ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆಯುತ್ತಿದೆ 5ನೇ ಅವೃತ್ತಿ ಖೇಲೋ ಇಂಡಿಯಾ ಯೂತ್ ಗೇಮ್ಸ್
ಕೇರಳದ ಕಳರಿಪಯಟ್ಟು, ಪಂಜಾಬ್‌ನ ಗಾಟ್ಕಾ ಸಮರ ಕಲೆಗಳನ್ನು ಸೇರ್ಪಡೆ
ಸಮರಕಲೆಯಲ್ಲಿ ಕರ್ನಾಟಕದ ಅಥ್ಲೀಟ್ಸ್‌ಗಳು ಭಾಗಿ
- ನಾಸಿರ್ ಸಜಿಪ, ಕನ್ನಡಪ್ರಭ
ಬೆಂಗಳೂರು(ಫೆ.07): ಮಧ್ಯಪ್ರದೇಶದಲ್ಲಿ 5ನೇ ಅವೃತ್ತಿ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಡೆಯುತ್ತಿದ್ದು, ಇದರಲ್ಲಿ ಕೇರಳದ ಕಳರಿಪಯಟ್ಟು, ಪಂಜಾಬ್‌ನ ಗಾಟ್ಕಾ ಸಮರ ಕಲೆಗಳನ್ನು ಸೇರ್ಪಡೆಗೊಳಿಸಲಾಗಿದೆ. ವಿಶೇಷ ಎಂದರೆ ಈ ಕ್ರೀಡೆಗಳಲ್ಲಿ ಕರ್ನಾಟಕದ ಅಥ್ಲೀಟ್‌ಗಳೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಎದುರಾಳಿಯತ್ತ ಕತ್ತಿ ಝಳಪಿಸುತ್ತಾ, ಮೇಲಕ್ಕೆ ನೆಗೆದು ಪ್ರದರ್ಶಿಸುವ ಈ ಕಲೆ ಕರ್ನಾಟಕಕ್ಕೆ ತೀರಾ ಅಪರಿಚಿತ ಅಲ್ಲದಿದ್ದರೂ ರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ಅಥ್ಲೀಟ್‌ಗಳು ಸ್ಪರ್ಧಿಸುವುದು ಬಹಳ ಕಡಿಮೆ. ಆದರೆ ಈ ಬಾರಿ ಹಲವು ವಿದ್ಯಾರ್ಥಿಗಳು ಯೂತ್ ಗೇಮ್ಸ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.
ಕಳರಿಗೆ ರಾಜ್ಯದ 18 ಮಂದಿ!
ಕರ್ನಾಟಕದಿಂದ ಈ ಬಾರಿ ಒಟ್ಟು 244 ಅಥ್ಲೀಟ್‌ಗಳು ಯೂತ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಈ ಪೈಕಿ ರಾಜ್ಯದ ವಿವಿಧ ಕಡೆಗಳಿಂದ 13 ಬಾಲಕಿಯರು, 5 ಬಾಲಕರು ಸೇರಿ 18 ಮಂದಿ ಕಳರಿಪಯಟ್ಟು ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಮಾತ್ರ ಸ್ಪರ್ಧಿಸಿ ಪದಕ ಗೆದ್ದಿದ್ದರು. ಈ ಬಾರಿ ಅಥ್ಲೀಟ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಪದಕ ಗಳಿಕೆಯೂ ಹೆಚ್ಚಾಗಲಿದೆ ಎಂದು ಕರ್ನಾಟಕ ಕಳರಿ ಸಂಸ್ಥೆ ಕಾರ್ಯದರ್ಶಿ ರಾಜೀವ್ ಕುಮಾರ್ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಇದೇ ವೇಳೆ ನಾಲ್ವರು ಈ ಬಾರಿ ಗಾಟ್ಕಾ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದು, ಪದಕ ಗೆಲ್ಲದಿದ್ದರೂ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.
ವಿವಿಧ ವಿಭಾಗದಲ್ಲಿ ಸ್ಪರ್ಧೆ
ಕೂಟದಲ್ಲಿ ಕಳರಿ ಸ್ಪರ್ಧೆ 4 ವಿಭಾಗಗಳಲ್ಲಿ ನಡೆಯಲಿದೆ. ಚುವಡುಗಲ್, ಹೈ ಕಿಕ್ ವಿಭಾಗದಲ್ಲಿ ವೈಯಕ್ತಿಕ ಸ್ಪರ್ಧೆ ನಡೆದರೆ, ತಂಡ ವಿಭಾಗದಲ್ಲಿ ಲಾಂಗ್ ಸ್ಟಾಪ್ ಫೈಟ್, ಫ್ಲೆಕ್ಸಿಬಲ್ ಸ್ವೊರ್ಡ್ ಸ್ಪರ್ಧೆಗಳು ನಡೆಯಲಿವೆ. ಇದೇ ವೇಳೆ ಗಾಟ್ಕಾ ಸ್ಪರ್ಧೆಯನ್ನು ವೈಯಕ್ತಿಕ, ತಂಡ ವಿಭಾಗದಲ್ಲಿ ಆಡಿಸಲಾಗುತ್ತದೆ.
ರಾಜ್ಯದಲ್ಲಿ 73 ಕೋಚಿಂಗ್ ಕೇಂದ್ರ
2 ವರ್ಷಗಳ ಹಿಂದೆ ಕರ್ನಾಟಕ ಕಳರಿಪಯಟ್ಟು ಸಂಸ್ಥೆ ನೋಂದಣಿಯಾಗಿದ್ದು, ಈಗಾಗಲೇ 73 ಕಡೆಗಳಲ್ಲಿ ಕಳರಿ ತರಬೇತಿ ಕೇಂದ್ರ ತಲೆಯೆತ್ತಿವೆ. ಈ ಪೈಕಿ ಬೆಂಗಳೂರಿನಲ್ಲೇ 20ಕ್ಕೂ ಹೆಚ್ಚು ಕೇಂದ್ರಗಳಿದ್ದು, ಸಾವಿರಾರು ಮಕ್ಕಳು ತುಂಬು ಉತ್ಸಾಹದಿಂದ ಅಭ್ಯಾಸ ನಡೆಸುತ್ತಾರೆ. ಗಾಟ್ಕಾ ತರಬೇತಿ ಕೇಂದ್ರಗಳು ಶಿವಮೊಗ್ಗದ ಹಲವು ಕಡೆಗಳಲ್ಲಿದ್ದು, ಬೆಂಗಳೂರು, ಮೈಸೂರಿನಲ್ಲೂ ಕಾರಾರಯಚರಿಸುತ್ತಿವೆ ಎಂದು ಗಾಟ್ಕಾ ತಂಡದ ವ್ಯವಸ್ಥಾಪಕ ಶಬೀರ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
Prime Volleyball League ಬಲಿಷ್ಠ ಅಹಮದಾಬಾದ್‌ಗೆ ಸೋಲುಣಿಸಿದ ಹೈದರಾಬಾದ್ ಬ್ಲ್ಯಾಕ್ ಹಾಕ್ಸ್..!
ಏನಿದು ಕಳರಿ, ಗಾಟ್ಕಾ?
‘ಯುದ್ಧಭೂಮಿ’ ಎಂಬ ಅರ್ಥವಿರುವ ಸಮರಕಲೆ ಕಳರಿಯ ಮೂಲ ಕೇರಳವಾದರೂ ದೇಶದೆಲ್ಲೆಡೆ, ವಿಶ್ವದಾದ್ಯಂತ ಸಾಕಷ್ಟುಜನಪ್ರಿಯತೆ ಪಡೆದಿದೆ. ದೇಶದ ಅತ್ಯಂತ ಹಳೆಯ ಸಮರ ಕಲೆ ಎಂಬ ಖ್ಯಾತಿಯೂ ಕಳರಿಗಿದೆ. ಹಲವು ವಿಧದ ಖಡ್ಗ, ಗುರಾಣಿಯನ್ನು ಬಳಸಿ ಕಳರಿ ಆಡಲಾಗುತ್ತದೆ. ಗಾಟ್ಕಾ ಪಂಜಾಬ್ ಮೂಲದ ಯುದ್ಧ ಕೌಶಲ್ಯ ಹೊಂದಿದ ಕ್ರೀಡೆಯಾಗಿದ್ದು, ನಿಹಾಂಗ್ ಸಿಖ್ ಯೋಧರು ಆತ್ಮರಕ್ಷಣೆಗಾಗಿ ಆಡುತ್ತಾರೆ. ಆದರೆ ಇದಕ್ಕೆ ಕೆಲವು ಕಡೆ ಖಡ್ಗದ ಜೊತೆ ಅದೇ ರೂಪದ ಕೋಲನ್ನು ಉಪಯೋಗಿಸುತ್ತಾರೆ.