ಅನ್ಯರಾಜ್ಯದವರಿಗೂ ಅನ್ನ ನೀಡಿ ಕೈಹಿಡಿದಿದ್ದು ನಮ್ಮ ಕನ್ನಡಾಂಬೆ. ಹೀಗೆ ಕರ್ನಾಟಕಕ್ಕೆ ಬಂದು, ಕನ್ನಡ ಕಲಿತು ಸಾಧನೆಗೈದ ಕೆಲವು ಖ್ಯಾತನಾಮರ ಪರಿಚಯ ಇಲ್ಲಿದೆ.
ಕಾಶಿಯ ಶಾನ್ವಿ ಕನ್ನಡದ ಮಾಸ್ಟರ್ ಪೀಸ್
ಈ ನಟಿ ಮೂಲತಃ ವಾರಾಣಸಿಯವರು. ಉತ್ತರ ಪ್ರದೇಶ, ಮುಂಬೈಗಳಲ್ಲಿ ಓದಿರುವ ಇವರು ಸಿನಿಮಾ ಅವಕಾಶ ಅರಸಿ ಬಂದದ್ದು ಕನ್ನಡ ನಾಡಿಗೆ. ಆರಂಭದಲ್ಲಿ ಮಾಡೆಲಿಂಗ್ ಮಾಡುತ್ತಾ, ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ನಟಿಸುತ್ತಿದ್ದ ಇವರಿಗೆ ಬ್ರೇಕ್ ನೀಡಿದ್ದು ‘ಮಾಸ್ಟರ್ ಪೀಸ್’ ಸಿನಿಮಾ. ಯಶ್ ಈ ಸಿನಿಮಾದ ನಾಯಕ. ಈ ಸಿನಿಮಾದಲ್ಲಿನ ಇವರ ನಟನೆಗೆ ಸೈಮಾ ಅವಾರ್ಡ್‌ನಲ್ಲಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಬಂತು. ಮುಂದೆ ‘ಭಲೇ ಜೋಡಿ’, ‘ಸುಂದರಾಂಗ ಜಾಣ’, ‘ಸಾಹೇಬ’, ‘ತಾರಕ್’ ಮೊದಲಾದ ಚಿತ್ರಗಳಲ್ಲಿ ನಟಿಸಿ ಸೈ ಅನಿಸಿಕೊಳ್ಳುವ ಶಾನ್ವಿ ಆ ಹೊತ್ತಿಗಾಗಲೇ ಕನ್ನಡ ಭಾಷೆ ಕಲಿತು ಸೊಗಸಾಗಿ ಕನ್ನಡ ಮಾತನಾಡುತ್ತಿದ್ದರು. ರಕ್ಷಿತ್ ಶೆಟ್ಟಿ ಅವರ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಕ್ಕೂ ಇವರೇ ನಾಯಕಿ. ಈ ಸಿನಿಮಾದ ವೇಳೆ ಇವರು ಸ್ಪಷ್ಟ ಕನ್ನಡ ಕಲಿತು ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡಿದ್ದು ವಿಶೇಷವಾಗಿತ್ತು.
ಪಾಲಕ್ಕಾಡ್‌ನ ಪ್ರಿಯಾಮಣಿ ಕನ್ನಡದ ಮಣಿ
ಕೇರಳದ ಪಾಲಕ್ಕಾಡ್ ಮೂಲದವರಾದ ಪ್ರಿಯಾಮಣಿ ಇಂದು ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿ. ಶಾಲಾ ದಿನಗಳಿಂದಲೇ ವಿವಿಧ ಬ್ರಾಂಡ್‌ಗಳ ರೂಪದರ್ಶಿಯಾಗಿ ಮಿಂಚುತ್ತಿದ್ದ ಈ ಪ್ರತಿಭಾವಂತೆ ಬಳಿಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು. ಆರಂಭದಲ್ಲಿ ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಮಿಂಚುತ್ತಿದ್ದವರು ಬಳಿಕ 2009ರಲ್ಲಿ ತೆರೆಕಂಡ ಪುನೀತ್ ರಾಜ್‌ಕುಮಾರ್ ನಟನೆಯ ‘ರಾಮ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟರು. ಮುಂದೆ ಗಣೇಶ್ ಜೊತೆಗೆ ‘ಏನೋ ಒಂಥರಾ’, ಸುದೀಪ್ ಜೊತೆ ‘ವಿಷ್ಣುವರ್ಧನ’, ಪುನೀತ್ ಜೊತೆ ‘ಅಣ್ಣಾ ಬಾಂಡ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾದರು. ಸ್ಪಷ್ಟವಾಗಿ ಕನ್ನಡ ಮಾತನಾಡುವ ಜೊತೆಗೆ ನಟನೆಯಿಂದಲೂ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
undefined
ಮಾತೃಭಾಷೆ ಕನ್ನಡ ಅಲ್ಲ, ಬದುಕಿನ ಭಾಷೆ ಕನ್ನಡ ಅಂದುಕೊಂಡ ಬೇರೆ ಭಾಷೆ ಹಿನ್ನೆಲೆಯ ಸೆಲೆಬ್ರಿಟಿಗಳು ಇವರು!
ಜೇನ ದನಿಯೋಳೆ....ಮೀನ ಕಣ್ಣೋಳೆ... ಎಂದ ''ಜಸ್ಟ್ ಕನ್ನಡ ಸಿಂಗ್''
‘ನಾನು ಕರ್ನಾಟಕಕ್ಕೆ ಬರುವಾಗ ಜಸ್ಕರಣ್ ಸಿಂಗ್ ಆಗಿದ್ದೆ. ಈಗ ಕನ್ನಡಿಗರ ಪ್ರೀತಿಯಿಂದ ‘ಜಸ್ಟ್ ಕನ್ನಡ ಸಿಂಗ್’ ಆಗಿದ್ದೇನೆ. ಕನ್ನಡಿಗರು ತೋರಿದ ಅಭಿಮಾನ, ಪ್ರೀತಿ ನನ್ನ ಬದುಕನ್ನೇ ಬದಲಿಸಿದೆ.’ ಇದು ಜಸ್ಕರಣ್ ಸಿಂಗ್ ಮನದಾಳದ ಮಾತು. ಪಂಜಾಬ್ ಮೂಲದ ಈ ಗಾಯಕ ಕರ್ನಾಟಕಕ್ಕೆ ಬಂದದ್ದು ‘ಸರೆಗಮಪ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ. ಈ ಕಾರ್ಯಕ್ರಮದಲ್ಲಿ ಇವರ ಹಾಡು ಸಾಕಷ್ಟು ಜನಪ್ರಿಯತೆ ಗಳಿಸಿತು. ಕನ್ನಡ ಭಾಷೆಯ ಹಾಡುಗಳ ಸರಿಯಾದ ಉಚ್ಚರಣೆ ಕಲಿತು ತನ್ಮಯತೆಯಿಂದ ಇವರು ಹಾಡುತ್ತಿದ್ದ ರೀತಿಗೆ ಜನ ಬೆರಗಾದರು. ಈ ಕಾರ್ಯಕ್ರಮದ ಜಡ್ಜ್‌ಗಳೂ ಜಸ್ಕರಣ್ ಬೆನ್ನು ತಟ್ಟಿದರು. ಮುಂದೆ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ‘ದ್ವಾಪರ ದಾಟುತ’ ಎಂಬ ಹಾಡೊಂದನ್ನು ಹಾಡುವ ಅವಕಾಶ ಇವರಿಗೆ ಸಿಕ್ಕಿತು. ಆ ಹಾಡು ಇವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕರೆದೊಯ್ಯುತ್ತದೆ. ಯೂಟ್ಯೂಬ್‌ನಲ್ಲಿ ಸದ್ಯ ಈ ಹಾಡು ಆರು ಕೋಟಿಗೂ ಅಧಿಕ ವೀಕ್ಷಣೆ ದಾಖಲಿಸಿದ್ದು ಇದರ ಜನಪ್ರಿಯತೆಗೆ ಸಾಕ್ಷಿಯಂತಿದೆ.
ಯಕ್ಷಗಾನದಲ್ಲಿ ಮಿಂಚುತ್ತಿರುವ ದೆಹಲಿಯ ‘ಅಭಿನವ’!
ಇತ್ತೀಚೆಗೆ ಅಭಿನವ್ ಗ್ರೋವರ್ ಮಾಡಿದ್ದ ರಾವಣ ವೇಷವನ್ನು ನೋಡಿದವರಾಗಿಗೂ ಅವರು ದೆಹಲಿಯವರು ಎಂದೆನ್ನಿಸಲೇ ಇಲ್ಲ. ಅವರೂ ಉಡುಪಿಯವರೇ ಇರಬೇಕು ಎಂದುಕೊಂಡಿದ್ದರು. 32 ಹರೆಯದ ಅಭಿನವ್, ಹುಟ್ಟಿದ್ದು ಪಂಜಾಬ್‌ನಲ್ಲಿ, ಬೆಳೆದದ್ದು ರಾಜಸ್ಥಾನದಲ್ಲಿ, ಓದಿದ್ದು ಹರ್ಯಾಣದಲ್ಲಿ, ಈಗ ಇರುವುದು ದೆಹಲಿಯಲ್ಲಿ. ಮಣಿಪಾಲಕ್ಕೆ ಬಂದು ಸಾಫ್ಟ್‌ವೇರ್ ಎಂಜಿನಿಯರ್ ಆದರು, ಆದರೆ ಆಯ್ದುಕೊಂಡದ್ದು ಮಾತ್ರ ರಂಗಭೂಮಿ. ಮುಂಬೈ ಸ್ಕೂಲ್ ಆಫ್ ಡ್ರಾಮಾದಲ್ಲಿ 1 ವರ್ಷ ತರಬೇತಿ ಮುಗಿಸಿದ ಅಭಿನವ್ ಅವರನ್ನು ಕೈಬೀಸಿ ಕರೆದದ್ದು ಉಡುಪಿಯ ಯಕ್ಷಗಾನ.
ಯಕ್ಷಗಾನ ಕಲಿಯಲು 6 ತಿಂಗಳಿಗೆಂದು ಬಂದವರು 3 ವರ್ಷ ಇಲ್ಲಿಯೇ ಉಳಿದರು, ಕನ್ನಡವನ್ನು ಕಲಿತರು, ಗುರು ಸಂಜೀವ ಸುವರ್ಣರಿಂದ ಯಕ್ಷಗಾನದ ಪ್ರತಿಯೊಂದು ಹೆಜ್ಜೆಯನ್ನು ಕರಗತ ಮಾಡಿಕೊಂಡರು. ರಾವಣನಾಗಿ, ನಳನಾಗಿ, ದ್ರೋಣಾಚಾರ್ಯರಾದರು. ದೆಹಲಿ, ಮುಂಬೈ, ಮೈಸೂರು, ಸಾವಂತವಾಡಿ ಇತ್ಯಾದಿ ಹತ್ತಾರು ಕಡೆಗಳಲ್ಲಿ ಲಂಕಿಣಿ ಮೋಕ್ಷ, ಜಟಾಯು ಮೋಕ್ಷ, ನಳದಮಯಂತಿ ಇತ್ಯಾದಿ 25ಕ್ಕೂ ಹೆಚ್ಚು ಯಕ್ಷಗಾನಗಳಲ್ಲಿ ಕುಣಿದು ಸೈ ಎನಿಸಿಕೊಂಡರು. ಮಾತ್ರವಲ್ಲ ಕನ್ನಡ ನಾಟಕಗಳಲ್ಲಿ ಅಭಿನಯಿಸಿದರು, ಗಿರೀಶ್ ಕಾರ್ನಾಡ್ ಅವರ ಅಗ್ನಿ ಮತ್ತು ಮಳೆ ನಾಟಕವನ್ನು ನಿರ್ದೇಶಿಸಿದ್ದಲ್ಲದೇ ತಾವೂ ಅಭಿನಯಿಸಿದರು. ನಮ್ಮ ಉತ್ತರ ಭಾರತಕ್ಕಿಂತ ಕರ್ನಾಟಕ ಬಹಳ ಮುಕ್ತ ರಾಜ್ಯ ಸರ್, ಕನ್ನಡಿಗರು ಎಲ್ಲರನ್ನೂ ಪ್ರೀತಿಸ್ತಾರೆ. ಬೇರೆಯವರಿಗೆ ತಮ್ಮ ಭಾಷೆ, ಕಲೆಗಳನ್ನು ಪ್ರೀತಿಯಿಂದ ಕಲಿಸ್ತಾರೆ. ಕನ್ನಡ ನನಗೆ ಬಹಳ ಇಷ್ಟ ಆಗಿದೆ ಸರ್ ಎನ್ನುತ್ತಾರೆ ಅಭಿನವ್ ಗ್ರೋವರ್.
ಕನ್ನಡದ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿರುವ ‘ಗಂಗೂಲಿ’!
ಪಶ್ಚಿಮ ಬಂಗಾಳದಿಂದ ತುಳುನಾಡಿಗೆ ಬಂದು ಇಲ್ಲಿನ ಭಾಷೆ, ಕಲೆ, ಸಂಸ್ಕೃತಿ, ಸಂಸ್ಕಾರಗಳನ್ನು ಮೈಗೂಡಿಸಿದ್ದಲ್ಲದೆ, ಕನ್ನಡತಿಯನ್ನೇ ವಿವಾಹವಾಗಿ, ಈ ನೆಲದ ದೇಸಿ ಸಾಂಸ್ಕೃತಿಕತೆಗೆ ವೇದಿಕೆಗಳನ್ನು ಕಲ್ಪಿಸುತ್ತಾ, ಮಾಡೆಲಿಂಗ್‌ನಲ್ಲಿ ಕನ್ನಡದ ಪ್ರತಿಭೆಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಕಾರಣರಾದವರು ದೀಪಕ್ ಗಂಗೂಲಿ. ಕನ್ನಡಿಗರೂ ನಾಚುವಂತೆ ಕನ್ನಡ, ತುಳು ಭಾಷೆಯನ್ನು ಅಷ್ಟೊಂದು ನಿರರ್ಗಳವಾಗಿ ಮಾತನಾಡುವ 39 ವರ್ಷದ ಗಂಗೂಲಿ, ತಮ್ಮ ಸಾಧನೆಯಿಂದಲೇ ಕರುನಾಡಿನಲ್ಲಿ ಛಾಪು ಮೂಡಿಸಿ, ಇಲ್ಲಿಯವರೇ ಆಗಿದ್ದಾರೆ. ಈಗ ಅವರಿಗೆ ಬಂಗಾಳಿಗಿಂತ ಕನ್ನಡ, ತುಳು ಭಾಷೆಯೇ ಹೆಚ್ಚು ಸುಲಲಿತವಾಗಿದೆ.
ಅಷ್ಟೇ ಅಲ್ಲದೇ ಕೊಂಕಣಿ, ಬ್ಯಾರಿ, ಮಲಯಾಳಂ, ಇಂಗ್ಲಿಷ್, ಹಿಂದಿ, ತೆಲುಗು, ಸಂಸ್ಕೃತ ಭಾಷೆಗಳನ್ನು ಮಾತನಾಡುತ್ತಾರೆ. ಅಷ್ಟರ ಮಟ್ಟಿಗೆ ಅವರ ಸ್ನೇಹಜಾಲ ಈ ನೆಲದಲ್ಲಿ ಚಾಚಿದೆ. ಸೇನೆಯಲ್ಲಿದ್ದ ದೀಪಕ್ ಅವರ ತಂದೆಗೆ ರೈಲ್ವೆಯಲ್ಲಿ ಉದ್ಯೋಗ ದೊರೆತ ಬಳಿಕ ಹಲವೆಡೆ ವರ್ಗಗೊಂಡು ಕೊನೆಗೆ ಮಂಗಳೂರಿನಲ್ಲಿ ನೆಲೆಯೂರಿದರು. ಮಂಗಳೂರಿಗೆ ಬಂದಾಗ ದೀಪಕ್ ಅವರು 5ನೇ ತರಗತಿ ವಿದ್ಯಾರ್ಥಿ. ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪೂರೈಸಿ ಮಂಗಳೂರು ವಿವಿ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿ, ತಮ್ಮ ಆಸಕ್ತಿಯ ಕ್ಷೇತ್ರವಾದ ಈವೆಂಟ್ ಮ್ಯಾನೇಜ್‌ಮೆಂಟ್, ಮಾಡೆಲಿಂಗ್ ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡರು.
ಕನ್ನಡಿಗ ಪ್ರತಿಭೆಗಳಿಗೆ ವೇದಿಕೆ
ಮಂಗಳೂರಿನಲ್ಲಿ ಮೊದಲ ಬಾರಿಗೆ ವೈದ್ಯರ ಫ್ಯಾಶನ್ ಶೋ, ವಿಶೇಷ ಚೇತನ ಮಕ್ಕಳ ಫ್ಯಾಶನ್ ಶೋ ಆಯೋಜಿಸಿ ಗಮನ ಸೆಳೆದದ್ದು ದೀಪಕ್ ಗಂಗೂಲಿ. ಇವರ ಮಾಡೆಲಿಂಗ್ ಸಂಸ್ಥೆಯಲ್ಲಿ ತರಬೇತಿ ಪಡೆದ 30ಕ್ಕೂ ಅಧಿಕ ಮಂದಿ ಮಿಸೆಸ್ ಇಂಡಿಯಾದಲ್ಲಿ ರಾಜ್ಯ ಮಟ್ಟಕ್ಕೇರಿದ್ದರೆ, 15ಕ್ಕೂ ಅಧಿಕ ಮಂದಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದ್ದಾರೆ. ಮುಂಬರುವ ಡಿಸೆಂಬರ್, ಜನವರಿಯಲ್ಲಿ ನಡೆಯಲಿರುವ ಮಿಸೆಸ್ ಇಂಟರ್‌ನ್ಯಾಷನಲ್ ಸ್ಪರ್ಧೆಗೆ ಈ ವರ್ಷ ಮೂವರು ಆಯ್ಕೆಯಾಗಿದ್ದಾರೆ. ಪೊಲೀಸ್ ಇಲಾಖೆ, ಮಂಗಳಮುಖಿಯರ ಫ್ಯಾಶನ್ ಶೋಗೂ ತರಬೇತಿ ನೀಡಿದ್ದಾರೆ.
ಮತ್ತೊಂದೆಡೆ ದೇಸೀಕ್ರೀಡೆಯಲ್ಲಿಯೂ ಛಾಪು ಹೊಂದಿದ್ದು, 8 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಲಗೋರಿ ಪಂದ್ಯ ಆಯೋಜಿಸಿದ್ದರು. ಲೂಡೊ ಪಂದ್ಯ ಆಯೋಜಿಸಿದ್ದರು. ಈ ನಡುವೆ ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ತಾಯಂದಿರ ಕ್ರಿಕೆಟ್ ಸಹ ಆಯೋಜನೆ ಮಾಡಿದ್ದರು. ಈ ನೆಲದಲ್ಲಿದ್ದು ತುಂಬಾ ಕಲಿತಿದ್ದೇನೆ. ಇಲ್ಲಿನ ಸಂಸ್ಕೃತಿ, ಕಲೆ, ಜಾನಪದ ಅತ್ಯಂತ ಸುಂದರ. ಇಲ್ಲಿನ ಜನ ಹೃದಯವಂತರು. ಈಗಂತೂ ಕನ್ನಡಿಗನೇ ಆಗಿಹೋಗಿದ್ದೇನೆ. ಈ ನೆಲ ನನಗೆ ಎಲ್ಲವನ್ನೂ ನೀಡಿದೆ ಎನ್ನುತ್ತಾರೆ ದೀಪಕ್.
ಮಣಿಪುರದಿಂದ ಮೈಸೂರಿಗೆ ಬಂದು ಸಮರಕಲೆ, ಕನ್ನಡ ಕಲಿತ ‘ಅಂಜು ಸಿಂಗ್’
ಅಂಜು ಸಿಂಗ್ ಕೆ. ಮೂಲತಃ ಮಣಿಪುರದ ನಾಗಪುರದವರು. 1989ರ ಅಕ್ಟೋಬರ್ 1ರಂದು ಮೈಸೂರಿನಲ್ಲಿ ರಂಗಾಯಣ ಆರಂಭವಾದಾಗ ಮೈಸೂರಿಗೆ ಬಂದರು. ಭೂಪಾಲ್ ನ ರಂಗಮಂಡಲದ ನಿರ್ದೇಶಕರಾಗಿದ್ದ ಹಿರಿಯ ರಂಗಕರ್ಮಿ ಬಿ.ವಿ. ಕಾರಂತರ ಪರಿಚಯದ ಮೂಲಕ ಮೈಸೂರಿಗೆ ಬಂದ ಅಂಜು ಸಿಂಗ್, ರಂಗಭೂಮಿಯಲ್ಲಿ ಸಮರ ಕಲೆಯ ಅಗತ್ಯದ ಕುರಿತು ತರಬೇತಿ ನೀಡುತ್ತ ಬೆಳೆದರು. ಮೈಸೂರಿಗೆ ಬಂದ ಐದು ವರ್ಷದವರೆಗೆ ಭಾಷೆ ಸಮಸ್ಯೆ ಎದುರಿಸಿದ ಅವರು, ನಂತರ ಸಹ ಕಲಾವಿದರು ಮತ್ತು ಅಧಿಕಾರಿಗಳ ಉತ್ತೇಜನದಿಂದ ಕನ್ನಡ ಕಲಿತರು. ಈವರೆಗೆ ಸುಮಾರು ನೂರಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತಗಾರರಾಗಿ ಕೆಲಸ ಮಾಡಿದ್ದಾರೆ.
ಕನ್ನಡದ ಹಿರಿಯ ರಂಗಕರ್ಮಿಗಳಾದ ಬಿ.ವಿ.ಕಾರಂತ, ಚಿದಂಬರ ರಾವ್ ಜಂಬೆ, ಬಸವಲಿಂಗಯ್ಯ, ಪ್ರಸನ್ನ, ಜನ್ನಿ, ಜರ್ಮನ್, ಗ್ರಿಕ್ ನ ವಿದೇಶಿ ಸಂಗೀತ ಹಾಗೂ ನಾಟಕ ನಿರ್ದೇಶಕರಾದ ಫ್ರಿಡ್ಜ್ ಬೆನವಿಟ್ಜ್, ಕ್ರಿಟೈನ್ ಸ್ಟ್ರಕಲ್, ಒಶಿಲಿ ಮೊದಲಾದವರ ಜತೆ ಕೆಲಸ ಮಾಡಿದ್ದಾರೆ. ಪಕ್ಕವಾದ್ಯದ ಜತೆಗೆ ರಂಗಭೂಮಿಯ ಮೇಲೆ ಸಮರ ಕಲೆಯ ಅಗತ್ಯ, ಯಾವ, ಯಾವ ಆಯುಧವನ್ನು ಹೇಗೆ ಬಳಸಬೇಕು, ಹೇಗೆ ಹಿಡಿದರೆ ತೊಂದರೆ ಆಗುವುದಿಲ್ಲ ಎಂಬುದನ್ನು ಕಲಿಸಿ ಕೊಡುತ್ತಾರೆ. 21ನೇ ವಯಸ್ಸಿಗೆ ಮೈಸೂರಿಗೆ ಬಂದ ಅಂಜು ಸಿಂಗ್, ತಮ್ಮ 42ನೇ ವಯಸ್ಸಿಗೆ ಮದುವೆಯಾದರು. ಈಗ 9ನೇ ತರಗತಿ ಓದುವ ಮಗಳಿದ್ದಾಳೆ. ಮೈಸೂರಿನಲ್ಲೇ ಜೀವನ ಕಟ್ಟಿಕೊಂಡಿದ್ದಾರೆ. ಪತ್ನಿಗೆ ಕನ್ನಡ ಬರುತ್ತದೆ. ಮಗಳು ಇಲ್ಲೇ ಓದುತ್ತಿರುವುದರಿಂದ ಆಕೆಗೂ ಕನ್ನಡ ಚೆನ್ನಾಗಿಯೇ ಬರುತ್ತದೆ.
ಮರಾಠಿ ಮಣ್ಣಿನಲ್ಲಿ ಕನ್ನಡದ ಘಮ ಹೆಚ್ಚಿಸಿದ ಅಂಧ ಗಾಯಕ ‘ರೇವಣಸಿದ್ದ’
ಹುಟ್ಟಿದ್ದು ಮಹಾರಾಷ್ಟ್ರದ ಮಣ್ಣಿನಲ್ಲಾದರೂ ಎಲ್ಲರಿಗೂ ಚಿರಪರಿಚಿತನಾಗಿದ್ದು ಕನ್ನಡದ ಮಣ್ಣಿನಲ್ಲಿ ಜೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ಸಿಜನ್ 19ರಲ್ಲಿ ಸ್ಪರ್ಧಿಸಿ 4ನೇ ಸ್ಥಾನಿಯಾಗಿ ಹೊರ ಹೊಮ್ಮಿದ ಮರಾಠಿ ಹುಡುಗ ರೇವಣಸಿದ್ದ ಪುಂಡಲಿಕ ಫುಲಾರಿಯ ಕನ್ನಡ ಪ್ರೇಮಕ್ಕೆ ಎಲ್ಲೆಡೆ ಈಗ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ರೇವಣಸಿದ್ದ ಫುಲಾರಿ ಮಹಾರಾಷ್ಟ್ರದ ಗಡಿ ಜಿಲ್ಲೆ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆಯ ತೋಳನೂರ ಗ್ರಾಮದವನು. ಹುಟ್ಟಿನಿಂದಲೇ ದೃಷ್ಟಿ ದೋಷವಿದ್ದು ಎರಡು ಕಣ್ಣುಗಳು ಕಾಣುವುದಿಲ್ಲ. ಕಣ್ಣಿಲ್ಲವೆಂದು ಕೊರಗದೆ ಸಂಗೀತದ ಮೂಲಕ ದೇಶದ ಹಲವೆಡೆ ಕಾರ್ಯಕ್ರಮ ನೀಡುತ್ತಿದ್ದಾರೆ. ಬಾಲ್ಯದಿಂದಲೇ ಸಂಗೀತದತ್ತ ಆಸಕ್ತಿ ಬೆಳೆಸಿಕೊಂಡ ಕಾರಣ ಪಾಲಕರು ವಿಜಯಪುರ ಜಿಲ್ಲೆಯಲ್ಲಿರುವ ಗಾನ ಬನದಲ್ಲಿ ತೋಂಟದಾರ್ಯ ಕವಿ ಗವಾಯಿಗಳ ಬಳಿ 2 ವರ್ಷ, ಬಳಿಕ, ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಡಿತ ವೆಂಕಟೇಶ ಆಲಕೂಡ ಅವರ ಬಳಿ ಸಂಗೀತ ಅಭ್ಯಾಸ ನಡೆಸಿದ್ದಾರೆ.
ಇಂತಹ ಗಾಯಕ ಇಂದು ಕೇವಲ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಮತ್ತು ಹಲವು ರಾಜ್ಯಗಳಲ್ಲಿ ಕನ್ನಡದ ಕಂಪು ಪಸರಿಸುತ್ತಿದ್ದಾರೆ. ತಾವು ಸಂಗೀತ ಕಲಿತ ವಿಜಯಪುರದ ಸಂಗೀತ ಶಾಲೆ ಹಾಗೂ ಗದಗಿನ ವೀರೇಶ್ವರ ಪುಣ್ಯಾಶ್ರಮಗಳ ಹೆಸರು ಹೇಳುವ ಮೂಲಕ ಕರ್ನಾಟಕ ಕೀರ್ತಿ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಇವರು ತಬಲಾ, ಹಾರ್ಮೋನಿಯಂ, ಕೊಳಲು, ಗಿಟಾರ್ ಮತ್ತು ವೀಣೆ ಸಹ ನುಡಿಸಲು ಬಲ್ಲವರಾಗಿರುವುದು ವಿಶೇಷ. ಇಷ್ಟೆಲ್ಲಾ ಸಾಧನೆಗೈದ ರೇವಣಸಿದ್ದ ಅವರಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ ಸಿನಿಮಾ ಮತ್ತು ಸಂಗೀತ ಲೋಕದ ದಿಗ್ಗಜರು ಈ ಪ್ರತಿಭಾವಂತ ಗಾಯಕನಿಗೆ ಪ್ರೋತ್ಸಾಹ ನೀಡಿದ್ದಾರೆ.
ನಮ್ಮಿಂದ ಸಮಾಜ ಅಲ್ಲ, ಸಮಾಜದಿಂದ ನಾವು: ಬಘೀರನ ಕುರಿತು ಶ್ರೀಮುರಳಿ ಸಂದರ್ಶನ
ಕನ್ನಡ ಸಂಜೆ ಪತ್ರಿಕೆ ಆಡಳಿತ ಹೊಣೆ ಹೊತ್ತ ಮರಾಠಿ ಮಹಿಳೆ ‘ಸುವರ್ಣಾ’!
ಕನ್ನಡಿಗನ ವಿವಾಹವಾಗಿ ಮಹಾರಾಷ್ಟ್ರದಿಂದ ಕಲಬುರಗಿಗೆ ಬಂದ ಸುವರ್ಣಾ ದೊಡ್ಮನಿ ಇಲ್ಲಿ ಕನ್ನಡ ಕಲಿತು ಸಂಜೆ ಕನ್ನಡ ಪತ್ರಿಕೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದ್ದಿಲ್ಲದೆ ಸಾಧನೆ ಮಾಡುತ್ತಿದ್ದಾರೆ. ಪಿಯುಸಿವರೆಗೂ ಪುಣೆಯ ಚಿಂಚವಾಡದಲ್ಲಿ ಮರಾಠಿ ಮಾಧ್ಯಮದಲ್ಲೇ ಓದಿದ್ದ ಸುವರ್ಣ ಅವರು 1994ರಲ್ಲಿ ಅಫಜಲ್ಪುರ ಮೂಲದ ಶಿವಲಿಂಗಪ್ಪ ದೊಡ್ಮನಿ ಇವರ ಕೈ ಹಿಡಿದು ಕಲಬುರಗಿಗೆ ಕಾಲಿಟ್ಟವರು. ಕನ್ನಡಿಗನ ಕೈ ಹಿಡಿದು ಬಂದರೂ ಕನ್ನಡ ತಿಳಿದಿದ್ದು ಮಾತ್ರ ಶೂನ್ಯ. ಕಲಬುರಗಿಗೆ ಬಂದವರೇ ಸಂಸಾರ ನಿಭಾಯಿಸುತ್ತ ದೂರದರ್ಶನದಲ್ಲಿ ಬರುತ್ತಿದ್ದ ಕನ್ನಡ ಹಾಡುಗಳು, ಕನ್ನಡ ಸಿನಿಮಾ ನೋಡುತ್ತಲೇ ಕನ್ನಡ ಕಲಿತವರು ಸುವರ್ಣಾ. ಇದೀಗ ಶಿವಲಿಂಗಪ್ಪ ಸಂಪಾದಕತ್ವದಲ್ಲಿ ಪ್ರಾದೇಶಿಕ ‘ಕರ್ನಾಟಕ ಸಂಧ್ಯಾಕಾಲ’ ಸಂಜೆ ದಿನಪತ್ರಿಕೆಯ ಸಂಪೂರ್ಣ ಆಡಳಿತ, ಲೆಕ್ಕಪತ್ರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಜತೆಗೆ ಅವಕಾಶ ಸಿಕ್ಕಾಗ ಪತ್ರಿಕೆಯ ಸಂಪಾದಕೀಯದಲ್ಲೂ ತಮ್ಮ ಪಾತ್ರ ನಿರ್ವಹಿಸೋದಿದೆ. ವೈವಾಹಿಕ ಸಂಬಂಧಗಳನ್ನು ಗಟ್ಟಿಗೊಳಿಸಿಕೊಂಡು ಇಲ್ಲೇ ಇರುವ ಸಂದರ್ಭ ಒದಗಿದಾಗ ಕನ್ನಡ ಕಲಿಯೋಣ ಅಂತ ಅದರ ಹಿಂದೆ ಬಿದ್ದೆ. ಸಿನಿಮಾ ನೋಡಿ ಕಲಿತೆ. ಮುಂದೆ ಅಕ್ಕಪಕ್ಕದವರು, ಎಲ್ಲರಿಂದಲೂ ಕನ್ನಡ ಪದಗಳ ಬಳಕೆ ರೂಢಿಸಿಕೊಂಡಿದ್ದೇನೆಂದು ಸುವರ್ಣಾ ಖುಷಿಯಲ್ಲಿ ಹೇಳುತ್ತಾರೆ. ಸುವರ್ಣಾ ಅವರ ಪತಿ ಶಿವಲಿಂಗಪ್ಪ ಸಂಪಾದಕರಾಗಿರುವ ‘ಕರ್ನಾಟಕ ಸಂಧ್ಯಾಕಾಲ’ ಸಂಜೆ ಕನ್ನಡದಿನ ಪತ್ರಿಕೆಗೆ ಸರಕಾರ ನೀಡುವ ಮೊಹರೆ ಹನುಮಂತರಾಯ ಪುರಸ್ಕಾರ ದೊರಕಿದ್ದು ಸ್ಮರಿಸಬಹುದಾಗಿದೆ.