* ಚೆನ್ನೈನಲ್ಲಿ ಆರಂಭವಾದ 61ನೇ ಆವೃತ್ತಿಯ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್
* 10,000 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಅಭಿಷೇಕ್ ಪಾಲ್, ಸಂಜೀವಿನಿ ಯಾದವ್
* 100 ಮೀಟರ್ ಓಟದಲ್ಲಿ ಫೈನಲ್ ಪ್ರವೇಶಿಸಿದ ಹಿಮಾ ದಾಸ್, ದ್ಯುತಿ ಚಾಂದ್
ಚೆನ್ನೈ(ಜೂ.11): ಶುಕ್ರವಾರ ಆರಂಭವಾದ 61ನೇ ಆವೃತ್ತಿಯ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (National Inter State Senior Athletics Championship 2022) ಅಭಿಷೇಕ್ ಪಾಲ್ ಹಾಗೂ ಸಂಜೀವಿನಿ ಯಾದವ್ ಅವರು ಕ್ರಮವಾಗಿ ಪುರುಷ ಮತ್ತ ಮಹಿಳಾ ವಿಭಾಗದ 1000 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಉತ್ತರ ಪ್ರದೇಶದ ಅಭಿಷೇಕ್ 29 ನಿಮಿಷ 55.51 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರೆ, ಅದೇ ರಾಜ್ಯದ ಗುಲ್ವೀರ್ ಸಿಂಗ್ ಬೆಳ್ಳಿ, ರಾಜಸ್ಥಾನದ ಧರ್ಮೇಂದ್ರ ಕಂಚಿನ ಪದಕ ಗೆದ್ದರು.
ಮಹಿಳಾ ವಿಭಾಗದಲ್ಲಿ ಮಹಾರಾಷ್ಟ್ರದ 25 ವರ್ಷದ ಸಂಜೀವಿನಿ 33 ನಿಮಿಷ 16.43 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬಂಗಾರ ಗೆದ್ದರು. ಅದೇ ರಾಜ್ಯದ ಪ್ರಜಕ್ತಾ ಬೆಳ್ಳಿ, ಉತ್ತರ ಪ್ರದೇಶದ ಕವಿತಾ ಯಾದವ್ ಕಂಚು ಗೆದ್ದರು. ಇನ್ನು, ಲಾಂಗ್ ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಅರ್ಹತಾ ಸುತ್ತಿನಲ್ಲಿ ಕೂಟ ದಾಖಲೆಯೊಂದಿಗೆ ಫೈನಲ್ ಪ್ರವೇಶಿಸಿದರು. ಅವರು 8.01 ಮೀಟರ್ ದೂರಕ್ಕೆ ಜಿಗಿದರು.
2013ರಲ್ಲಿ ಪ್ರೇಮ್ ಕುಮಾರ್ 8 ಮೀಟರ್ ದೂರ ನೆಗೆದಿದ್ದು ಈವರೆಗಿನ ದಾಖಲೆಯಾಗಿತ್ತು. ಇನ್ನು, ಮಹಿಳೆಯರ 400 ಮೀಟರ್ ಓಟದಲ್ಲಿ ಕರ್ನಾಟಕ ಪ್ರಿಯಾ ಮೋಹನ್ (Priya Mohan) ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. 100 ಮೀಟರ್ ಓಟದಲ್ಲಿ ಹಿಮಾ ದಾಸ್ (Hima Das), ದ್ಯುತಿ ಚಂದ್ (Dutee Chand) ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಪ್ಯಾರಾ ಶೂಟಿಂಗ್ ವಿಶ್ವಕಪ್: ಭಾರತ ತಂಡಕ್ಕೆ ಬೆಳ್ಳಿ ಪದಕ
ನವದೆಹಲಿ: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ (Para Shooting World Cup) ಬೆಳ್ಳಿ ಪದಕ ಗೆದ್ದಿದ್ದು, ಪದಕ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಗುರುವಾರ ಪಿ4 ಮಿಶ್ರ 50 ಮೀ. ಪಿಸ್ತೂಲ್ ಎಸ್‌ಎಚ್1 ತಂಡ ವಿಭಾಗದಲ್ಲಿ ಭಾರತದ ಮನೀಶ್ ನರ್ವಾಲ್, ಸಿಂಗರಾಜ್ ಅಧಾನ ಹಾಗೂ ಆಕಾಶ್ ಅವರನ್ನೊಳಗೊಂಡ ಜೋಡಿ 1,581 ಅಂಕ ಪಡೆದು ಚೀನಾ(1,628 ಅಂಕ) ತಂಡದ ಎದುರು ಸೋತು ಬೆಳ್ಳಿ ಪಡೆಯಿತು.
ನರ್ವಾಲ್‌ಗೆ ಇದು ಕೂಟದಲ್ಲಿ 2ನೇ ಪದಕವಾಗಿದ್ದು, ಬುಧವಾರ ಅವರು ರುಬಿನಾ ಫ್ರಾನ್ಸಿಸ್ ಜೊತೆಗೂಡಿ ಮಿಶ್ರ ತಂಡ ವಿಭಾಗದ 10 ಮೀ. ಪಿ6 ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು. ಇದಕ್ಕೂ ಮೊದಲು ಅವನಿ ಲೇಖರಾ ಮತ್ತು ಕರ್ನಾಟಕ ಮೂಲದ ಶ್ರೀಹರ್ಷ ದೇವರೆಡ್ಡಿ ರಾಮಕೃಷ್ಣ ಚಿನ್ನ ತಮ್ಮದಾಗಿಸಿಕೊಂಡಿದ್ದರು.
ಎಎಫ್‌ಸಿ ಅರ್ಹತಾ ಟೂರ್ನಿ: ಇಂದು ಭಾರತ-ಆಫ್ಘನ್ ಫೈಟ್
ಕೋಲ್ಕತಾ: ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯ ಅರ್ಹತಾ ಹಂತದ ಎರಡನೇ ಪಂದ್ಯದಲ್ಲಿ ಭಾರತ ತಂಡ, ಶನಿವಾರ ಅಷ್ಘಾನಿಸ್ತಾನದ ಸವಾಲು ಎದರಿಸಲಿದೆ. ಮೊದಲ ಪಂದ್ಯದಲ್ಲಿ ಕಾಂಬೋಡಿಯಾ ತಂಡವನ್ನು ಮಣಿಸಿದ್ದ ಭಾರತ, ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದೆ.
Khelo India ನಕ್ಸಲರಿಂದ ಹತ್ಯೆಯಾದ ವ್ಯಕ್ತಿಯ ಪುತ್ರಿಗೆ ಚಿನ್ನದ ಗರಿ
ಭಾರತ-ಆಫ್ಘನ್ ಈವರೆಗೆ 10 ಬಾರಿ ಮುಖಾಮುಖಿಯಾಗಿದ್ದು, 6ರಲ್ಲಿ ಎದುರಾಗಿದ್ದು, ಆರರಲ್ಲಿ ಭಾರತ ಗೆದ್ದಿದೆ. ಆಫ್ಘನ್ ಒಂದು ಪಂದ್ಯ ಗೆದ್ದಿದ್ದು, ಇತರ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಭಾರತ ತಂಡ ಅರ್ಹತಾ ಹಂತದ ಕೊನೆಯ ಪಂದ್ಯದಲ್ಲಿ ಹಾಂಕಾಂಗ್ ಸವಾಲು ಎದುರಿಸಲಿದೆ. ಆಫ್ಘನ್ ತನ್ನ ಮೊದಲ ಪಂದ್ಯದಲ್ಲಿ ಹಾಂಕಾಂಗ್ ಎದುರು 1-2 ಗೋಲುಗಳ ಸೋತಿತ್ತು.
ಪ್ರೊ ಹಾಕಿ: ಇಂದು ಭಾರತ, ಬೆಲ್ಜಿಯಂ ತಂಡಗಳ ಫೈಟ್
ಬ್ರಸೆಲ್ಸ್(ಬೆಲ್ಜಿಯಂ): ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಶನಿವಾರ ಹಾಗೂ ಭಾನುವಾರ ಬೆಲ್ಜಿಯಂ ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನಾಡಲಿವೆ. ಪುರುಷರ ತಂಡ ಸದ್ಯ 12 ಪಂದ್ಯಗಳಲ್ಲಿ 27 ಅಂಕಗಳನ್ನು ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಬೆಲ್ಜಿಯಂ ಕೂಡಾ ಭಾರತದಷ್ಟೇ ಅಂಕ ಹೊಂದಿದ್ದರೂ ಗೋಲುಗಳ ವ್ಯತ್ಯಾಸದಿಂದ 3ನೇ ಸ್ಥಾನದಲ್ಲಿದೆ. ಭಾರತ ಈ ಪಂದ್ಯದಲ್ಲಿ ಗೆದ್ದರೆ ನೆದರ್ಲೆಂಡ್ಸ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಇನ್ನು, ಮಹಿಳಾ ತಂಡ 8 ಪಂದ್ಯಗಳಲ್ಲಿ 22 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಬೆಲ್ಜಿಯಂ ತಂಡ 10 ಪಂದ್ಯಗಳಲ್ಲಿ ಕೇವಲ 13 ಅಂಕಗಳಿಸಿ 7ನೇ ಸ್ಥಾನದಲ್ಲಿದೆ.