ಪಿಎನ್‌ಬಿ ಮೆಟ್‌ಲೈಫ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2022 ಭರ್ಜರಿ ತಯಾರಿ
2015ರಲ್ಲಿ ಮೊದಲ ಬಾರಿಗೆ ಈ ಕ್ರೀಡಾಕೂಟವನ್ನು ಆರಂಭಿಸಲಾಗಿತ್ತು
12 ಮಹಾ ನಗರಗಳಲ್ಲಿ ಟೂರ್ನಿ ಆಯೋಜನೆ
ಬೆಂಗಳೂರು(ಆ.23): ದೇಶದಾದ್ಯಂತ 12 ರಾಜ್ಯಗಳಲ್ಲಿ, 12 ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ಗಳ ಸಂಯುಕ್ತ ಆಶ್ರಯದಲ್ಲಿ ಪಿಎನ್‌ಬಿ ಮೆಟ್‌ಲೈಫ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2022 ಭರ್ಜರಿ ತಯಾರಿಗಳು ಆರಂಭವಾಗಿವೆ. ದೇಶದ ಯುವ ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸಲು 2015ರಲ್ಲಿ ಮೊದಲ ಬಾರಿಗೆ ಈ ಕ್ರೀಡಾಕೂಟವನ್ನು ಆರಂಭಿಸಲಾಗಿದ್ದು, ಈಗಾಗಲೇ 5 ಯಶಸ್ವಿ ಆವೃತ್ತಿಗಳು ಜರುಗಿವೆ.
ಇದೀಗ ಆರನೇ ಆವೃತ್ತಿಗೆ ಪಿಎನ್‌ಬಿ ಮೆಟ್‌ಲೈಫ್ ಪ್ರಾಯೋಜಕತ್ವ ವಹಿಸಿದೆ. ಪಿಎನ್‌ಬಿ ಮೆಟ್‌ಲೈಫ್‌ನ ಪ್ರಚಾರ ರಾಯಭಾರಿಯಾಗಿರುವ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು, ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಿಎನ್‌ಬಿ ಮೆಟ್‌ಲೈಫ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಭಾರತದ ಯುವ ಉದಯೋನ್ಮುಖ ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದೆ. ಭವಿಷ್ಯದ ಬ್ಯಾಡ್ಮಿಂಟನ್ ತಾರೆಗಳನ್ನು ಸಜ್ಜುಗೊಳಿಸುವ ಬ್ರ್ಯಾಂಡ್ ಜತೆಗೆ ಸಂಬಂಧ ಹೊಂದಲು ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.
ಮುಂಬೈ, ಬೆಂಗಳೂರು, ಸೂರತ್, ಲಖನೌ, ರಾಂಚಿ, ಇಂದೂರ್, ಚಂಡೀಗಢ, ತ್ರಿಶೂರ್, ಹೈದರಾಬಾದ್, ಭುವನೇಶ್ವರ್, ಗುವಾಹಟಿ ಮತ್ತು ದೆಹಲಿ ಸೇರಿದಂತೆ ಒಟ್ಟು 12 ಮಹಾ ನಗರಗಳಲ್ಲಿ ಪಿಎನ್‌ಬಿ ಮೆಟ್‌ಲೈಫ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿ ಜರುಗಲಿದೆ. 7ರಿಂದ 17 ವರ್ಷದೊಳಗಿನ ಬ್ಯಾಡ್ಮಿಂಟನ್ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ಈ ಚಾಂಪಿಯನ್‌ಶಿಪ್‌ನಲ್ಲಿ 9 ವರ್ಷದೊಳಗಿನವರು, 11 ವರ್ಷದೊಳಗಿನವರು, 13 ವರ್ಷದೊಳಗಿನವರು, 15 ವರ್ಷದೊಳಗಿನವರು ಮತ್ತು 17 ವರ್ಷದೊಳಗಿನವರು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಪಿಎನ್‌ಬಿ ಮೆಟ್‌ಲೈಫ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್, ಸಿಂಗಲ್ಸ್ ಮಾದರಿಯಲ್ಲಿರಲಿದ್ದು, ಈ ಕೂಟದಲ್ಲಿ ಭಾಗವಹಿಸುವ ಶಟ್ಲರ್‌ಗಳಿಗೆ ವಯೋಮಿತಿಯನ್ನು ಪರಿಗಣಿಸಿ ಗರಿಷ್ಠ ಎರಡು ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡಲು ಆಯೋಜಕರು ತೀರ್ಮಾನಿಸಿದ್ದಾರೆ.
ಈ ವರ್ಷದ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಿ ಮಾತನಾಡಿರುವ, ಪಿಎನ್‌ಬಿ ಮೆಟ್‌ಲೈಫ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಶೀಶ್ ಕುಮಾರ್ ಶ್ರೀವಾಸ್ತವ ಅವರು, ‘ಬ್ಯಾಡ್ಮಿಂಟನ್ನಿನ ಯುವ ಆಟಗಾರರಿಗೆ ವಿಶಿಷ್ಟ ವೇದಿಕೆಯಾಗಿರುವ ಜೆಬಿಸಿಯ ಆರನೇ ಆವೃತ್ತಿಯೊಂದಿಗೆ ಮತ್ತೆ ಮೈದಾನಕ್ಕೆ ಮರಳಲು ನಾವು ಹೆಚ್ಚು ಉತ್ಸುಕರಾಗಿದ್ದೇವೆ. ಭಾರತದ ಬ್ಯಾಡ್ಮಿಂಟನ್ ಲೋಕದಲ್ಲಿ ಹೆಚ್ಚು ಬೇಡಿಕೆಯಿರುವ ವಾರ್ಷಿಕ ಕ್ರೀಡಾಕೂಟಗಳಲ್ಲಿ ಒಂದಾಗಿ ಇದು ದೇಶದಾದ್ಯಂತ ಗಮನ ಸೆಳೆಯುತ್ತಿದೆ. ವ್ಯಕ್ತಿಯ ಪಾಲಿಗೆ ಆತನ ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುವುದು ಹೆಚ್ಚು ಅಪೇಕ್ಷನೀಯವಾಗಿರುವಂತೆ, ವ್ಯಕ್ತಿಯ ನೆಮ್ಮದಿ – ಸಂತೋಷಕ್ಕೆ ದೈಹಿಕ ಸಾಮರ್ಥ್ಯವೂ ಮುಖ್ಯವಾಗಿರುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ನಾವು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತೇವೆ’ ಎಂದು ಹೇಳಿದ್ದಾರೆ.
ಅಂಡರ್ 20 ವಿಶ್ವ ಕುಸ್ತಿ: ಭಾರತದ ಅಂತಿಮ್‌ಗೆ ಐತಿಹಾಸಿಕ ಚಿನ್ನ..!
2022ನೇ ಸಾಲಿನ ಪಿಎನ್‌ಬಿ ಮೆಟ್‌ಲೈಫ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾಗವಹಿಸಲು ಇಚ್ಛಿಸುವ ಬ್ಯಾಡ್ಮಿಂಟನ್ ಪಟುಗಳು 9319483219 ಸಂಖ್ಯೆಗೆ ಕರೆ ಮಾಡುವ ಮೂಲಕ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.