ಎಟಿಎಂನಲ್ಲಿ ಹಣ ಇಲ್ಲ ಅಂತ ಬ್ಯಾಂಕಿನ ವಿರುದ್ಧ ಕೇಸ್ ಹಾಕುವ ರಾಜೀವ ಎಂಬ ಮೇಷ್ಟರು, ಅದರಿಂದಾಗಿ ಹದಗೆಡುವ ಸಂಬಂಧಗಳು, ಅಮ್ಮ, ಮಗ, ಹೆಂಡತಿ ಹಾಗೂ ಮಗಳ ನಡುವಿನ ಭಾವನಾತ್ಮಕ ಬಾಂದವ್ಯದ ಬೆಸುಗೆ. ಬದಲಾದ ಕಾಲಘಟ್ಟದ ಸಂಘರ್ಷ. ಇದೆಲ್ಲ ಸೇರಿದರೆ ‘ಅಮ್ಮನ ಮನೆ’.
ದೇಶಾದ್ರಿ ಹೊಸ್ಮನೆ
ಒಬ್ಬ ವ್ಯಕ್ತಿಯ ಬದುಕಿನಲ್ಲಿ ಬರುವ ಅಮ್ಮ, ಹೆಂಡತಿ ಮತ್ತು ಮಗಳು ಎಂಬ ಮೂವರು ಅಮ್ಮಂದಿರ ಚಿತ್ರ ಇದು. ಅವರ ಮುದ್ದಿನ ಜೀವ ರಾಜೀವ. ಅನಾರೋಗ್ಯಕ್ಕೆ ಸಿಲುಕಿ ನಿಜ ಜೀವನದಲ್ಲಿ ದೈಹಿಕವಾಗಿ ನೊಂದಿರುವ ಅವರು, ತೆರೆ ಮೇಲೂ ಅಂಥದ್ದೇ ಪಾತ್ರಕ್ಕೆ ಬಣ್ಣ ಹಚ್ಚಿರುವುದು ವಿಶೇಷ. ಅಂಥ ವಿಶೇಷ ವ್ಯಕ್ತಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮನ್ನಾ ಮಾಡಲಾಗಿದೆ.
ಚಿತ್ರದ ಇಡೀ ಕತೆ ಸಾಗುವುದೇ ರಾಜೀವ ಮತ್ತು ಆತನ ತಾಯಿಯ ಪಾತ್ರದ ಮೂಲಕ. ರಾಘವೇಂದ್ರ ರಾಜ್ ಕುಮಾರ್. ಆದರೆ, ಅವರ ದೈಹಿಕ ಸಾಮರ್ಥ್ಯ ಪಾತ್ರದ ಪೋಷಣೆಗೆ ದೊಡ್ಡ ತೊಡಕಾಗಿದೆ. ಮತ್ತೆ ನಟಿಸಬೇಕು ಎನ್ನುವ ಛಲ ಮತ್ತು ಉತ್ಸಾಹ ಅವರ ಪಾತ್ರದ ಪೋಷಣೆಯನ್ನು ಸುಲಭಗೊಳಿಸಿದೆ. ಒಂದು ರೀತಿ ಇದು ಅವರದ್ದೇ ನಿಜ ಬದುಕಿನ ಕತೆ ಇದ್ದಂತಿದೆ. ಪಾರ್ವತಮ್ಮ ರಾಜ್‌ಕುಮಾರ್ ಕಡೆ ದಿನಗಳಲ್ಲಿ ಅವರನ್ನು ಪೂರ್ಣ ಪ್ರಮಾಣದಲ್ಲಿ ಆರೈಕೆ ಮಾಡಿದ್ದೇ ರಾಘವೇಂದ್ರ ರಾಜ್‌ಕುಮಾರ್. ಅದು ಗೊತ್ತಿದ್ದವರಿಗೆ ರಾಘವೇಂದ್ರ ರಾಜ್‌ಕುಮಾರ್ ಪಾತ್ರ, ಕತೆ ಒಟ್ಟಾಗಿಯೇ ಆವರಿಸಿಕೊಳ್ಳುತ್ತವೆ.
ರಾಘವೇಂದ್ರ ರಾಜ್ ಕುಮಾರ್ ‘ಪುತ್ರಿ’ ಈ ಗಾಯಕಿ!
ಹೊಸ ರೀತಿಯ ಕತೆಯ ತೀವ್ರತೆಯನ್ನು ನಿರೂಪಣೆ ನುಂಗಿದೆ. ಸಮೀರ್ ಕುಲಕರ್ಣಿ ಸಂಗೀತದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಹಾಡಿದ ಎರಡು ಹಾಡಿನಲ್ಲಿ ಅವರ ದಣಿವು ಕಾಣುತ್ತದೆ. ಪಿ.ಆರ್. ಸ್ವಾಮಿ ಛಾಯಾಗ್ರಹಣ ಬೇಸರ ದೂರ ಮಾಡುತ್ತದೆ. ಸುಚೇಂದ್ರ ಪ್ರಸಾದ್, ರೋಹಿಣಿ, ಮಾನಸಿ, ನಿಖಿಲ್ ಮಂಜು, ಶೀತಲ್, ತಬಲ ನಾಣಿ ಅಭಿನಯ ಹಿಡಿಸುತ್ತದೆ.