Latest Videos

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಜೊತೆಯಾಗಿ ಆಡಲಿರುವ ರಾಫೆಲ್‌ ನಡಾಲ್-ಆಲ್ಕರಜ್‌

By Naveen KodaseFirst Published Jun 13, 2024, 12:18 PM IST
Highlights

38ರ ನಡಾಲ್‌ 2008ರ ಒಲಿಂಪಿಕ್ಸ್‌ನ ಸಿಂಗಲ್ಸ್‌ ಹಾಗೂ 2016ರಲ್ಲಿ ಡಬಲ್ಸ್‌ನಲ್ಲಿ ಮಾರ್ಕ್‌ ಲೊಪೆಜ್‌ ಜೊತೆಗೂಡಿ ಚಿನ್ನದ ಪದಕ ಗೆದ್ದಿದ್ದರು. ಇತ್ತೀಚೆಗಷ್ಟೇ ಫ್ರೆಂಚ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿರುವ ಆಲ್ಕರಜ್‌ ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಲಿದ್ದಾರೆ. ಒಲಿಂಪಿಕ್ಸ್‌ ಜು.26ಕ್ಕೆ ಆರಂಭಗೊಳ್ಳಲಿದೆ.

ಮ್ಯಾಡ್ರಿಡ್‌: ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪೇನ್‌ನ ದಿಗ್ಗಜ ಟೆನಿಸಿಗ ರಾಫೆಲ್‌ ನಡಾಲ್‌ ಹಾಗೂ ಯುವ ತಾರೆ ಕಾರ್ಲೊಸ್‌ ಆಲ್ಕರಜ್‌ ಡಬಲ್ಸ್‌ನಲ್ಲಿ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ. ಈ ಬಗ್ಗೆ ಸ್ಪೇನ್‌ ಟೆನಿಸ್ ಫೆಡರೇಶನ್‌ ಬುಧವಾರ ಮಾಹಿತಿ ನೀಡಿದೆ. 

ಇವರಿಬ್ಬರು ಸಿಂಗಲ್ಸ್‌ನಲ್ಲೂ ಕಣಕ್ಕಿಳಿಯಲಿದ್ದಾರೆ. 38ರ ನಡಾಲ್‌ 2008ರ ಒಲಿಂಪಿಕ್ಸ್‌ನ ಸಿಂಗಲ್ಸ್‌ ಹಾಗೂ 2016ರಲ್ಲಿ ಡಬಲ್ಸ್‌ನಲ್ಲಿ ಮಾರ್ಕ್‌ ಲೊಪೆಜ್‌ ಜೊತೆಗೂಡಿ ಚಿನ್ನದ ಪದಕ ಗೆದ್ದಿದ್ದರು. ಇತ್ತೀಚೆಗಷ್ಟೇ ಫ್ರೆಂಚ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿರುವ ಆಲ್ಕರಜ್‌ ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಲಿದ್ದಾರೆ. ಒಲಿಂಪಿಕ್ಸ್‌ ಜು.26ಕ್ಕೆ ಆರಂಭಗೊಳ್ಳಲಿದೆ.

ಇಂಡಿಯನ್‌ ಗ್ರ್ಯಾನ್‌ ಪ್ರೀ: ಕರ್ನಾಟಕ ಪ್ರಾಬಲ್ಯ

ಬೆಂಗಳೂರು: ಬುಧವಾರ ನಡೆದ ಇಂಡಿಯನ್ ಗ್ರ್ಯಾನ್‌ಪ್ರಿ-3 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಪ್ರಾಬಲ್ಯ ಸಾಧಿಸಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕೂಟದಲ್ಲಿ ಮಹಿಳೆಯರ 100 ಮೀ. ಓಟದ ಸ್ಪರ್ಧೆಯಲ್ಲಿ ಸ್ನೇಹಾ 11.41 ಸೆಕೆಂಡ್‌ಗಳಲ್ಲಿ ಕ್ರಮಿಸಿ ಅಗ್ರಸ್ಥಾನಿಯಾದರೆ, ಸುದೀಕ್ಷ(11.75 ಸೆಕೆಂಡ್‌) ತೃತೀಯ ಸ್ಥಾನ ಪಡೆದರು. 

ಪುರುಷರ ಲಾಂಗ್‌ ಜಂಪ್‌ನಲ್ಲಿ ಆರ್ಯ 7.76 ಮೀ. ದೂರಕ್ಕೆ ಜಿಗಿದರೆ, ಮಹಿಳೆಯರ ಹೈ ಜಂಪ್‌ನಲ್ಲಿ ಅಭಿನಯ ಶೆಟ್ಟಿ 1.74 ಮೀ. ಎತ್ತರಕ್ಕೆ ನೆಗೆದು ಅಗ್ರಸ್ಥಾನ ಪಡೆದುಕೊಂಡರು. ಇನ್ನು, ಪುರುಷರ 100 ಮೀ. ಓಟದಲ್ಲಿ ಮಣಿಕಂಠ 10.56 ಸೆಕೆಂಡ್‌ಗಳಲ್ಲಿ ಕ್ರಮಿಸಿ 2ನೇ ಸ್ಥಾನ, ಮಹಿಳೆಯರ 200 ಮೀ.ನಲ್ಲಿ ಕಾವೇರಿ 24.38 ಸೆಕೆಂಡ್‌ಗಳಲ್ಲಿ ಕ್ರಮಿಸಿ 2ನೇ ಸ್ಥಾನ, ಮಹಿಳೆಯರ 400 ಮೀ. ಓಟದಲ್ಲಿ ಪೂವಮ್ಮ ರಾಜು 52.62 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ತೃತೀಯ, ಮಹಿಳೆಯರ ಶಾಟ್‌ಪುಟ್‌ನಲ್ಲಿ ಅಂಬಿಕಾ 14.32 ಮೀ. ದೂರ ದಾಖಲಿಸಿ ತೃತೀಯ ಪಡೆದರು. ಅಂಡರ್‌-20 ಪುರುಷರ ಹರ್ಡಲ್ಸ್‌ನಲ್ಲಿ ನೋಯೆಲ್‌ ಜೋಸೆಫ್‌ 57.74 ಸೆಕೆಂಡ್‌ಗಳಲ್ಲಿ ಕ್ರಮಿಸಿ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.

ಭಾರತ ಫುಟ್ಬಾಲ್‌ ಕೋಚ್‌ ಹುದ್ದೆಗೆ ಇಗೊರ್‌ ಗುಡ್‌ಬೈ?

ದೋಹಾ: 2026ರ ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಭಾರತ 3ನೇ ಸುತ್ತು ಪ್ರವೇಶಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ತಂಡದ ಮುಖ್ಯ ಕೋಚ್‌ ಹುದ್ದೆಗೆ ಇಗೊರ್‌ ಸ್ಟಿಮಾಕ್‌ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸ್ಟಿಮಾಕ್‌ 2019ರಲ್ಲಿ ಕೋಚ್‌ ಆಗಿ ನೇಮಕಗೊಂಡಿದ್ದು, ಕಳೆದ ವರ್ಷ ಅವರ ಅವಧಿಯನ್ನು 2026ರ ಜೂನ್‌ವರೆಗೂ ವಿಸ್ತರಿಸಲಾಗಿತ್ತು. ಆದರೆ ಅರ್ಹತಾ ಸುತ್ತಿನಲ್ಲಿ ಸಾಧಾರಣ ಪ್ರದರ್ಶನ ತೋರಿರುವ ಹಿನ್ನೆಲೆಯಲ್ಲಿ ಅವರು ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
 

click me!