ಏಷ್ಯಾದ ಚಿನ್ನದ ಹುಡುಗಿ ಖ್ಯಾತಿಯ ಪಿ.ಟಿ. ಉಷಾಗೆ ಕೇರಳ ಕೇಂದ್ರೀಯ ವಿವಿಯಿಂದ ಗೌರವ ಡಾಕ್ಟರೇಟ್‌

By Naveen KodaseFirst Published Mar 22, 2023, 3:33 PM IST
Highlights

ಅಥ್ಲೆಟಿಕ್ಸ್ ದಿಗ್ಗಜೆ ಪಿ.ಟಿ. ಉಷಾ ಅವರಿಗೆ ಕೇರಳ ಕೇಂದ್ರೀಯ ವಿವಿಯಿಂದ ಗೌರವ ಡಾಕ್ಟರೇಟ್ ಘೋಷಣೆ
ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆಯಾಗಿರುವ ಪಿ.ಟಿ. ಉಷಾ
ಅಂತಾರಾಷ್ಟ್ರೀಯ ಮಟ್ಟದಲ್ಲಿ 33 ಪದಕ ಜಯಿಸಿರುವ ಭಾರತದ ಅಥ್ಲೆಟಿಕ್ಸ್ ತಾರೆ

ಕಾಸರಗೋಡು(ಮಾ.22): ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷೆ ಮತ್ತು ರಾಜ್ಯಸಭಾ ಸದಸ್ಯೆಯಾಗಿರುವ ದಿಗ್ಗಜ ಅಥ್ಲೀಟ್ ಪಿ.ಟಿ. ಉಷಾ ಅವರಿಗೆ ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಯವು ಗೌರವ ಡಾಕ್ಟರೇಟ್ ನೀಡವುದಾಗಿ ಘೋಷಿಸಿದೆ. ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಇಡಿ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿರುವ ಪಿ.ಟಿ. ಉಷಾ ಅವರ ಸಾಧನೆಯನ್ನು ಗುರುತಿಸಿ, ಈ ಪ್ರತಿಷ್ಠಿತ ಡಾಕ್ಟರೇಟ್ ನೀಡಲು ತೀರ್ಮಾನಿಸಲಾಗಿದೆ. ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯವು ನೀಡುತ್ತಿರುವ ಮೊದಲ ಗೌರವ ಡಾಕ್ಟರೇಟ್ ಪ್ರಶಸ್ತಿ ಇದಾಗಿದೆ.

ಏಷ್ಯಾದ ಚಿನ್ನದ ಹುಡುಗಿ ಎಂದೇ ಖ್ಯಾತಿ ಗಳಿಸಿರುವ ಪಿಟಿ ಉಷಾ, ದಶಕಗಳ ಕಾಲ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದರು. ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪಿ.ಟಿ. ಉಷಾ 19 ಚಿನ್ನದ ಪದಕಗಳು ಸೇರಿದಂತೆ ಒಟ್ಟು 33 ಪದಕಗಳನ್ನು ಜಯಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. ಪಿ.ಟಿ. ಉಷಾ, ಏಷ್ಯನ್ ಗೇಮ್ಸ್‌ನಲ್ಲಿ ಸತತ 4 ಪದಕ ಜಯಿಸಿದ ಮೊದಲ ಅಥ್ಲೀಟ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಇದಷ್ಟೇ ಅಲ್ಲದೇ 1985ರಲ್ಲಿ ಜಕಾರ್ತಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಿ.ಟಿ. ಉಷಾ, 5 ಚಿನ್ನದ ಪದಕ ಸೇರಿದಂತೆ ಒಟ್ಟು 6 ಪದಕಗಳಿಗೆ ಕೊರಳೊಡ್ಡಿದ್ದರು. ಪಿ.ಟಿ. ಉಷಾ ಅವರನ್ನು "ಭಾರತೀಯ ಫೀಲ್ಡ್ & ಟ್ರ್ಯಾಕ್‌ನ ರಾಣಿ" ಎಂದೇ ಕರೆಯಲಾಗುತ್ತದೆ.

Latest Videos

ಪಿ.ಟಿ. ಉಷಾ ಅಥ್ಲೆಟಿಕ್ಸ್‌ನಲ್ಲಿ ಪದಕಗಳನ್ನು ಬೇಟೆಯಾಡುವ ಮೂಲಕ ಹಲವಾರು ಬಾರಿ ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದರು. ಅಥ್ಲೆಟಿಕ್ಸ್‌ಗೆ ವಿದಾಯ ಹೇಳಿದ ಬಳಿಕವು ಪಿ.ಟಿ. ಉಷಾ ಸುಮ್ಮನೆ ಕೂರಲಿಲ್ಲ. ಕೇರಳದ ಕಿನಲೂರಿನಲ್ಲಿ ಪಿ.ಟಿ. ಉಷಾ ನೇತೃತ್ವದಲ್ಲಿ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಎನ್ನುವ ಸಂಸ್ಥೆಯನ್ನು ತೆರೆದು ಸಾವಿರಾರು ಅಥ್ಲೀಟ್‌ಗಳಿಗೆ ಯಶಸ್ವಿಯಾಗಿ ತರಬೇತಿ ನೀಡುತ್ತಾ ಬಂದಿದ್ದಾರೆ. ಕಳೆದ 20  ವರ್ಷಗಳ ಅವಧಿಯಲ್ಲಿ ಪಿ.ಟಿ. ಉಷಾ ಅವರ ಗರಡಿಯಲ್ಲಿ ಪಳಗಿದ ಅಥ್ಲೀಟ್‌ಗಳು ಸುಮಾರು 79 ಅಂತಾರಾಷ್ಟ್ರೀಯ ಪದಕಗಳನ್ನು ಜಯಿಸುವ ಮೂಲಕ ಮತ್ತೊಮ್ಮೆ ಪಿ.ಟಿ. ಉಷಾ ಅವರ ಹೆಸರನ್ನು ಅಜರಾಮರಗೊಳಿಸಿದ್ದಾರೆ.

ICC ODI World Cup 2023: ಫೈನಲ್‌ಗೆ ಮೋದಿ ಸ್ಟೇಡಿಯಂ ಆತಿಥ್ಯ, 12 ನಗರಗಳಲ್ಲಿ ನಡೆಯಲಿದೆ ಕ್ರಿಕೆಟ್ ಮಹಾ ಸಂಗ್ರಾಮ

ಇಡೀ ದೇಶದಲ್ಲಿ ಅಥ್ಲೆಟಿಕ್ಸ್‌ ಸಂಸ್ಕೃತಿ ಬೆಳೆಯುವಲ್ಲಿ ಹಾಗೂ ಯುವತಿಯರು ಕೂಡಾ ಹೆಚ್ಚು ಹೆಚ್ಚು ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಪಿ.ಟಿ. ಉಷಾ ಪ್ರೇರಣೆಯಾಗಿದ್ದಾರೆ. ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿರುವ ಪ್ರೊ. ಎಚ್‌. ವೆಂಕಟೇಶ್ವರಲು ಮಾತನಾಡಿ, "ದೇಶದ ರೋಲ್ ಮಾಡೆಲ್ ಆಗಿರುವವರನ್ನು ಗುರುತಿಸಿ ಗೌರವಿಸುವುದು ನಮ್ಮ ವಿಶ್ವವಿದ್ಯಾನಿಲಯದ ಆದ್ಯ ಕರ್ತವ್ಯವಾಗಿದೆ. ಪಿ.ಟಿ. ಉಷಾ ಅವರ ಬದುಕು ಹಾಗೂ ಸಾಧನ ವಿದ್ಯಾರ್ಥಿಗಳನ್ನು ಪ್ರಭಾವಿಸಿದೆ. ನಮ್ಮ ವಿಶ್ವವಿದ್ಯಾನಿಲಯದಲ್ಲೇ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿ, ಅಲ್ಲಿ ಪಿ.ಟಿ. ಉಷಾ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗುವುದು" ಎಂದು ತಿಳಿಸಿದ್ದಾರೆ. 

ಪಿ.ಟಿ. ಉಷಾ ಅವರಿಗೆ ಈ ಮೊದಲು 2000ನೇ ಇಸವಿಯಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್(ಡಿ.ಲಿಟ್‌), 2017ರಲ್ಲಿ ಐಐಟಿ ಕಾನ್ಪುರದಲ್ಲಿ ಗೌರವ ಡಾಕ್ಟರೇಟ್(ಡಿ. ಎಸ್‌ಸಿ), 2018ರಲ್ಲಿ ಕ್ಯಾಲಿಕಟ್ ಯೂನಿವರ್ಸಿಟಿಯು ಗೌರವ ಡಾಕ್ಟರೇಟ್(ಡಿ.ಲಿಟ್) ಪ್ರಶಸ್ತಿ ನೀಡಿ ಗೌರವಿಸಿರುವುದನ್ನು ಸ್ಮರಿಸಬಹುದಾಗಿದೆ.

click me!