ಇಂಡೋನೇಷ್ಯಾ ಮಾಸ್ಟ​ರ್ಸ್‌: ಸಿಂಧು, ಸೆನ್‌ ಶುಭಾರಂಭ

By Kannadaprabha NewsFirst Published Jun 9, 2022, 7:56 AM IST
Highlights

* ಇಂಡೋನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸಿಂಧು, ಲಕ್ಷ್ಯ ಸೆನ್‌ ಶುಭಾರಂಭ

* ಸಿಂಧು 18-21, 21-5, 21-11ರಿಂದ ಡೆನ್ಮಾರ್ಕ್‌ ಲಿನೆ ಕ್ರಿಸ್ಟೊಫರ್ಸನ್‌ ವಿರುದ್ಧ ಜಯ

* ಮುಂದಿನ ಪಂದ್ಯದಲ್ಲಿ ಸಿಂಧುಗೆ ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ ಸವಾಲು

ಜಕಾರ್ತ(ಜು.09): ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು (PV Sindhu) ಮತ್ತು ಲಕ್ಷ್ಯ ಸೆನ್‌ (Lakshya Sen) ಅವರು ಇಂಡೋನೇಷ್ಯಾ ಮಾಸ್ಟ​ರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ (Badminton) ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಬುಧವಾರ ನಡೆದ ಟೂರ್ನಿಯ ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಸಿಂಧು 18-21, 21-5, 21-11ರಿಂದ ಡೆನ್ಮಾರ್ಕ್‌ ಲಿನೆ ಕ್ರಿಸ್ಟೊಫರ್ಸನ್‌ ವಿರುದ್ಧ ಗೆದ್ದರು. 

ಎರಡು ಬಾರಿಯ ಒಲಿಂಪಿಕ್ಸ್‌ ಪದಕ ವಿಜೇತೆ ಸಿಂಧು, ಮುಂದಿನ ಪಂದ್ಯದಲ್ಲಿ ಡೆನ್ಮಾರ್ಕ್ನ ರಾಸ್ಮಸ್‌ ಗೆಮ್ಕೆ ಅವರಿಗೆ ಮುಖಾಮುಖಿಯಾಗಲಿದ್ದಾರೆ. ಇನ್ನು, ಸೆನ್‌ ಅವರು ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ 21-10, 21-18ರಿಂದ ಡೆನ್ಮಾರ್ಕ್ನ ಹ್ಯಾನ್ಸ್‌ ಕ್ರಿಸ್ಟಿಯನ್‌ ಅವರನ್ನು ಮಣಿಸಿದರು. ಆದರೆ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಆಕರ್ಷಿ ಕಶ್ಯಪ್‌ ಅಮೆರಿಕದ ಬಿವೆನ್‌ ಜಾಂಗ್‌ ವಿರುದ್ಧ ಸೋತರೆ, ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮಾ ಇಂಡೋನೇಷ್ಯಾದ ಚಿಕೊ ಔರಾ ವಿರುದ್ಧ ಪರಾಭವಗೊಂಡರು.

ಖೇಲೋ ಇಂಡಿಯಾ: ಚಿನ್ನ ಸೇರಿ ಕರ್ನಾಟಕಕ್ಕೆ 6 ಪದಕ

ಪಂಚಕುಲ: 2ನೇ ಆವೃತ್ತಿಯ ಖೇಲೋ ಇಂಡಿಯಾ (Khelo India) ಕಿರಿಯರ ಕ್ರೀಡಾಕೂಟದಲ್ಲಿ ಕರ್ನಾಟಕ ಬುಧವಾರ ಚಿನ್ನ ಸೇರಿದಂತೆ ಒಟ್ಟು 6 ಪದಕಗಳನ್ನು ಗೆದ್ದುಕೊಂಡಿದೆ. ಬಾಲಕಿಯರ ವಿಭಾಗದ 100 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದ ಉನ್ನತಿ ರಾಜ್ಯದ ಬಂಗಾರ ಗಳಿಕೆಯನ್ನು 2ಕ್ಕೆ ಏರಿಸಿದರು. ಇನ್ನು, 500 ಗ್ರಾಂ. ಜಾವೆಲಿನ್‌ ಎಸೆತದಲ್ಲಿ ರಮ್ಯಶ್ರೀ ಜೈನ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 

ಇಂದಿನಿಂದ ಇಂಡೋನೇಷ್ಯಾ ಮಾಸ್ಟ​ರ್ಸ್ ಬ್ಯಾಡ್ಮಿಂಟನ್‌ ಟೂರ್ನಿ

ಹೈ ಜಂಪ್‌ ಸ್ಪರ್ಧೆಯಲ್ಲಿ ರಾಜ್ಯದ ಸಿಂಚನಾ ಬೆಳ್ಳಿ ಹಾಗೂ ಪವಣ್‌ ನಾಗರಾಜ್‌ ಅವರು ಕಂಚಿನ ಪದಕ ಕೊಳ್ಳೆ ಹೊಡೆದರು. ಬಾಲಕರ ವಿಭಾಗದಲ್ಲಿ ತ್ರಿಪಲ್‌ ಜಂಪ್‌ನಲ್ಲಿ ಅಖಿಲೇಶ್‌ ಬೆಳ್ಳಿ ಪದಕ ಗೆದ್ದರು. ಕುಸ್ತಿಯ 55 ಕೆ.ಜಿ. ಫ್ರೀಸ್ಟೈಲ್‌ನಲ್ಲಿ ಅಮಿತ್‌ ಕಂಚು ಗೆದ್ದರು. ಇದರೊಂದಿಗೆ ರಾಜ್ಯ ತಂಡ 2 ಚಿನ್ನ, 4 ಬೆಳ್ಳಿ ಹಾಗೂ 5 ಕಂಚಿನ ಸೇರಿ ಒಟ್ಟು 11 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿದೆ. 87 ಪದಕದೊಂದಿಗೆ ಹರಾರ‍ಯಣ ಮೊದಲ ಸ್ಥಾನ ಕಾಯ್ದುಕೊಂಡಿದ್ದು, 73 ಪದಕ ಗೆದ್ದಿರುವ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ.

ನಾರ್ವೆ ಚೆಸ್‌: ಏಳನೇ ಸುತ್ತಲ್ಲಿ ಗೆದ್ದ ಆನಂದ್‌

ಸ್ಟಾವೆಂಜರ್‌(ನಾರ್ವೆ): ಭಾರತದ ವಿಶ್ವನಾಥನ್ ಆನಂದ್‌ ಅವರು ನಾರ್ವೆ ಚೆಸ್‌ ಟೂರ್ನಿಯ ಏಳನೇ ಸುತ್ತಿನಲ್ಲಿ ಅಜರ್‌ಬೈಜಾನ್‌ನ ತೈಮೂರ್‌ ರಜಬೊವ್‌ ಅವರನ್ನು ಮಣಿಸಿದರು. ಬುಧವಾರ ನಡೆದ ಆನಂದ್‌-ರಜಬೊವ್‌ ನಡುವಿನ ಕ್ಲಾಸಿಕಲ್‌ ಪಂದ್ಯ 42 ನಡೆಗಳ ಬಳಿಕ ಡ್ರಾದಲ್ಲಿ ಕೊನೆಗೊಂಡಿತು. ಫಲಿತಾಂಶ ನಿರ್ಣಯಿಸಲು ನಡೆದ ಸಡನ್‌ ಡೆತ್‌ ಗೇಮ್‌ನಲ್ಲಿ ಆನಂದ್‌ 25 ನಡೆಗಳಲ್ಲಿ ಜಯ ಸಾಧಿಸಿದರು. ಆದರೆ ಏಳು ಸುತ್ತುಗಳ ಬಳಿಕ 13 ಅಂಕಗಳನ್ನು ಹೊಂದಿರುವ ಅವರು ಎರಡನೇ ಸ್ಥಾನದಲ್ಲೇ ಬಾಕಿಯಾಗಿದ್ದಾರೆ. ಇನ್ನು, ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್‌ ಕಾಲ್‌ರ್‍ಸನ್‌ ಏಳನೇ ಸುತ್ತಿನಲ್ಲಿ ತಮ್ಮದೇ ದೇಶದ ಆರ್ಯನ್‌ ತರಿ ಎದುರು ಆಘಾತ ಅನುಭವಿಸಿದರು. ಆದರೂ 13.5 ಅಂಕ ಹೊಂದಿರುವ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

click me!