ಆರನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದ್ದು ಯುಪಿ ಯೋಧಾ ತಂಡವನ್ನು 37-27 ಅಂಕಗಳಿಂದ ಮಣಿಸಿ ’ಬಿ’ ವಲಯದಲ್ಲಿ ಅಗ್ರಸ್ಥಾನಕ್ಕೇರಿದೆ.
ಗ್ರೇಟರ್’ನೋಯ್ಡಾ[ನ.08]: ಆರನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದ್ದು ಯುಪಿ ಯೋಧಾ ತಂಡವನ್ನು 37-27 ಅಂಕಗಳಿಂದ ಮಣಿಸಿ ’ಬಿ’ ವಲಯದಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನು ತವರಿನ ಚರಣದಲ್ಲಿ ಯೋಧಾ ಪಡೆ ಒಂದೂ ಗೆಲುವು ಕಾಣದೇ ನಿರಾಸೆ ಅನುಭವಿಸಿದೆ.
ಶ್ರೀಕಾಂತ್ ಜಾಧವ್ ಯುಪಿ ಯೋಧಾ ತಂಡಕ್ಕೆ ರೈಡಿಂಗ್’ನಲ್ಲಿ ಮೊದಲ ಅಂಕ ತಂದಿತ್ತರು. ಸ್ಟಾರ್ ರೈಡರ್ ಪವನ್ ಶೆರಾವತ್ ಬೆಂಗಳೂರು ಬುಲ್ಸ್ ಪಡೆಗೆ ಅಂಕಗಳ ಖಾತೆ ತೆರೆದರು. ನಿರಂತರ ಅಂಕ ಗಳಿಸುತ್ತಾ ಸಾಗಿದ ಬುಲ್ಸ್ ಮೊದಲಾರ್ಧದ 11ನೇ ನಿಮಿಷದಲ್ಲಿ ಯೋಧಾ ಪಡೆಯನ್ನು ಆಲೌಟ್ ಮಾಡಿ 14-6 ಅಂಕಗಳ ಭರ್ಜರಿ ಮುನ್ನಡೆ ಸಾಧಿಸಿತು. ಆಬಳಿಕವೂ ಆಕ್ರಮಣಕಾರಿಯಾಟ ಪ್ರದರ್ಶಿಸಿದ ರೋಹಿತ್ ಕುಮಾರ್ ಪಡೆ ಮೊದಲಾರ್ಧ ಮುಕ್ತಾಯದ ವೇಳೆಗೆ 19-11 ಅಂಕಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿತ್ತು.
ಇನ್ನು ದ್ವಿತಿಯಾರ್ಧದಲ್ಲೂ ಅದೇ ರೀತಿಯ ಪ್ರದರ್ಶನ ಮುಂದುವರೆಸಿದ ಬುಲ್ಸ್ 10 ಅಂಕಗಳ ಭರ್ಜರಿ ಜಯಬೇರಿ ಬಾರಿಸಿತು. ಬುಲ್ಸ್ ಸ್ಟಾರ್ ರೈಡರ್ ಪವನ್ ಶೆರಾವತ್ ಸೂಪರ್ 10 ಅಂಕ ಪಡೆದು ಗೆಲುವಿನ ರೂವರಿ ಎನಿಸಿದರು. ರೋಹಿತ್ ಕುಮಾರ್ 7 ಮತ್ತು ಮಹೇಂದರ್ ಸಿಂಗ್ ಕೂಡಾ 6 ವಿಕೆಟ್ ಪಡೆದರು.