ಅಥ್ಲೀಟ್‌ಗಳು ವಿದೇಶದಿಂದ ಡ್ರಗ್ಸ್‌ ತಂದು ಹಂಚ್ತಿದ್ದಾರೆ: ಅಂಜು ಜಾರ್ಜ್‌ ಆರೋಪ!

By Kannadaprabha News  |  First Published May 30, 2022, 9:32 AM IST

* ಭಾರತೀಯ ಅಥ್ಲೀಟ್‌ಗಳ ಮೇಲೆ ಗಂಭೀರ ಆರೋಪ ಮಾಡಿದ ಅಂಜು ಬಾಬಿ ಜಾರ್ಜ್‌

* ವಿದೇಶಗಳಿಂದ ಬರುವಾಗ ನಿಷೇಧಿತ ಡ್ರಗ್ಸ್‌ಗಳನ್ನು ತಂದು ಇಲ್ಲಿನ ಇತರೆ ಅಥ್ಲೀಟ್‌ಗಳಿಗೆ ಹಂಚುತ್ತಿದ್ದಾರೆ

* ಜಾಗತಿಕ ಮಟ್ಟದಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿದ್ದರೆ, ಭಾರತ 3ನೇ ಸ್ಥಾನದಲ್ಲಿದೆ


ಚಂಡೀಗಢ(ಮೇ.30): ಭಾರತದ ಅಥ್ಲೀಟ್‌ಗಳು ವಿದೇಶಗಳಿಂದ ಬರುವಾಗ ನಿಷೇಧಿತ ಡ್ರಗ್ಸ್‌ಗಳನ್ನು ತಂದು ಇಲ್ಲಿನ ಇತರೆ ಅಥ್ಲೀಟ್‌ಗಳಿಗೆ ಹಂಚುತ್ತಿದ್ದಾರೆ ಎಂದು ಭಾರತ ಅಥ್ಲೆಟಿಕ್ಸ್‌ ಫೆಡರೇಶನ್‌(ಎಎಫ್‌ಐ) (Athletics Federation of India) ಉಪಾಧ್ಯಕ್ಷೆ, 2004ರ ಒಲಿಂಪಿಕ್ಸ್‌ ಪದಕ ವಿಜೇತೆ ಅಂಜು ಬಾಬಿ ಜಾರ್ಜ್‌ (Anju Bobby George) ಗಂಭೀರ ಆರೋಪ ಮಾಡಿದ್ದಾರೆ. 2 ದಿನಗಳ ಎಎಫ್‌ಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ದೂರಿರುವ ಅಂಜು, ‘ಭಾರತದಲ್ಲಿ ನಿಷೇಧವಿರುವ ಹಲವು ಡ್ರಗ್ಸ್‌ಗಳನ್ನು ವಿದೇಶದಿಂದ ತರಲಾಗುತ್ತಿದೆ. ಕೇವಲ ಕೋಚ್‌ಗಳು ಮಾತ್ರವಲ್ಲದೇ ಹಲವು ಅಥ್ಲೀಟ್‌ಗಳು ಕೂಡಾ ತಮ್ಮ ಪ್ರದರ್ಶನ ಗುಣಮಟ್ಟವೃದ್ಧಿಸುವಂತಹ ಡ್ರಗ್ಸ್‌ಗಳನ್ನು ಇತರೆ ಅಥ್ಲೀಟ್‌ಗಳಿಗೆ ನೀಡುತ್ತಿದ್ದಾರೆ. ಈ ಬೆಳವಣಿಗೆ ಆತಂಕಕಾರಿ’ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಎಎಫ್‌ಐ ಅಧ್ಯಕ್ಷ ಅದಿಲ್ಲೆ ಸುಮರಿವಾಲಾ, ‘ಈ ಆರೋಪವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಅಥ್ಲೀಟ್‌ಗಳ ಪರೀಕ್ಷೆಯನ್ನು ಇನ್ನೂ ಕಠಿಣಗೊಳಿಸುತ್ತೇವೆ. ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ(ನಾಡಾ)ಕ್ಕೂ ಇದರ ಬಗ್ಗೆ ಮಾಹಿತಿ ನೀಡಿದ್ದು, ಪರೀಕ್ಷೆಗಳನು ಇನ್ನಷ್ಟುತೀವ್ರಗೊಳಿಸಲು ಸೂಚನೆ ನೀಡಿದ್ದೇವೆ’ ಎಂದರು. ಉದ್ದೀಪನ ಮದ್ದು ಸೇವನೆಯಲ್ಲಿ ಜಾಗತಿಕ ಮಟ್ಟದಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿದ್ದರೆ, ಭಾರತ 3ನೇ ಸ್ಥಾನದಲ್ಲಿದೆ.

Tap to resize

Latest Videos

ಐಎನ್‌ಬಿಎಲ್‌: ಲೂಧಿಯಾನ, ಹೈದ್ರಾಬಾದ್‌ ಚಾಂಪಿಯನ್‌

ಬೆಂಗಳೂರು: ಚೊಚ್ಚಲ ಆವೃತ್ತಿಯ ಇಂಡಿಯನ್‌ ನ್ಯಾಷನಲ್‌ ಬಾಸ್ಕೆಟ್‌ಬಾಲ್‌ ಲೀಗ್‌(ಐಎನ್‌ಬಿಎಲ್‌)ಗೆ ಅದ್ಧೂರಿ ತೆರೆ ಕಂಡಿದೆ. ಎರಡೂವರೆ ತಿಂಗಳ ಕಾಲ 20 ನಗರಗಳಲ್ಲಿ ನಡೆದ ಟೂರ್ನಿಯ ಫೈನಲ್ಸ್‌ ಬೆಂಗಳೂರಿನಲ್ಲಿ ನಡೆಯಿತು. ಪುರುಷರ ವಿಭಾಗದಲ್ಲಿ ಲುಧಿಯಾನ ಹಾಗೂ ಮಹಿಳಾ ವಿಭಾಗದಲ್ಲಿ ಹೈದರಾಬಾದ್‌ ಚಾಂಪಿಯನ್‌ ಆದವು. ಇಂಧೋರ್‌ ಮತ್ತು ಜೈಪುರ ತಂಡಗಳು ಕ್ರಮವಾಗಿ ಅಂಡರ್‌-18 ವಿಭಾಗದ ಮಹಿಳೆ, ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದವು.

Asia Cup Hockey: ಭಾರತ-ಮಲೇಷ್ಯಾ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ

ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಎನ್‌ಬಿಎಲ್‌ ಫೈನಲ್ಸ್‌ನ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯಪಾಲ್‌ ಥಾವರ್‌ಚಂದ್‌ ಗೆಹಲೋತ್‌, ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಅವರು ಪಾಲ್ಗೊಂಡರು. ಬಳಿಕ ಮಾತನಾಡಿದ ಗೆಹಲೋತ್‌ ಅವರು, ‘ದೇಶದಲ್ಲಿ ಇತರೆ ಕ್ರೀಡೆಗಳಂತೆ ಬಾಸ್ಕೆಟ್‌ಬಾಲ್‌ ಕೂಡಾ ಬೆಳೆಯಲು ಐಎನ್‌ಬಿಎಲ್‌ ಪ್ರಮುಖ ಕಾರಣವಾಗಲಿದೆ. ಯುವಜನತೆ ಬಾಸ್ಕೆಟ್‌ಬಾಲ್‌ನತ್ತ ಮುಖಮಾಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು. ಗೋವಿಂದರಾಜು ಅವರು ಮಾತನಾಡಿ, ‘ಐಎನ್‌ಬಿಎಲ್‌ ಅತ್ಯಂತ ಯಶಸ್ವಿಯಾಗಿ ಮುಗಿದಿದೆ. ಮುಂದೆ ದೊಡ್ಡ ಮಟ್ಟದಲ್ಲಿ ಟೂರ್ನಿ ಆಯೋಜಿಸುತ್ತೇವೆ. ಇತರೆ ಕ್ರೀಡೆಗಳಂತೆ ಬಾಸ್ಕೆಟ್‌ಬಾಲ್‌ ಕೂಡಾ ಪ್ರಚಾರ ಪಡೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂಡಿಯಾ ಓಪನ್‌ ಸರ್ಫಿಂಗ್‌: ಕರ್ನಾಟಕದ ರಮೇಶ್‌ ಚಾಂಪಿಯನ್‌

ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಭಾನುವಾರ ಮುಕ್ತಾಯಗೊಂಡ 3ನೇ ಆವೃತ್ತಿಯ ಇಂಡಿಯಾ ಓಪನ್‌ ಸರ್ಫಿಂಗ್‌ನಲ್ಲಿ ಕರ್ನಾಟಕದ ರಮೇಶ್‌ ಬುಧಿಯಾಲ್‌ ಹಾಗೂ ಗೋವಾದ ಸುಗರ್‌ ಬನಾರ್ಸೆ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಕೂಟದ ಕೊನೆ ದಿನ ನಡೆದ ಪುರುಷರ ಓಪನ್‌ ಸರ್ಫ್‌ ವಿಭಾಗದ ಫೈನಲ್‌ನಲ್ಲಿ ರಮೇಶ್‌, ತಮಿಳುನಾಡಿನ ಅಜೀಶ್‌ ಅಲಿ ಹಾಗೂ ಸತೀಶ್‌ ಸರ್ವನನ್‌ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದರು. ರಮೇಶ್‌ 16.33 ಅಂಕ ಗಳಿಸಿದರೆ, ಅಜೀಶ್‌ 15.67 ಅಂಕ ಪಡೆದರು. 13 ಅಂಕದೊಂದಿಗೆ ಸತೀಶ್‌ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮಹಿಳೆಯರ ವಿಭಾಗದಲ್ಲಿ 16 ವರ್ಷದ ಬನಾರ್ಸೆ 14.50 ಅಂಕದೊಂದಿಗೆ ಮೊದಲ ಸ್ಥಾನ ಪಡೆದರೆ, ಕಳೆದ ಬಾರಿಯ ಚಾಂಪಿಯನ್‌ ತಮಿಳುನಾಡಿನ ಸೃಷ್ಠಿ ಸೆಲ್ವಂ ದ್ವಿತೀಯ, ಕರ್ನಾಟಕ ಸಿಂಚನಾ ಗೌಡ 3ನೇ ಸ್ಥಾನ ಪಡೆದುಕೊಂಡರು.

ಅಂಡರ್‌-16 ಬಾಲಕರ ವಿಭಾಗದಲ್ಲಿ ತಮಿಳುನಾಡಿನ ಕಿಶೋರ್‌ ಕುಮಾರ್‌, ಬಾಲಕಿಯರ ವಿಭಾಗದಲ್ಲಿ ಗೋವಾದ ಸೋಫಿಯಾ ಶರ್ಮಾ ಚಾಂಪಿಯನ್‌ ಆದರು. ಕೂಟದಲ್ಲಿ ತಮಿಳುನಾಡು 6 ಪಕದಗಳನ್ನು ಗೆದ್ದರೆ, ಕರ್ನಾಟಕ ಹಾಗೂ ಗೋವಾ ಕ್ರಮವಾಗಿ 5 ಮತ್ತು 2 ಪದಕಗಳನ್ನು ತನ್ನದಾಗಿಸಿಕೊಂಡಿತು.

click me!