
ಪುಣೆ[ಜ.21]: 2ನೇ ಆವೃತ್ತಿಯ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. 30 ಚಿನ್ನ, 28 ಬೆಳ್ಳಿ, 19 ಕಂಚಿನೊಂದಿಗೆ ಒಟ್ಟು 77 ಪದಕ ಗೆದ್ದ ಕರ್ನಾಟಕ 4ನೇ ಸ್ಥಾನ ಪಡೆದಿದೆ. 2018ರ ಫೆಬ್ರವರಿಯಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿಯೂ ಕರ್ನಾಟಕ 4ನೇ ಸ್ಥಾನ ಗಳಿಸಿತ್ತು.
85 ಚಿನ್ನ, 62 ಬೆಳ್ಳಿ, 81 ಕಂಚಿನೊಂದಿಗೆ ಒಟ್ಟು 228 ಪದಕ ಗೆದ್ದ ಮಹಾರಾಷ್ಟ್ರ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಹರ್ಯಾಣ (178) ಹಾಗೂ ದೆಹಲಿ (136) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದವು.
ಈ ಬಾರಿ ಅಂಡರ್-17 ಹಾಗೂ ಅಂಡರ್-21, 2 ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಕಳೆದ ಬಾರಿ 16 ಕ್ರೀಡೆಗಳು ನಡೆದಿದ್ದವು. ಈ ಸಲ 18 ಕ್ರೀಡೆಗಳನ್ನು ನಡೆಸಲಾಗಿತ್ತು. ಮೊದಲ ಆವೃತ್ತಿಯಲ್ಲಿ ಕರ್ನಾಟಕ 16 ಚಿನ್ನದೊಂದಿಗೆ 44 ಪದಕ ಗೆದ್ದಿತ್ತು. ಈ ಬಾರಿ ಪದಕಗಳ ಸಂಖ್ಯೆ 77ಕ್ಕೆ ಏರಿಕೆಯಾದರೂ, ಎರಡೂ ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದರಿಂದ ಕರ್ನಾಟಕ ತಂಡ ಸುಧಾರಿತ ಪ್ರದರ್ಶನವನ್ನೇ ತೋರಲಿಲ್ಲ.
ಈಜು ಸ್ಪರ್ಧೆಯಲ್ಲಿ ಪದಕ ಬೇಟೆ: ಕರ್ನಾಟಕದಿಂದ ಸುಮಾರು 280 ಕ್ರೀಡಾಪಟುಗಳು ಖೇಲೋ ಇಂಡಿಯಾದಲ್ಲಿ ಸ್ಪರ್ಧಿಸಿದ್ದರು. ರಾಜ್ಯ ಗೆದ್ದ ಒಟ್ಟು 77 ಪದಕಗಳ ಪೈಕಿ ಈಜು ಸ್ಪರ್ಧೆಯಲ್ಲೇ 51 ಪದಕ ಬಂದಿದ್ದು ವಿಶೇಷ. ಇನ್ನುಳಿದ 26 ಪದಕಗಳು ಅಥ್ಲೆಟಿಕ್ಸ್, ಬಾಕ್ಸಿಂಗ್, ವೇಟ್‌ಲಿಫ್ಟಿಂಗ್, ಕುಸ್ತಿ, ಜುಡೋ, ಜಿಮ್ನಾಸ್ಟಿಕ್ ಸೇರಿದಂತೆ ಇತರ ಕ್ರೀಡೆಗಳಲ್ಲಿ ದೊರೆತವು. ವೈಯಕ್ತಿಕ ವಿಭಾಗಗಳಲ್ಲಿ ರಾಜ್ಯದ ಕ್ರೀಡಾಪಟುಗಳು ಮಿಂಚಿದರು. ಆದರೆ ತಂಡ ಸ್ಪರ್ಧೆಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಫುಟ್ಬಾಲ್‌ನಲ್ಲಿ ಅನಿರೀಕ್ಷಿತ ಚಿನ್ನ, ಬಾಸ್ಕೆಟ್‌ಬಾಲ್‌ನಲ್ಲಿ ಬೆಳ್ಳಿ, ಖೋ ಖೋನಲ್ಲಿ ಕಂಚು ಹೊರತು ಪಡಿಸಿದರೆ, ವಾಲಿಬಾಲ್, ಟೇಬಲ್ ಟೆನಿಸ್ ಸೇರಿದಂತೆ ಇನ್ನೂ ಕೆಲ ಸ್ಪರ್ಧೆಗಳಲ್ಲಿ ಪದಕ ಜಯಿಸಲಿಲ್ಲ. ಕಬಡ್ಡಿ ಹಾಗೂ ಹಾಕಿ ತಂಡಗಳನ್ನು ಕೂಟಕ್ಕೆ ಕಳುಹಿಸಲಾಗಿರಲಿಲ್ಲ. ಎರಡೂ ಕ್ರೀಡೆಗಳಲ್ಲಿ ಕರ್ನಾಟಕ ಬಲಿಷ್ಠವಾಗಿರುವ ಕಾರಣ, ಪದಕ ಗೆಲ್ಲುವ ಸಾಧ್ಯತೆ ಇತ್ತು.
ಶ್ರೀಹರಿ ರಾಜ್ಯದ ಸೂಪರ್ ಸ್ಟಾರ್
ಮೊದಲ ಆವೃತ್ತಿಯ ಖೇಲೋ ಇಂಡಿಯಾದಲ್ಲಿ 6 ಚಿನ್ನ ಗೆದ್ದು ಮಿಂಚು ಹರಿಸಿದ್ದ ಬೆಂಗಳೂರಿನ ಈಜು ಪಟು ಶ್ರೀಹರಿ ನಟರಾಜ್, ಈ ಬಾರಿಯೂ ರಾಜ್ಯದ ತಾರಾ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. ಒಟ್ಟು 7 ಚಿನ್ನದ ಪದಕ ಗೆದ್ದ ಶ್ರೀಹರಿ ರಾಜ್ಯ ತಂಡ 4ನೇ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪದಕ ಪಟ್ಟಿ
ರಾಜ್ಯ ಚಿನ್ನ ಬೆಳ್ಳಿ ಕಂಚು ಒಟ್ಟು
ಮಹಾರಾಷ್ಟ್ರ 85 61 81 227
ಹರ್ಯಾಣ 62 56 60 178
ದೆಹಲಿ 48 37 51 136
ಕರ್ನಾಟಕ 30 28 19 77
ತಮಿಳುನಾಡು 27 36 25 88
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.