ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಲಕ್ಷ್ಯ ಸೆನ್ ಭರ್ಜರಿ ಪ್ರದರ್ಶನ
ಪ್ರೀ ಕ್ವಾರ್ಟರ್ ಹಂತಕ್ಕೇರಿದ ಲಕ್ಷ್ಯ ಸೆನ್, ಎಚ್ ಎಸ್ ಪ್ರಣಯ್
ಎರಡನೇ ಸುತ್ತಿನಲ್ಲೇ ಆಘಾತಕಾರಿ ಸೋಲುಂಡ ಕಿದಂಬಿ ಶ್ರೀಕಾಂತ್
ಟೋಕಿಯೋ(ಆ.25): ಭಾರತದ ತಾರಾ ಶಟ್ಲರ್‌ಗಳಾದ ಲಕ್ಷ್ಯ ಸೇನ್ ಹಾಗೂ ಎಚ್.ಎಸ್.ಪ್ರಣಯ್ ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಕಳೆದ ಬಾರಿ ಬೆಳ್ಳಿ ವಿಜೇತ ಕಿದಂಬಿ ಶ್ರೀಕಾಂತ್ 2ನೇ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ 20ರ ಸೇನ್ ಸ್ಪೇನ್‌ನ ಲೂಯಿಸ್ ಪೆನಾಲ್ವೆರ್ ಅವರನ್ನು 21-17, 21-10 ನೇರ ಗೇಮ್‌ಗಳಿಂದ ಸೋಲಿಸಿದರು. ಪ್ರಣಯ್ 2 ಬಾರಿ ವಿಶ್ವ ಚಾಂಪಿಯನ್ ಜಪಾನ್‌ನ ಕೆಂಟೊ ಮೊಮೊಟ ವಿರುದ್ಧ 21-17, 21-16 ನೇರ ಗೇಮ್‌ಗಳಲ್ಲಿ ಜಯಗಳಿಸಿದರು. ಅಂತಿಮ 16ರ ಸುತ್ತಿನಲ್ಲಿ ಈ ಇಬ್ಬರೂ ಪರಸ್ಪರ ಸೆಣಸಲಿದ್ದಾರೆ. ಮಾಜಿ ವಿಶ್ವ ನಂ.1 ಶ್ರೀಕಾಂತ್ ಚೀನಾದ ಜುನ್ ಪೆಂಗ್ ವಿರುದ್ಧ 18-21, 17-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು.
ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಅರ್ಜುನ್-ಧೃವ್ ಕಪಿಲಾ, ಸಾತ್ವಿಕ್-ಚಿರಾಗ್ ಶೆಟ್ಟಿಜೋಡಿ 2ನೇ ಸುತ್ತಲ್ಲಿ ಗೆಲುವು ಸಾಧಿಸಿತು. ಆದರೆ ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ, ತ್ರಿಸಾ ಜಾಲಿ-ಗಾಯತ್ರಿ ಗೋಪಿಚಂದ್, ಆಶ್ವಿನಿ ಭಟ್-ಶಿಖಾ ಗೌತಮ್, ಪೂಜಾ-ಸಂಜನಾ ಜೋಡಿ ಸೋತು ಹೊರಬಿತ್ತು.
ಡುರಾಂಡ್ ಕಪ್: ಬಿಎಫ್‌ಸಿ ಆಟಗಾರನ ಜನಾಂಗೀಯ ನಿಂದನೆ
ಕೋಲ್ಕತಾ: ಪ್ರತಿಷ್ಠಿತ ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತೀಯ ಏರ್‌ಫೋರ್ಸ್ ವಿರುದ್ಧದ ಪಂದ್ಯದ ವೇಳೆ ತನ್ನ ಆಟಗಾರ ಜನಾಂಗೀಯ ನಿಂದನೆಗೆ ಒಳಗಾಗಿದ್ದಾಗಿ ಬೆಂಗಳೂರು ಎಫ್‌ಸಿ ಆರೋಪಿಸಿದೆ. ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಬಿಎಫ್‌ಸಿ 4-0 ಅಂತರದಲ್ಲಿ ಜಯಗಳಿಸಿತ್ತು.
ನಿಷೇಧ ಹಿಂಪಡೆಯುವಂತೆ ಫಿಫಾಗೆ ಎಐಎಫ್‌ಎಫ್ ಮನವಿ
ಪಂದ್ಯದ ಬಳಿಕ ಜನಾಂಗೀಯ ನಿಂದನೆಗೆ ಒಳಗಾದ ಬಗ್ಗೆ ಬಿಎಫ್‌ಸಿ ದೂರಿದ್ದು, ‘ಎದುರಾಳಿ ತಂಡದ ಆಟಗಾರರು ನಮ್ಮ ಆಟಗಾರನನ್ನು ಗುರಿಯಾಗಿಸಿ ಜನಾಂಗೀಯ ನಿಂದನೆ ಮಾಡಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದೇವೆ. ಫುಟ್ಬಾಲ್‌ನಲ್ಲಿ ತಾರತಮ್ಯ ಸಹಿಸಲು ಸಾಧ್ಯವಿಲ್ಲ’ ಎಂದು ಬಿಎಫ್‌ಸಿ ಅಸಮಾಧಾನ ವ್ಯಕ್ತಪಡಿಸಿದೆ.
ವಿಶ್ವ ಕಿರಿಯ ಸ್ನೂಕರ್ ಕೂಟ: 2 ಪದಕ ಜಯಿಸಿದ ಭಾರತ
ನವದೆಹಲಿ: ರೊಮಾನಿಯಾದ ಬುಚಾರೆಸ್ಟ್‌ನಲ್ಲಿ ನಡೆಯುತ್ತಿರುವ ಐಬಿಎಸ್‌ಎಫ್ ವಿಶ್ವ ಕಿರಿಯರ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 2 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಮಂಗಳವಾರ ಅಂಡರ್-21 ಮಹಿಳಾ ವಿಭಾಗದ ಸ್ಪರ್ಧೆಯ ಫೈನಲ್‌ನಲ್ಲಿ ಅನುಪಮಾ ರಾಮಚಂದ್ರನ್ ಥಾಯ್ಲೆಂಡ್‌ನ ಪಂಚಾಯ ಚನ್ನೋಯ್ ವಿರುದ್ಧ 1-4ರಿಂದ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.
ಇದಕ್ಕೂ ಮೊದಲು ಸೆಮೀಸ್‌ನಲ್ಲಿ ಚನ್ನೋಯ್ ವಿರುದ್ಧ ಸೋತಿದ್ದ ಕೀರ್ತನಾ ಪಾಂಡ್ಯನ್ ಕಂಚು ಪಡೆದರು. ಕಿರಿಯ ಸ್ನೂಕರ್ ಪಟುಗಳ ಸಾಧನೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಅಭಿನಂದನೆ ಸಲ್ಲಿಸಿದೆ.