ಕಬಡ್ಡಿ ವಿಶ್ವಕಪ್ ಹೀರೋ ಕರ್ನಾಟಕದ ಆಟಗಾರ ಉದಯ್ ಚೌಟ ನಿಧನ..!

By Naveen Kodase  |  First Published May 21, 2022, 4:08 PM IST

* ಭಾರತ ತಂಡದ ಮಾಜಿ ಕಬಡ್ಡಿ ಆಟಗಾರ ಉದಯ್ ಚೌಟ ಇನ್ನಿಲ್ಲ

* ಏಕಲವ್ಯ ಪ್ರಶಸ್ತಿ ವಿಜೇತ ಕರ್ನಾಟಕದ ಕಬಡ್ಡಿ ಆಟಗಾರ ಉದಯ್

* ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 46 ವರ್ಷದ ಉದಯ್


ಬಂಟ್ವಾಳ(ಮೇ.21): ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕಬಡ್ಡಿ ತಂಡವು ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರವಹಿಸಿದ್ದ ಅಂತಾರಾಷ್ಟ್ರೀಯ ಆಟಗಾರ ಕರ್ನಾಟಕದ ಪ್ರತಿಭಾನ್ವಿತ ಕಬಡ್ಡಿ ಪಟು ಉದಯ್ ಚೌಟ(48) ಇಂದು ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೆದುಳು ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ. ಉದಯ್ ಚೌಟ ಅವರು ತಾಯಿ, ಪತ್ನಿ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ

ಏಕಲವ್ಯ ಪ್ರಶಸ್ತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಕಬಡ್ಡಿ ಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದ ಉದಯ್ ಚೌಟ, 2007ರಲ್ಲಿ ನಡೆದ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುಮೋಘ ಪ್ರದರ್ಶನ ತೋರುವ ಮೂಲಕ ಭಾರತ ತಂಡವು ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಉದಯ್ ಚೌಟ, ಭಾರತ ತಂಡದ ಪರ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರ ಎನ್ನುವ ಪ್ರಶಸ್ತಿಗೂ ಪಾತ್ರರಾಗಿದ್ದರು. ಕಳೆದೆರಡು ದಶಕಗಳಿಂದ ಕ್ರೀಡಾ ವೃತ್ತಿಜೀವನದಲ್ಲಿ ಉದಯ್ ಚೌಟ, ನೂರಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ 300ಕ್ಕೂ ಹೆಚ್ಚು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗಳನ್ನು ಆಡಿದ್ದರು. 

Tap to resize

Latest Videos

ಉದಯ್ ಚೌಟ ಬಂಟ್ವಾಳ ತಾಲೂಕಿನ ಮಾಣಿಯ ಬದಿಗುಡ್ಡೆಯ ನಿವಾಸಿಯಾಗಿದ್ದ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬಂಟ್ವಾಳ ತಾಲೂಕಿನಲ್ಲಿ ಮುಗಿಸಿದರು. ಪಿಯು ಹಾಗೂ ಡಿಗ್ರಿ ಶಿಕ್ಷಣವನ್ನು ಪುತ್ತೂರಿನಲ್ಲಿ ಮುಗಿಸಿದರು. ಕಾಲೇಜು ದಿನಗಳಲ್ಲಿ ಕ್ರೀಡಾ ಚಟುವಟಿಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದ ಉದಯ್, ವಾಲಿಬಾಲ್ ಹಾಗೂ ಕಬಡ್ಡಿಯತ್ತ ಹೆಚ್ಚು ಗಮನ ನೀಡಿದ್ದರು. 1993ರಲ್ಲಿ ಅವರು ಜೂನಿಯರ್ ನ್ಯಾಷನಲ್ ಕಬಡ್ಡಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. 

90 ನಿಮಿಷ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ್ದೆ: ಯಶಸ್ಸಿನ ಸೀಕ್ರೇಟ್ ಬಿಚ್ಚಿಟ್ಟ ಕಿಂಗ್ ಕೊಹ್ಲಿ

ಉದಯ್ ಚೌಟ 2000ದಿಂದ 2008ರವರೆಗೂ ಭಾರತ ಕಬಡ್ಡಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಕಬಡ್ಡಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ 5 ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಇನ್ನು 2007ರಲ್ಲಿ ನಡೆದ ಕಬಡ್ಡಿ ವಿಶ್ವಕಪ್‌ ಟೂರ್ನಿಯಲ್ಲಿ ಇರಾನ್‌ ವಿರುದ್ದ ಭಾರತ ಗೆಲುವಿನಲ್ಲಿ ಉದಯ್ ಚೌಟ ಮಹತ್ವದ ಪಾತ್ರ ವಹಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು.

ಉದಯ್ ಏರ್‌ ಇಂಡಿಯಾ, ಕೆಪಿಟಿಸಿಎಲ್‌ನಲ್ಲಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಸೂರತ್ಕಲ್‌ನಲ್ಲಿ ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಉದಯ್ ಚೌಟ ಅವರ ಅಕಾಲಿಕ ನಿಧನಕ್ಕೆ ಅವರ ಆಪ್ತರು, ಅಪಾರ ಸಂಖ್ಯೆಯ ಕಬಡ್ಡಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

click me!