ಇಬ್ಬರು ಗಗನಯಾನಿಗಳು ಬಾಹ್ಯಾಕಾಶಕ್ಕೆ; ರಾಕೆಟ್ ಉಡ್ಡಯನ ವೀಕ್ಷಿಸಲಿದ್ದಾರೆ ಟ್ರಂಪ್

By Kannadaprabha News  |  First Published May 28, 2020, 9:50 AM IST

ಇತಿಹಾಸದತ್ತ ಸ್ಪೇಸ್‌ ಎಕ್ಸ್‌ ಹೆಜ್ಜೆ |  ಇಬ್ಬರು ಗಗನಯಾನಿಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್‌ ಎಕ್ಸ್‌ ರಾಕೆಟ್‌ ಉಡ್ಡಯನ ಯತ್ನ | ನಾಸಾ ಸಹಯೋಗದೊಂದಿಗೆ ಸ್ಪೇಸ್‌ ಎಕ್ಸ್‌ನಿಂದ ಮೊಟ್ಟಮೊದಲ ಮಾನವ ಸಹಿತ ಗಗನಯಾನ


ಬೆಂಗಳೂರು (ಮೇ. 28): ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ನಾಸಾ ಸುಮಾರು ಒಂದು ದಶಕದ ಬಳಿಕ ಅಮೆರಿಕದ ನೆಲದಿಂದ ಇಬ್ಬರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾಗಿದೆ. ಈ ಯೋಜನೆಗಾಗಿ ನಾಸಾ ಎಲಾನ್‌ ಮಸ್ಕ್‌ ನೇತೃತ್ವದ ಸ್ಪೇಸ್‌ ಎಕ್ಸ್‌ ಎಂಬ ಖಾಸಗಿ ಸಂಸ್ಥೆಯ ಜೊತೆ ಕೈಜೋಡಿಸಿದೆ.

ಎಲ್ಲವೂ ಅಂದುಕೊಂಡತೆ ನಡೆದರೆ ಭಾರತೀಯ ಕಾಲಮಾನ ಗುರುವಾರ ಮುಂಜಾವು 2.03ರ ವೇಳೆಗೆ ಸ್ಪೇಸ್‌ ಎಕ್ಸ್‌ ಡೆಮೋ-2 ಮಿಷನ್‌ ಇಬ್ಬರು ಗಗನಯಾತ್ರಿಕರನ್ನು ಹೊತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದೆ.

Latest Videos

undefined

ಎಚ್‌ಎಎಲ್‌ ತೇಜಸ್‌ ವಿಮಾನ ನಂ.18 ಸ್ಕ್ವಾಡ್ರನ್‌ಗೆ ಸೇರ್ಪಡೆ

ಇದೇ ಮೊದಲ ಬಾರಿ ಖಾಸಗಿ ಬಾಹ್ಯಾಕಾಶ ಸಂಸ್ಥೆಯೊಂದು ಮನವಸಹಿತ ಗಗನಯಾನ ಕೈಗೊಂಡಿರುವ ಕಾರಣ ಈ ಯೋಜನೆ ಐತಿಹಾಸಿಕ ಎನಿಸಿಕೊಂಡಿದೆ. ಒಂದು ವೇಳೆ ಪ್ರತಿಕೂಲ ವಾತಾವರಣ ಕಂಡುಬಂದರೆ ಉಡ್ಡಯನವನ್ನು ಮೇ 30 ಮತ್ತು ಮೇ 31ಕ್ಕೆ ಮುಂದೂಡಲು ನಾಸಾ ನಿರ್ಧರಿಸಿದೆ.

ಏನಿದು ಯೋಜನೆ?

ಸ್ಪೇಸ್‌ ಎಕ್ಸ್‌ ಡೆಮೋ-2 ಮಿಷನ್‌ ಎನ್ನುವುದು ನಾಸಾದ ವಾಣಿಜ್ಯಿಕ ಮಾನವ ಸಹಿತ ಗಗನಯಾನ ಯೋಜನೆಯಾಗಿದೆ. ರಾಬರ್ಟ್‌ ಬೆಹೆನ್ಕೆನ್‌ ಹಾಗೂ ಡೌಗ್ಲಾಸ್‌ ಹರ್ಲಿ ಎಂಬಿಬ್ಬರು ಗಗನಯಾತ್ರಿಗಳು ಸ್ಪೇಸ್‌ ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ ನೌಕೆಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಫ್ಲೋರಿಡಾದ ಉಡಾವಣಾ ನೆಲೆಯಿಂದ ಫಾಲ್ಕನ್‌ 9 ರಾಕೆಟ್‌ ಮೂಲಕ ಈ ನೌಕೆ ಉಡಾವಣೆಗೊಳ್ಳಲಿದೆ.

ಕಕ್ಷೆಯನ್ನು ಸೇರಿದ ಬಳಿಕ ನೌಕೆ ಹಂತ ಹಂತವಾಗಿ ತೆರೆದುಕೊಳ್ಳಲಿದ್ದು, ಗಗನಯಾನಿಗಳು ಇರುವ ಕ್ಯಾಪ್ಯೂಲ್‌ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಯಲಿದೆ. ಗಗನ ಯಾತ್ರಿಗಳನ್ನು ಬ್ಯಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಿದ ಬಳಿಕ ಕ್ರ್ಯೂ ಡ್ರ್ಯಾಗನ್‌ ನೌಕೆ ಅಂತರಿಕ್ಷ ಕಕ್ಷೆಯಲ್ಲಿ 110 ದಿನಗಳ ಕಾಲ ಸುತ್ತಲಿದೆ. ಯೋಜನೆ ಪೂರ್ಣಗೊಳ್ಳುತ್ತಿದ್ದಂತೆ ಗಗನಯಾತ್ರಿಕರು ಕ್ರ್ಯೂ ಡ್ರ್ಯಾಗನ್‌ ನೌಕೆಯ ಮೂಲಕ ಭೂಮಿಗೆ ಮರಳಲಿದ್ದಾರೆ.

ಯೋಜನೆಯ ಮಹತ್ವವೇನು?

ನಾಸಾ 2011ರಲ್ಲಿ ಕೊನೆಯ ಬಾರಿ ತನ್ನ ನೌಕೆಯ ಮೂಲಕ ಗಗನಯಾತ್ರಿಕರನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಆ ಬಳಿಕ ನಾಸಾ ರಷ್ಯಾ ನಿರ್ಮಿತ ಕ್ಯಾಪ್ಯುಲ್‌ಗಳ ಮೂಲಕ ತನ್ನ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಡುತ್ತಿದೆ. ಪ್ರತಿ ಬಾರಿ ತನ್ನ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಾಸಾಕ್ಕೆ ಸುಮಾರು 645 ಕೋಟಿ ರು. ನಷ್ಟುಖರ್ಚಾಗುತ್ತಿತ್ತು. ಹೀಗಾಗಿ ಸ್ಪೇಸ್‌ ಎಕ್ಸ್‌ ಕಂಪನಿಯ ಮೂಲಕ ನೌಕೆಯನ್ನು ನಾಸಾ ಅಭಿವೃದ್ಧಿಪಡಿಸಿದೆ. ಸ್ಪೇಸ್‌ ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ ನೌಕೆ ಅಗ್ಗ ಹಾಗೂ ಮರು ಬಳಕೆ ಮಾಡಿಕೊಳ್ಳ ಬಹುದಾಗಿದೆ.

ರಕ್ಷಣೆಗೂ ಇದೆ ಅವಕಾಶ

ಒಂದು ವೇಳೆ ಉಡ್ಡಯನದ ವೇಳೆ ಯಾವುದೇ ಅವಘಡ ಸಂಭವಿಸಿದರೆ ಗಗನಯಾನಿಗಳು, ನೌಕೆಯಿಂದ ಹೊರಬರಲು ಎರಡು ರಕ್ಷಣಾ ಕ್ಯಾಪ್ಯುಲ್‌ಗಳನ್ನೂ ಅಳವಡಿಸಲಾಗಿದೆ.

ವೀಕ್ಷಣೆಗೆ ಅಧ್ಯಕ್ಷ ಟ್ರಂಪ್‌

ಸ್ಪೇಸ್‌ ಎಕ್ಸ್‌ ರಾಕೆಟ್‌ ಉಡ್ಡಯನವನ್ನು ವೀಕ್ಷಿಸಲು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೇಪ್‌ ಕೆನವರೆಲ್‌ಗೆ ತೆರಳಿದ್ದಾರೆ.

click me!