ್ಯಾರಿಸ್‌ನಲ್ಲಿ ಚಿನ್ನ ಗೆದ್ದವರಿಗೆ ಏಕೆ ಕೊಡುತ್ತಿಲ್ಲ. ಸ್ಪರ್ಧೆ ಬದಲಾಗಿಲ್ಲ, ಘನತೆ ಬದಲಾಗಿಲ್ಲ, ಪದಕ ಬದಲಾಗಿಲ್ಲ, ಹೀಗಿರುವಾಗ ಪ್ರಶಸ್ತಿ ಏಕಿಲ್ಲ?’ ಎಂದು ಪ್ರಶ್ನಿಸಿದ್ದಾರೆ.
2021ರಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾ, ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಅವನಿ ಲೇಖರಾ, ಸುಮಿತ್ ಅಂತಿಲ್ ಹಾಗೂ ಪ್ರಮೋದ್ ಭಗತ್‌ಗೆ ಖೇಲ್ ರತ್ನ ನೀಡಿ ಗೌರವಿಸಲಾಗಿತ್ತು. ಹರ್ವಿಂದರ್ ಟೋಕಿಯೋ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.