ಭೂಮಿಯ ಸುತ್ತಲಿನ ಬಾಹ್ಯಾಕಾಶ ದಿನೇ ದಿನೇ ಕಿಕ್ಕಿರಿದು ತುಂಬುತ್ತಿದೆ. ಭೂಮಿಯ ಮೇಲೆ ಹೇಗೆ ಮಾನವರು ವಸ್ತುಗಳನ್ನು ಅಲ್ಲಲ್ಲೇ ಬಿಟ್ಟು ಹೋಗುತ್ತೇವೋ, ಅದೇ ಧೋರಣೆಯನ್ನು ಭೂಮಿಯ ಕೆಳ ಕಕ್ಷೆಯಲ್ಲೂ (ಲೋ ಅರ್ತ್ ಆರ್ಬಿಟ್) ನಾವು ಮುಂದುವರಿಸಿದ್ದೇವೆ.
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಮರದ ಉಪಗ್ರಹದ ನಿರ್ಮಾಣ ಪೂರ್ಣಗೊಂಡು, ಅದರ ಉಡಾವಣೆಯೂ ನಡೆದಿದ್ದು, ಅದು ಈಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್ಎಸ್) ತಲುಪಿದೆ. ಇದು ಭೂಮಿಯಿಂದ 400 ಕಿಲೋಮೀಟರ್ (250 ಮೈಲಿ) ಎತ್ತರದಲ್ಲಿರುವ ಕಕ್ಷೆಗೆ ಜೋಡಣೆಯಾಗಲಿದೆ. ಭೂಮಿಯ ಸುತ್ತಲಿನ ಬಾಹ್ಯಾಕಾಶ ದಿನೇ ದಿನೇ ಕಿಕ್ಕಿರಿದು ತುಂಬುತ್ತಿದೆ. ಭೂಮಿಯ ಮೇಲೆ ಹೇಗೆ ಮಾನವರು ವಸ್ತುಗಳನ್ನು ಅಲ್ಲಲ್ಲೇ ಬಿಟ್ಟು ಹೋಗುತ್ತೇವೋ, ಅದೇ ಧೋರಣೆಯನ್ನು ಭೂಮಿಯ ಕೆಳ ಕಕ್ಷೆಯಲ್ಲೂ (ಲೋ ಅರ್ತ್ ಆರ್ಬಿಟ್) ನಾವು ಮುಂದುವರಿಸಿದ್ದೇವೆ. 'ತ್ಯಾಜ್ಯಗಳೆಲ್ಲ ಅಲ್ಲೇ ಇರಲಿ, ಅದನ್ನು ಬಳಿಕ ಇನ್ನೊಂದು ದಿನ ಸ್ವಚ್ಚಗೊಳಿಸಿದರಾಯಿತು' ಎಂಬ ನಮ್ಮ ಧೋರಣೆಯನ್ನು ಬಾಹ್ಯಾಕಾಶದ ವಿಚಾರದಲ್ಲೂ ನಾವು ಮುಂದುವರಿಸಿಕೊಂಡು ಬಂದಿರುವಂತೆ ತೋರುತ್ತದೆ.
ಬಾಹ್ಯಾಕಾಶದ ತ್ಯಾಜ್ಯಗಳಿಂದ ಉಂಟಾಗುವ ಅತಿದೊಡ್ಡ ಅತಂಕವೆಂದರೆ, 'ಕೆಸ್ಲರ್ ಇಫೆಕ್ಟ್' ಅಥವಾ ಕೆಸ್ಲರ್ ಸಿಂಡ್ರೋಮ್ ಉಂಟಾಗುವ ಸಾಧ್ಯತೆ. ಸರಳವಾಗಿ ಹೇಳುವುದಾದರೆ, ಬಾಹ್ಯಾಕಾಶದಲ್ಲಿ ಏನಾದರೂ ಒಂದು ಘಟನೆ, ಉದಾಹರಣೆಗೆ ಒಂದು ಉಪಗ್ರಹ ಸ್ಫೋಟಗೊಂಡರೆ, ಅದರ ಪರಿಣಾಮವಾಗಿ ಸರಣಿ ಪ್ರತಿಕ್ರಿಯೆ ಚಾಲನೆಗೊಂಡು, ಹಲವಾರು ಉಪಗ್ರಹಗಳು ಸ್ಫೋಟಗೊಳ್ಳುವ ಸಾಧ್ಯತೆಗಳಿವೆ. ಇಂತಹ ಸ್ಫೋಟದ ಪರಿಣಾಮವಾಗಿ ಉಂಟಾಗುವ ತುಣುಕುಗಳು, ಕಕ್ಷೆಯಲ್ಲಿರುವ ಇತರ ವಸ್ತುಗಳಿಗೆ ಅಪ್ಪಳಿಸಿ, ಅವುಗಳೂ ಸಿಡಿದು, ಇನ್ನಷ್ಟು ತ್ಯಾಜ್ಯಗಳು ನಿರ್ಮಾಣಗೊಳ್ಳುವಂತೆ ಮಾಡಬಲ್ಲವು. ಒಂದು ವೇಳೆ ಇಂತಹ ವಿದ್ಯಮಾನವೇನಾದರೂ ನಡೆದರೆ, ಇಂತಹ ತ್ಯಾಜ್ಯದ ತುಣುಕುಗಳು ಇತರ ವಸ್ತುಗಳಿಗೆ ನಿರಂತರವಾಗಿ ಅಪ್ಪಳಿಸುತ್ತಾ, ಸಂವಹನಕ್ಕೆ ಅಡಚಣೆ ಉಂಟುಮಾಡಿ, ಬಾಹ್ಯಾಕಾಶದ ಕೆಲ ಪ್ರದೇಶಗಳಲ್ಲಿ ಬಾಹ್ಯಾಕಾಶ ನೌಕೆಗಳು ಸಂಚರಿಸದಂತೆ ಮಾಡಿಬಿಡಬಹುದು.
ಸಹಕಾರ ಮತ್ತು ಸಂಘರ್ಷ: ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಯ ಪರಿಣಾಮಗಳು
ಇದನ್ನು ನೀವು ಬಾಹ್ಯಾಕಾಶದಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಎಂದು ಊಹಿಸಿಕೊಳ್ಳಬಹುದು. ಒಂದು ವೇಳೆ ಅತ್ಯಂತ ಹೆಚ್ಚು ಬಾಹ್ಯಾಕಾಶ ತ್ಯಾಜ್ಯಗಳು ಡಿಕ್ಕಿ ಹೊಡೆಯುತ್ತಾ, ವಸ್ತುಗಳನ್ನು ಒಡೆಯುತ್ತಾ ಹೋದರೆ, ಅದು ರಸ್ತೆ ತಡೆಯಂತಹ ಪರಿಸ್ಥಿತಿ ನಿರ್ಮಾಣವಾಗಿ, ಉಪಗ್ರಹಗಳು ಮತ್ತು ಬಾಹ್ಯಾಕಾಶ ನೌಕೆಗಳು ಅದನ್ನು ದಾಟಿ ಮುಂದಕ್ಕೆ ಸಾಗಲು ಸಾಧ್ಯವಿಲ್ಲದಂತಾದೀತು. ಅತ್ಯಂತ ಕೆಟ್ಟ ಸನ್ನಿವೇಶದಲ್ಲಿ, ನಾವು ಭೂಮಿಗೇ ಸೀಮಿತರಾಗಿ, ನಮ್ಮ ಗ್ರಹದಿಂದ ಆಚೆಗೆ ಪ್ರಯಾಣ ಬೆಳೆಸಲು ಸುರಕ್ಷಿತವಾದ ಮಾರ್ಗವೇ ಇಲ್ಲವೆನ್ನುವಂತೆ ಆಗಬಹುದು. ಬಾಹ್ಯಾಕಾಶ ತ್ಯಾಜ್ಯದ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ, ಪ್ರಪಂಚದಾದ್ಯಂತ ಬಾಹ್ಯಾಕಾಶ ಸಂಸ್ಥೆಗಳು ಬಾಹ್ಯಾಕಾಶ ತ್ಯಾಜ್ಯವನ್ನು ಸಂಗ್ರಹಿಸಿ, ಅವುಗಳನ್ನು ಜಾಗರೂಕವಾಗಿ ಭೂಮಿಯ ವಾತಾವರಣದೆಡೆಗೆ ತಳ್ಳುವಂತೆ ಮಾಡುವ ವಿಧಾನಗಳನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿವೆ.
ಭೂಮಿಯ ವಾತಾವರಣವನ್ನು ಪ್ರವೇಶಿಸಿದರೆ, ಇಂತಹ ತ್ಯಾಜ್ಯಗಳು ಸುರಕ್ಷಿತವಾಗಿ ಉರಿದು ಬೂದಿಯಾಗುತ್ತವೆ. ನಿಯಂತ್ರಿತವಾಗಿ ಅವುಗಳನ್ನು ಭೂಮಿಯ ವಾತಾವರಣಕ್ಕೆ ತಂದರೂ, ಇಂತಹ ಬಿಡಿಭಾಗಗಳಿಂದ ಜನರಿಗೆ, ಪ್ರಾಣಿಗಳಿಗೆ, ಸಸ್ಯಗಳಿಗೆ ಮತ್ತು ನೆಲದಲ್ಲಿರುವ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗುವ ಸಣ್ಣ ಅಪಾಯ ಇದ್ದೇ ಇರುತ್ತದೆ. ಬಾಹ್ಯಾಕಾಶ ತ್ಯಾಜ್ಯದ ಸಮಸ್ಯೆಯನ್ನು ನಿವಾರಿಸಲು ಇರುವ ಒಂದು ವಿಧಾನವೆಂದರೆ, ಉಪಗ್ರಹಗಳನ್ನು ಹೆಚ್ಚು ಸುಸ್ಥಿರ ವಿಧಾನದಲ್ಲಿ ನಿರ್ಮಿಸುವುದು. ಅಂದರೆ, ಅವುಗಳು ವಾತಾವರಣದ ಮೇಲೆ ಹೆಚ್ಚಿನ ಪ್ರಭಾವ ಬೀರದಂತೆ, ಮತ್ತು ಅವುಗಳನ್ನು ಮರುಬಳಕೆ ಮಾಡುವಂತೆ ಅಥವಾ ಸುರಕ್ಷಿತವಾಗಿ ತ್ಯಜಿಸುವಂತೆ ಮಾಡುವುದು ಒಂದು ಪ್ರಸ್ತಾಪಿತ ಯೋಜನೆಯಾಗಿದೆ.
ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದ ಸಂಶೋಧಕರು ಮತ್ತು ಸುಮಿತೊಮೊ ಫಾರೆಸ್ಟ್ರಿ ಎಂಬ ಸಂಸ್ಥೆ ತಮ್ಮ ಲಿಂಗೋ ಸ್ಯಾಟ್ ಎಂಬ ಮರದಿಂದ ನಿರ್ಮಿಸಿರುವ ಉಪಗ್ರಹದ ಮೂಲಕ ಈ ಆಲೋಚನೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿವೆ. ಈ ಉಪಗ್ರಹಕ್ಕೆ ಲ್ಯಾಟಿನ್ ಭಾಷೆಯಲ್ಲಿ ಮರ ಎಂಬ ಅರ್ಥವಿರುವ ಹೆಸರಿಡಲಾಗಿದೆ. ಲಿಂಗೋಸ್ಯಾಟ್ ಉಪಗ್ರಹ ಈಗ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದು (ಐಎಸ್ಎಸ್), ಸದ್ಯದಲ್ಲೇ ಪರೀಕ್ಷೆಗಾಗಿ ಕಕ್ಷೆಗೆ ಪ್ರಯೋಗಿಸಲ್ಪಡಲಿದೆ. ಈ ಉಪಗ್ರಹದಲ್ಲಿ ಇರುವ ಉಪಕರಣಗಳು, ಮರದ ಉಪಗ್ರಹ ಹೇಗೆ ಬಾಹ್ಯಾಕಾಶದ ವಿಪರೀತ ಪರಿಸ್ಥಿತಿಯನ್ನು ತಾಳಬಲ್ಲದು ಎಂದು ಪರಿಶೀಲಿಸಲಿವೆ. ಈ ಪ್ರಯೋಗ, ಸಂಶೋಧಕರಿಗೆ ಮರದ ಉಪಗ್ರಹದಂತಹ ವಸ್ತುಗಳು ಹೇಗೆ ಬಾಹ್ಯಾಕಾಶದ ಕಠಿಣ ವಾತಾವರಣದಲ್ಲಿ ಕಾರ್ಯಾಚರಿಸಲಿವೆ ಎಂಬ ಕುರಿತು ಮಾಹಿತಿ ನೀಡಲಿದೆ.
ಐಎಫ್ಎಲ್ ಸೈನ್ಸ್ ವರದಿಯ ಪ್ರಕಾರ, ಕ್ಯೋಟೋ ವಿಶ್ವವಿದ್ಯಾಲಯದ ಅರಣ್ಯ ವಿಜ್ಞಾನ ಉಪನ್ಯಾಸಕರಾದ ಕೋಜಿ ಮುರಾಟಾ ಅವರು 1900ರ ಕಾಲಘಟ್ಟದಲ್ಲಿ ವಿಮಾನಗಳನ್ನೂ ಮರವನ್ನು ಬಳಸಿ ನಿರ್ಮಿಸುತ್ತಿದ್ದರಿಂದ, ಮರದಿಂದ ನಿರ್ಮಿಸುವ ಉಪಗ್ರಹಗಳೂ ಕಾರ್ಯಾಚರಿಸಬಲ್ಲವು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬಾಹ್ಯಾಕಾಶದಲ್ಲಿ ನೀರು ಅಥವಾ ಆಮ್ಲಜನಕ ಇಲ್ಲದಿರುವುದರಿಂದ, ಅಲ್ಲಿ ಮರ ಹೆಚ್ಚು ಬಾಳಿಕೆ ಬರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಇಂತಹ ಸನ್ನಿವೇಶ ಮರವನ್ನು ಕೊಳೆಯುವುದರಿಂದ ಮತ್ತು ನಶಿಸಿಹೋಗುವುದರಿಂದ ರಕ್ಷಿಸಿ, ಬಾಹ್ಯಾಕಾಶದ ವಾತಾವರಣದಲ್ಲಿ ದೀರ್ಘಕಾಲ ಬಾಳಿಕೆ ಬರುವಂತೆ ಮಾಡುತ್ತದೆ.
ಹಿಂದಿನ ಪರೀಕ್ಷೆಗಳ ಸಂದರ್ಭದಲ್ಲಿ, ಮರದ ತುಂಡುಗಳನ್ನು ಐಎಸ್ಎಸ್‌ನಲ್ಲಿ ಹತ್ತು ತಿಂಗಳುಗಳ ಕಾಲ ಬಾಹ್ಯಾಕಾಶ ಸನ್ನಿವೇಶಕ್ಕೆ ತೆರೆದಿಡಲಾಯಿತು. ಈ ಪರೀಕ್ಷೆಗಳ ಫಲಿತಾಂಶಗಳು ಆಶಾದಾಯಕವಾಗಿವೆ. ಈ ಮರದ ವಸ್ತುಗಳು ಅತ್ಯಂತ ಕಡಿಮೆ ಹಾನಿಗೊಳಗಾಗಿದ್ದು, ಬಾಹ್ಯಾಕಾಶದಲ್ಲಿ ಮರ ದೀರ್ಘಕಾಲ ಉಳಿಯಬಹುದು ಎಂಬ ನಂಬಿಕೆ ಮೂಡಲು ಕಾರಣವಾಗಿದೆ. ಮರದ ಉಪಗ್ರಹಗಳನ್ನು ಬಳಸುವುದರಿಂದ ಲಭಿಸುವ ಅತಿದೊಡ್ಡ ಪ್ರಯೋಜನವೆಂದರೆ, ಅವುಗಳ ಕಾರ್ಯಾಚರಣಾ ಅವಧಿ ಮುಕ್ತಾಯಗೊಂಡ ಬಳಿಕ, ಅವುಗಳ ಭೂಮಿಯ ವಾತಾವರಣವನ್ನು ಮರಳಿ ಪ್ರವೇಶಿಸುತ್ತಿದ್ದಂತೆ ಯಾವುದೇ ತ್ಯಾಜ್ಯವೂ ಉಳಿಯದಂತೆ ಸಂಪೂರ್ಣವಾಗಿ ದಹಿಸಿ ಹೋಗುತ್ತವೆ.
ಏರ್ ಇಂಡಿಯಾದಿಂದ 5,000 ಕೋಟಿಯ ಖರೀದಿ: ರತನ್ ಟಾಟಾ ವೈಮಾನಿಕ ಕನಸಿನತ್ತ ಹೆಜ್ಜೆಯೇ?
ಇತರ ಲೋಹಗಳ ಉಪಗ್ರಹಗಳಂತೆ, ಮರದ ಉಪಗ್ರಹಗಳು ನಮ್ಮ ವಾತಾವರಣವನ್ನು ಪ್ರವೇಶಿಸಿದಾಗ ಮಾಲಿನ್ಯಕಾರಕ ಅಲ್ಯುಮಿನಿಯಮ್ ಆಕ್ಸೈಡ್ ಕಣಗಳನ್ನು ಬಿಡುಗಡೆಗೊಳಿಸುವುದಿಲ್ಲ. ಗಗನಯಾತ್ರಿ ತಕಾವೊ ಡೊಯ್ ಅವರು ಭವಿಷ್ಯದಲ್ಲಿ ಲೋಹದ ಉಪಗ್ರಹಗಳ ಮೇಲೆ ನಿರ್ಬಂಧಗಳು ಬರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಒಂದು ವೇಳೆ, ಮೊದಲ ಮರದ ಉಪಗ್ರಹ ಯೋಜನೆ ಯಶಸ್ವಿಯಾದರೆ, ಈ ಯೋಚನೆಯನ್ನು ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆಯೊಡನೆ ಹಂಚಿಕೊಳ್ಳಲು ಜಪಾನ್ ಸಂಶೋಧಕರು ಯೋಜಿಸುತ್ತಿದ್ದಾರೆ.