2023ರ ಜನವರಿಯಲ್ಲಿ ಭಾರತೀಯ ಕುಸ್ತಿ ಫೆಡರೇಶನ್‌ನ ಹಿಂದಿನ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ಆರಂಭಗೊಂಡ ಬಳಿಕ ರಾಷ್ಟ್ರೀಯ ಶಿಬಿರಗಳಾಗಲಿ, ಕಿರಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಾಗಲಿ ನಡೆದಿಲ್ಲ. ಈ ಕಾರಣದಿಂದಾಗಿ ಅನೇಕ ಕಿರಿಯ ಕುಸ್ತಿಪಟುಗಳು, ಒಂದು ವರ್ಷವನ್ನೇ ಕಳೆದುಕೊಂಡಿದ್ದಾರೆ.
ನವದೆಹಲಿ(ಜ.04): ಕುಸ್ತಿಪಟುಗಳ ಪ್ರತಿಭಟನೆ ಬೆನ್ನಲ್ಲೇ ಭಾರತೀಯ ಒಲಿಂಪಿಕ್ಸ್ ಸಮಿತಿ (ಐಒಎ) ನೇಮಿತ ತಾತ್ಕಾಲಿಕ ಸ್ವತಂತ್ರ ಆಡಳಿತ ಸಮಿತಿಯು ರಾಷ್ಟ್ರೀಯ ಕೂಟಗಳ ಆಯೋಜನೆಗೆ ಮುಂದಾಗಿದೆ. 6 ವಾರದೊಳಗೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಅಂಡರ್-15, ಅಂಡರ್-20 ರಾಷ್ಟ್ರೀಯ ಕುಸ್ತಿ ಕೂಟಗಳನ್ನು ನಡೆಸುವುದಾಗಿ ಘೋಷಿಸಿದೆ.
2023ರ ಜನವರಿಯಲ್ಲಿ ಭಾರತೀಯ ಕುಸ್ತಿ ಫೆಡರೇಶನ್‌ನ ಹಿಂದಿನ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ಆರಂಭಗೊಂಡ ಬಳಿಕ ರಾಷ್ಟ್ರೀಯ ಶಿಬಿರಗಳಾಗಲಿ, ಕಿರಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಾಗಲಿ ನಡೆದಿಲ್ಲ. ಈ ಕಾರಣದಿಂದಾಗಿ ಅನೇಕ ಕಿರಿಯ ಕುಸ್ತಿಪಟುಗಳು, ಒಂದು ವರ್ಷವನ್ನೇ ಕಳೆದುಕೊಂಡಿದ್ದಾರೆ.
undefined
ಸ್ವತಂತ್ರ ಆಡಳಿತ ಸಮಿತಿಯ ಮುಖ್ಯಸ್ಥ ಭೂಪೇಂದ್ರ ಸಿಂಗ್ ಬಾಜ್ವಾ ಯುವ ಕುಸ್ತಿಪಟುಗಳ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ್ದು, ‘ಕುಸ್ತಿಪಟುಗಳು ಒತ್ತಾಯಿಸಿರುವಂತೆ ಕೂಟಗಳನ್ನು ಶೀಘ್ರ ಆಯೋಜಿಸಲು ನಾವು ಬದ್ಧರಾಗಿದ್ದೇವೆ. ಮುಂದಿನ 6 ವಾರಗಳಲ್ಲಿ ಅಂಡರ್-15, ಅಂಡರ್-20 ವಿಭಾಗದ ಕೂಟಗಳನ್ನು ಗ್ವಾಲಿಯರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ’ ಎಂದರು.
ಚುನಾವಣೆಯಲ್ಲಿ ಸಂಜಯ್ ಸಿಂಗ್ ನೇತೃತ್ವದ ಪದಾಧಿಕಾರಿಗಳ ತಂಡ ಆಯ್ಕೆಯಾದ ಮರು ದಿನವೇ (ಡಿ.27) ಕ್ರೀಡಾ ಸಚಿವಾಲಯ ನೂತನ ಸಮಿತಿಯನ್ನು ಅಮಾನತುಗೊಳಿಸಿತು. ಬಳಿಕ ಐಒಎ, ಕುಸ್ತಿ ಚಟುವಟಿಕೆಗಳನ್ನು ನಡೆಸಲು ಸ್ವತಂತ್ರ ಆಡಳಿತ ಸಮಿತಿಯನ್ನು ನೇಮಿಸಿತು.
ಸಂಜಯ್ ಬಿಟ್ಟು ಬೇರೆ ಯಾರ ಬಗ್ಗೆಯೂ ತಕರಾರಿಲ್ಲ: ಸಾಕ್ಷಿ ಮಲಿಕ್!
ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌ಗೆ ಹೊಸದಾಗಿ ಆಯ್ಕೆಯಾದ ಬ್ರಿಜ್‌ಭೂಷಣ್ ಬಳಗದ ಎಲ್ಲಾ ಪದಾಧಿಕಾರಿಗಳನ್ನು ವಿರೋಧಿಸುತ್ತಿದ್ದ ಕುಸ್ತಿಪಟು ಸಾಕ್ಷಿ ಮಲಿಕ್, ಈಗ ಸ್ವಲ್ಪ ಮೆತ್ತಗಾದಂತೆ ಕಾಣುತ್ತಿದೆ. ಬುಧವಾರ ಯುವ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿರುವ ಸಾಕ್ಷಿ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಸಂಜಯ್ ಸಿಂಗ್‌ರನ್ನು ಹೊರತುಪಡಿಸಿ ಮತ್ತೆ ಯಾರ ಬಗ್ಗೆಯೂ ತಕರಾರಿಲ್ಲ ಎಂದಿದ್ದಾರೆ.
'ಬ್ರಿಜ್‌ಭೂಷಣ್ ಸಿಂಗ್ ಆಪ್ತ ಸಂಜಯ್ ಒಬ್ಬರನ್ನು ಅಧಿಕಾರದಿಂದ ದೂರವಿಡಬೇಕು. ಅವರೊಬ್ಬರನ್ನು ಹೊರತುಪಡಿಸಿ, ಚುನಾವಣೆಯಲ್ಲಿ ಆಯ್ಕೆಯಾಗಿರುವ ಉಳಿದವರ ಪೈಕಿ ಬೇರೆ ಯಾರಾದರೂ ಅಧ್ಯಕ್ಷರಾದರೆ ಯಾವುದೇ ಆಕ್ಷೇಪವಿಲ್ಲ' ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.
ಕಳೆದ ಡಿಸೆಂಬರ್ 21ರಂದು ನಡೆದ ಭಾರತೀಯ ಕುಸ್ತಿ ಫೆಡರೇಷನ್ ಚುನಾವಣೆಯಲ್ಲಿ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಕಣ್ಣೀರಿಡುತ್ತಲೇ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು.
ಬ್ರಿಜ್ ಆಪ್ತರಿಂದ ಬೆದರಿಕೆ ಕರೆ: ಸಾಕ್ಷಿ ಆರೋಪ
ಬ್ರಿಜ್‌ಭೂಷಣ್ ಸಿಂಗ್ ವಿರುದ್ದ ಆರೋಪ ಮುಂದುವರೆಸಿದರುವ ಸಾಕ್ಷಿ ಮಲಿಕ್ ಕಳೆದ 2-3 ದಿನಗಳಿಂದ ತಮ್ಮ ತಾಯಿಗೆ ಬ್ರಿಜ್ ಆಪ್ತರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ಅನೇಕರು ತಮ್ಮ ತಾಯಿಗೆ ಕರೆ ಮಾಡಿ, ನಿಮ್ಮ ಕುಟುಂಬದವರ ಮೇಲೆ ಇಲ್ಲ ಸಲ್ಲದ ಕೇಸ್ ದಾಖಲಿಸುತ್ತೇವೆ' ಎಂದು ಬೆದರಿಸುತ್ತಿದ್ದಾರೆ ಎಂದು ಸಾಕ್ಷಿ ಆರೋಪಿಸಿದ್ದಾರೆ.