ನಾವಿಕ್ ವ್ಯವಸ್ಥೆ ಗರಿಷ್ಠ ಪ್ರಮಾಣದ ನಿಖರತೆಯನ್ನು ಹೊಂದಿದ್ದು, ಭಾರತದಾದ್ಯಂತ 10 ಮೀಟರ್ ಒಳಗಿನ ನಿಖರತೆ, ಹೊರ ಪ್ರದೇಶದಲ್ಲಿ 20 ಮೀಟರ್ ನಿಖರತೆಯನ್ನು ಹೊಂದಿರಲಿದೆ. ಇಂತಹ ನಿಖರವಾದ ಕಾರ್ಯಾಚರಣಾ ಸಾಮರ್ಥ್ಯ ನ್ಯಾವಿಗೇಶನ್, ಮ್ಯಾಪಿಂಗ್, ಮತ್ತು ಸ್ಥಳ ಆಧಾರಿತ ಸೇವೆಗಳಿಗೆ ಅತ್ಯಂತ ಅವಶ್ಯಕವಾಗಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
undefined
ಬೆಂಗಳೂರು(ನ.09): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾರತದ್ದೇ ಆದ ಪ್ರಾದೇಶಿಕ ಸಂಚರಣಾ (ನ್ಯಾವಿಗೇಶನ್) ವ್ಯವಸ್ಥೆಯಾದ ನಾವಿಕ್ (NaVIC) ಅನ್ನು ಸದ್ಯದಲ್ಲೇ ನಾಗರಿಕರ ಬಳಕೆಗೆ ಮುಕ್ತವಾಗಿಸಲು ಸಿದ್ಧತೆ ನಡೆಸುತ್ತಿದೆ. ಇಲ್ಲಿಯ ತನಕ, ಈ ನಿಖರ ಸ್ಥಾನಿಕ ವ್ಯವಸ್ಥೆಯನ್ನು (ಪೊಸಿಷನಿಂಗ್ ಸಿಸ್ಟಮ್) ಮುಖ್ಯವಾದ, ಕಾರ್ಯತಂತ್ರದ ಉದ್ದೇಶಗಳಾದ ರಕ್ಷಣೆ ಮತ್ತು ಪ್ರಮುಖ ಸರ್ಕಾರಿ ಕಾರ್ಯಾಚರಣೆಗಳಲ್ಲಿ ಮಾತ್ರವೇ ಬಳಸಲಾಗುತ್ತಿತ್ತು. ಭಾರತದ ಬಾಹ್ಯಾಕಾಶ ನಿಯಂತ್ರಣ ಸಂಸ್ಥೆಯಾದ ಇನ್‌ಸ್ಪೇಸ್ ಮುಖ್ಯಸ್ಥರಾದ ಪವನ್ ಗೋಯೆಂಕಾ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದು, ನಾವಿಕ್ ಸದ್ಯದಲ್ಲೇ ನಾಗರಿಕರಿಗೆ ನಿಖರ ಸಂಚರಣಾ ಸೇವೆಯನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.
ನಾವಿಕ್ ಯೋಜನೆಯ ಹಿನ್ನೆಲೆ
ನ್ಯಾವಿಗೇಶನ್ ವಿದ್ ಇಂಡಿಯನ್ ಕಾನ್ಸ್ಟಲ್ಲೇಶನ್ ಎಂಬುದರ ಹೃಸ್ವರೂಪವಾಗಿರುವ ನಾವಿಕ್ ಅನ್ನು ಈ ಹಿಂದೆ ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಐಆರ್‌ಎನ್ಎಸ್ಎಸ್) ಎಂದು ಕರೆಯಲಾಗುತ್ತಿತ್ತು. ಇದೊಂದು ಸ್ವತಂತ್ರ ಉಪಗ್ರಹ ಆಧಾರಿತ ಸಂಚರಣಾ ವ್ಯವಸ್ಥೆಯಾಗಿದ್ದು, ಭಾರತ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನಿಖರ ಸ್ಥಾನೀಕರಣ (ಪೊಸಿಷನಿಂಗ್) ಮತ್ತು ನೈಜ ಸಮಯದ ಸಂಚಾರ ಮಾಹಿತಿಗಳನ್ನು ಒದಗಿಸುವ ಸಲುವಾಗಿ ಇಸ್ರೋ ಅಭಿವೃದ್ಧಿ ಪಡಿಸಿದೆ.
ಮರದ ಉಪಗ್ರಹಗಳು: ಬಾಹ್ಯಾಕಾಶ ಅನ್ವೇಷಣೆಯ ಭವಿಷ್ಯ!
ನಾವಿಕ್ ವ್ಯವಸ್ಥೆ ಒಟ್ಟು ಏಳು ಉಪಗ್ರಹಗಳ ಗುಂಪು ಮತ್ತು ಭೂ ಕೇಂದ್ರಗಳ ಜಾಲವನ್ನು ಒಳಗೊಂಡಿದ್ದು, ಅವುಗಳು ದಿನದ 24 ಗಂಟೆಯೂ ನಿರಂತರವಾಗಿ ಕಾರ್ಯ ನಿರ್ವಹಿಸುತ್ತವೆ. ನಾವಿಕ್ ವ್ಯವಸ್ಥೆ ಭಾರತದಾದ್ಯಂತ ನಿಖರ ಸ್ಥಳಾಧಾರಿತ ನ್ಯಾವಿಗೇಶನ್ ಸೇವೆ ಒದಗಿಸಲಿದ್ದು, ಭಾರತದ ಗಡಿಗಳಾಚೆಗೂ 1,500 ಕಿಲೋಮೀಟರ್‌ಗಳ ತನಕ ಸೇವೆ ಒದಗಿಸಲಿದೆ. ನಾವಿಕ್ ವ್ಯವಸ್ಥೆ ಒಟ್ಟು ಎರಡು ರೀತಿಯ ಸೇವೆಗಳನ್ನು ಬಳಕೆದಾರರಿಗೆ ಒದಗಿಸಲಿದೆ. ಅವೆಂದರೆ: ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುವ ಸ್ಟ್ಯಾಂಡರ್ಡ್ ಪೊಸಿಷನ್ ಸರ್ವಿಸ್ (ಎಸ್‌ಪಿಎಸ್) ಹಾಗೂ ರಕ್ಷಣೆಯಂತಹ ಕಾರ್ಯತಂತ್ರದ ಕಾರ್ಯಗಳಿಗೆ ಸೀಮಿತವಾಗಿರುವ ರಿಸ್ಟ್ರಿಕ್ಟೆಡ್ ಸರ್ವಿಸ್ (ನಿರ್ಬಂಧಿತ ಸೇವೆ - ಆರ್‌ಎಸ್).
ಸ್ಟ್ಯಾಂಡರ್ಡ್ ಪೊಸಿಷನ್ ಸರ್ವಿಸ್ (ಎಸ್‌ಪಿಎಸ್): ಇದು ನಾವಿಕ್ ವ್ಯವಸ್ಥೆ ಒದಗಿಸುವ ಮುಕ್ತ ಸಂಚರಣಾ ಸೇವೆಯಾಗಿದ್ದು, ಎಲ್ಲ ನಾಗರಿಕ ಬಳಕೆದಾರರು ಇದನ್ನು ಬಳಸಬಹುದು. ಇದು ದೈನಂದಿನ ಬಳಕೆಗೆ ನ್ಯಾವಿಗೇಶನ್ ಮತ್ತು ಮ್ಯಾಪಿಂಗ್‌ಗಳಿಗೆ ಅತ್ಯಂತ ನಿಖರ ಮತ್ತು ನಂಬಿಕಾರ್ಹ ಲೊಕೇಶನ್ ಸೇವೆಗಳನ್ನು ಒದಗಿಸುತ್ತದೆ.
ರಿಸ್ಟ್ರಿಕ್ಟೆಡ್ ಸರ್ವಿಸ್ (ಆರ್‌ಎಸ್): ಆರ್‌ಎಸ್ ಎನ್ನುವುದು ನಾವಿಕ್ ಒದಗಿಸುವ ಎನ್ಕ್ರಿಪ್ಟ್ ಮಾಡಲಾಗಿರುವ ನ್ಯಾವಿಗೇಶನ್ ಸೇವೆಯಾಗಿದ್ದು, ಇದನ್ನು ಅಧಿಕೃತ ಬಳಕೆದಾರರಾದ ಸೇನಾ ಪಡೆಗಳು, ಸರ್ಕಾರಿ ಸಂಸ್ಥೆಗಳು ಮಾತ್ರವೇ ತಮ್ಮ ಕಾರ್ಯತಂತ್ರದ, ಸೂಕ್ಷ್ಮ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಬಹುದಾಗಿದೆ.
ನಾಗರಿಕ ಬಳಕೆಯ ವ್ಯಾಪ್ತಿ ವಿಸ್ತರಣೆ
ನಾವಿಕ್ ಸೇವೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗಿಸುವ ಸಲುವಾಗಿ, ಇಸ್ರೋ ಎಲ್ ಬ್ಯಾಂಡ್ ತಂತ್ರಜ್ಞಾನವನ್ನು ಒಳಗೊಂಡಿರುವ (1575.42 ಮೆಗಾ ಹರ್ಟ್ಸ್) ನೂತನ ಉಪಗ್ರಹವೊಂದನ್ನು ಉಡಾವಣೆಗೊಳಿಸುವ ಉದ್ದೇಶ ಹೊಂದಿದೆ. ಎಲ್1 ಬ್ಯಾಂಡ್ ಸಂಕೇತ ಸಾಮರ್ಥ್ಯವನ್ನು ವೃದ್ಧಿಸಲು ನೆರವಾಗಲಿದ್ದು, ಜಗತ್ತಿನಾದ್ಯಂತ ಜಿಪಿಎಸ್ ಸಕ್ರಿಯವಾಗಿರುವ ಉಪಕರಣಗಳಲ್ಲಿ ಬಳಸಬಹುದು. ಈ ಮೇಲ್ದರ್ಜೆಗೇರಿಸುವ ಕ್ರಮಗಳ ಪರಿಣಾಮವಾಗಿ, ನಾವಿಕ್ ಸಂಕೇತಗಳು ಸೂಕ್ತ ಚಿಪ್‌ಸೆಟ್‌ಗಳನ್ನು ಹೊಂದಿರುವ ಸಾರ್ವಜನಿಕರ ದೂರವಾಣಿಗಳಲ್ಲೂ ಕಾರ್ಯನಿರ್ವಹಿಸಲಿವೆ. ಈ ಪ್ರಯತ್ನ ನಾವಿಕ್ ಹೆಚ್ಚು ಜನರನ್ನು ತಲುಪುವಂತೆ ಮಾಡುವ, ದೈನಂದಿನ ಜೀವನದಲ್ಲಿ ಅದರ ಬಳಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ನ್ಯಾವಿಗೇಶನ್ ಮತ್ತು ಪೊಸಿಷನಿಂಗ್ (ಸಂಚರಣೆ ಮತ್ತು ಸ್ಥಾನೀಕರಣ) ಮೇಲಿನ ಪರಿಣಾಮಗಳು
1. ಹೆಚ್ಚಿನ ನಿಖರತೆ: ನಾವಿಕ್ ವ್ಯವಸ್ಥೆ ಗರಿಷ್ಠ ಪ್ರಮಾಣದ ನಿಖರತೆಯನ್ನು ಹೊಂದಿದ್ದು, ಭಾರತದಾದ್ಯಂತ 10 ಮೀಟರ್ ಒಳಗಿನ ನಿಖರತೆ, ಹೊರ ಪ್ರದೇಶದಲ್ಲಿ 20 ಮೀಟರ್ ನಿಖರತೆಯನ್ನು ಹೊಂದಿರಲಿದೆ. ಇಂತಹ ನಿಖರವಾದ ಕಾರ್ಯಾಚರಣಾ ಸಾಮರ್ಥ್ಯ ನ್ಯಾವಿಗೇಶನ್, ಮ್ಯಾಪಿಂಗ್, ಮತ್ತು ಸ್ಥಳ ಆಧಾರಿತ ಸೇವೆಗಳಿಗೆ ಅತ್ಯಂತ ಅವಶ್ಯಕವಾಗಿದೆ.
2. ಹೆಚ್ಚಿನ ನಂಬಿಕಾರ್ಹತೆ: ಸಾರ್ವಜನಿಕರ ಬಳಕೆಗೆ ಮುಕ್ತವಾಗಿಸುವ ಮೂಲಕ, ಇಸ್ರೋ ನಾವಿಕ್ ಅನ್ನು ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಬೈದೌನಂತಹ ಜಾಗತಿಕ ಸಂಚರಣಾ ವ್ಯವಸ್ಥೆಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಒದಗಿಸುತ್ತಿದೆ. ಇದು ವಿದೇಶೀ ವ್ಯವಸ್ಥೆಗಳ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆಗೊಳಿಸಿ, ಭಾರತದ ಸಂಚರಣಾ ಸಾಮರ್ಥ್ಯವನ್ನು ವೃದ್ಧಿಸುತ್ತದೆ.
3. ನೂತನ ತಂತ್ರಜ್ಞಾನಗಳಿಗೆ ಉತ್ತೇಜನ: ನಾವಿಕ್ ವ್ಯವಸ್ಥೆಯನ್ನು ನಾಗರಿಕರ ಉಪಕರಣಗಳಲ್ಲಿ ಬಳಸಲು ಆರಂಭಿಸುವುದರಿಂದ, ಸ್ವಯಂಚಾಲಿತ ವಾಹನಗಳು, ಡ್ರೋನ್‌ಗಳು, ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥೆಗಳಲ್ಲಿ ಹೆಚ್ಚಿನ ಸಾಧನೆ ನಡೆಸಲು ನೆರವಾಗಲಿದೆ. ಈ ತಂತ್ರಜ್ಞಾನಗಳು ಸಮರ್ಪಕವಾಗಿ ಕಾರ್ಯಾಚರಿಸಲು ನಿಖರ ಮತ್ತು ನಂಬಿಕಾರ್ಹ ನ್ಯಾವಿಗೇಶನ್ ವ್ಯವಸ್ಥೆಯ ಅಗತ್ಯವಿದೆ.
ಆರ್ಥಿಕ ಮತ್ತು ಕಾರ್ಯತಂತ್ರದ ಮಹತ್ವ
1. ಬಾಹ್ಯಾಕಾಶ ವಲಯದಲ್ಲಿ ಹೊಸ ವಿಸ್ತರಣೆ: ಇಸ್ರೋ ಭಾರತದ ಬಾಹ್ಯಾಕಾಶ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವತ್ತ ಗಮನ ಹೊಂದಿದೆ. 2025ರ ವೇಳೆಗೆ 6 ಜಿಎಸ್ಎಲ್‌ವಿ ಯೋಜನೆಗಳು ಸೇರಿದಂತೆ, 12 ಉಪಗ್ರಹಗಳನ್ನು ಉಡಾವಣೆಗೊಳಿಸುವ ಗುರಿಯನ್ನು ಇಸ್ರೋ ಹಾಕಿಕೊಂಡಿದೆ. ಉಡಾವಣಾ ಚಟುವಟಿಕೆಗಳಲ್ಲಿನ ಈ ಹೆಚ್ಚಳ, ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಗೆ ಅವಕಾಶಗಳನ್ನು ಸೃಷ್ಟಿಸಿ, ಉಪಗ್ರಹ ತಂತ್ರಜ್ಞಾನ ಮತ್ತು ಸಂಬಂಧಿತ ಸೇವೆಗಳಲ್ಲಿ ನಾವೀನ್ಯತೆಗಳನ್ನು ತರಲು ನೆರವಾಗಲಿದೆ.
ನಾವಿಕ್ ವ್ಯವಸ್ಥೆ ಅತ್ಯಂತ ನಿಖರವಾದ ಮತ್ತು ಸ್ವಾವಲಂಬಿ ಸಂಚರಣಾ ಸೇವೆಯನ್ನು ಒದಗಿಸುವ ಮೂಲಕ ಇಸ್ರೋದ ಯೋಜನೆಗೆ ನೆರವಾಗಲಿದೆ. ಇದು ಉಪಗ್ರಹ ಯೋಜನೆಗಳ ನಿಖರತೆಯನ್ನು ಹೆಚ್ಚಿಸಿ, ನಂಬಿಕಾರ್ಹತೆಯನ್ನು ವೃದ್ಧಿಸಲಿದೆ. ನಂಬಿಕಾರ್ಹ ಲೊಕೇಶನ್ ಮಾಹಿತಿಗಳನ್ನು ಬಳಸುವ ನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಖಾಸಗಿ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುವುದರಿಂದ, ನಾವಿಕ್ ವಿದೇಶೀ ವ್ಯವಸ್ಥೆಗಳ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆಗೊಳಿಸಿ, ಉಪಗ್ರಹ ನ್ಯಾವಿಗೇಶನ್ ಮತ್ತು ಸಂಬಂಧಿತ ಉದ್ಯಮಕ್ಕೆ ಸ್ವಾವಲಂಬಿ ವಾತಾವರಣ ಕಲ್ಪಿಸಲು ಉತ್ತೇಜಿಸುತ್ತದೆ.
2. ಬಾಹ್ಯಾಕಾಶ ಕಾನೂನುಗಳ ಅಭಿವೃದ್ಧಿ: ಬೆಳೆಯುತ್ತಿರುವ ಬಾಹ್ಯಾಕಾಶ ಉದ್ಯಮಕ್ಕೆ ಬೆಂಬಲ ಒದಗಿಸಲು ಇಸ್ರೋ ಬಾಹ್ಯಾಕಾಶ ಕಾನೂನು ಮತ್ತು ನೀತಿಗಳನ್ನು ಅಭಿವೃದ್ಧಿ ಪಡಿಸಲು ಕಾರ್ಯಾಚರಿಸುತ್ತಿದೆ. ಈ ಕಾನೂನುಗಳು ಬಾಹ್ಯಾಕಾಶ ಚಟುವಟಿಕೆಗಳಿಗೆ ಮಾರ್ಗಸೂಚಿಗಳನ್ನು ಒದಗಿಸಿ, ಬಾಹ್ಯಾಕಾಶ ಚಟುವಟಿಕೆಗಳು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಇರುತ್ತವೆ ಎಂದು ಖಾತ್ರಿಪಡಿಸಿ, ಆ ಮೂಲಕ ಬಾಹ್ಯಾಕಾಶ ವಲಯದಲ್ಲಿ ಹೂಡಿಕೆ ಮತ್ತು ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲಿವೆ.
3. ಸ್ವತಂತ್ರ ಸಾಮರ್ಥ್ಯ: ನಾವಿಕ್ ವ್ಯವಸ್ಥೆಯ ವ್ಯಾಪ್ತಿ ಮತ್ತು ಬಳಕೆಯನ್ನು ಹೆಚ್ಚಿಸುವುದರಿಂದ, ಭಾರತಕ್ಕೆ ತನ್ನದೇ ಆದ ನ್ಯಾವಿಗೇಶನ್ ಮತ್ತು ಪೊಸಿಷನಿಂಗ್ ಸೇವೆಗಳ ಮೇಲೆ ಹೆಚ್ಚಿನ ನಿಯಂತ್ರಣ ಲಭಿಸುತ್ತದೆ. ಈ ಸ್ವಾತಂತ್ರ್ಯ ದೇಶದ ಭದ್ರತೆ, ರಕ್ಷಣೆಗೆ ಮುಖ್ಯವಾಗಿದ್ದು, ಭೌಗೋಳಿಕ ರಾಜಕಾರಣದ ಅಂಶಗಳಿಂದ ಯಾವತ್ತು ಬೇಕಾದರೂ ಬದಲಾಗಬಲ್ಲ ವಿದೇಶೀ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ.
ಸಹಕಾರ ಮತ್ತು ಸಂಘರ್ಷ: ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಯ ಪರಿಣಾಮಗಳು
ಜಾಗತಿಕ ಪರಿಣಾಮಗಳು
1. ಜಾಗತಿಕ ಸಂಚರಣೆಗೆ ಬೆಂಬಲ: ಇತರ ಜಾಗತಿಕ ಸಂಚರಣಾ ಉಪಗ್ರಹ ವ್ಯವಸ್ಥೆಗಳಿಗೆ ನಾವಿಕ್ ವ್ಯವಸ್ಥೆ ಕಾರ್ಯಾಚರಿಸುವಂತೆ ಮಾಡಿದರೆ, ಇಸ್ರೋಗೆ ಪ್ರಪಂಚದಾದ್ಯಂತ ಸಂಚರಣಾ ಜಾಲ ವಿಸ್ತರಿಸಲು ಸಾಧ್ಯವಾಗಲಿದೆ. ಈ ಹೊಂದಾಣಿಕೆಯಿಂದಾಗಿ, ಜಗತ್ತಿನಾದ್ಯಂತ ಬಳಕೆದಾರರು ತಮ್ಮ ನ್ಯಾವಿಗೇಶನ್ ಸೇವೆಗಳಲ್ಲಿ ಹೆಚ್ಚು ನಿಖರತೆ ಮತ್ತು ನಂಬಿಕಾರ್ಹತೆ ಹೊಂದಲು ಸಾಧ್ಯವಾಗುತ್ತದೆ.
2. ಜಾಗತಿಕವಾಗಿ ಜಂಟಿ ಕಾರ್ಯಾಚರಣೆಗಳು: ಇಸ್ರೋದ ಪ್ರಯತ್ನಗಳ ಪರಿಣಾಮವಾಗಿ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಂಚರಣಾ ಕ್ಷೇತ್ರಗಳಲ್ಲಿ ಇತರ ದೇಶಗಳೊಡನೆ ಸಹಯೋಗ ಹೊಂದಲು ಸಾಧ್ಯವಾಗಲಿದೆ. ತನ್ನ ಪ್ರಗತಿಗಳನ್ನು ಹಂಚಿಕೊಳ್ಳುವ ಮೂಲಕ, ಭಾರತ ಹೆಚ್ಚು ಸಮರ್ಥವಾದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಸ್ಥಾಪಿಸಿ, ಬಾಹ್ಯಾಕಾಶ ಅನ್ವೇಷಣೆ ಮತ್ತು ತಂತ್ರಜ್ಞಾನದಲ್ಲಿ ಜಂಟಿ ಕಾರ್ಯಾಚರಣೆಗಳಿಗೆ ಪ್ರೋತ್ಸಾಹ ನೀಡಬಹುದು.
ನಾವಿಕ್ ವ್ಯವಸ್ಥೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಸಲು ಇಸ್ರೋ ತೀರ್ಮಾನಿಸಿರುವುದು ಭಾರತದ ಬಾಹ್ಯಾಕಾಶ ಯಾತ್ರೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಕ್ರಮ ವಿಶಾಲ ವ್ಯಾಪ್ತಿಯ ಪರಿಣಾಮಗಳನ್ನು ಹೊಂದಿದ್ದು, ತಂತ್ರಜ್ಞಾನ, ಆರ್ಥಿಕತೆ, ರಾಷ್ಟ್ರೀಯ ಭದ್ರತೆ, ಹಾಗೂ ಒಟ್ಟಾರೆಯಾಗಿ ಸಮಾಜದ ಮೇಲೆ ಪ್ರಭಾವ ಬೀರಲಿದೆ. ಇಸ್ರೋ ಸಂಚರಣಾ ಸೇವೆಗಳ ನಿಖರತೆ, ನಂಬಿಕಾರ್ಹತೆ ಮತ್ತು ಲಭ್ಯತೆಗಳನ್ನು ಉತ್ತಮಪಡಿಸುವ ಮೂಲಕ, ನಾವೀನ್ಯತೆಗೆ ಆದ್ಯತೆ ನೀಡಿ, ಜಾಗತಿಕ ಸಂಚರಣೆಗೆ ನೆರವಾಗುವ ಹೊಸ ತಂತ್ರಜ್ಞಾನಗಳಿಗೆ ಬೆಂಬಲ ಒದಗಿಸಲಿದೆ. ಇಸ್ರೋದ ಈ ಪ್ರಯತ್ನ ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ಭಾರತದ ಪಾತ್ರವನ್ನು ಬಲಪಡಿಸುವುದು ಮಾತ್ರವಲ್ಲದೆ, ಭಾರತೀಯರಿಗೆ ಮತ್ತು ಜಗತ್ತಿನ ಜನರಿಗೆ ನೈಜ ಪ್ರಯೋಜನಗಳನ್ನು ಒದಗಿಸಲಿದೆ.