French Open 2024: ರಾಫಾ ಮೊದಲ ಸುತ್ತಲ್ಲೇ ಔಟ್‌!

By Kannadaprabha News  |  First Published May 28, 2024, 9:00 AM IST

ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ 4ನೇ ಶ್ರೇಯಾಂಕಿತ, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ 3-6, 6-7 (5/7), 3-6 ನೇರ ಸೆಟ್‌ಗಳಲ್ಲಿ ಸೋಲುಂಡರು.


ಪ್ಯಾರಿಸ್‌: ದಾಖಲೆಯ 14 ಬಾರಿ ಚಾಂಪಿಯನ್‌ ಸ್ಪೇನ್‌ನ ರಾಫೆಲ್‌ ನಡಾಲ್ ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಇದು ಬಹುತೇಕ ಅವರ ಕೊನೆಯ ಫ್ರೆಂಚ್‌ ಓಪನ್‌ ಎಂದೇ ಹೇಳಲಾಗುತ್ತಿದೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ 4ನೇ ಶ್ರೇಯಾಂಕಿತ, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ 3-6, 6-7 (5/7), 3-6 ನೇರ ಸೆಟ್‌ಗಳಲ್ಲಿ ಸೋಲುಂಡರು.

Latest Videos

undefined

2023ರ ಜನವರಿಯಿಂದ ಸೊಂಟದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನಡಾಲ್‌, ಟೂರ್ನಿಯಲ್ಲಿ ಆಡುವುದೇ ಅನುಮಾನವೆನಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರು ತಮ್ಮ ಸ್ಪರ್ಧೆಯನ್ನು ಖಚಿತಪಡಿಸಿದರು. ಮೊದಲ ಸುತ್ತಿನಲ್ಲೇ ಕಠಿಣ ಎದುರಾಳಿ ವಿರುದ್ಧ ಆಡಬೇಕಾದ ಅನಿವಾರ್ಯತೆ ನಡಾಲ್‌ಗೆ ಎದುರಾಯಿತು. ಮಾಜಿ ವಿಶ್ವ ನಂ.1 ಆಟಗಾರ ಸದ್ಯ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 275ನೇ ಸ್ಥಾನದಲ್ಲಿದ್ದಾರೆ.

ನಡಾಲ್‌ರ ಪಂದ್ಯವನ್ನು ನೋವಾಕ್‌ ಜೋಕೋವಿಚ್‌, ಕಾರ್ಲೊಸ್‌ ಆಲ್ಕರಜ್‌, ಇಗಾ ಸ್ವಿಯಾಟೆಕ್‌ ಸ್ಟ್ಯಾಂಡ್ಸ್‌ನಲ್ಲಿ ಕೂತು ವೀಕ್ಷಿಸಿದ್ದು ವಿಶೇಷ.

ಮೊದಲ ಬಾರಿಗೆ ಮೊದಲ ಸುತ್ತಿನಲ್ಲಿ ಸೋತ ರಾಫಾ!

2005ರಿಂದ ಫ್ರೆಂಚ್‌ ಓಪನ್‌ನಲ್ಲಿ ಆಡುತ್ತಿರುವ ನಡಾಲ್‌, ಟೂರ್ನಿಯ ಮೊದಲ ಸುತ್ತಿನಲ್ಲಿ ಸೋತಿದ್ದು ಇದೇ ಮೊದಲು. ಈ ಟೂರ್ನಿಯಲ್ಲಿ ಒಟ್ಟಾರೆ 116 ಪಂದ್ಯಗಳನ್ನು ಆಡಿರುವ ನಡಾಲ್‌ಗೆ ಇದು ಕೇವಲ 4ನೇ ಸೋಲು.

ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಈ ಅಂಕಣಕ್ಕೆ ಮರಳುವ ವಿಶ್ವಾಸವಿದೆ. ಫ್ರೆಂಚ್‌ ಓಪನ್‌ನಲ್ಲಿ ಇದು ನನ್ನ ಕೊನೆಯ ಪಂದ್ಯವೇ ಎನ್ನುವ ಪ್ರಶ್ನೆಗೆ ಈ ಕ್ಷಣಕ್ಕೆ ನನ್ನಲ್ಲಿ ಉತ್ತರವಿಲ್ಲ. - ರಾಫೆಲ್‌ ನಡಾಲ್‌

2ನೇ ಸುತ್ತಿಗೆ ನಂ.1 ಇಗಾ

ಸತತ 3ನೇ ಬಾರಿಗೆ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆಲ್ಲಲು ಪಣತೊಟ್ಟಿರುವ ವಿಶ್ವ ನಂ.1 ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಲಿಯೊಲಿಯಾ ಜೀನ್‌ಜೀನ್‌ ವಿರುದ್ಧ 6-1, 6-2 ಸೆಟ್‌ಗಳ ಸುಲಭ ಗೆಲುವು ಸಾಧಿಸಿ 2ನೇ ಸುತ್ತಿಗೇರಿದರು. ಪುರುಷರ ಸಿಂಗಲ್ಸ್‌ನಲ್ಲಿ 2ನೇ ಶ್ರೇಯಾಂಕಿತ ಇಟಲಿಯ ಯಾನ್ನಿಕ್‌ ಸಿನ್ನರ್‌ ಸಹ 2ನೇ ಸುತ್ತು ಪ್ರವೇಶಿಸಿದರು.

ನಗಾಲ್‌ಗೆ ಸೋಲು

ಭಾರತದ ಸುಮಿತ್‌ ನಗಾಲ್ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 18ನೇ ಶ್ರೇಯಾಂಕಿತ, ರಷ್ಯಾದ ಕರೆನ್‌ ಕಚನೊವ್‌ ವಿರುದ್ಧ 2-6, 0-6, 6-7 ಸೆಟ್‌ಗಳಲ್ಲಿ ಪರಾಭವಗೊಂಡರು. ಇದೇ ಮೊದಲ ಬಾರಿಗೆ ಸುಮಿತ್‌ ಫ್ರೆಂಚ್‌ ಓಪನ್‌ ಪ್ರಧಾನ ಸುತ್ತಿಗೆ ನೇರ ಪ್ರವೇಶ ಪಡೆದಿದ್ದರು.
 

click me!