ಪ್ರೊ ಕಬಡ್ಡಿ: ಪ್ಲೇ ಆಫ್’ಗೆ ಲಗ್ಗೆಯಿಟ್ಟ ಬೆಂಗಳೂರು ಬುಲ್ಸ್

By Web DeskFirst Published Dec 19, 2018, 10:30 AM IST
Highlights

ಬೆಂಗಳೂರು ತಂಡಕ್ಕಿದು 19 ಪಂದ್ಯಗಳಲ್ಲಿ 12ನೇ ಗೆಲುವು. 69 ಅಂಕಗಳೊಂದಿಗೆ ಮೊದಲ ಸ್ಥಾನ ಕಾಯ್ದುಕೊಂಡಿರುವ ಬುಲ್ಸ್, 2ನೇ ಸ್ಥಾನದಲ್ಲಿರುವ ಪಾಟ್ನಾಗಿಂತ 17 ಅಂಕ ಮುಂದಿದೆ.

ಪಂಚಕುಲಾ[ಡಿ.19]: ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಪ್ಲೇ-ಆಫ್ ಪ್ರವೇಶಿಸಿದೆ. ತೆಲುಗು ಟೈಟಾನ್ಸ್ ವಿರುದ್ಧ ಮಂಗಳವಾರ ಇಲ್ಲಿನ ತೌ ದೇವಿ ಲಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 44-28 ಅಂತರದಲ್ಲಿ ಗೆದ್ದ ಬುಲ್ಸ್, ‘ಬಿ’ ವಲಯದಿಂದ ಪ್ಲೇ-ಆಫ್‌ಗೇರಿದ ಮೊದಲ ಹಾಗೂ ಒಟ್ಟಾರೆ 4ನೇ ತಂಡ ಎನಿಸಿದೆ.

ಬೆಂಗಳೂರು ತಂಡಕ್ಕಿದು 19 ಪಂದ್ಯಗಳಲ್ಲಿ 12ನೇ ಗೆಲುವು. 69 ಅಂಕಗಳೊಂದಿಗೆ ಮೊದಲ ಸ್ಥಾನ ಕಾಯ್ದುಕೊಂಡಿರುವ ಬುಲ್ಸ್, 2ನೇ ಸ್ಥಾನದಲ್ಲಿರುವ ಪಾಟ್ನಾಗಿಂತ 17 ಅಂಕ ಮುಂದಿದೆ. ಪಾಟ್ನಾಗೆ
ಉಳಿದಿರುವುದು 3 ಪಂದ್ಯ. ಗರಿಷ್ಠ 15 ಅಂಕ ಗಳಿಸಬಹುದು. ಹೀಗಾಗಿ ಪಾಟ್ನಾ, ಬೆಂಗಳೂರು ತಂಡವನ್ನು ಹಿಂದಿಕ್ಕಲು ಸಾಧ್ಯವಿಲ್ಲ. ಆದರೆ ಬೆಂಗಾಲ್‌ಗೆ ಇನ್ನೂ 6 ಪಂದ್ಯ ಬಾಕಿ ಇದ್ದು, ತಂಡ 48 ಅಂಕ ಗಳಿಸಿದೆ.

ಒಂದೊಮ್ಮೆ ಬೆಂಗಾಲ್ ತವರು ಚರಣದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರೆ, ಬುಲ್ಸ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಬಹುದು. ಈ ಸೋಲಿನೊಂದಿಗೆ ಟೈಟಾನ್ಸ್ ಪ್ಲೇ-ಆಫ್ ಹಾದಿ ಕಠಿಣಗೊಂಡಿದೆ. ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕಿಳಿದ ಬುಲ್ಸ್, 9ನೇ ನಿಮಿಷದಲ್ಲಿ ಟೈಟಾನ್ಸ್ ಆಲೌಟ್ ಮಾಡಿ 11-5ರ ಮುನ್ನಡೆ ಪಡೆಯಿತು. ಆದರೆ 17ನೇ ನಿಮಿಷದಲ್ಲಿ ಬುಲ್ಸ್ ಆಲೌಟ್ ಮಾಡಿದ ಟೈಟಾನ್ಸ್, 16-16ರಲ್ಲಿ ಸಮಬಲ ಸಾಧಿಸಿತು. ಮೊದಲಾರ್ಧದ ಮುಕ್ತಾಯಕ್ಕೆ 22-16ರ ಮುನ್ನಡೆ ಪಡೆದ ಬುಲ್ಸ್, ದ್ವಿತೀಯಾರ್ಧದ ಆರಂಭದಲ್ಲೇ (21ನೇ ನಿ.) ಟೈಟಾನ್ಸ್ ಆಲೌಟ್ ಮಾಡಿ 25-17ರ ಮುನ್ನಡೆ ಪಡೆದುಕೊಂಡಿತು. 33ನೇ ನಿಮಿಷದಲ್ಲಿ ಟೈಟಾನ್ಸ್ ಪಡೆಯನ್ನು ಮತ್ತೆ ಆಲೌಟ್ ಮಾಡಿದ ಬುಲ್ಸ್ 37-22ರ ಮುನ್ನಡೆ ಪಡೆದು ಜಯಿಸಿತು.

3 ಆವೃತ್ತಿ ಬಳಿಕ ಪ್ಲೇ-ಆಫ್‌ಗೆ: ಮೊದಲ ಆವೃತ್ತಿಯಲ್ಲಿ 4ನೇ ಸ್ಥಾನ ಪಡೆದಿದ್ದ ಬುಲ್ಸ್, 2ನೇ ಆವೃತ್ತಿಯಲ್ಲಿ ರನ್ನರ್-ಅಪ್ ಆಗಿತ್ತು. 3ನೇ ಆವೃತ್ತಿಯಲ್ಲಿ 7ನೇ, 4ನೇ ಆವೃತ್ತಿಯಲ್ಲಿ 6ನೇ ಸ್ಥಾನ, ಕಳೆದ ಆವೃತ್ತಿಯಲ್ಲಿ 4ನೇ ಸ್ಥಾನ ಪಡೆದಿತ್ತು. 3 ಆವೃತ್ತಿಗಳ ಬಳಿಕ ಬುಲ್ಸ್ ಪ್ಲೇ-ಆಫ್‌ಗೇರಿದೆ.

ಶ್ರೇಷ್ಠ ರೈಡರ್: ಪವನ್ (13 ಅಂಕ)
ಶ್ರೇಷ್ಠ ಡಿಫೆಂಡರ್: ಅಮಿತ್ (05 ಅಂಕ)

ವರದಿ: ಸ್ಪಂದನ್ ಕಣಿಯಾರ್, ಕನ್ನಡಪ್ರಭ

click me!