ಖೇಲೋ ಇಂಡಿಯಾ ಯೂತ್ ಗೇಮ್ಸ್‌: ರಾಜ್ಯಕ್ಕೆ ಒಲಿದ 6 ಪದಕ

By Kannadaprabha News  |  First Published Feb 11, 2023, 9:15 AM IST

ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕರ್ನಾಟಕ ಸಾಧಾರಣ ಪ್ರದರ್ಶನ
ಕ್ರೀಡಾಕೂಟದ 12ನೇ ದಿನ ರಾಜ್ಯಕ್ಕೆ ಒಲಿದ 6 ಪದಕ
ಸದ್ಯ ಪದಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿರುವ ಕರ್ನಾಟಕ


ಭೋಪಾ​ಲ್‌(ಫೆ.11): ಖೇಲೋ ಇಂಡಿಯಾ ಯೂತ್‌ ಗೇಮ್ಸ್‌​ನಲ್ಲಿ ಕಳೆದ ಬಾರಿ​ಗಿಂತ ಸಾಧಾ​ರಣ ಪ್ರದ​ರ್ಶನ ನೀಡು​ತ್ತಿ​ರುವ ಕರ್ನಾ​ಟಕ ಕೂಟದ 12ನೇ ದಿನ​ವಾ​ದ ಶುಕ್ರ​ವಾರ 6 ಪದ​ಕ​ಗ​ಳನ್ನು ತನ್ನ​ದಾ​ಗಿ​ಸಿ​ಕೊಂಡಿದೆ. ಟೆನಿ​ಸ್‌​ನಲ್ಲಿ ಚಿನ್ನ, ಫುಟ್ಬಾ​ಲ್‌​ನಲ್ಲಿ ಬೆಳ್ಳಿ ಗೆದ್ದರೆ, ಉಳಿದ 4 ಪದ​ಕ​ಗ​ಳು ಈಜಿ​ನಲ್ಲಿ ದೊರೆಯಿ​ತು. 

ಬಾಲ​ಕಿ​ಯರ ಸಿಂಗಲ್ಸ್‌ ಟೆನಿ​ಸ್‌​ನಲ್ಲಿ ಸುಹಿತಾ ಮರೂರಿ ಫೈನ​ಲ್‌​ನಲ್ಲಿ ಡೆಲ್ಲಿಯ ತೇಜಸ್ವಿಯನ್ನು ಸೋಲಿಸಿ ಚಿನ್ನಕ್ಕೆ ಮುತ್ತಿ​ಕ್ಕಿ​ದರು. ಬಾಲ​ಕಿ​ಯರ 200 ಮೀ. ಬ್ಯಾಕ್‌​ಸ್ಟ್ರೋ​ಕ್‌​ ಈಜಿನಲ್ಲಿ ಶಾಲಿನಿ ದೀಕ್ಷಿತ್‌ ಬೆಳ್ಳಿ, 200 ಮೀ. ಮೆಡ್ಲೆ ವಿಭಾ​ಗ​ದಲ್ಲಿ ಮಾನವಿ ವರ್ಮಾ ಹಾಗೂ ವಿಹಿತಾ ನಯನಾ ಕ್ರಮ​ವಾಗಿ ಬೆಳ್ಳಿ, ಕಂಚು ಪಡೆ​ದ​ರು. 4*100 ಮೀ. ಮೆಡ್ಲೆ ಸ್ಪರ್ಧೆ​ಯಲ್ಲಿ ಶಾಲಿನಿ, ಲಕ್ಷ್ಯಾ, ಹಾಶಿಕಾ, ಧಿನಿಧಿ ಅವ​ರ​ನ್ನೊ​ಳ​ಗೊಂಡ ರಾಜ್ಯ ತಂಡ ಬೆಳ್ಳಿ ಜಯಿಸಿತು. 

Tap to resize

Latest Videos

ಇದೇ ವೇಳೆ ಬಾಲ​ಕ​ರ ಫುಟ್ಬಾ​ಲ್‌​ನಲ್ಲಿ ಫೈನ​ಲ್‌​ನ​ಲ್ಲಿ ಕೇರಳ ವಿರುದ್ಧ 0-2 ಗೋಲು​ಗ​ಳಿಂದ ಸೋತ ಕರ್ನಾ​ಟಕ ಬೆಳ್ಳಿ ಪದಕಕ್ಕೆ ತೃಪ್ತಿ​ಪಟ್ಟಿತು. ಸದ್ಯ ಕರ್ನಾ​ಟಕ 9 ಚಿನ್ನ, 19 ಬೆಳ್ಳಿ ಹಾಗೂ 19 ಕಂಚು ಸೇರಿ 47 ಪದ​ಕ​ಗ​ಳೊಂದಿಗೆ ಪಟ್ಟಿ​ಯಲ್ಲಿ 12ನೇ ಸ್ಥಾನ​ದ​ಲ್ಲಿದೆ.

ಇಂದು ಸಮಾ​ರೋ​ಪ

ಜನವರಿ 30ಕ್ಕೆ ಆರಂಭ​ಗೊಂಡ ಕೂಟ ಶನಿ​ವಾರ ಮುಕ್ತಾ​ಯ​ಗೊ​ಳ್ಳ​ಲಿದೆ. ಸಂಜೆ 5.30ರಿಂದ ಸಮಾ​ರೋಪ ಸಮಾ​ರಂಭ ನಡೆ​ಯ​ಲಿದ್ದು, ಮುಖ್ಯ​ಮಂತ್ರಿ ಸೇರಿ ವಿವಿಧ ಗಣ್ಯರು ಪಾಲ್ಗೊ​ಳ್ಳುವ ನಿರೀ​ಕ್ಷೆ​ಯಿದೆ. 53 ಚಿನ್ನ ಸೇರಿ 153 ಪದಕ ಗೆದ್ದಿ​ರುವ ಮಹಾ​ರಾಷ್ಟ್ರ 3ನೇ ಬಾರಿ ಸಮಗ್ರ ಚಾಂಪಿ​ಯನ್‌ ಎನಿ​ಸಿ​ಕೊ​ಳ್ಳುವ ನಿರೀ​ಕ್ಷೆ​ಯ​ಲ್ಲಿದೆ.

ಒಳಾಂಗ​ಣ ಅಥ್ಲೆ​ಟಿ​ಕ್ಸ್‌: ಭಾರ​ತಕ್ಕೆ 4 ಪದಕ

ಅಸ್ತಾ​ನ​(​ಕ​ಜ​ಕ​ಸ್ತಾ​ನ​): 2023ರ ಏಷ್ಯನ್‌ ಒಳಾಂಗ​ಣ ಅಥ್ಲೆ​ಟಿಕ್ಸ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಭಾರ​ತ ಪದಕ ಬೇಟೆ ಆರಂಭಿ​ಸಿದ್ದು, ಮೊದಲ ದಿನವೇ 1 ಚಿನ್ನ ಸೇರಿ 4 ಪದಕ ಜಯಿಸಿದೆ. ಪುರು​ಷರ ಶಾಟ್‌​ಪು​ಟ್‌​ನಲ್ಲಿ ತೇಜಿಂದರ್‌ಪಾಲ್‌ ಸಿಂಗ್‌ ತೂರ್‌ 19.49 ಮೀ. ದೂರಕ್ಕೆ ಎಸೆದು ಚಿನ್ನ ಗೆದ್ದ​ರೆ, ಕರ​ಣ್‌​ವೀರ್‌ ಸಿಂಗ್‌​(19.37 ಮೀ.) ಬೆಳ್ಳಿ ಪಡೆ​ದ​ರು. ಮಹಿ​ಳೆ​ಯರ ಪೆಂಟಾ​ಥ್ಲಾ​ನ್‌​ನಲ್ಲಿ ಸ್ವಪ್ನಾ ಬರ್ಮನ್‌ ಬೆಳ್ಳಿ ಜಯಿ​ಸಿ​ದರು. ಪುರು​ಷರ ಟ್ರಿ​ಪಲ್‌ ಜಂಪ್‌​ನಲ್ಲಿ ಪ್ರವೀಣ್‌ ಚಿತ್ರ​ವೇಲು 16.98 ಮೀ. ದೂರ ಜಿಗಿದು ಬೆಳ್ಳಿ ಗೆದ್ದರು.

ಸಂತೋಷ್‌ ಟ್ರೋಫಿ: 2-2 ಡ್ರಾ ಸಾಧಿ​ಸಿದ ಕರ್ನಾ​ಟ​ಕ

ಭುವ​ನೇ​ಶ್ವ​ರ: ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯ ಅಂತಿಮ ಸುತ್ತಿನ ಮೊದಲ ಪಂದ್ಯ​ದಲ್ಲಿ ಪಂಜಾಬ್‌ ವಿರುದ್ಧ ಕರ್ನಾ​ಟಕ 2-2 ಗೋಲು​ಗಳ ಡ್ರಾ ಸಾಧಿ​ಸಿದೆ. ಮೊದ​ಲಾರ್ಧದಲ್ಲಿ ಉಭಯ ತಂಡ​ಗಳು ಗೋಲು ಬಾರಿ​ಸಲು ವಿಫ​ಲ​ವಾ​ದರೂ, ದ್ವಿತೀ​ಯಾ​ರ್ಧ​ದ ಆರಂಭ​ದಲ್ಲೇ ಪಂಜಾಬ್‌ ಮೇಲುಗೈ ಸಾಧಿ​ಸಿ​ತು. 

ಆಫ್ರಿಕಾದಲ್ಲಿ ಭಾರತದ ಕೊರ್‌ಕಾಮ್ ಸಂಸ್ಥೆಯಿಂದ ಟಿ20 ಕ್ರಿಕೆಟ್‌ಗೆ ಉತ್ತೇಜನ!

ಕಮ​ಲ್‌​ದೀ​ಪ್‌​(65ನೇ ನಿಮಿ​ಷ), ಬಿಪುಲ್‌ ಕಾಲಾ​(69ನೇ ನಿ.) ಗೋಲು ದಾಖ​ಲಿ​ಸಿ​ದರು. 82 ನಿಮಿಷದ ವರೆಗೂ 0-2ರಿಂದ ಹಿಂದಿದ್ದ ರಾಜ್ಯ ಬಳಿಕ ತಿರು​ಗೇಟು ನೀಡಿತು. ಕಮ​ಲೇಶ್‌ 82ನೇ ನಿಮಿ​ಷ​ದಲ್ಲಿ ಗೋಲು ಹೊಡೆ​ದರೆ, ರಾಬಿನ್‌ ಯಾದವ್‌ 93ನೇ ನಿಮಿ​ಷ​ದಲ್ಲಿ ಬಾರಿ​ಸಿದ ಗೋಲು ತಂಡ​ವನ್ನು ಸೋಲಿ​ನಿಂದ ಕಾಪಾ​ಡಿತು. ಭಾನು​ವಾರ ತನ್ನ 2ನೇ ಪಂದ್ಯದಲ್ಲಿ ರಾಜ್ಯ ತಂಡ ಹಾಲಿ ಚಾಂಪಿಯನ್‌ ಕೇರಳ ವಿರುದ್ಧ ಆಡ​ಲಿದೆ.

ಇಂದು ಹೈದ​ರಾ​ಬಾ​ದ​ಲ್ಲಿ ಫಾರ್ಮುಲಾ ಇ-ರೇಸ್‌

ಹೈದ​ರಾ​ಬಾ​ದ್‌: ಚೊಚ್ಚಲ ಬಾರಿ ಫಾರ್ಮುಲಾ ಇ-ಕಾರ್‌ ರೇಸ್‌ಗೆ ಆತಿಥ್ಯ ವಹಿ​ಸಲು ಭಾರತ ಸಜ್ಜಾ​ಗಿ​ದ್ದು, ಜಾಗ​ತಿಕ ಮಟ್ಟದ ರೇಸ​ರ್‌​ಗಳ ರೋಚಕ ಹಣಾ​ಹ​ಣಿ​ಗೆ ಶನಿ​ವಾರ ಹೈದ​ರಾ​ಬಾದ್‌ ಸಾಕ್ಷಿ​ಯಾ​ಗ​ಲಿದೆ. ಫಾರ್ಮು​ಲಾ ಇ-ರೇಸ್‌ ಎಲೆ​ಕ್ಟ್ರಿಕ್‌ ಕಾರು​ಗಳ ನಡು​ವಿನ ಸ್ಪರ್ಧೆ​ಯಾ​ಗಿದ್ದು, 11 ತಂಡ​ಗಳು ಕಣ​ಕ್ಕಿ​ಳಿ​ಯ​ಲಿವೆ.

ನಿಸಾನ್‌, ಮೆಕ್‌​ಲಾ​ರೆನ್‌ ಜೊತೆ ಭಾರ​ತದ ಮಹೀಂದ್ರಾ ರೇಸಿಂಗ್‌ ತಂಡ ಕೂಡಾ ಕೂಟ​ದಲ್ಲಿ ಪಾಲ್ಗೊ​ಳ್ಳ​ಲಿವೆ. ಪ್ರತೀ ತಂಡ​ದಲ್ಲಿ ಇಬ್ಬರು ಚಾಲ​ಕ​ರಿ​ರ​ಲಿದ್ದು, ಮಹೀಂದ್ರಾ ತಂಡದ ಕಾರನ್ನು ಬ್ರಿಟ​ನ್‌ನ ಓಲಿ​ವರ್‌ ರೋವ್ಲಂಡ್‌, ಹಾಗೂ ಬ್ರೆಜಿ​ಲ್‌ನ ಲುಕಾ​ಸ್‌ ಡಿ ಗ್ರಾಸಿ ಚಲಾ​ಯಿ​ಸ​ಲಿ​ದ್ದಾರೆ. ರೇಸ್‌ನಲ್ಲಿ ಭಾರತೀಯ ಚಾಲಕರಿಲ್ಲ.ಇದು ಈ ವರ್ಷದ 3ನೇ ಫಾರ್ಮುಲಾ-ಇ ಕಾರ್‌ ರೇಸ್‌ ಆಗಿದ್ದು, ಇಟಲಿ, ಯುಎ​ಸ್‌ಎ, ಬ್ರೆಜಿಲ್‌ ಸೇರಿ​ದಂತೆ ವಿವಿಧ ದೇಶ​ಗಳಲ್ಲಿ ಒಟ್ಟು 16 ರೇಸ್‌ಗಳು ಆಯೋಜನೆಗೊಳ್ಳ​ಲಿವೆ.

click me!