ಖೇಲೋ ಇಂಡಿಯಾ: ಚಿನ್ನ ಸೇರಿ ರಾಜ್ಯಕ್ಕೆ ಮತ್ತೆ 6 ಪದಕ

By Kannadaprabha News  |  First Published Feb 4, 2023, 8:35 AM IST

ಖೇಲೋ ಇಂಡಿಯಾ ಯೂತ್ ಗೇಮ್ಸ್ ಕ್ರೀಡಾಕೂಟದಲ್ಲಿ ರಾಜ್ಯಕ್ಕೆ ಚೊಚ್ಚಲ ಚಿನ್ನ
ರಾಜ್ಯದ ಅಥ್ಲೀಟ್‌ಗಳು 1 ಬೆಳ್ಳಿ, 4 ಕಂಚು ಸೇರಿ 7 ಪದಕ ಗೆದ್ದಿದ್ದಾರೆ
ಬ್ಯಾಡ್ಮಿಂಟನ್‌ನ ಬಾಲಕರ ಡಬಲ್ಸ್‌ನಲ್ಲಿ ನಿಕೋಲಸ್‌-ತುಷಾರ್‌ ಜೋಡಿಗೆ ಸ್ವರ್ಣ


ಭೋಪಾಲ್‌(ಫೆ.04): 5ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ನಲ್ಲಿ ಕರ್ನಾಟಕಕ್ಕೆ ಚೊಚ್ಚಲ ಚಿನ್ನದ ಪದಕ ಬ್ಯಾಡ್ಮಿಂಟನ್‌ನಲ್ಲಿ ಒಲಿದಿದೆ. ಶುಕ್ರವಾರ ರಾಜ್ಯದ ಅಥ್ಲೀಟ್‌ಗಳು 1 ಬೆಳ್ಳಿ, 4 ಕಂಚು ಸೇರಿ 7 ಪದಕ ಗೆದ್ದಿದ್ದು, ಒಟ್ಟು ಗಳಿಕೆ 12ಕ್ಕೇರಿದೆ. ಪದಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. 

ಬ್ಯಾಡ್ಮಿಂಟನ್‌ನ ಬಾಲಕರ ಡಬಲ್ಸ್‌ನಲ್ಲಿ ನಿಕೋಲಸ್‌-ತುಷಾರ್‌ ಜೋಡಿ ಫೈನಲ್‌ನಲ್ಲಿ ಹರ್ಯಾಣ ವಿರುದ್ಧ ಜಯಿಸಿ ಬಂಗಾರಕ್ಕೆ ಮುತ್ತಿಕ್ಕಿತು. ಅಂಡರ್‌-18 ಬಾಲಕರ ಸೈಕ್ಲಿಂಗ್‌ನ ಸ್ಟ್ರಿಂಟ್‌ ವಿಭಾಗದಲ್ಲಿ ಸಂಪತ್‌ ಬೆಳ್ಳಿ ತಮ್ಮದಾಗಿಸಿಕೊಂಡರು. ಟೇಬಲ್‌ ಟೆನಿಸ್‌ ಮಹಿಳಾ ಸಿಂಗಲ್ಸ್‌ನಲ್ಲಿ ಯಶಸ್ವಿನಿ ಘೋರ್ಪಡೆ ಕಂಚು ಗೆದ್ದರೆ, ಬಾಲಕಿಯರ ಖೋ-ಖೋ ಸ್ಪರ್ಧೆಯಲ್ಲಿ ರಾಜ್ಯ ತಂಡಕ್ಕೆ ಕಂಚು ಲಭಿಸಿತು. ಅಥ್ಲೆಟಿಕ್ಸ್‌ನ ಬಾಲಕಿಯರ ವಿಭಾಗದ 100 ಮೀ. ಓಟದಲ್ಲಿ ನಿಯೋಲ್‌ ಕಂಚು ಗೆದ್ದರೆ, ಶೂಟಿಂಗ್‌ನ ಮಿಶ್ರ ತಂಡ ವಿಭಾಗದ 10 ಮೀ. ರೈಫಲ್‌ನಲ್ಲಿ ಪ್ರಣವ್‌ ಸುರೇಶ್‌-ಯುಕ್ತಿ ಜೋಡಿ ಕಂಚು ಪಡೆಯಿತು.

Have a look at the Medal Tally of the Youth Games 2022, 3rd February 2023 👇 pic.twitter.com/ESYKxenkdm

— Khelo India (@kheloindia)

Tap to resize

Latest Videos

ಇಂದಿನಿಂದ 2ನೇ ಆವೃತ್ತಿ ಪ್ರೈಮ್‌ ವಾಲಿಬಾಲ್‌ ಲೀಗ್‌

ಬೆಂಗಳೂರು: 2ನೇ ಆವೃತ್ತಿಯ ಪ್ರೈಮ್‌ ವಾಲಿಬಾಲ್‌ ಲೀಗ್‌(ಪಿವಿಎಲ್‌)ಗೆ ಶನಿವಾರ ಚಾಲನೆ ದೊರೆಯಲಿದೆ. 8 ತಂಡಗಳು ಸ್ಪರ್ಧಿಸುವ ಟೂರ್ನಿಯಲ್ಲಿ ಫೈನಲ್‌ ಸೇರಿ ಒಟ್ಟು 31 ಪಂದ್ಯಗಳು ನಡೆಯಲಿವೆ. ಬೆಂಗಳೂರು, ಹೈದರಾಬಾದ್‌ ಹಾಗೂ ಕೊಚ್ಚಿಯಲ್ಲಿ ಪಂದ್ಯಗಳು ನಡೆಯಲಿದ್ದು, ಮಾರ್ಚ್‌ 5ಕ್ಕೆ ಫೈನಲ್‌ ನಿಗದಿಯಾಗಿದೆ.

ಶನಿವಾರ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಟಾರ್ಪೆಡೊಸ್‌ಗೆ ಹಾಲಿ ಚಾಂಪಿಯನ್‌ ಕೋಲ್ಕತಾ ಥಂಡರ್‌ಬೋಲ್ಟ್ಸ್ ಎದುರಾಗಲಿದೆ. ಬೆಂಗಳೂರು ತಂಡದಲ್ಲಿ ಕರ್ನಾಟಕದ 4 ಆಟಗಾರರಿದ್ದು, ಕೋಲ್ಕತಾ ತಂಡವನ್ನು ಕನ್ನಡಿಗ ಅಶ್ವಲ್‌ ರೈ ಮುನ್ನಡೆಸಲಿದ್ದಾರೆ.

ಥಾಯ್ಲೆಂಡ್‌ ಓಪನ್‌ನಲ್ಲಿ ಭಾರತದ ಓಟ ಅಂತ್ಯ

ಬ್ಯಾಂಕಾಕ್‌: ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಅಭಿಯಾನ ಕ್ವಾರ್ಟರ್‌ ಫೈನಲ್‌ನಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ 2023ರ 4ನೇ ಟೂರ್ನಿಯಲ್ಲೂ ಭಾರತದ ಶಟ್ಲರ್‌ಗಳು ಪದಕ ಗೆಲ್ಲಲು ವಿಫಲರಾದರು. ಶುಕ್ರವಾರ ಪುರುಷರ ಸಿಂಗಲ್ಸ್‌ ಅಂತಿಮ 8ರ ಘಟ್ಟದಲ್ಲಿ 49ನೇ ರ‍್ಯಾಂಕಿಂಗ್‌‌ನ ಬಿ.ಸಾಯಿ ಪ್ರಣೀತ್‌ ವಿಶ್ವ ನಂ.23 ಚೀನಾದ ಲೀ ಶಿ ಫೆಂಗ್‌ ವಿರುದ್ಧ 17-21, 23-21, 18-21 ಗೇಮ್‌ಗಳಲ್ಲಿ ಪರಾಭವಗೊಂಡರು.

ರಾಜ್ಯದ ಬೆಳ್ಳಿಯಪ್ಪಗೆ ಡೆಲ್ಲಿ ಮ್ಯಾರಥಾನ್‌ನಲ್ಲಿ ಏಷ್ಯಾಡ್‌ ಅರ್ಹತೆ ಗುರಿ

ನವದೆಹಲಿ: ಮುಂಬರುವ ಹ್ಯಾಂಗ್ಝೂ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಕನ್ನಡಿಗ ಎ.ಬೆಳ್ಳಿಯಪ್ಪ, ದೇಶದ ಅಗ್ರ ಓಟಗಾರರಾದ ಶ್ರೀನು ಬುಗತ, ಜ್ಯೋತಿ ಸಿಂಗ್‌ ಗಾವಟೆ ಸೇರಿದಂತೆ ಪ್ರಮುಖ ಅಥ್ಲೀಟ್‌ಗಳು ಫೆಬ್ರವರಿ 26ರಂದು ಡೆಲ್ಲಿ ಮ್ಯಾರಥಾನ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. 

ನಿಷೇಧಿತ ವಸ್ತು ಬಳಕೆ ಸಾಬೀತು, ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅಮಾನತು!

ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌(ಎಎಫ್‌ಐ), ಫಿಟ್‌ ಇಂಡಿಯಾ ಮಾನ್ಯತೆಯೊಂದಿಗೆ ಆಯೋಜನೆಗೊಳ್ಳಲಿರುವ ರೇಸ್‌ನಲ್ಲಿ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆಯಲು ಪುರುಷರಿಗೆ 2 ಗಂಟೆ 15 ನಿಮಿಷ, ಮಹಿಳೆಯರಿಗೆ 2 ಗಂಟೆ 37 ನಿಮಿಷದ ಅರ್ಹತಾ ಸಮಯ ನಿಗದಿಪಡಿಸಲಾಗಿದೆ. ಏಷ್ಯನ್‌ ಗೇಮ್ಸ್‌ ಸೆ.23ರಿಂದ ಅ.8ರ ವರೆಗೆ ಚೀನಾದಲ್ಲಿ ನಡೆಯಲಿದೆ.

ವಿಶ್ವ ಬಾಕ್ಸಿಂಗ್‌ ರ‍್ಯಾಂಕಿಂಗ್‌‌‌: 3ನೇ ಸ್ಥಾನಕ್ಕೇರಿದ ಭಾರತ

ನವದೆಹಲಿ: ಅಮೆರಿಕ ಸೇರಿದಂತೆ ಪ್ರಮುಖ ದೇಶಗಳನ್ನು ಹಿಂದಿಕ್ಕಿ ಭಾರತ ವಿಶ್ವ ಬಾಕ್ಸಿಂಗ್‌ ರ‍್ಯಾಂಕಿಂಗ್‌‌ನಲ್ಲಿ 3ನೇ ಸ್ಥಾನಕ್ಕೇರಿದೆ. ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ(ಐಬಿಎ) ಪ್ರಕಟಿಸಿದ ನೂತನ ರ‍್ಯಾಂಕಿಂಗ್‌‌ನಲ್ಲಿ ಭಾರತ 36,300 ರೇಟಿಂಗ್‌ ಅಂಕಗಳನ್ನು ಕಲೆಹಾಕಿದೆ. 48100 ಅಂಕಗಳೊಂದಿಗೆ ಕಜಕಸ್ತಾನ ನಂ.1 ಸ್ಥಾನ ಕಾಯ್ದುಕೊಂಡಿದ್ದು, ಉಜ್ಬೇಕಿಸ್ತಾನ 37600 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತ ವಿಶ್ವ ಮಟ್ಟದಲ್ಲಿ ಅಭೂತಪೂರ್ವ ಪ್ರದರ್ಶನ ತೋರುತ್ತಿದ್ದು, 2008ರಿಂದ ಅಗ್ರ ಅಂತಾರಾಷ್ಟ್ರೀಯ ಕೂಟಗಳಲ್ಲಿ ಒಟ್ಟು 140 ಪದಕಗಳನ್ನು ಜಯಿಸಿದೆ.
 

click me!