ಉಡಾವಣೆಗೊಂಡ ಐದೇ ನಿಮಿಷಕ್ಕೆ ಪತನ: ಸಮುದ್ರಕ್ಕೆ ಬಿತ್ತು ಇಸ್ರೋ ರಾಕೆಟ್‌, ಉಪಗ್ರಹ!

By Suvarna NewsFirst Published Aug 13, 2021, 7:39 AM IST
Highlights

* ಸಮುದ್ರಕ್ಕೆ ಬಿತ್ತು ಇಸ್ರೋ ರಾಕೆಟ್‌, ಉಪಗ್ರಹ

* ಉಡಾವಣೆಗೊಂಡ ಐದೇ ನಿಮಿಷಕ್ಕೆ ಪತನ

* ಕ್ರಯೋಜನಿಕ್‌ ಎಂಜಿನ್‌ ವೈಫಲ್ಯ ಕಾರಣ

ಶ್ರೀಹರಿಕೋಟ(ಆ.13): ಭೂಸರ್ವೇಕ್ಷಣಾ ಉಪಗ್ರಹವೊಂದನ್ನು ಕಕ್ಷೆಗೆ ಸೇರಿಸುವ ಇಸ್ರೋದ ಯತ್ನ ಗುರುವಾರ ವಿಫಲವಾಗಿದೆ. ಗುರುವಾರ ಬೆಳಗ್ಗೆ 5.43ಕ್ಕೆ ಇಒಎಸ್‌-03 ಉಪಗ್ರಹ ಹೊತ್ತು ನಭಕ್ಕೆ ಹಾರಿದ್ದ ಜಿಎಸ್‌ಎಲ್‌ವಿ-ಎಫ್‌10 ರಾಕೆಟ್‌, ಉಡ್ಡಯನ ಆರಂಭಿಸಿದ ಕೇವಲ 5 ನಿಮಿಷದಲ್ಲೇ ಪತನಗೊಂಡಿದೆ. ರಾಕೆಟ್‌ನ ಮೂರನೇ ಹಂತವಾದ ಕ್ರಯೋಜನಿಕ್‌ ಎಂಜಿನ್‌ ಚಾಲನೆಗೊಳ್ಳುವಲ್ಲಿ ವಿಫಲವಾದ ಕಾರಣ ಉಪಗ್ರಹವನ್ನು ನಿಗದಿತ ಕಕ್ಷೆ ಸೇರಿಸುವ ಇಸ್ರೋದ ಕನಸು ನನಸಾಗದೇ ಹೋಗಿದೆ.

ಇದು ಜಿಎಸ್‌ಎಲ್‌ವಿ ರಾಕೆಟ್‌ ಬಳಸಿ ನಡೆಸಲಾದ 14ನೇ ಉಡ್ಡಯನವಾಗಿತ್ತು. ಇದುವರೆಗೆ ಜಿಎಸ್‌ಎಲ್‌ವಿ ಒಟ್ಟು 4 ಬಾರಿ ತನ್ನ ಗುರಿ ಮುಟ್ಟುವಲ್ಲಿ ವಿಫಲವಾಗಿದೆ. ಈ ಪೈಕಿ ಕಡೆಯ ವೈಫಲ್ಯ ದಾಖಲಾಗಿದ್ದು 2010ರಲ್ಲಿ. ಅಂದರೆ ಸುಮಾರು 11 ವರ್ಷಗಳ ಬಳಿಕ ಇಸ್ರೋದ ಉಡ್ಡಯನವೊಂದು ವೈಫಲ್ಯಕಂಡಿದೆ.

ಏನಾಯ್ತು?:

ಆಂಧ್ರಪ್ರದೇಶದ ಶ್ರೀಹರಿಕೋಟದಿಂದ 2268 ಕೆಜಿ ತೂಕದ ಭೂಸರ್ವೇಕ್ಷಣಾ ಉಪಗ್ರಹ ಹೊತ್ತ ಜಿಎಸ್‌ಎಲ್‌ವಿ-ಎಫ್‌ 10 ಬೆಳಗ್ಗೆ 5.43ಕ್ಕೆ ನಭಕ್ಕೆ ನೆಗೆದಿತ್ತು. ರಾಕೆಟ್‌ನ ಮೊದಲ ಎರಡೂ ಹಂತದ ಎಂಜಿನ್‌ಗಳು ಯಶಸ್ವಿಯಾಗಿ ಹೊತ್ತಿ ಉರಿಯುವ ಮೂಲಕ ತಮ್ಮ ಪ್ರಯಾಣವನ್ನು ಯಶಸ್ವಿಯಾಗಿ ಮುಂದುವರೆಸಿದ್ದವು. ಆದರೆ ಅತ್ಯಂತ ಕ್ಷಿಷ್ಟಕರ ಎಂದೇ ಬಣ್ಣಿಸಲಾದ ಮೂರನೇ ಹಂತದ ಕ್ರಯೋಜೆನಿಕ್‌ ಎಂಜಿನ್‌ ಚಾಲನೆಗೊಳ್ಳದ ಕಾರಣ ಯೋಜನೆ ವಿಫಲಗೊಂಡು, ರಾಕೆಟ್‌ ಮತ್ತು ಉಪಗ್ರಹ ಸಮುದ್ರಕ್ಕೆ ಬಿದ್ದಿದೆ. ಬಳಿಕ ಈ ಕುರಿತು ಪ್ರಕಟಣೆ ಹೊರಡಿಸಿದ ಇಸ್ರೋ, ತಾಂತ್ರಿಕ ಕಾರಣಗಳಿಂದಾಗಿ ಉಡ್ಡಯನವನ್ನು ಯೋಜಿತ ರೀತಿಯಲ್ಲಿ ಪೂರ್ಣಗೊಳಿಸಲಾಗಲಿಲ್ಲ ಎಂದು ತಿಳಿಸಿದೆ.

ಯಾವ ಉಪಗ್ರಹವಿದು?:

ಭಾರತದ ಭೂಭಾಗದ ಯಾವುದೇ ಪ್ರದೇಶಗಳ ಕುರಿತು ಆಯಾ ಕ್ಷಣದ ಮಾಹಿತಿ ನೀಡಬಲ್ಲ ಅತ್ಯಾಧುನಿಕ ಉಪಗ್ರಹ ಇದಾಗಿತ್ತು. ಇದರಿಂದ ಪ್ರಾಕೃತಿಕ ವಿಕೋಪ, ಕೃಷಿ ಭೂಮಿ, ಅರಣ್ಯ, ಚಂಡಮಾರುತ ಮುನ್ನೆಚ್ಚರಿಕೆ, ಮೇಘಸ್ಫೋಟದ ಮೇಲೆ ಕಣ್ಗಾವಲು ಇಡಲು ಸಾಧ್ಯವಾಗುತ್ತಿತ್ತು.

ಮುಂದೂಡಿಕೆ:

2020ರ ಮಾ.5ರಂದು ಇದನ್ನು ಉಡ್ಡಯನ ಮಾಡಲು ನಿರ್ಧರಿಸಲಾಗಿತ್ತು. ಆದರೆ ರಾಕೆಟ್‌ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅಂತಿಮ ಹಂತದಲ್ಲಿ ಉಡ್ಡಯನ ಮುಂದೂಡಲಾಗಿತ್ತು. ಬಳಿಕ 2021ರ ಮಾ.28ರಂದು ಮತ್ತೆ ಉಡ್ಡಯನ ನಿಗದಿ ಮಾಡಲಾಗಿತ್ತಾದರೂ, ತಾಂತ್ರಿಕ ತೊಂದರೆಯಿಂದಾಗಿ ಮತ್ತೆ ಉಡ್ಡಯನ ಮುಂದೂಡಿಕೆಯಾಗಿತ್ತು.

ಕ್ರಯೋಜನಿಕ್‌ ಎಂಜಿನ್‌:

ಕ್ರಯೋಜನಿಕ್‌ ವ್ಯವಸ್ಥೆ ಅತ್ಯಂತ ಕ್ಲಿಷ್ಟಕರವಾದ ಪ್ರಕ್ರಿಯೆ. ಶೂನ್ಯಕ್ಕಿಂತ ನೂರಾರು ಡಿಗ್ರಿ ಸೆಲ್ಸಿಯಸ್‌ ಕಡಿಮೆ ಉಷ್ಣಾಂಶದಲ್ಲಿ ದ್ರವ ಸ್ವರೂಪದ ಹೈಡ್ರೋಜನ್‌ ಮತ್ತು ದ್ರವಸ್ವರೂಪದ ಆಮ್ಲಜನಕನವನ್ನು ಬಳಸಿಕೊಂಡು ದಹನ ಪ್ರಕ್ರಿಯೆ ನಡೆಸಲಾಗುತ್ತದೆ. ಇಲ್ಲಿ ಆಗುವ ಅತ್ಯಂತ ಸಣ್ಣ ದೋಷ ಕೂಡ ಇಡೀ ಪ್ರಕ್ರಿಯೆಯನ್ನು ಪೂರ್ಣ ವಿಫಲಗೊಳಿಸುತ್ತದೆ. ಆದರೆ ಅತ್ಯಂತ ತೂಕದ ಉಪಗ್ರಹಗಳನ್ನು ಅತ್ಯಂತ ಎತ್ತರದ ಕಕ್ಷೆಗೆ ಕೂರಿಸಲು ರಾಕೆಟ್‌ಗಳಿಗೆ ಬೇಕಾದ ಬಲವನ್ನು ಕ್ರಯೋಜನಿಕ್‌ ಎಂಜಿನ್‌ಗಳು ಮಾತ್ರವೇ ನೀಡುತ್ತವೆ. ಹೀಗಾಗಿ ಸಾಕಷ್ಟುವರ್ಷಗಳ ಶ್ರಮದ ಬಳಿಕ ಭಾರತ ದೇಶೀಯವಾಗಿಯೇ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದೆ. ಕ್ರಯೋಜನಿಕ್‌ ಎಂಜಿನ್‌ ಬಳಸಿ ಭಾರತದ ಇದುವರೆಗೂ 8 ಉಡ್ಡಯನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಆಘಾತಕಾರಿ

ಉಡ್ಡಯನ ವಿಫಲವಾಗಿದ್ದು ಆಘಾತಕಾರಿ. ಆದರೆ ಇದಕ್ಕೆ ಇಸ್ರೋ ಎದೆಗುಂದಬೇಕಾದ ಅವಶ್ಯಕತೆ ಇಲ್ಲ. ಇಂಥ ಪರಿಸ್ಥಿತಿಯಿಂದ ಪುಟಿದೆದ್ದು ಬರುವ ಸಾಮರ್ಥ್ಯ ಇಸ್ರೋಗಿದೆ. ಇದು ಕ್ರಯೋಜನಿಕ್‌ ಇಂಜಿನ್‌ ಬಳಸಿದ 8ನೇ ಉಡ್ಡಯನ. ಮೊದಲ ಉಡ್ಡಯನ ವಿಫಲಗೊಂಡಿತ್ತು. ನಂತರದ ಎಲ್ಲಾ 7 ಉಡ್ಡಯನಗಳು ಅತ್ಯಂತ ಯಶಸ್ವಿಯಾಗಿತ್ತು.

- ಮಾಧವನ್‌ ನಾಯರ್‌, ಇಸ್ರೋದ ಮಾಜಿ ಅಧ್ಯಕ್ಷ

click me!