ಮಲೇಷ್ಯಾ ಓಪನ್‌: ಸೆಮೀಸ್‌ನಲ್ಲಿ ಸೋತ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಜೋಡಿ

By Kannadaprabha NewsFirst Published Jan 15, 2023, 10:24 AM IST
Highlights

* ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯ
* ಸೆಮೀಸ್‌ನಲ್ಲಿ ಮುಗ್ಗರಿಸಿದ ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿ
* 3ನೇ ಬಾರಿ ಸೂಪರ್‌ 1000 ಟೂರ್ನಿಯ ಸೆಮೀಸ್‌ನಲ್ಲಿ ಸೋಲುಂಡ ಈ ಜೋಡಿ

ಕೌಲಾಲಂಪುರ(ಜ.15): ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌, ಭಾರತದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಸೋಲುಂಡರು. ಶನಿವಾರ ನಡೆದ ಪಂದ್ಯದಲ್ಲಿ ಚೀನಾದ ಲಿಯಾಂಗ್‌ ಕೆಂಗ್‌ ಹಾಗೂ ವಾಂಗ್‌ ಚಾಂಗ್‌ ಜೋಡಿ ವಿರುದ್ಧ 16-21, 21-11, 15-21 ಗೇಮ್‌ಗಳಲ್ಲಿ ಸೋಲುಂಡಿತು. ವಿಶ್ವ ನಂ.5 ಸಾತ್ವಿಕ್‌ ಹಾಗೂ ಚಿರಾಗ್‌ ಜೋಡಿ 3ನೇ ಬಾರಿ ಸೂಪರ್‌ 1000 ಟೂರ್ನಿಯ ಸೆಮೀಸ್‌ನಲ್ಲಿ ಸೋಲುಂಡಿತು.

ವಿಶ್ವ ರ‍್ಯಾಂಕಿಂಗ್‌‌ನಲ್ಲಿ 17ನೇ ಸ್ಥಾನದಲ್ಲಿರುವ ಚೀನಾ ಜೋಡಿಯ ವೇಗದ ಮುಂದೆ ಭಾರತೀಯರು ಮಂಕಾದರು. 1 ಗಂಟೆ 4 ನಿಮಿಷಗಳ ಹೋರಾಟದಲ್ಲಿ ಸಾತ್ವಿಕ್‌-ಚಿರಾಗ್‌ ಪರಾಭವಗೊಂಡರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿತು. ಮುಂದಿನ ವಾರ ನವದೆಹಲಿಯಲ್ಲಿ ಆರಂಭಗೊಳ್ಳಲಿರುವ ಇಂಡಿಯಾ ಓಪನ್‌ ಟೂರ್ನಿಯಲ್ಲಿ ಸಾತ್ವಿಕ್‌-ಚಿರಾಗ್‌ ಕಣಕ್ಕಿಳಿಯಲಿದ್ದಾರೆ.

ಐಪಿಎಲ್‌ ಮಾಜಿ ಅಧ್ಯಕ್ಷ ಲಲಿತ್‌ ಮೋದಿಗೆ ಕೋವಿಡ್‌

ನವದೆಹಲಿ: ಐಪಿಎಲ್‌ ಮಾಜಿ ಅಧ್ಯಕ್ಷ ಲಲಿತ್‌ ಮೋದಿ ಕೊರೋನಾ, ನ್ಯುಮೋನಿಯಾಗೆ ತುತ್ತಾಗಿದ್ದು ಲಂಡನ್‌ನ ಆಸ್ಪತ್ರೆಗೆ ದಾಖಲಾಗಿದ್ದಾರೆ. 2 ವಾರದಲ್ಲಿ ಎರಡು ಬಾರಿ ಕೋವಿಡ್‌ಗೆ ತುತ್ತಾಗಿದ್ದಾಗಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಮೋದಿ, ಸದ್ಯ ಆಕ್ಸಿಜನ್‌ ಸಿಲಿಂಡರ್‌ಗಳ ಸಹಾಯದಿಂದ ಉಸಿರಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮೆಕ್ಸಿಕೋದಲ್ಲಿದ್ದ ಮೋದಿ ಅವರನ್ನು ಏರ್‌ ಆ್ಯಂಬುಲೆನ್ಸ್‌ ಮೂಲಕ ಲಂಡನ್‌ಗೆ ಕರೆತರಲಾಯಿತು ಎಂದು ತಿಳಿದುಬಂದಿದೆ.

ಬೋಲ್ಟ್‌ ಬ್ಯಾಂಕ್‌ ಖಾತೆಯಿಂದ ಕೋಟ್ಯಂತರ ರು. ಹಣ ಮಾಯ!

ಜಮೈಕಾ: ದಿಗ್ಗಜ ಅಥ್ಲೀಟ್‌ ಉಸೇನ್‌ ಬೋಲ್ಟ್‌ರ ಹೂಡಿಕೆ ಖಾತೆಯಲ್ಲಿದ್ದ ಕೋಟ್ಯಂತರ ರು. ಹಣ ಮಾಯವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 10 ವರ್ಷಕ್ಕೂ ಹೆಚ್ಚು ಸಮಯದಿಂದ ಈ ಖಾತೆ ಬಳಸುತ್ತಿದ್ದ ಬೋಲ್ಟ್‌, ಷೇರುಗಳಲ್ಲಿ ಕೋಟ್ಯಂತರ ರು. ಹೂಡಿಕೆ ಮಾಡಿದ್ದರು. ಬ್ಯಾಂಕ್‌ನ ಮಾಜಿ ಸಿಬ್ಬಂದಿಯೊಬ್ಬನೇ ಹಣ ದೋಚಿರುವ ಬಗ್ಗೆ ಅನುಮಾನವಿದ್ದು, ಹಲವರು ಹಣ ಕಳೆದುಕೊಂಡಿರುವುದಾಗಿ ದೂರು ನೀಡಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆ ಆರಂಭಗೊಂಡಿದೆ.

Ind vs SL: ಲಂಕಾ ಎದುರು ರೋಹಿತ್ ಶರ್ಮಾ ಪಡೆಗೆ ಕ್ಲೀನ್‌ ಸ್ವೀಪ್‌ ಗುರಿ

ಆಫ್ಘನ್‌ ವಿರುದ್ಧ ಸರಣಿ ಆಡಲ್ಲ ಎಂದ ಆಸೀಸ್‌!

ಮೆಲ್ಬರ್ನ್‌: ಮಾರ್ಚ್‌ನಲ್ಲಿ ಯುಎಇಯಲ್ಲಿ ನಡೆಯಬೇಕಿದ್ದ ಆಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಆಸ್ಪ್ರೇಲಿಯಾ ಹಿಂದೆ ಸರಿದಿದೆ. ಆಫ್ಘನ್‌ನ ಉಗ್ರ ತಾಲಿಬಾನ್‌ ಸರ್ಕಾರ ಮಹಿಳೆಯರು, ಬಾಲಕಿಯರ ಮೇಲೆ ಹೇರುತ್ತಿರುವ ಕ್ರೀಡಾ ನಿಷೇಧವನ್ನು ವಿರೋಧಿಸಿ ಸರಣಿಯಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ಗುರುವಾರ ಕ್ರಿಕೆಟ್‌ ಆಸ್ಪ್ರೇಲಿಯಾ ತಿಳಿಸಿದೆ.

ಜನವರಿ 23ಕ್ಕೆ ಖಂಡಾಲದಲ್ಲಿ ಕೆ.ಎಲ್‌.ರಾಹುಲ್‌ ಮದುವೆ

ಬೆಂಗಳೂರು: ಭಾರತದ ತಾರಾ ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಜನವರಿ 23ರಂದು ಬಾಲಿವುಡ್‌ ನಟಿ ಆಥಿಯಾ ಶೆಟ್ಟಿಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮಹಾರಾಷ್ಟ್ರದ ಖಂಡಾಲದಲ್ಲಿರುವ ಆಥಿಯಾ ಅವರ ತಂದೆ, ಬಾಲಿವುಡ್‌ ನಟ ಸುನಿಲ್‌ ಶೆಟ್ಟಿಅವರ ಬಂಗ್ಲೆಯಲ್ಲಿ ವಿವಾನ ಕಾರ‍್ಯಕ್ರಮ ನಡೆಯಲಿದೆ. ಕುಟುಂಬಸ್ಥರು ಹಾಗೂ ಆಪ್ತ ಬಳಗಕ್ಕೆ ಆಹ್ವಾನ ನೀಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕ್ರಿಕೆಟಿಗರಾದ ಧೋನಿ, ಕೊಹ್ಲಿ ಸೇರಿ ಇನ್ನೂ ಅನೇಕ ಸೆಲೆಬ್ರಿಟಿಗಳು ವಿವಾಹಕ್ಕೆ ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

click me!