ಎಲ್ಲವೂ ಸರಿ ಇದ್ದು, ಏನೂ ಇಲ್ಲವೆಂದು ಕೈ ಕಟ್ಟಿ ಕುಳಿತುಕೊಳ್ಳುವವರಿಗೆ ಈ ಯಶಸ್ವಿ ಸ್ಫೂರ್ತಿ. ವಾಕ್, ಶ್ರವಣ ದೋಷ ಇರುವ ಈ ಬಾಲಕಿ ಇದೀಗ ಇಂಗ್ಲೆಂಡ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಚೆನ್ ಟೂರ್ನಮೆಂಟ್‌ನಲ್ಲಿ ಭಾಗವಹಿಸುತ್ತಿದ್ದಾಳೆ. ಅಷ್ಟೇ ಅಲ್ಲ ಪೇಂಟಿಂಗ್, ನೃತ್ಯದಲ್ಲಿಯೂ ತನ್ನ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಿದ್ದಾಳೆ.
ಮೌನೇಶ ವಿಶ್ವಕರ್ಮ
ಬಂಟ್ವಾಳ: ಎಲ್ಲರಂತಲ್ಲ ಈಕೆ. ಆದರೆ ಎಲ್ಲರನ್ನೂ ಗೆದ್ದಾಕೆ. ವಿಶೇಷ ಚೇತನೆಯಾದರೂ ಈಗ ವಿಶ್ವ ಚೇತನೆಯಾಗುವತ್ತ ಹೆಜ್ಜೆ ಇಡುತ್ತಿರುವ ವಿಶೇಷ ಪ್ರತಿಭೆ. ವಿಶ್ವ ಚೆಸ್ ಟೂರ್ನಿಗೆ ಆಯ್ಕೆಯಾದ ವಿಶಿಷ್ಟ, ವಿಶೇಷ ಗ್ರಾಮೀಣ ಪ್ರತಿಭೆ
ಹೌದು. ಇದು ಸಾಧನೆಯ ಪಥದಲ್ಲೇ ಸಾಗಿಬಂದ ಯಶಸ್ವಿಯ ಯಶೋಗಾಥೆ. ಆ ಬಾಲಕಿಯನ್ನು ನೋಡಿದಾಕ್ಷಣ ಯಾರೂ ಹೇಳಲಾರರು ಅವಳಿಗೆ ಕಿವಿ ಕೇಳಿಸದು, ಮಾತೂ ಬಾರದೆಂದು. ಮನಸ್ಸಿನ ಒಳಗೆ ಸಂಕಟದ ಅಳುಕಿದ್ದರೂ, ಆಕೆಯ ಮುಗ್ಧ ಹಾಗೂ ಆತ್ಮೀಯ ನಗೆ ಎಲ್ಲವನ್ನೂ ಮೀರಿ ನಿಂತಿದೆ.
ಕೃಷಿಕ ಕುಟುಂಬದ ಕುಡಿ:
ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದುಮಾನು ಎಂಬಲ್ಲಿನ ತಿಮ್ಮಪ್ಪ ಮೂಲ್ಯ ಹಾಗೂ ಯಶೋದಾ ದಂಪತಿಯ ದ್ವಿತೀಯ ಪುತ್ರಿ ಯಶಸ್ವಿ.
ಎಲ್ಲ ಮಕ್ಕಳಂತೆ ಚೂಟಿಯಾಗಿಯೇ ಬೆಳೆದ ಯಶಸ್ವಿಗೆ ಎರಡು ವರ್ಷ ತುಂಬುತ್ತಿದ್ದಂತೆಯೇ, ಹಿರಿ ಮಗಳು ಯತಿಶ್ರೀಯಂತೆಯೇ, ಯಶಸ್ವಿಗೂ ವಾಕ್ ಮತ್ತು ಶ್ರವಣ ಸಮಸ್ಯೆ ಇರುವುದು ಗೊತ್ತಾಯಿತು. ಆದರೂ ಹೆತ್ತವರು ಧೃತಿಗೆಡಲಿಲ್ಲ.
ಕಾರ್ಲ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ತಾಯಿ ಯಶೋದಾ, ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ಪ್ರಯೋಗಾಲಯದಲ್ಲಿ ಸಹಾಯಕರಾಗಿರುವ ತಂದೆ ತಿಮ್ಮಪ್ಪ ಮೂಲ್ಯರು, ಮಕ್ಕಳ ಎಲ್ಲ ಹಂಬಲಗಳಿಗೆ ಬೆಂಬಲವಾಗಿ ನಿಂತರು. ಇಬ್ಬರು ಮಕ್ಕಳನ್ನೂ ಸಾಮಾನ್ಯ ಮಕ್ಕಳೆಂದು ನೋಡಿ, ಮುಖ್ಯವಾಹಿನಿಯಲ್ಲೇ ಬೆಳೆಸಿದರು. ಅದರ ಪರಿಣಾಮವೇ ಇದೀಗ ಇಬ್ಬರು ಪುತ್ರಿಯರೂ ಪ್ರತಿಭಾನ್ವಿತರಾಗಿ ಗುರುತಿಸಿಕೊಂಡಿದ್ದಾರೆ.
ಯಶಸ್ವಿಗೆ ಅಕ್ಕನಿಗಿಂತಲೂ ದೋಷದ ಪ್ರಮಾಣ ಸ್ವಲ್ಪ ಹೆಚ್ಚು. ಯಶಸ್ವಿಯನ್ನು ಶ್ರವಣ ದೋಷ ಮುಕ್ತ ಶಿಬಿರಗಳಿಗೂ ಕಳುಹಿಸಿದರು. ಐದು ವರ್ಷ ತುಂಬಿದ ಬಾಲಕಿಯ ಭವಿಷ್ಯ ರೂಪಿಸಲು ಗಡಿಯಾರ ಸರ್ಕಾರಿ ಶಾಲೆಗೆ ಸೇರಿಸಿದರು. ಕಿವಿಗೆ ಶ್ರವಣ ಸಾಧನವನ್ನು ಅಳವಡಿಸಿಕೊಂಡು ಹೇಳಿದ್ದನ್ನು ಗ್ರಹಿಸಬಲ್ಲ ಈಕೆ, ಬಾಲ್ಯದಿಂದಲೂ ತನ್ನ ವಿಕಲತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಚಿತ್ರಕಲೆ, ನೃತ್ಯ, ಭರತನಾಟ್ಯ, ಚದುರಂಗ, ಛದ್ಮವೇಷ, ಕರಕುಶಲ ಕಲೆ, ಕ್ಲೇ ಮಾಡೆಲಿಂಗ್ ಹೀಗೆ ಹಲವಾರು ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ಬೇಷ್ ಎನಿಸಿಕೊಂಡಳು.
ಪ್ರತಿಭಾ ಕಾರಂಜಿಯಿರಲಿ, ತಾಲೂಕು ಜಿಲ್ಲಾ ಮಟ್ಟದ ಯಾವುದೇ ಸ್ಪರ್ಧೆ ಇರಲಿ ಯಶಸ್ವಿಗೆ ಯಶಸ್ಸು ಗ್ಯಾರಂಟಿ.
ನೃತ್ಯವೂ ಯಶಸ್ವಿಗೆ ಗೊತ್ತು:
ಭರತನಾಟ್ಯವನ್ನೂ ವಿದ್ವಾನ್ ದೀಪಕ್ ಕುಮಾರ್ ಅವರಲ್ಲಿ ಅಭ್ಯಾಸಿಸಿ, ಜೂನಿಯರ್ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿದ್ದಾಳೆ. ಇದೀಗ ನೃತ್ಯ ವಿದುಷಿ ಶಾಲಿನಿ ಆತ್ಮಭೂಷಣ್ ರವರಲ್ಲಿ ಭರತನಾಟ್ಯ ಅಭ್ಯಾಸವನ್ನು ಮುಂದುವರಿಸಿದ್ದಾಳೆ. ಚಿತ್ರಕಲೆಯ ಲೋಯರ್ ಗ್ರೇಡ್ ಪರೀಕ್ಷೆಯಲ್ಲೂ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವ ಈಕೆ, ಚಿತ್ರಕಲೆಯಲ್ಲೂ ತಾನು ಯಶಸ್ವಿ ಎಂದು ತೋರಿಸಿಕೊಟ್ಟಿದ್ದಾಳೆ. ಕಲಿಕೆಯಲ್ಲಿಯೂ ಹಿಂದೆ ಬೀಳದೆ, ಪ್ರತೀ ತರಗತಿಯಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಇದೀಗ ಕಡೇ ಶಿವಾಲಯದ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾಳೆ.
ಮನೆಮಂದಿಯ ತುಂಬು ಪ್ರೋತ್ಸಾಹದ ನಡುವೆ, ಅಂಗವೈಕಲ್ಯವನ್ನೇ ಮರೆತು, ಮಾದರಿಯಾಗಿ ಮುನ್ನಡೆಯುತ್ತಿರುವ ಯಶಸ್ವಿ ಚದುರಂಗದಾಟದಲ್ಲಿ ಚತುರೆಯಾಗಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆಗಾಗಿ ಇಂಗ್ಲೆಂಡ್‌ಗೆ ಹೊರಟು ನಿಂತಿದ್ದಾಳೆ.
ಪುತ್ತೂರಿನ ಜೀನಿಯಸ್ ಚೆಸ್ ಸ್ಕೂಲ್‌ನ ನಿರ್ದೇಶಕ ಸತ್ಯಪ್ರಸಾದ್ ಕೋಟೆ ಹಾಗೂ ಆಶಾ ಕಾವೇರಿ ದಂಪತಿ ಗರಡಿಯಲ್ಲಿ ಪಳಗಿರುವ ಈಕೆ, ತನ್ನೆಲ್ಲಾ ನೂನ್ಯತೆಗಳನ್ನು ಮರೆತು ಚದುರಂಗದಾಟದಲ್ಲಿ ಮೆರೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಚೆಸ್ ಎಂದರೆ ಯಶಸ್ವಿಗೆ ಹೆಚ್ಚು ಪ್ರೀತಿ:
ಬಾಲ್ಯದಿಂದಲೂ ಚೆಸ್ ಆಟದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಯಶಸ್ವಿಗೆ ತಾಯಿ ಯಶೋಧಾ ಹಾಗೂ ತಂದೆ ತಿಮ್ಮಪ್ಪ ರ ಬೆಂಬಲ ಮತ್ತಷ್ಟು ಉತ್ತೇಜನ ನೀಡಿತು. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ, ಸಾಮಾನ್ಯ ಮಕ್ಕಳ ಚೆಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದವಳು ಈಕೆ.
2016-17ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಆಯ್ಕೆಯಾಗಿ, ಕೇರಳದ ತ್ರಿಶೂರ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಶ್ರವಣ ದೋಷ ಮಕ್ಕಳ ಚೆಸ್ ಪಂದ್ಯಾಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪ್ರಥಮ ಬಹುಮಾನ ಗಳಿಸಿದ್ದಳು. ಕಳೆದ ನವೆಂಬರ್‌ನಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಸ್ಪರ್ಧೆ ಹಾಗೂ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರಕಿದ್ದು, ಮುಂದಿನ ಜುಲೈ ತಿಂಗಳಿನಲ್ಲಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಶ್ರವಣ ದೋಷ ಮಕ್ಕಳ ಚೆಸ್ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ.
ಯಶಸ್ವಿಯ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಆಕೆಯನ್ನು ಗೌರವಿಸಿದ್ದು, ಮನೆಮಂದಿಯ ಜೊತೆಗೆ ಈಕೆ ಕಲಿಯುತ್ತಿರುವ ಶಾಲಾ ಶಿಕ್ಷಕರೂ ಈಕೆಗೆ ಬೆಂಬಲವಾಗಿ ನಿಂತಿರುವುದು ಆಕೆಯ ಕ್ರಿಯಾಶೀಲತೆಗೆ ಮತ್ತಷ್ಟು ಪ್ರೇರಣೆ ನೀಡಿದೆ .
ಎಲ್ಲವೂ ಇದ್ದು, ಎಲ್ಲರೂ ಇದ್ದರೂ ಏನಿಲ್ಲವೆಂದು ಕೊರಗುವವರ ನಡುವೆ ವೈಕಲ್ಯಗಳ ನಡುವೆಯೂ ಗೆಲ್ಲುವ ಯಶಸ್ವಿಯಂಥ ಛಲವಂತ ಮಕ್ಕಳು ಮಾದರಿಯಾಗಿ ನಿಲ್ಲುತ್ತಾರೆ.