ಬಾಹ್ಯಾಕಾಶದಲ್ಲಿ 15ದಿನ ತಂಗಲು ಭಾರತದಿಂದ ಅಂತರಿಕ್ಷ ಕೇಂದ್ರ

Published : Jun 14, 2019, 08:10 AM IST
ಬಾಹ್ಯಾಕಾಶದಲ್ಲಿ 15ದಿನ ತಂಗಲು ಭಾರತದಿಂದ ಅಂತರಿಕ್ಷ ಕೇಂದ್ರ

ಸಾರಾಂಶ

ಅಂತರಿಕ್ಷದಲ್ಲಿ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದುವತ್ತ ಭಾರತ ಹೆಜ್ಜೆ ಇಡುತ್ತಿದೆ. ಈ ಮೂಲಕ ಹೊಸ ಮೈಲುಗಲ್ಲು ಸೃಷ್ಟಿಸಲು ಇಸ್ರೋ ಮುಂದಾಗಿದೆ.

ನವದೆಹಲಿ (ಜೂ.14): ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದಾದ ಮೇಲೊಂದರಂತೆ ಮೈಲುಗಲ್ಲುಗಳನ್ನು ಸ್ಥಾಪಿಸುವ ಮೂಲಕ ವಿಶ್ವದ ಗಮನವನ್ನು ತನ್ನೆಡೆಗೆ ಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತೊಂದು ಇತಿಹಾಸ ಬರೆಯಲು ಹೊರಟಿದೆ. ಅಂತರಿಕ್ಷದಲ್ಲಿ ಭಾರತಕ್ಕಾಗಿ ಬಾಹ್ಯಾಕಾಶ ನಿಲ್ದಾಣವೊಂದನ್ನು ಸ್ಥಾಪಿಸುವ ಗುರಿ ಹಾಕಿಕೊಂಡಿದೆ. ಚಂದ್ರಯಾನ- 2 ಯೋಜನೆಯ ದಿನಾಂಕ ಪ್ರಕಟಿಸಿದ ಮರುದಿನವೇ ಈ ಸುದ್ದಿ ಹೊರಬಿದ್ದಿದೆ.

ಯಾವುದೇ ದೇಶದ ಸಹಯೋಗವಿಲ್ಲದೆ ಏಕಾಂಗಿಯಾಗಿ 20 ಟನ್‌ ತೂಕದ ಈ ಬಾಹ್ಯಾಕಾಶ ನಿಲ್ದಾಣವನ್ನು 2030ರಲ್ಲಿ ಉಡಾವಣೆ ಮಾಡುವ ಉದ್ದೇಶವನ್ನು ಇಸ್ರೋ ಹೊಂದಿದೆ. ಈ ನಿಲ್ದಾಣದಲ್ಲಿ ಕಿರು ಗುರುತ್ವಾಕರ್ಷಣೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸುವ ಉದ್ದೇಶವಿದೆ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್‌ ಅವರು ತಿಳಿಸಿದ್ದಾರೆ.

ಭಾರತದ ಗಗನಯಾತ್ರಿಗಳು 15-20 ದಿನಗಳ ಕಾಲ ತಂಗುವುದಕ್ಕೆ ವ್ಯವಸ್ಥೆ ಮಾಡುವ ರೀತಿಯಲ್ಲಿ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಆರಂಭಿಕ ಯೋಜನೆ ಇದೆ. ದೇಶದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾತ್ರೆ ‘ಗಗನಯಾನ’ ಪೂರ್ಣಗೊಂಡ ಬಳಿಕವಷ್ಟೇ ಸ್ಪಷ್ಟಚಿತ್ರಣ ಹೊರಬೀಳಲಿದೆ ಎಂದು ಹೇಳಿದ್ದಾರೆ.

ಈಗಾಗಲೇ ಒಂದು ಬಾಹ್ಯಾಕಾಶ ನಿಲ್ದಾಣ ಅಂತರಿಕ್ಷದಲ್ಲಿ ಇದೆ. ಅಮೆರಿಕ, ಜಪಾನ್‌, ರಷ್ಯಾ, ಐರೋಪ್ಯ ಒಕ್ಕೂಟದಂತಹ ದೇಶಗಳು ಈ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ದ ನಿರ್ಮಾತೃಗಳು. ಇದು 2030ರವರೆಗಷ್ಟೇ ಕಾರ್ಯನಿರ್ವಹಿಸಲಿದೆ ಎಂಬ ವರದಿಗಳು ಇವೆ. ಆನಂತರವಷ್ಟೇ ಭಾರತ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಗುರಿ ಹಾಕಿಕೊಂಡಿರುವುದು ಮಹತ್ವದ್ದಾಗಿದೆ. ಈ ನಡುವೆ, ತನ್ನದೇ ಆದ ಅಂತರಿಕ್ಷ ನಿಲ್ದಾಣ ಸ್ಥಾಪನೆಯ ನಿಟ್ಟಿನಲ್ಲಿ ಚೀನಾ ಕೂಡ ಕಾರ್ಯಪ್ರವೃತ್ತವಾಗಿದೆ. ವಿಶೇಷ ಎಂದರೆ, ಭಾರತ ಯಾವುದೇ ದೇಶದ ಸಹಯೋಗವಿಲ್ಲದೆ ಏಕಾಂಗಿಯಾಗಿ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲು ಹೊರಟಿದೆ.

ಏನಿದು ಬಾಹ್ಯಾಕಾಶ ನಿಲ್ದಾಣ?

ಭೂಮಿಯಿಂದ ಕೆಲವೇ ನೂರು ಕಿ.ಮೀ.ಗಳ ದೂರದಲ್ಲಿ ಗಗನಯಾತ್ರಿಗಳು ಹಲವು ದಿನಗಳ ಕಾಲ ಜೀವಿಸುವುದಕ್ಕೆ ಬೇಕಾದ ವ್ಯವಸ್ಥೆಯೇ ಬಾಹ್ಯಾಕಾಶ ನಿಲ್ದಾಣ. ಭೂಮಿಯಿಂದ ರಾಕೆಟ್‌ ಮೂಲಕ ಉಡಾವಣೆಯಾಗುವ ಬಾಹ್ಯಾಕಾಶ ನೌಕೆಗಳು ಈ ಕೇಂದ್ರಕ್ಕೆ ತಲುಪಿ ಗಗನಯಾತ್ರಿಗಳನ್ನು ತಲುಪಿಸುತ್ತವೆ. ಅಲ್ಲಿ ಗಗನಯಾತ್ರಿಗಳು ಸಂಶೋಧನೆ ನಡೆಸಬಹುದು. ಬಳಿಕ ಗಗನನೌಕೆಗಳ ಮೂಲಕ ಭೂಮಿಗೆ ಮರಳಬಹುದು. ಈಗಾಗಲೇ ಅಮೆರಿಕ ನೇತೃತ್ವದಲ್ಲಿ ವಿಶ್ವದ ಹಲವು ದೇಶಗಳು ಇಂತಹ ಒಂದು ಬಾಹ್ಯಾಕಾಶ ನಿಲ್ದಾಣವನ್ನು ಹೊಂದಿವೆ. 1998ರಲ್ಲಿ ಉಡಾವಣೆಗೊಂಡ ನಿಲ್ದಾಣ ಅದಾಗಿದೆ. ಸುಮಾರು 400 ಕಿ.ಮೀ. ದೂರದಲ್ಲಿ ಭೂಮಿಯನ್ನು ಸುತ್ತುವ ನಿಲ್ದಾಣ ಭೂಮಿಯಲ್ಲಿರುವವರಿಗೆ ಬರಿಗಣ್ಣಿನಿಂದಲೂ ಕಾಣುತ್ತದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ