* 1 ವರ್ಷ ಮಂಗಳನ ರೀತಿಯ ವಾತಾವರಣದಲ್ಲಿರಬೇಕು
* ಮಂಗಳನಲ್ಲಿ ವಾಸಿಸುವುದಕ್ಕೆ ನಾಸಾ ತರಬೇತಿ: ಅರ್ಜಿ ಆಹ್ವಾನ!
* 4 ಜನ ಅಮೆರಿಕನ್ನರಿಗೆ ಮಾತ್ರ ಅವಕಾಶ
ನವದೆಹಲಿ(ಆ.09): ಬಾಹ್ಯಾಕಾಶ ಪ್ರವಾಸೋದ್ಯಮದ ಭರಾಟೆ ಜೋರಾಗುತ್ತಿರುವ ಬೆನ್ನಲ್ಲೇ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮಂಗಳ ಗ್ರಹದಲ್ಲಿ ವಾಸಿಸುವುದಕ್ಕೆ ಜನರಿಗೆ ತರಬೇತಿ ನೀಡಲು ಮುಂದಾಗಿದೆ. ಭವಿಷ್ಯದಲ್ಲಿ ಮಂಗಳ ಗ್ರಹಕ್ಕೆ ಮನುಷ್ಯ ಹೋಗಿ ಇಳಿದರೆ ಮತ್ತು ಅಲ್ಲೇ ಕೆಲ ಕಾಲ ವಾಸಿಸಬೇಕಾದ ಸಂದರ್ಭ ಬಂದರೆ ಬೇಕಾಗುತ್ತದೆ ಎಂಬ ಕಾರಣಕ್ಕೆ ಭೂಮಿಯ ಮೇಲೇ ಮಂಗಳ ಗ್ರಹದ ವಾತಾವರಣ ಸೃಷ್ಟಿಸಿ, ಅಲ್ಲಿ ಒಂದು ವರ್ಷದ ಕಾಲ ನಾಲ್ಕು ಮಂದಿಗೆ ತರಬೇತಿ ನೀಡಲು ನಾಸಾ ನಿರ್ಧರಿಸಿದೆ.
ಅಮೆರಿಕದ ಹೂಸ್ಟನ್‌ನಲ್ಲಿರುವ ಜಾನ್ಸನ್ ಸ್ಪೇಸ್ ಸೆಂಟರ್‌ನಲ್ಲಿ 1700 ಚದರಡಿ ಜಾಗದಲ್ಲಿ ಮಾರ್ಸ್ ಡ್ಯೂನ್ ಅಲ್ಫಾ ಎಂಬ ತಾಣವನ್ನು ನಾಸಾ ನಿರ್ಮಿಸಿದೆ. ಅಲ್ಲಿ ಮಂಗಳ ಗ್ರಹದಲ್ಲಿನ ವಾತಾವರಣವನ್ನೇ ಕೃತಕವಾಗಿ ನಿರ್ಮಿಸಲಾಗಿದೆ. ಅರ್ಜಿ ಸಲ್ಲಿಸಿ ಆಯ್ಕೆಯಾದ ನಾಲ್ವರನ್ನು ಒಂದು ವರ್ಷದ ಕಾಲ ಈ ಮನೆಯೊಳಗೆ ಇರಿಸಲಾಗುತ್ತದೆ. ಈ ಅವಧಿಯಲ್ಲಿ ಅವರ ದೈಹಿಕ ಹಾಗೂ ಮಾನಸಿಕ ಪರಿಸ್ಥಿತಿ ಹೇಗಿರುತ್ತದೆ, ಅವರ ಪ್ರತಿಕ್ರಿಯೆ ಹೇಗಿರುತ್ತದೆ, ಅಲ್ಲಿ ಬದುಕಲು ಅವರಿಗೆ ಎದುರಾಗುವ ಸವಾಲುಗಳೇನು, ಸೀಮಿತ ಸಂಪನ್ಮೂಲಗಳನ್ನು ಬಳಸಿ ಬದುಕುವುದು ಹೇಗೆ, ಸಂವಹನದಲ್ಲಿ ಆಗುವ ವಿಳಂಬ, ಉಪಕರಣಗಳು ವಿಫಲವಾಗುವುದು, ಪರಿಸರ ಸಂಬಂಧಿ ಒತ್ತಡ ಹೀಗೆ ಪ್ರತಿಯೊಂದು ಅಂಶವನ್ನೂ ಅಧ್ಯಯನಕ್ಕೆ ಒಳಪಡಿಸಲಾಗುತ್ತದೆ. ಜೊತೆಗೆ ಇಲ್ಲಿ ತರಬೇತಿ ಪಡೆಯುವವರು ಸ್ಪೇಸ್‌ವಾಕ್, ವೈಜ್ಞಾನಿಕ ಸಂಶೋಧನೆ, ವರ್ಚುವಲ್ ರಿಯಾಲಿಟಿಯ ಬಳಕೆ, ರೋಬೋಟಿಕ್ ಕಂಟ್ರೋಲ್ ಇತ್ಯಾದಿಗಳನ್ನೂ ಅಭ್ಯಾಸ ಮಾಡಬೇಕಾಗುತ್ತದೆ ಎಂದು ನಾಸಾ ತಿಳಿಸಿದೆ.
undefined
ಮಂಗಳ ಗ್ರಹದಲ್ಲಿ ಮನುಷ್ಯ ವಾಸಿಸುವುದಕ್ಕೆ ಸಿದ್ಧತೆಯ ರೂಪದಲ್ಲಿ ನಾಸಾ ಮೂರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಈಗಿನ ಕಾರ್ಯಕ್ರಮ ಮೊದಲನೆಯದಾಗಿದ್ದು, ಇದಕ್ಕೆ ‘ಸಿಬ್ಬಂದಿಯ ಆರೋಗ್ಯ ಹಾಗೂ ಸಾಧನೆಯ ಪರಿಶೀಲನೆ’ ಎಂದು ಹೆಸರಿಡಲಾಗಿದೆ. ಈ ವರ್ಷದ ಸೆ.1ರಿಂದ ತರಬೇತಿ ಆರಂಭವಾಗಲಿದ್ದು, ಮುಂದಿನ ವರ್ಷದ ನ.30ಕ್ಕೆ ಮುಗಿಯಲಿದೆ.
ನಾಸಾ ಇತ್ತೀಚೆಗಷ್ಟೇ ಮಂಗಳ ಗ್ರಹದಲ್ಲಿ ಪುಟ್ಟನೌಕೆಯನ್ನು ಇಳಿಸುವಲ್ಲಿ ಯಶಸ್ವಿಯಾಗಿದ್ದು, ಆ ನೌಕೆ ಮಂಗಳ ಗ್ರಹದ ಬಗ್ಗೆ ಅಧ್ಯಯನ ನಡೆಸುತ್ತಿದೆ.
ಅರ್ಜಿ ಸಲ್ಲಿಸಲು ಅರ್ಹತೆ ಏನು?
ಅಮೆರಿಕದ ಪ್ರಜೆಯಾಗಿರಬೇಕು. 30-55 ವರ್ಷದೊಳಗಿರಬೇಕು. ಧೂಮಪಾನ ಮಾಡಬಾರದು. ಇಂಗ್ಲಿಷ್ ಚೆನ್ನಾಗಿ ಗೊತ್ತಿರಬೇಕು. ಆರೋಗ್ಯ ಚೆನ್ನಾಗಿರಬೇಕು. ಎಂಜಿನಿಯರಿಂಗ್, ಗಣಿತ, ಜೀವಶಾಸ್ತ್ರ, ಭೌತಶಾಸ್ತ್ರ ಅಥವಾ ಕಂಪ್ಯೂಟರ್ ಸೈನ್ಸ್ ಪದವಿ ಪಡೆದವರಿಗೆ ಆದ್ಯತೆ. ವೈದ್ಯಕೀಯ ಕೋರ್ಸ್, ಮಿಲಿಟರಿ ತರಬೇತಿ ಅಥವಾ ಪೈಲಟ್ ತರಬೇತಿ ಪಡೆದಿದ್ದರೆ ಉತ್ತಮ.