ಒಮ್ಮೆ ನಿರ್ದೇಶಕರೊಬ್ಬರು ರಾಜ್‌ಕುಮಾರ್ ಅವರಿಗೊಂದು ಕತೆ ಹೇಳಲು ಮನೆಗೆ ಬಂದರು. ರಾಜ್‌ಕುಮಾರ್ ಅವರ ಬಳಿ ಕುಳಿತು ಸುಮಾರು ಮೂರೂವರೆ ಗಂಟೆಗಳ ಕಾಲ ಕತೆ ಕೇಳಿಸಿಕೊಂಡರು. ತುಂಬ ರೋಚಕವಾಗಿದ್ದ ಆ ಕತೆ ಖಂಡಿತಾ ಗೆಲ್ಲುತ್ತದೆ ಅನ್ನುವ ನಂಬಿಕೆ ಆ ಕತೆಯನ್ನು ಕೇಳಿದ ಎಲ್ಲರಿಗೂ ಬಂತು. ರಾಜ್‌ಕುಮಾರ್ ಜೊತೆಗೇ ಕೂತು ಕತೆ ಕೇಳಿದ್ದ ನಾಲ್ಕೈದು ಮಂದಿಯಂತೂ ಆ ಚಿತ್ರದಲ್ಲಿ ರಾಜ್‌ಕುಮಾರ್ ನಟಿಸಬೇಕೆಂದು ಒಕ್ಕೊರಲಿನಿಂದ ಹೇಳಿದರು.
ರಾಜ್‌ಕುಮಾರ್ ಏನೂ ಹೇಳಲಿಲ್ಲ. ನಟಿಸೋಣವಂತೆ, ನಟಿಸೋಣವಂತೆ, ಈ ಪರಮಾತ್ಮ ಮನಸ್ಸು ಮಾಡಿದ್ರೆ ಯಾವುದು ತಾನೇ ಅಸಾಧ್ಯ ಎಂದಷ್ಟೇ ಹೇಳಿದರಂತೆ. ನಂತರ ಆ ಸಿನಿಮಾ ಆಗಲಿಲ್ಲ. ಕೆಲವೇ ತಿಂಗಳಲ್ಲಿ ಆ ಚಿತ್ರ ಬೇರೊಬ್ಬ ನಟನ ಅಭಿನಯದಲ್ಲಿ ಬಿಡುಗಡೆಯಾಯಿತು. ಆಗ ಮೊದಲ ದಿನ ಕತೆ ಕೇಳಿದ್ದವರೆಲ್ಲ ಪಾರ್ವತಮ್ಮನವರ ಬಳಿ ಬಂದು ನಡೆದದ್ದನ್ನು ವಿವರಿಸಿದರಂತೆ.
ಡಾ. ರಾಜ್ ಮಾಡಿದ ಸಹಾಯವನ್ನು ಸ್ಮರಿಸಿದ ಅಭಿಮಾನಿ..!
ಆಗ ಪಾರ್ವತಮ್ಮ ಏನು ನಡೆಯಿತು ಅನ್ನುವುದನ್ನು ಹೇಳಿದರಂತೆ. ಆ ನಿರ್ದೇಶಕನನ್ನು ಮಾರನೇ ದಿನ ರಾಜ್‌ಕುಮಾರ್ ಮನೆಗೆ ಕರೆಸಿಕೊಂಡರಂತೆ. ‘ಈ ಕತೆಯನ್ನು ನನಗೆ ಹೇಳಿದೆ ಅಂತ ಯಾರಿಗೂ ಹೇಳಬೇಡ. ಬೇರೆ ನಟರನ್ನು ಹಾಕಿಕೊಂಡು ಸಿನಿಮಾ ಮಾಡು. ದೊಡ್ಡ ಯಶಸ್ಸು ಕಾಣುತ್ತದೆ. ಆದರೆ ಈ ಸಿನಿಮಾದಲ್ಲಿ ನಾನು ನಟಿಸೋದಿಲ್ಲ. ಯಾಕೆ ಅಂತ ಕೇಳಬೇಡ’ ಎಂದು ಹೇಳಿ ಕಳಿಸಿದ್ದರಂತೆ. ಯಾಕೆ ನಿರಾಕರಿಸಿದಿರಿ ಅಂತ ಪಾರ್ವತಮ್ಮ ಕೇಳಿದಾಗ ರಾಜ್‌ಕುಮಾರ್ ಹೇಳಿದರಂತೆ. ‘ಆ ಕತೆಯ ನಾಯಕ ತುಂಬ ಜಾಣ. ಅಷ್ಟುಜಾಣತನ ನಂಗೆ ಆಗಿಬರೋದಿಲ್ಲ. ಒಂಚೂರು ದಡ್ಡತನ, ಮುಗ್ಧತೆ ಇಲ್ಲದೇ ಹೋದ್ರೆ ನಾವು ಮನುಷ್ಯರು ಹೇಗಾಗ್ತೀವಿ?’
ಈ ಪ್ರಸಂಗವನ್ನು ರಾಜ್‌ಕುಮಾರ್ ಇಲ್ಲದ ದಿನಗಳಲ್ಲಿ ಪಾರ್ವತಮ್ಮ ಹೇಳಿದ್ದರು. ಜಾಣರಾದವರು ಮನಸ್ಸು ಗೆಲ್ತಾರೆ, ರಾಜ್‌ಕುಮಾರ್ ಮನಸ್ಸಲ್ಲಿ ಉಳೀತಾರೆ.
ನಟ ಪಾತ್ರಕ್ಕಿಂತ ಮಿಗಿಲಾದವನಲ್ಲ!
ಟಿಎಸ್ ನಾಗಾಭರಣ
ಡಾ ರಾಜ್‌ಕುಮಾರ್ ನಮಗೆ ಎರಡು ರೀತಿಯಲ್ಲಿ ಕಾಲಕಾಲಕ್ಕೂ ಪ್ರಸ್ತುತ ಆಗುತ್ತಾರೆ. ನಟರಾಗಿ ಹೇಳುವುದಾದರೆ... ನಿರಂತರವಾಗಿ ರೂಢಿಸಿಕೊಂಡಿದ್ದ ಅವರ ಕಲಿಕೆಯ ಮನೋಧರ್ಮ. ಅವರಿಗಿದ್ದ ಅನುಭವದಲ್ಲಿ ಯಾರನ್ನೂ ಬೇಕಾದರೂ ನಿರ್ದೇಶನ ಮಾಡಬಹುದಿತ್ತು, ಅವರಿಗಿದ್ದ ಕಲಿಕೆಯಿಂದ ಯಾವ ದೃಶ್ಯವನ್ನು ಬೇಕಾದರೂ ತಮಗೆ ಬೇಕಾದಂತೆ ಮಾಡಬಹುದಿತ್ತು, ಅವರಿಗಿದ್ದ ಸೌಕರ್ಯಗಳಿಂದ ಏನನ್ನೂ ಬೇಕಾದರೂ ಪಡೆಯಬಹುದಿತ್ತು. ಆದರೆ, ರಾಜ್‌ಕುಮಾರ್ ಅದ್ಯಾವೂದನ್ನೂ ಪಡೆಯಲಿಲ್ಲ. ಅವರ ಮಾತಿನಲ್ಲೇ ಹೇಳುವುದಾದರೆ ಪಾತ್ರ ನನ್ನ ಚಿತ್ ಮಾಡಬೇಕೇ ಹೊರತು, ನಾನು ಪಾತ್ರವನ್ನು ಚಿತ್ ಮಾಡುವುದಲ್ಲ. ನಟ ಪಾತ್ರವನ್ನು ಸೋಲಿಸಬಾರದು, ಪಾತ್ರವೇ ನಟನನ್ನು ಸೋಲಿಸಬೇಕು. ಪಾತ್ರವೇ ಹಿರಿದಾಗಿ ಕಂಡು, ಆ ಪಾತ್ರಧಾರಿ ಮರೆಯಾಗಬೇಕು. ನಟ, ಪಾತ್ರಕ್ಕೆ ಮಿಗಿಲಾದವನು ಅಲ್ಲ ಎಂಬುದು ಅವರ ನಂಬಿಕೆ. ರಾಜ್ ತೋರಿದ ಈ ಮನೋಧರ್ಮ ಈಗಿನ ನಟರು ಅಳವಡಿಸಿಕೊಂಡರೆ ಸಾಕು.
ಚಿತ್ರರಂಗ ಎಂದೂ ಮರೆಯದ ಮಾಣಿಕ್ಯ ಡಾ. ರಾಜ್; ಅವರಿಗಿದೋ ಫೋಟೋ ನಮನ!
ಎರಡನೆಯದಾಗಿ ವ್ಯಕ್ತಿಯಾಗಿ ಹೇಳುವುದಾದರೆ ರಾಜ್ ಕುಮಾರ್ ಅವರು ಯಾವತ್ತೂ ನನ್ನ ಕೆಲಸ ಅಂದಿಲ್ಲ. ನಮ್ಮ ಕೆಲಸ ಅಂದರೆ. ಶೂಟಿಂಗ್ ಸೆಟ್ ನಲ್ಲಿ ಎಲ್ಲರ ಜತೆ ಕೂರುತ್ತಿದ್ದರು. ಒಟ್ಟಿಗೆ ಊಟ ಮಾಡುತ್ತಿದ್ದರು. ಕಷ್ಟ- ಸುಖ ಕೇಳುತ್ತಿದ್ದರು. ಅನೋನ್ಯತೆ- ಸಂಬಂಧ, ಸ್ನೇಹ ಬೆಳೆಸುತ್ತಿದ್ದರು. ಸಿನಿಮಾ ಒಂದು ತಂಡದ ಸಾಧನೆ ಹೊರತು, ಒಬ್ಬ ವ್ಯಕ್ತಿಯ ಕೆಲಸ ಅಂದುಕೊಂಡಿದ್ದರು. ಅವರಗೆ ಇದ್ದ ಈ ತಂಡದ ಸ್ಫೂರ್ತಿ, ವಿನಮ್ರತೆ, ಶಿಸ್ತು ಈಗಿನ ಚಿತ್ರರಂಗಕ್ಕೆ ಅಣ್ಣಾವ್ರರ ಈ ಪಾಠ-ನಡೆ ಕೂಡ ಅತ್ಯಗತ್ಯ.
ಜಾತಿ, ಧರ್ಮದ ವಿಷಯ ಮಾತನಾಡಬೇಡಿ
ಭಗವಾನ್
ಎತ್ತರಕ್ಕೆ ಏರಿದಷ್ಟುನೆಲದ ನಂಟು ಬಿಡದ ಡಾ ರಾಜ್‌ಕುಮಾರ್ ಅವರ ಸರಳ ಜೀವನವೇ ಒಂದು ಪಾಠ. ಅವರ ಜೀವನದ ಗುಣಗಳು ಕೆಲವಾದರೂ ರೂಡಿಸಿಕೊಂಡರು ಸಾಕು. ಒಂದು ಘಟನೆ ಹೇಳುತ್ತೇನೆ. ಅದು ಸಿನಿಮಾ ಶೂಟಿಂಗ್. ಚೆನ್ನೈನಲ್ಲಿ ನಡೆಯುತ್ತಿತ್ತು. ಎಲ್ಲರು ಒಟ್ಟಿಗೆ ಕೂತು ಊಟ ಮಾಡುತ್ತಿದ್ದಾಗ ಯಾರೋ ಒಬ್ಬರು ಜಾತಿ ವಿಷಯ ತೆಗೆದುಮಾತನಾಡುತ್ತಿದ್ದಾಗ ಇದ್ದಕ್ಕಿದಂತೆ ಏಯ್ ಯಾರು ಜಾತಿ ವಿಷಯ ಮಾತಾಡುತ್ತಿರುವುದು. ನನ್ನ ಮುಂದೆ ಮತ್ತೆ ನೀವು ಯಾವತ್ತೂ ಜಾತಿ, ಧರ್ಮದ ವಿಷಯಗಳನ್ನು ಮಾತನಾಡಬೇಡಿ. ಇದು ನಿಮಗೆ ಕೊನೆ ಎಚ್ಚರಿಕೆ. ಮರುಕಳಿಸಬಾರದು. ಕಣ್ಣು ಕೆಂಪಗೆ ಮಾಡಿಕೊಂಡು ಬೆರಳು ತೋರಿಸುತ್ತಾ ಹುಷಾರ್ ಎಂದರು. ಆ ವ್ಯಕ್ತಿ ಯಾರು ಅಂತ ಬೇಡ. ಆದರೆ, ನಾನು ರಾಜ್‌ಕುಮಾರ್ ಅವರಲ್ಲಿ ಸಿಟ್ಟು ನೋಡಿದ್ದು ಅದೇ ಮೊದಲು.
ಅವರು ಹಾಗೆ ಕೋಪ ಮಾಡಿಕೊಂಡ ಮೇಲೆ ಇಡೀ ಸೆಟ್ ಸೈಲೆಂಟ್ ಆಯ್ತು. ಆ ಮೇಲೆ ಅವರೇ ತುಂಬಾ ಮೃದುವಾಗಿ, ನೋಡಪ್ಪ, ನಮಗೆ ಯಾವ ಜಾತಿ, ಧರ್ಮವೂ ಬೇಡ. ನಾವೆಲ್ಲ ಸರಸ್ವತಿ ಪುತ್ರರು. ದಯವಿಟ್ಟು ಕಲಾವಿದರಿಗೆ ಈ ಜಾತಿ. ಧರ್ಮದ ನೆರಳು ಬೇಡ ಅಂದ್ರು. ಈ ಘಟನೆ ಯಾಕೆ ಹೇಳುತ್ತಿದ್ದೇನೆ ಎಂದರೆ ಜಾತಿ, ಧರ್ಮ ಅಂತ ಹೊಡೆದಾಡಿಕೊಳ್ಳುತ್ತಿರುವ ನಾವು, ಅಣ್ಣಾವ್ರ ಈ ನಡೆ ಎಷ್ಟುಪ್ರಸ್ತುತ ಅಲ್ವಾ? ಜೀವನ, ಹಸಿವು, ಮನುಷತ್ವಕ್ಕಿಂತ ಜಾತಿ, ಧರ್ಮವೇ ದೊಡ್ಡದು ಅಂತ ಕಿರುಚಾಡುತ್ತಿರುವ ನಮಗೆ ಅಣ್ಣಾವ್ರ ಈ ಘಟನೆ ಒಂದು ಪಾಠ. ಮಂತ್ರಾಲಯ ಮಹಾತ್ಮೆ ಸಿನಿಮಾ ಮಾಡಲು ಹೊರಟಾಗಿ ಒಂದು ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾದಾಗ ನೋಡಿ ಆ ವರ್ಗಕ್ಕೆ ನನ್ನಿಂದ ಬೇಸರ ಆಗಬಾರದು. ಆ ಸಮಾಜದವರ ಅಭಿಪ್ರಾಯವನ್ನು ಗೌರವಿಸುತ್ತೇನೆ. ಬೇರೆ ಯಾರಾದರೂ ರಾಘವೇಂದ್ರ ಸ್ವಾಮಿಗಳ ಪಾತ್ರ ಮಾಡಲಿ ಎಂದವರು ರಾಜ್. ಅವರ ಈ ಸಾತ್ವಿಕತೆ ಈಗಿನವರಿಗೆ ಮುಖ್ಯ ಅನಿಸುತ್ತದೆ.