2024 ಕ್ರೀಡಾಭಿಮಾನಿಗಳಿಗೆ ರಸದೌತಣ; ಈ ವರ್ಷವಾದ್ರೂ ನೀಗುತ್ತಾ ವಿಶ್ವಕಪ್‌ ಬರ?

By Kannadaprabha News  |  First Published Jan 1, 2024, 1:38 PM IST

2024ರಲ್ಲೂ ಕ್ರೀಡಾ ಪ್ರೇಮಿಗಳಿಗೆ ಭರ್ಜರಿ ರಸದೌತಣ ಒದಗಿಸುವ ಜಾಗತಿಕ ಮಟ್ಟದ ಟೂರ್ನಿಗಳು ನಡೆಯಲಿವೆ. ಕುತೂಹಲ, ತಲ್ಲಣ, ಕೌತುಕಗಳನ್ನು ಹೊತ್ತುತರುವ, 2024ರಲ್ಲಿ ನಡೆಯಲಿರುವ ಮಹತ್ವದ ಕ್ರೀಡಾಕೂಟ, ಪಂದ್ಯಾವಳಿಗಳು ಯಾವುದು ಎಂಬ ವಿವರ ಇಲ್ಲಿವೆ.


ಬೆಂಗಳೂರು(ಜ.01)ಫಿಫಾ ಫುಟ್ಬಾಲ್‌ ವಿಶ್ವಕಪ್‌, ಏಕದಿನ ಕ್ರಿಕೆಟ್ ವಿಶ್ವಕಪ್‌ ಸೇರಿದಂತೆ ಹತ್ತು ಹಲವು ಕ್ರೀಡಾ ಹಬ್ಬಗಳೊಂದಿಗೆ ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿ 2023 ವಿದಾಯ ಕೋರಿದೆ. ಆದರೆ ನಿರಾಶರಾಗಬೇಕಾಗಿಲ್ಲ. 2024ರಲ್ಲೂ ಕ್ರೀಡಾ ಪ್ರೇಮಿಗಳಿಗೆ ಭರ್ಜರಿ ರಸದೌತಣ ಒದಗಿಸುವ ಜಾಗತಿಕ ಮಟ್ಟದ ಟೂರ್ನಿಗಳು ನಡೆಯಲಿವೆ. ಕುತೂಹಲ, ತಲ್ಲಣ, ಕೌತುಕಗಳನ್ನು ಹೊತ್ತುತರುವ, 2024ರಲ್ಲಿ ನಡೆಯಲಿರುವ ಮಹತ್ವದ ಕ್ರೀಡಾಕೂಟ, ಪಂದ್ಯಾವಳಿಗಳು ಯಾವುದು ಎಂಬ ವಿವರ ಇಲ್ಲಿವೆ.

2024ರಲ್ಲಾದರೂ ನೀಗುತ್ತಾ ವಿಶ್ವಕಪ್‌ ಬರ?

Tap to resize

Latest Videos

undefined

ಇತ್ತೀಚೆಗಷ್ಟೇ ಎದುರಾದ ಏಕದಿನ ವಿಶ್ವಕಪ್‌ ಫೈನಲ್‌ನ ಆಘಾತಕಾರಿ ಸೋಲು ಭಾರತೀಯರು ಇನ್ನೂ ಮರೆತಿಲ್ಲ. ಆದರೆ 2024ರಲ್ಲಿ ಭಾರತಕ್ಕೆ ವಿಶ್ವಕಪ್ ಗೆಲ್ಲಲು ಮತ್ತೊಂದು ಅವಕಾಶ ಲಭಿಸಲಿದೆ. ಜೂನ್‌ನಲ್ಲಿ ವೆಸ್ಟ್‌ಇಂಡೀಸ್‌, ಅಮೆರಿಕದಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ಆಡಲಿದ್ದು, ವಿಶ್ವಕಪ್‌ ಬರ ನೀಗಿಸುವ ನಿರೀಕ್ಷೆಯಲ್ಲಿದೆ. ಜೊತೆಗೆ ತವರಿನಲ್ಲಿ ಇಂಗ್ಲೆಂಡ್‌, ನ್ಯೂಜಿಲೆಂಡ್‌, ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಸರಣಿ, ಅಫ್ಘಾನಿಸ್ತಾ, ಬಾಂಗ್ಲಾ ವಿರುದ್ಧ ಟಿ20 ಸರಣಿಗಳಲ್ಲಿ ಪಾಲ್ಗೊಳ್ಳಲಿವೆ. ಜುಲೈನಲ್ಲಿ ಶ್ರೀಲಂಕಾಕ್ಕೆ ತೆರಳಿ ಏಕದಿನ, ಟಿ20 ಸರಣಿ ಆಡಲಿರುವ ಭಾರತ, ಬಳಿಕ ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿಯಲ್ಲೂ ಪಾಲ್ಗೊಳ್ಳಲಿದೆ. ಇದೆಲ್ಲದರ ಜೊತೆಗೆ ಮಾರ್ಚ್‌-ಮೇನಲ್ಲಿ ಐಪಿಎಲ್‌ ಕೂಡಾ ನಡೆಯಲಿದೆ.

ವನಿತೆಯರಿಗೂ ವಿಶ್ವಕಪ್‌ ಸಂಭ್ರಮ

ಭಾರತ ಮಹಿಳಾ ತಂಡಕ್ಕೂ ಟಿ20 ವಿಶ್ವಕಪ್‌ ಸವಾಲು ಎದುರಾಗಲಿದೆ. ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ವಿಶ್ವಕಪ್‌ ಆಡಲಿರುವ ಭಾರತ, ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ, ತವರಿನಲ್ಲಿ ವೆಸ್ಟ್‌ಇಂಡೀಸ್‌ ಹಾಗೂ ಆಸೀಸ್‌ ವಿರುದ್ಧದ ಸರಣಿಗಳಲ್ಲಿ ಪಾಲ್ಗೊಳ್ಳಲಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ನತ್ತ ಎಲ್ಲರ ಚಿತ್ತ

ಭಾರತೀಯರು ಕಾತರದಿಂದ ಕಾಯುತ್ತಿರುವ ಪ್ಯಾರಿಸ್‌ ಒಲಿಂಪಿಕ್ಸ್‌ ಕೂಡಾ ಇದೇ ವರ್ಷ ನಿಗದಿಯಾಗಿದೆ. ಕಳೆದ ಬಾರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದ ಭಾರತದ ಅಥ್ಲೀಟ್‌ಗಳು ಈ ಬಾರಿ ಪ್ಯಾರಿಸ್‌ನಲ್ಲಿ ದಾಖಲೆ ಬರೆದು, ದೇಶದ ತ್ರಿವರ್ಣ ಧ್ವಜವನ್ನು ಬಾನೆತ್ತರಕ್ಕೆ ಏರಿಸುವ ತವಕದಲ್ಲಿದ್ದಾರೆ. ಜುಲೈ 26ಕ್ಕೆ ಆರಂಭಗೊಳ್ಳಲಿರುವ ಬಹುನಿರೀಕ್ಷಿತ ಟೂರ್ನಿ ಆ.11ಕ್ಕೆ ಮುಕ್ತಾಯಗೊಳ್ಳಲಿದೆ.

ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌

ಭಾರತ ಈ ಬಾರಿ ಕತಾರ್‌ನಲ್ಲಿ ಆಯೋಜನೆಗೊಳ್ಳಲಿರುವ ಎಎಫ್‌ಸಿ ಏಷ್ಯನ್ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಕಳೆದ ವರ್ಷ ಸ್ಯಾಫ್‌ ಕಪ್‌ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭಾರತಕ್ಕೆ ಈ ಬಾರಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲು ಅತಿದೊಡ್ಡ ಅವಕಾಶ ಸಿಗಲಿದೆ. ಈ ವರೆಗೆ ಭಾರತ ಎಎಫ್‌ಸಿ ಕಪ್‌ ಆಡಿದ್ದು 4 ಬಾರಿ ಮಾತ್ರ. 1964ರಲ್ಲಿ ರನ್ನರ್-ಅಪ್‌ ಆಗಿದ್ದು ಶ್ರೇಷ್ಠ ಸಾಧನೆ.

ಚೊಚ್ಚಲ ಹಾಕಿ ಫೈವ್ಸ್‌ ವಿಶ್ವಕಪ್‌

ಈ ವರ್ಷ ಭಾರತೀಯರಿಗೆ ಮನರಂಜನೆ ನೀಡಲಿರುವ ಮತ್ತೊಂದು ಪಂದ್ಯಾವಳಿ ಚೊಚ್ಚಲ ಆವೃತ್ತಿಯ ಪುರುಷ ಹಾಗೂ ಮಹಿಳಾ ಹಾಕಿ ಫೈವ್ಸ್‌ ವಿಶ್ವಕಪ್‌. ಎರಡೂ ಟೂರ್ನಿಗಳಿಗೆ ಒಮಾನ್‌ನ ಮಸ್ಕತ್‌ ಆತಿಥ್ಯ ವಹಿಸಲಿದ್ದು, ಮಹಿಳಾ ವಿಭಾಗದ ಪಂದ್ಯಾವಳಿ ಜ.24ರಿಂದ 27ರ ವರೆಗೆ, ಪುರುಷರ ಟೂರ್ನಿ ಜ.28ರಿಂದ 31ರ ವರೆಗೆ ನಡೆಯಲಿದೆ.

2ನೇ ಬಾರಿ ಮೋಟೋ ಜಿಪಿ ರೇಸ್‌

ಕಳೆದ ವರ್ಷ ಚೊಚ್ಚಲ ಬಾರಿಗೆ ಮೋಟೋ ಜಿಪಿ ರೇಸ್‌ ಆಯೋಜಿಸಿ ಸೈ ಎನಿಸಿಕೊಂಡಿರು ಭಾರತ, ಈ ಬಾರಿ ಮತ್ತೆ ರೇಸ್‌ಗೆ ಆತಿಥ್ಯ ವಹಿಸಲಿದೆ. ಗ್ರೇಟರ್‌ ನೋಯ್ದಾಡಲ್ಲಿ ಸೆ.22ರಿಂದ 22ರ ವರೆಗೆ 2ನೇ ಆವೃತ್ತಿ ರೇಸ್‌ ನಡೆಯಲಿದೆ.

ಐಪಿಎಲ್‌, ಟೆನಿಸ್‌, ಅಥ್ಲೆಟಿಕ್ಸ್‌ ಸಂಭ್ರಮ

ಈ ಬಾರಿಯೂ ಭಾರತೀಯರಿಗೆ ಐಪಿಎಲ್‌ ಭರಪೂರ ರಸದೌತಣ ನೀಡಲು ಸಜ್ಜಾಗಿದೆ. ಲೋಕಸಭೆ ಚುನಾವಣೆ ನಡುವೆ ಮಾರ್ಷ್‌-ಮೇ ತಿಂಗಳಲ್ಲಿ 17ನೇ ಆವೃತ್ತಿ ಟೂರ್ನಿ ಆಯೋಜನೆಗೊಳ್ಳುವ ನಿರೀಕ್ಷೆಯಿದೆ. ಜೊತೆಗೆ ಪ್ರತಿ ವರ್ಷದಂತೆ ಈ ಬಾರಿಯೂ 4 ಟೆನಿಸ್‌ ಗ್ರ್ಯಾನ್‌ಸ್ಲಾಂಗಳಾದ ಆಸ್ಟ್ರೇಲಿಯನ್‌ ಓಪನ್‌, ಫ್ರೆಂಚ್‌ ಓಪನ್‌, ವಿಂಬಲ್ಡನ್‌, ಯುಎಸ್‌ ಓಪನ್‌ ಕ್ರೀಡಾಭಿಮಾನಿಗಳನ್ನು ಮನರಂಜಿಸಲಿದೆ. ಇನ್ನು ಗ್ಲಾಸ್ಗೋದಲ್ಲಿ ಮಾ.1ರಿಂದ 3ರ ವರೆಗೆ ವಿಶ್ವ ಒಳಾಂಗಣ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ನಡೆಯಲಿದೆ.
 

click me!