ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾಂ ಇಂದಿನಿಂದ ಆರಂಭ
ಪ್ರಶಸ್ತಿ ಉಳಿಸಿಕೊಳ್ಳಿಸುವ ವಿಶ್ವಾಸದಲ್ಲಿ ರಾಫೆಲ್ ನಡಾಲ್
ಸಾನಿಯಾ ಮಿರ್ಜಾ ಪಾಲಿಗಿದು ಕೊನೆಯ ಗ್ರ್ಯಾನ್‌ಸ್ಲಾಂ ಟೂರ್ನಿ
ಮೆಲ್ಬರ್ನ್(ಜ.16): 2023ರ ಮೊದಲ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿ ಆಸ್ಪ್ರೇಲಿಯನ್ ಓಪನ್‌ಗೆ ಸೋಮವಾರ ಚಾಲನೆ ದೊರೆಯಲಿದೆ. 22 ಗ್ರ್ಯಾನ್‌ಸ್ಲಾಂಗಳ ಒಡೆಯ ಸ್ಪೇನ್‌ನ ರಾಫೆಲ್ ನಡಾಲ್ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದು, ಕೋವಿಡ್ ಲಸಿಕೆ ಪಡೆಯದೆ ಕಳೆದ ವರ್ಷ ಟೂರ್ನಿಗೆ ಗೈರಾಗಿದ್ದ ನೋವಾಕ್ ಜೋಕೋವಿಚ್ ಈ ಬಾರಿ ಸ್ಪರ್ಧಿಸಲಿದ್ದಾರೆ. 21 ಗ್ರ್ಯಾನ್ ಸ್ಲಾಂ ಗೆದ್ದಿರುವ ಜೋಕೋವಿಚ್, ನಡಾಲ್‌ರ ದಾಖಲೆ ಸರಿಗಟ್ಟಲು ಎದುರು ನೋಡುತ್ತಿದ್ದಾರೆ. ಈ ಇಬ್ಬರೂ ಪ್ರತ್ಯೇಕ ವಿಭಾಗಗಳಲ್ಲಿದ್ದು, ಮುಖಾಮುಖಿಯಾಗುವುದಿದ್ದರೆ ಫೈನಲ್‌ನಲ್ಲಷ್ಟೇ ಆಗಬೇಕಿದೆ.
ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಒಟ್ಟು 3 ಗ್ರ್ಯಾನ್ ಸ್ಲಾಂ ಗೆದ್ದಿರುವ 21ರ ಇಗಾ, ಕಳೆದ ವರ್ಷ ಸತತ 37 ಪಂದ್ಯಗಳನ್ನು ಗೆದ್ದಿದ್ದರು.
ಸಾನಿಯಾಗೆ ಕೊನೆ ಗ್ರ್ಯಾನ್ ಸ್ಲಾಂ
ಭಾರತದ ದಿಗ್ಗಜೆ ಸಾನಿಯಾ ಮಿರ್ಜಾ ವೃತ್ತಿಬದುಕಿನ ಕೊನೆಯ ಗ್ರ್ಯಾನ್ ಸ್ಲಾಂ ಆಡಲಿದ್ದಾರೆ. ಮುಂದಿನ ತಿಂಗಳು ನಿವೃತ್ತಿ ಪಡೆಯಲಿರುವ ಸಾನಿಯಾ, ಈ ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲಿ ಕಜಕಸ್ತಾನದ ಆ್ಯನಾ ದನಿಲಿನಾ ಜೊತೆ ಕಣಕ್ಕಿಳಿಯಲಿದ್ದಾರೆ. ಮಿಶ್ರ ಡಬಲ್ಸ್‌ನ ಪಟ್ಟಿಇನ್ನೂ ಪ್ರಕಟಗೊಂಡಿಲ್ಲ. ಈ ವಿಭಾಗದಲ್ಲೂ ಅವರು ಸ್ಪರ್ಧಿಸುವ ನಿರೀಕ್ಷೆ ಇದೆ.
ಪುರುಷರ ಡಬಲ್ಸ್‌ನಲ್ಲಿ ಭಾರತದ ನಾಲ್ವರ ಸ್ಪರ್ಧೆ
ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಆಸ್ಪ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆ ಕಣಕ್ಕಿಳಿಯಲಿದ್ದಾರೆ. ರಾಮ್‌ಕುಮಾರ್ ರಾಮನಾಥನ್‌ಗೆ ಮೆಕ್ಸಿಕೋದ ರೆಯೆಸ್ ವರೆಲಾ ಜೊತೆಯಾಗಲಿದ್ದಾರೆ. ಇನ್ನು ಯೂಕಿ ಭಾಂಬ್ರಿ ಹಾಗೂ ಸಾಕೇತ್ ಮೈನೇನಿಗೆ ವೈಲ್ಡ್‌ಕಾರ್ಡ್ ಪ್ರವೇಶ ಸಿಕ್ಕಿದ್ದು ಈ ಇಬ್ಬರು ಜೊತೆಯಾಗಿ ಸ್ಪರ್ಧಿಸಲಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ ಭಾರತೀಯ ಸ್ಪರ್ಧಿಗಳಿಲ್ಲ.
ಭಾರತೀಯ ಬಾಸ್ಕೆಟ್‌ಬಾಲ್ ಲೀಗ್: ಚೆನ್ನೈ ಚಾಂಪಿಯನ್!
ಬೆಂಗಳೂರು: ಚೊಚ್ಚಲ ಆವೃತ್ತಿಯ ಭಾರತೀಯ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಲೀಗ್(ಐಎನ್‌ಬಿಎಲ್) 5*5 ಟೂರ್ನಿಯಲ್ಲಿ ಚೆನ್ನೈ ಹೀಟ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 2ನೇ ಫೈನಲ್‌ನಲ್ಲಿ ಚೆನ್ನೈ 91-74 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಶನಿವಾರ ನಡೆದ ಮೊದಲ ಫೈನಲ್‌ನಲ್ಲೂ ಚೆನ್ನೈ ಜಯಿಸಿತ್ತು. 92-77 ಅಂಕಗಳ ಅಂತರದಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತ್ತು.
SA20 League: ಡೆಲ್ಲಿ ಪರ ವಿಲ್ ಜೇಕ್ಸ್ ಗುಡುಗು, ಆರ್‌ಸಿಬಿ ಅಭಿಮಾನಿಗಳಲ್ಲಿ ಪುಳಕ..!
ವಿಜೇತರನ್ನು ಆಯ್ಕೆ ಮಾಡಲು ಎರಡು ಚರಣಗಳ ಫೈನಲ್ ನಡೆಸಲಾಯಿತು. ಚೆನ್ನೈ 183-151 ಅಂಕಗಳ ಅಂತರದ ಸುಲಭ ಗೆಲುವು ದಾಖಲಿಸಿತು. ಎರಡೂ ಪಂದ್ಯಗಳಲ್ಲಿ ಬೆಂಗಳೂರು ತಂಡದ ಅಭಿಷೇಕ್ ಗೌಡ ಆಕರ್ಷಕ ಪ್ರದರ್ಶನ ನೀಡಿದರೂ ತಂಡದ ಗೆಲುವಿಗೆ ಸಾಕಾಗಲಿಲ್ಲ. ಮೊದಲ ಫೈನಲ್‌ನಲ್ಲಿ 32 ಅಂಕ ಗಳಿಸಿದ್ದ ಅಭಿಷೇಕ್, 2ನೇ ಫೈನಲಲ್ಲಿ 33 ಅಂಕ ಪಡೆದರು.
ಚಾಂಪಿಯನ್ ತಂಡಕ್ಕೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್(ಬಿಎಫ್‌ಐ) ಅಧ್ಯಕ್ಷ ಡಾ.ಕೆ.ಗೋವಿಂದರಾಜು ಪ್ರಶಸ್ತಿ, 10 ಲಕ್ಷ ರು. ಬಹುಮಾನ ವಿತರಿಸಿದರು. ರನ್ನರ್-ಅಪ್ ಬೆಂಗಳೂರು ತಂಡಕ್ಕೆ 7.5 ಲಕ್ಷ ರು. ಬಹುಮಾನ ಮೊತ್ತ ದೊರೆಯಿತು.