ಕಂಠೀರವ ಸ್ಟೇಡಿಯಂಗೆ ನುಗ್ಗಿದ ಮಳೆ ನೀರು: ಏಷ್ಯನ್ ಬಾಸ್ಕೆಟ್‌ಬಾಲ್‌ ಟೂರ್ನಿಗೆ ಅಡ್ಡಿ..!

By Kannadaprabha News  |  First Published Sep 6, 2022, 9:36 AM IST

ಏಷ್ಯನ್ ಬಾಸ್ಕೆಟ್‌ಬಾಲ್‌ ಟೂರ್ನಿಗೆ ಮಳೆರಾಯ ಅಡ್ಡಿ
ಕಂಠೀರವ ಒಳಾಂಗಣ ಕ್ರೀಡಾಂಗಣಕ್ಕೆ ನುಗ್ಗಿದ ಮಳೆ ನೀರು
ನೀರನ್ನು ಹೊರಹಾಕಲು ಅಗ್ನಿಶಾಮಕ ದಳದ ಸಹಾಯ ಪಡೆಯಬೇಕಾಯಿತು


ಬೆಂಗಳೂರು(ಸೆ.06): ಮಳೆ ಏಷ್ಯನ್‌ ಅಂಡರ್‌-18 ಮಹಿಳಾ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ಗೂ ಅಡ್ಡಿಪಡಿಸಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಸೋಮವಾರ ನಡೆಯಬೇಕಿದ್ದ ‘ಎ’ ಗುಂಪಿನ ಪಂದ್ಯಗಳು ಮಂಗಳವಾರಕ್ಕೆ ಮುಂದೂಡಿಕೆಯಾದವು. ಮರದ ಹಾಸು ಸಂಪೂರ್ಣ ಒದ್ದೆಯಾಗಿದ್ದ ಕಾರಣ ಪಂದ್ಯಗಳನ್ನು ನಡೆಸುವ ಅವಕಾಶವೇ ಇರಲಿಲ್ಲ. ನೀರನ್ನು ಹೊರಹಾಕಲು ಅಗ್ನಿಶಾಮಕ ದಳದ ಸಹಾಯ ಪಡೆಯಬೇಕಾಯಿತು. ಕ್ರೀಡಾಂಗಣದ ಸಿಬ್ಬಂದಿ ಸಹ ಹರಸಾಹಸಪಟ್ಟರು. ಇದೇ ವೇಳೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ‘ಬಿ’ ಗುಂಪಿನ ಪಂದ್ಯಗಳು ಯಾವುದೇ ಸಮಸ್ಯೆಯಿಲ್ಲದೆ ನಡೆದವು. 

ಏಷ್ಯಾ ಅಂಡರ್‌-18 ಮಹಿಳಾ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ ಟೂರ್ನಿಯು ಸೆಪ್ಟೆಂಬರ್ 11ರ ವರೆಗೂ ನಡೆಯಲಿದ್ದು, ಟೂರ್ನಿಯಲ್ಲಿ ಭಾರತ ಸೇರಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ಅಗ್ರ 4 ಸ್ಥಾನಗಳನ್ನು ಪಡೆಯುವ ತಂಡಗಳು 2023ರಲ್ಲಿ ಸ್ಪೇನ್‌ನಲ್ಲಿ ನಡೆಯಲಿರುವ ಅಂಡರ್‌-19 ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲಿವೆ.

Tap to resize

Latest Videos

ಇಂದಿನಿಂದ ಆರಂಭವಾಗಲಿರುವ ಏಷ್ಯನ್ ಅಂಡರ್-18 ಬಾಸ್ಕೆಟ್‌ಬಾಲ್ ಟೂರ್ನಿಗೆ ಬೆಂಗಳೂರು ಆತಿಥ್ಯ

ಟೂರ್ನಿ ಭಾಗವಹಿಸಿರುವ 16 ತಂಡಗಳನ್ನು ತಲಾ 8 ತಂಡಗಳಂತೆ ‘ಎ’ ಹಾಗೂ ‘ಬಿ’ ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ‘ಎ’ ಗುಂಪಿನಲ್ಲಿ ತಲಾ 4 ತಂಡಗಳನ್ನು ‘ಎ’ ಹಾಗೂ ‘ಬಿ’ ವಿಭಾಗಗಳೆಂದು ಮರು ವಿಂಗಡನೆ ಮಾಡಲಾಗಿದೆ. ‘ಎ’ ಗುಂಪಿನ ‘ಎ’ ವಿಭಾಗದಲ್ಲಿ ಭಾರತ ತಂಡ ಸ್ಥಾನ ಪಡೆದಿದೆ. ಮಂಗಳವಾರ ಭಾರತ ತಂಡ ಬಲಿಷ್ಠ ಆಸ್ಪ್ರೇಲಿಯಾವನ್ನು ಎದುರಿಸಲಿದೆ. ಪಂದ್ಯ ಸಂಜೆ 6 ಗಂಟೆಗೆ ಆರಂಭಗೊಳ್ಳಲಿದೆ.

ಕ್ರೀಡಾಂಗಣಕ್ಕೆ ಪ್ರವೇಶ ಉಚಿತ

‘ಎ’ ಗುಂಪಿನ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣ, ‘ಬಿ’ ಗುಂಪಿನ ಪಂದ್ಯಗಳು ಕೋರಮಂಗಲ ಒಳಾಂಗಣ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಕ್ರೀಡಾಂಗಣಗಳಿಗೆ ಪ್ರೇಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಯುಎಸ್ ಓಪನ್ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೆವ್‌ ಔಟ್‌!

ನ್ಯೂಯಾರ್ಕ್: ಹಾಲಿ ಚಾಂಪಿಯನ್‌ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪುರುಷರ ಸಿಂಗಲ್ಸ್‌ 4ನೇ ಸುತ್ತಿನಲ್ಲಿ ವಿಂಬಲ್ಡನ್‌ ರನ್ನರ್‌-ಅಪ್‌ ಆಸ್ಪ್ರೇಲಿಯಾದ ನಿಕ್‌ ಕಿರಿಯೋಸ್‌ ವಿರುದ್ಧ 6-7(11-13), 6-3, 3-6, 2-6 ಸೆಟ್‌ಗಳಲ್ಲಿ ಪರಾಭವಗೊಂಡರು. 2 ಗಂಟೆ 53 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕಿರಿಯೋಸ್‌, ಅಗ್ರ ಶ್ರೇಯಾಂಕಿತನ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಕಿರಿಯೋಸ್‌ಗೆ ಕ್ವಾರ್ಟರ್‌ ಫೈನಲ್‌ನಲ್ಲಿ ರಷ್ಯಾದ ಕಾರೆನ್‌ ಖಚನೊವ್‌ ಎದುರಾಗಲಿದ್ದಾರೆ.

ಕ್ವಾರ್ಟರ್‌ಗೆ ಗಾಫ್‌, ಜಬುರ್‌: ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ಗೆ 18 ವರ್ಷದ ಅಮೆರಿಕ ಆಟಗಾರ ಕೊಕೊ ಗಾಫ್‌, ಟ್ಯುನೀಷಿಯಾದ ಒನ್ಸ್‌ ಜಬುರ್‌, ಆಸ್ಪ್ರೇಲಿಯಾದ ಆಲಾ ಟಾಮ್ಲನೊವಿಚ್‌, ಫ್ರಾನ್ಸ್‌ನ ಕ್ಯಾರೊಲಿನ್‌ ಗಾರ್ಸಿಯಾ ಪ್ರವೇಶಿಸಿದ್ದಾರೆ. ಚೀನಾದ ಝಾಂಗ್‌ ವಿರುದ್ಧ ಗಾಫ್‌ 7-5, 7-5ರಲ್ಲಿ ಗೆದ್ದರೆ, ರಷ್ಯಾದ ವೆರೊನಿಕಾ ವಿರುದ್ಧ ಜಬುರ್‌ 7-6, 6-4ರಲ್ಲಿ ಜಯಿಸಿದರು. ಸೆರೆನಾಗೆ ಆಘಾತ ನೀಡಿದ್ದ ಟಾಮ್ಲಾನೊವಿಚ್‌ ರಷ್ಯಾದ ಸ್ಯಾಮ್ಸನೊವಾ ವಿರುದ್ಧ 7-6, 6-1ರಲ್ಲಿ ಜಯಗಳಿಸಿದರು. ಇನ್ನು ಗಾರ್ಸಿಯಾ ಅಮೆರಿಕದ ಆ್ಯಲಿಸನ್‌ ವಿರುದ್ಧ 6-4, 6-1ರಲ್ಲಿ ಜಯಗಳಿಸಿದರು.
 

click me!