ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್, ಒಂದೇ ಪಂದ್ಯದಲ್ಲಿ ಆನ್‌ಲೈನ್ ಮೂಲಕ 60 ಸಾವಿರ ಸ್ಪರ್ಧಾಳುಗಳನ್ನು ಸೋಲಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: 5 ಬಾರಿ ಚೆಸ್ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ಆನ್‌ಲೈನ್ ಮೂಲಕ ನಡೆದ ಒಂದೇ ಚೆಸ್ ಪಂದ್ಯದಲ್ಲಿ ಬರೋಬ್ಬರಿ 60,000ಕ್ಕೂ ಹೆಚ್ಚು ಪ್ರತಿಸ್ಪರ್ಧಿಗಳನ್ನು ಸೋಲಿಸಿ ಗಮನ ಸೆಳೆದಿದ್ದಾರೆ.
ವಿಶ್ವದ ಅತಿದೊಡ್ಡ ಚೆಸ್ ಸಂಸ್ಥೆಗಳಲ್ಲಿ ಒಂದಾದ ಚೆಸ್ ಡಾಟ್ ಕಾಮ್, ‘ವಿಶಿ ಮತ್ತು ವಿಶ್ವ’ ಹೆಸರಲ್ಲಿ ಈ ವಿಶೇಷ ಪಂದ್ಯ ಆಯೋಜಿಸಿತ್ತು. ಸುಮಾರು 60 ಸಾವಿರಕ್ಕೂ ಹೆಚ್ಚು ಚೆಸ್ ಪಟುಗಳು ಸ್ಪರ್ಧೆಗೆ ಹೆಸರು ನೋಂದಾಯಿಸಿದ್ದರು.
ಸೆ.30ರಂದು ಈ ಪಂದ್ಯ ಆರಂಭಗೊಂಡಿತ್ತು. ವಿಶ್ವನಾಥನ್ ಅವರು ಬಿಳಿ ಕಾಯಿ, ಪ್ರತಿಸ್ಪರ್ಧಿಗಳೆಲ್ಲಾ ಕಪ್ಪು ಕಾಯಿಯೊಂದಿಗೆ ಆಡಿದ್ದರು. ಎಲ್ಲಾ ಸ್ಪರ್ಧಿಗಳಿಗೂ ಪ್ರತಿ ದಿನಕ್ಕೆ ಒಂದು ಬಾರಿ ತಮ್ಮ ಕಾಯಿ ಚಲಾಯಿಸಲು ಅವಕಾಶ ನೀಡಲಾಗಿತ್ತು. ವಿಶ್ವನಾಥನ್ ಅವರು 24 ದಿನಗಳ, 24 ಮೂವ್‌ಗಳಲ್ಲಿ ಎಲ್ಲಾ ಪ್ರತಿಸ್ಪರ್ಧಿಗಳನ್ನು ಸೋಲಿಸಿದ್ದಾರೆ.
ಈ ಹಿಂದೆ 1999ರಲ್ಲಿ ರಷ್ಯಾದ ಗ್ಯಾರಿ ಕ್ಯಾಸ್ಪರೊವ್ ವಿಶ್ವದೆಲ್ಲೆಡೆಯ 50 ಸಾವಿರ ಪ್ರತಿಸ್ಪರ್ಧಿಗಳನ್ನು ಇದೇ ರೀತಿ 4 ತಿಂಗಳಲ್ಲಿ, 62 ಮೂವ್‌ಗಳಲ್ಲಿ ಸೋಲಿಸಿದ್ದರು. ಆ ಪಂದ್ಯದ 25ನೇ ವಾರ್ಷಿಕೋತ್ಸವ ಅಂಗವಾಗಿ ‘ವಿಶಿ ಮತ್ತು ವಿಶ್ವ’ ಪಂದ್ಯ ಆಯೋಜಿಸಲಾಗಿತ್ತು.
ಗುಕೇಶ್‌ಗೆ ಮೈಂಡ್ ಗುರು ಪ್ಯಾಡಿ ಅಪ್ಟನ್ ತರಬೇತಿ!
ನವದೆಹಲಿ: ಹಾಲಿ ವಿಶ್ವ ಚಾಂಪಿಯನ್, ಚೀನಾದ ಡಿಂಗ್ ಲಿರೆನ್ ವಿರುದ್ಧ ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ಪಂದ್ಯಕ್ಕೂ ಮುನ್ನ ಭಾರತದ ತಾರಾ ಚೆಸ್ ಪಟು ಡಿ.ಗುಕೇಶ್ ಅವರು ‘ಮೈಂಡ್ ಗುರು’ ಖ್ಯಾತಿಯ ಪ್ಯಾಡಿ ಅಪ್ಟನ್ ಜೊತೆ ತರಬೇತಿ ಪಡೆಯಲಿದ್ದಾರೆ.
ದಕ್ಷಿಣ ಆಫ್ರಿಕಾದ 55 ವರ್ಷದ ಪ್ಯಾಡಿ ಈ ಹಿಂದೆ 2011ರಲ್ಲಿ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡ ಹಾಗೂ ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ಭಾರತ ಹಾಕಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಅವರು ವಿಶ್ವ ಚಾಂಪಿಯನ್‌ಶಿಪ್ ಪಂದ್ಯಕ್ಕೂ ಮುನ್ನ ಗುಕೇಶ್‌ರ ಮಾನಸಿಕ ಒತ್ತಡ, ನಿದ್ದೆ, ಕೌಶಲ್ಯ ಉತ್ತಮಗೊಳಿಸುವ ವಿಚಾರದಲ್ಲಿ ಗುಕೇಶ್ ಜೊತೆ ಕಾಲ ಕಳೆಯಲಿದ್ದಾರೆ.