ಯುಎಸ್ ಓಪನ್ ಆಡುವ ಅವಕಾಶದಿಂದ ವಂಚಿತರಾದ ನೋವಾಕ್ ಜೋಕೋವಿಚ್
ಅಮೆರಿಕಕ್ಕೆ ಪ್ರವೇಶಿಸುವ ವಿದೇಶಿಗರಿಗೆ ಲಸಿಕೆ ಕಡ್ಡಾಯ ನಿಯಮ ಮುಂದುವರಿಸಿದ ಬೆನ್ನಲ್ಲೇ ಈ ತೀರ್ಮಾನ
ಆಸ್ಪ್ರೇಲಿಯನ್ ಓಪನ್ ಟೂರ್ನಿಯಿಂದಲೂ ಜೋಕೋಗೆ ಆಡಲು ಅವಕಾಶ ನಿರಾಕರಿಸಲಾಗಿತ್ತು
ನ್ಯೂಯಾರ್ಕ್(ಆ.26): 21 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್ ಜೋಕೋವಿಚ್ 2022ರ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಈ ಬಗ್ಗೆ ಸ್ವತಃ ಜೋಕೋವಿಚ್ ಸ್ಪಷ್ಪಪಡಿಸಿದ್ದು, ಯುಎಸ್ ಓಪನ್‌ಗಾಗಿ ಈ ಬಾರಿ ಅಮೆರಿಕಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಗುರುವಾರ ಟ್ವೀಟ್ ಮಾಡಿದ್ದಾರೆ.
ಅಮೆರಿಕದ ಆರೋಗ್ಯ ಇಲಾಖೆ ಕೋವಿಡ್ ಲಸಿಕೆ ಪಡೆಯದವರು ಎದುರಿಸುತ್ತಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಆದರೆ ಗುರುವಾರ ಪ್ರಕಟಿಸಲಾದ ಹೊಸ ನಿಯಮದಲ್ಲಿ ಅಮೆರಿಕಕ್ಕೆ ಪ್ರವೇಶಿಸುವ ವಿದೇಶಿಗರಿಗೆ ಲಸಿಕೆ ಕಡ್ಡಾಯ ನಿಯಮ ಮುಂದುವರಿಸಿದ್ದು, ಈ ಕಾರಣದಿಂದಾಗಿ ಜೋಕೋ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ಲಸಿಕೆ ಪಡೆಯದ ಹಿನ್ನೆಲೆಯಲ್ಲಿ ಜನವರಿಯಲ್ಲಿ ನಡೆದಿದ್ದ ಆಸ್ಪ್ರೇಲಿಯನ್ ಓಪನ್ ಟೂರ್ನಿಯಿಂದಲೂ ಜೋಕೋಗೆ ಆಡಲು ಅವಕಾಶ ನಿರಾಕರಿಸಲಾಗಿತ್ತು.
ಯುಎಸ್ ಓಪನ್ ಅರ್ಹತಾ ಟೂರ್ನಿ: ಯೂಕಿ ಶುಭಾರಂಭ
ನ್ಯೂಯಾರ್ಕ್: ಭಾರತದ ತಾರಾ ಟೆನಿಸಿಗ ಯೂಕಿ ಭಾಂಬ್ರಿ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್‌ನ ಅರ್ಹತಾ ಟೂರ್ನಿಯಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ. ಗುರುವಾರ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ 552ನೇ ಶ್ರೇಯಾಂಕಿತ ಯೂಕಿ, ಮಾಲ್ಡೊವಾದ ರಾಡು ಅಲ್ಬೋಟ್ ವಿರುದ್ಧ 7-6(4), 6-4 ನೇರ ಸೆಟ್‌ಗಳಿಂದ ಜಯಗಳಿಸಿದರು. ಆದರೆ ಭಾರತದ ಅಗ್ರ ಶ್ರೇಯಾಂಕಿತ ಆಟಗಾರ ರಾಮ್‌ಕುಮಾರ್ ರಾಮನಾಥನ್ ಅಮೆರಿಕದ ಟೀನ್ ಬ್ರುನೋ ವಿರುದ್ಧ ಹಾಗೂ ಸುಮಿತ್ ನಗಾಲ್ ಕೆನಡಾದ ವ್ಯಾಸೆಕ್ ಪೊಸ್ಪಿಸಿಲ್ ವಿರುದ್ಧ ಮೊದಲ ಸುತ್ತಲ್ಲೇ ಸೋತು ಹೊರಬಿದ್ದರು.
ಯುಎಸ್ ಓಪನ್‌ನಿಂದ ಹಿಂದೆ ಸರಿದ ಸಾನಿಯಾ
ನವದೆಹಲಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆಗಸ್ಟ್ 29 ಆರಂಭಗೊಳ್ಳಲಿರುವ ಯುಎಸ್ ಓಪನ್ ಗ್ರ್ಯಾನ್ ಸ್ಲಾಂನಿಂದ ಹಿಂದೆ ಸರಿದಿದ್ದಾರೆ. ಕೆನಡಾದಲ್ಲಿ 2 ವಾರದ ಹಿಂದೆ ನಡೆದ ಟೂರ್ನಿಯಲ್ಲಿ ಸಾನಿಯಾ ಮೊಣಕೈ ಗಾಯಕ್ಕೆ ತುತ್ತಾಗಿದ್ದು, ಇದೇ ಕಾರಣದಿಂದ ಅವರು ಯುಎಸ್ ಓಪನ್‌ನಲ್ಲಿ ಆಡದಿರಲು ನಿರ್ಧರಿಸಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು ಸೇರಿದಂತೆ ದೇಶದ 12 ನಗರಗಳಲ್ಲಿ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್..!
ಇನ್ನು 2022ರ ಋುತುವಿನ ಅಂತ್ಯದಲ್ಲಿ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದ ಸಾನಿಯಾ, ಇದೀಗ ತಮ್ಮ ನಿವೃತ್ತಿಯನ್ನು ಮುಂದೂಡುವ ಬಗ್ಗೆ ಆಲೋಚನೆ ನಡೆಸುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.
ಯುಎಸ್ ಓಪನ್ ಬಳಿಕ ಟೆನಿಸ್‌ಗೆ ಸೆರೆನಾ ಗುಡ್‌ಬೈ!
ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರ್ತಿಯರ ಪೈಕಿ ಒಬ್ಬರೆನಿಸಿರುವ, 23 ಗ್ರ್ಯಾನ್ ಸ್ಲಾಂ ಪ್ರಶಸ್ತಿ ವಿಜೇತೆ ಸೆರೆನಾ ವಿಲಿಯಮ್ಸ್ ಈ ವರ್ಷ ಯುಎಸ್ ಓಪನ್ ಟೂರ್ನಿಯ ಬಳಿಕ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದರು.
ಪ್ರತಿಷ್ಠಿತ ವೋಗ್ ಪುರುವಣಿಯಲ್ಲಿ ಬರೆದಿರುವ ಅಂಕಣದಲ್ಲಿ ಸೆರೆನಾ ನಿವೃತ್ತಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನಿವೃತ್ತಿ ಎನ್ನುವ ಪದವನ್ನು ಬಳಸಲು ಇಚ್ಛಿಸದ ಸೆರೆನಾ, ‘ಸದ್ಯದಲ್ಲೇ ನಾನು 41 ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದೇನೆ. ಆಟದಿಂದ ದೂರವಾಗುತ್ತಿದ್ದೇನೆ ಎನ್ನುವುದಕ್ಕಿಂತ ಟೆನಿಸ್‌ನಿಂದ ವಿಕಸನಗೊಳ್ಳುತ್ತಿದ್ದು, ಆಟಕ್ಕಿಂತ ಹೆಚ್ಚು ಮಹತ್ವ ಪಡೆದಿರುವ ವಿಷಯಗಳತ್ತ ಗಮನ ಹರಿಸಲು ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದಿದ್ದರು. ಸೆರೆನಾ ತಾಯಿಯಾದ ಬಳಿಕ ಮೊದಲ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಜಯಿಸುವುದರೊಂದಿಗೆ ವಿದಾಯ ಹೇಳಲು ಎದುರು ನೋಡುತ್ತಿದ್ದಾರೆ. 2017ರಲ್ಲಿ ಸೆರೆನಾ ಕೊನೆ ಬಾರಿಗೆ ಗ್ರ್ಯಾನ್ ಸ್ಲಾಂ ಜಯಿಸಿದ್ದರು.