ನ್ಯಾಷನಲ್ ಗೇಮ್ಸ್‌ನಲ್ಲಿ ಕರ್ನಾಟಕದ ಚಿನ್ನದ ಬೇಟೆ ಮುಂದುವರಿಕೆ
ಭಾನುವಾರ 2 ಚಿನ್ನ ಸೇರಿ ಒಟ್ಟು 4 ಪದಕಗಳು ರಾಜ್ಯದ ಖಾತೆಗೆ ಸೇರ್ಪಡೆ
ಒಟ್ಟು 84 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡ ಕರ್ನಾಟಕ
ಅಹಮದಾಬಾದ್(ಅ.10): 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಪದಕ ಬೇಟೆ ಮುಂದುವರಿದಿದೆ. ಭಾನುವಾರ 2 ಚಿನ್ನ ಸೇರಿ ಒಟ್ಟು 4 ಪದಕಗಳು ರಾಜ್ಯದ ಖಾತೆಗೆ ಸೇರ್ಪಡೆಗೊಂಡವು. ಗಾಲ್‌್ಫನಲ್ಲಿ 3 ಪದಕಗಳು ಒಲಿದವು. ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಅವನಿ ಪ್ರಶಾಂತ್ 288 ಅಂಕಗಳೊಂದಿಗೆ ಚಿನ್ನದ ಪದಕ ಜಯಿಸಿದರು. ತಂಡ ವಿಭಾಗದಲ್ಲಿ ಅವನಿ ಹಾಗೂ ದುರ್ಗಾ ನಿಟ್ಟೂರು 590 ಅಂಕಗಳೊಂದಿಗೆ ಚಿನ್ನಕ್ಕೆ ಮುತ್ತಿಟ್ಟರು.
ಇನ್ನು ಗಾಲ್‌್ಫ ಪುರುಷರ ತಂಡ ವಿಭಾಗದಲ್ಲಿ ಕರ್ನಾಟಕಕ್ಕೆ ಬೆಳ್ಳಿ ಪದಕ ದೊರೆಯಿತು. ಆರ್ಯನ್ ಹಾಗೂ ತ್ರಿಶೂಲ್ ಚಿನ್ನಪ್ಪ ಜೋಡಿಯು 2ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಕ್ಯಾನೊಯ್(ಸಣ್ಣ ದೋಣಿ) ಸ್ಲಾಲೊಮ್ ವಿಭಾಗದಲ್ಲಿ ರಾಜ್ಯದ ಎ. ಧನಲಕ್ಷ್ಮಿ ಕಂಚಿನ ಪದಕ ಜಯಿಸಿದರು.
ಪುರುಷರ ಫುಟ್ಬಾಲ್ ಸೆಮಿಫೈನಲ್‌ನಲ್ಲಿ ಕರ್ನಾಟಕ ಹಾಲಿ ರಾಷ್ಟ್ರೀಯ ಚಾಂಪಿಯನ್ ಕೇರಳ ವಿರುದ್ಧ 0-2 ಗೋಲುಗಳಲ್ಲಿ ಪರಾಭವಗೊಂಡಿತು. ತಂಡವು ಕಂಚಿನ ಪದಕಕ್ಕೆ ಸೆಣಸಲಿದೆ. ಕರ್ನಾಟಕ 25 ಚಿನ್ನ, 23 ಬೆಳ್ಳಿ, 36 ಕಂಚಿನೊಂದಿಗೆ ಒಟ್ಟು 84 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ.
ಇನ್ನುಳಿದಂತೆ ಸರ್ವೀಸಸ್ 51 ಚಿನ್ನ ಸೇರಿ ಒಟ್ಟು 113 ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಹರ್ಯಾಣ 31 ಚಿನ್ನ ಸೇರಿ ಒಟ್ಟು 95 ಪದಕ ಜಯಿಸಿ 2ನೇ ಸ್ಥಾನ ಪಡೆದಿದೆ. ಮಹಾರಾಷ್ಟ್ರ 30 ಚಿನ್ನ ಸೇರಿ ಒಟ್ಟು 119 ಪದಕಗಳೊಂದಿಗೆ 3ನೇ ಸ್ಥಾನದಲ್ಲಿದೆ.
ಜಾವೆಲಿನ್ ಪಟು ಮನು ಬಗ್ಗೆ ನೀರಜ್ ಮೆಚ್ಚುಗೆ
ಬೆಂಗಳೂರು: ಕರ್ನಾಟಕದ ಯುವ ಜಾವೆಲಿನ್ ಥ್ರೋ ಪಟು, ಗುಜರಾತ್‌ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸರ್ವೀಸಸ್ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದ ಮನು ಡಿ.ಪಿ. ಬಗ್ಗೆ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಗೇಮ್ಸ್‌ನಲ್ಲಿ ಸ್ಪರ್ಧಿಸದಿದ್ದರೂ ಫಲಿತಾಂಶಗಳ ಮೇಲೆ ಕಣ್ಣಿಟ್ಟಿದ್ದ ನೀರಜ್, ಶನಿವಾರ ಮಾಧ್ಯಮಗಳ ಜೊತೆ ವಿಶೇಷ ಆನ್‌ಲೈನ್ ಸಂದರ್ಶನ ನಡೆಸಿದರು.
ಕಾಲು ಮುರಿದಿದ್ದರೂ ಕಾಮನ್ವೆಲ್ತ್ ಚಿನ್ನ ಗೆದ್ದ ಸೀಕ್ರೇಟ್ ಬಿಚ್ಚಿಟ್ಟ ಪಿ ವಿ ಸಿಂಧು
ಈ ವೇಳೆ ಮಾತನಾಡಿದ ಅವರು, ‘ಭಾರತದಲ್ಲಿ ಜಾವೆಲಿನ್ ಥ್ರೋ ಪ್ರಗತಿ ಖುಷಿ ನೀಡಿದೆ. ಮನು ಡಿ.ಪಿ, ರೋಹಿತ್ ಯಾದವ್ ಈಗಾಗಲೇ ಅಂ.ರಾ. ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯದಲ್ಲೇ ಭಾರತ ಜಾವೆಲಿನ್ ಥ್ರೋನಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲಲಿದೆ ಎನ್ನುವ ವಿಶ್ವಾಸವಿದೆ’ ಎಂದರು. ಮನು, ತಮ್ಮ ಚೊಚ್ಚಲ ರಾಷ್ಟ್ರೀಯ ಗೇಮ್ಸ್‌ನಲ್ಲಿ 80.71 ಮೀ. ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದರು.
ಐಎಸ್‌ಎಲ್: ಮುಂಬೈ, ಹೈದ್ರಾಬಾದ್ ಪಂದ್ಯ 3-3 ಗೋಲಲ್ಲಿ ಡ್ರಾ
ಪುಣೆ: ಹಾಲಿ ಚಾಂಪಿಯನ್ ಹೈದರಾಬಾದ್ ಎಫ್‌ಸಿ ಐಎಸ್‌ಎಲ್ 9ನೇ ಆವೃತ್ತಿಯನ್ನು ಡ್ರಾದೊಂದಿಗೆ ಆರಂಭಿಸಿದೆ. ಭಾನುವಾರ ನಡೆದ ಮುಂಬೈ ಸಿಟಿ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ 3-3 ಗೋಲುಗಳ ಡ್ರಾಗೆ ತೃಪ್ತಿಪಟ್ಟಿತು. ಮೊದಲಾರ್ಧದಲ್ಲಿ ಎರಡೂ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದವು.
ದ್ವಿತೀಯಾರ್ಧದ ಆರಂಭದಲ್ಲಿ ಪಡೆದ ಮುನ್ನಡೆಯನ್ನು ಹೈದರಾಬಾದ್ ಕಾಯ್ದುಕೊಳ್ಳಲಿಲ್ಲ. ಮುಂಬೈನ ಸನಾ 23ನೇ ನಿಮಿಷದಲ್ಲಿ ಬಾರಿಸಿದ ಸ್ವಂತ ಗೋಲು ಹೈದರಾಬಾದ್‌ಗೆ ವರವಾಯಿತು. ಸೋಮವಾರ ಎಟಿಕೆ ಮೋಹನ್ ಬಗಾನ್, ಚೆನ್ನೈ ಸೆಣಸಲಿವೆ.