
ನವದೆಹಲಿ(ಮೇ.30): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್‌ರನ್ನು ಬಂಧಿಸಲು ಒತ್ತಾಯಿಸಿ ಭಾನುವಾರ ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕುಸ್ತಿಪಟುಗಳ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಜಂತರ್ಮಂತರ್ನಿಂದ ಮೆರವಣಿಗೆ ಹೊರಟ ಕೂಡಲೇ ಕುಸ್ತಿಪಟುಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಅವರ ವಿರುದ್ಧ ಗಲಭೆ, ಪೊಲೀಸರ ಕತ್ರ್ಯವ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಪ್ರತಿಭಟನಾ ಸ್ಥಳದಿಂದ 150 ಮಂದಿ, ದೆಹಲಿಯ ವಿವಿಧ ಭಾಗಗಳಿಂದ 550ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಎಫ್‌ಐಆರ್ ಬಗ್ಗೆ ಕಿಡಿಕಾರಿರುವ ಕುಸ್ತಿಪಟುಗಳು, ಬ್ರಿಜ್ ವಿರುದ್ಧ ಎಫ್ಐಆರ್ಗೆ 7 ದಿನ ತೆಗೆದುಕೊಂಡಿದ್ದ ಪೊಲೀಸರು, ನಮ್ಮ ವಿರುದ್ಧ 7 ಗಂಟೆಗಳೊಳಗೆ ಕೇಸ್ ಹಾಕಿದ್ದಾರೆ’ ಎಂದಿದ್ದಾರೆ.
ಪ್ರತಿಭಟನೆಗೆ ಅವಕಾಶವಿಲ್ಲ: ಕುಸ್ತಿಪಟುಗಳನ್ನು ಬಂಧಿಸಿದ ಬೆನ್ನಲ್ಲೇ ಜಂತರ್ಮಂತರ್ ತೆರವುಗೊಳಿಸಿ ಅಲ್ಲಿದ್ದ ಹಾಸಿಗೆ, ಕೂಲರ್ ಸೇರಿ ಅಲ್ಲಿದ್ದ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಇನ್ನು ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Wrestlers Protest ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಲ್ಲ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ
ಮತ್ತೆ ಸತ್ಯಾಗ್ರಹ: ಪೊಲೀಸರು ಜಂತರ್ಮಂತರ್ ತೆರವುಗೊಳಿಸಿದ ಹೊರತಾಗಿಯೂ ಕುಸ್ತಿಪಟುಗಳು ಮತ್ತೆ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ. ‘ನಮ್ಮ ಹೋರಾಟ ಮುಗಿದಿಲ್ಲ. ಪೊಲೀಸರಿಂದ ಬಿಡುಗಡೆಗೊಂಡ ಬಳಿಕ ಜಂತರ್ಮಂತರ್ನಲ್ಲೇ ಸತ್ಯಾಗ್ರಹ ಆರಂಭಿಸುತ್ತೇವೆ. ವಿದೇಶಿ ಮಣ್ಣಲ್ಲಿ ಭಾರತದ ಮಹಿಳೆಯರು ಪದಕ ಗೆಲ್ಲಲು ಸಾಧ್ಯವಿದ್ದರೆ, ತಮ್ಮದೇ ನೆಲದಲ್ಲಿ ಹೋರಾಟ ಗೆಲ್ಲುವ ಸಾಮರ್ಥ್ಯವೂ ಅವರಿಗಿದೆ. ಅದುವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಸಾಕ್ಷಿ ಮಲಿಕ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕ್ರೀಡಾಪಟುಗಳ ಖಂಡನೆ
ಕುಸ್ತಿಪಟುಗಳ ಮೇಲಿನ ಪೊಲೀಸರ ದೌರ್ಜನ್ಯವನ್ನು ಖ್ಯಾತ ಕ್ರೀಡಾಪಟುಗಳು ಖಂಡಿಸಿದ್ದಾರೆ. ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ, ಅಭಿನವ್ ಬಿಂದ್ರಾ, ಫುಟ್ಬಾಲ್ ತಾರೆ ಸುನಿಲ್ ಚೆಟ್ರಿ, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸೇರಿ ಹಲವರು ಕುಸ್ತಿಪಟುಗಳನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು, ಶೀಘ್ರ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.
ಕುಸ್ತಿಪಟುಗಳ ಒದ್ದಾಟ ನೋಡಿ ನಿದ್ದೆ ಬರಲಿಲ್ಲ
ನಮ್ಮ ಕುಸ್ತಿಪಟುಗಳ ಭಯಾನಕ ಚಿತ್ರ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಅವರನ್ನು ಎಳೆದಾಡಿದ ದೃಶ್ಯಗಳನ್ನು ನೋಡಿ ನಿದ್ದೆ ಬರಲಿಲ್ಲ. ಇದು ಕ್ರೀಡಾ ಸಂಸ್ಥೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಉತ್ತಮ ಸಮಯ. ಪ್ರತಿಯೋರ್ವ ಕ್ರೀಡಾಪಟು ಕೂಡಾ ಸುರಕ್ಷಿತ, ಸಶಕ್ತ ವಾತಾವರಣಕ್ಕೆ ಅರ್ಹರು. ಇಂತಹ ಪ್ರಕರಣಗಳನ್ನು ನಾಜೂಕಾಗಿ ನಿಭಾಯಿಸಬೇಕು.
-ಅಭಿನವ್ ಬಿಂದ್ರಾ, ಒಲಿಂಪಿಕ್ಸ್ ಚಿನ್ನ ವಿಜೇತ ಶೂಟರ್
ಇಂದಿನಿಂದ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರದಿಂದ ಆರಂಭಗೊಳ್ಳಲಿದ್ದು, ಇತ್ತೀಚಿನ ಟೂರ್ನಿಗಳಲ್ಲಿ ಪದಕ ಬರ ಎದುರಿಸುತ್ತಿರುವ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್ ಸೇರಿದಂತೆ ಭಾರತದ ಪ್ರಮುಖ ಶಟ್ಲರ್ಗಳು ಕಣಕ್ಕಿಳಿಯಲಿದ್ದಾರೆ. ಆದರೆ ಭಾನುವಾರವಷ್ಟೇ ಮಲೇಷ್ಯಾ ಮಾಸ್ಟರ್ಸ್ ಪ್ರಶಸ್ತಿ ಗೆದ್ದಿದ್ದ ಎಚ್.ಎಸ್.ಪ್ರಣಯ್ ಟೂರ್ನಿಯಲ್ಲಿ ಆಡುತ್ತಿಲ್ಲ.
ಪುರುಷರ ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್, ಆರ್ಲಿಯಾನ್ಸ್ ಮಾಸ್ಟರ್ಸ್ ಚಾಂಪಿಯನ್ ಪ್ರಿಯಾನ್ಶು ರಾಜಾವತ್ ಕೂಡಾ ಸ್ಪರ್ಧಿಸುತ್ತಿದ್ದಾರೆ. ಇನ್ನು ಮಹಿಳಾ ಸಿಂಗಲ್ಸ್ನಲ್ಲಿ ಸಿಂಧು ಜೊತೆ ಸೈನಾ ನೆಹ್ವಾಲ್ ಕಣಕ್ಕಿಳಿಯಲಿದ್ದಾರೆ. ತಾರಾ ಪುರುಷ ಡಬಲ್ಸ್ ಜೋಡಿ, ವಿಶ್ವ ನಂ.4 ಸಾತ್ವಿಕ್-ಚಿರಾಗ್ ಶೆಟ್ಟಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದು, ಅಶ್ವಿನಿ ಭಟ್-ಶಿಖಾ ಗೌತಮ್ ಮಹಿಳಾ ಡಬಲ್ಸ್ನಲ್ಲಿ ಆಡಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.