ವೀಕ್ಷಕರ ಗಮನ ಸೆಳೆದ ದೀಕ್ಷಿತ್ ಶೆಟ್ಟಿ. ಬ್ಲಿಂಕ್ ಸಿನಿಮಾ ಸೂಪರ್ ಹಿಟ್ ಆಗಲು ವೀಕ್ಷಕರೇ ಕಾರಣ ಎಂದ ನಿರ್ದೇಶಕರು....
ರಾಜೇಶ್ ಶೆಟ್ಟಿ
ಕನ್ನಡದಲ್ಲಿ ಹೊಸ ಅಲೆಯ ಸಿನಿಮಾಗಳು ಬರುತ್ತಿವೆ. ಆ ಸಿನಿಮಾವನ್ನು ಗೆಲ್ಲಿಸಬೇಕು ಎನ್ನುವ ಛಲ ಕೂಡ ಆ ತಂಡಗಳಿಗೆ ಇದೆ. ಅದಕ್ಕೆ ಉದಾಹರಣೆ ‘ಬ್ಲಿಂಕ್’. ಮಾ.8ರಂದು ಬಿಡುಗಡೆಯಾದ ಈ ಸಿನಿಮಾಗೆ ಮೊದಲ ದಿನ ಸಿಕ್ಕಿದ್ದು 16 ಶೋಗಳು. ಅದೂ ಸಿನಿಮಾ ನೋಡಲು ಸೂಕ್ತವಲ್ಲದ ಸಮಯದಲ್ಲಿ. ಆದರೆ ಪ್ರೇಕ್ಷಕರು ಮೆಚ್ಚಿದರು, ಸಿನಿಮಾ ತಂಡ ಛಲದಿಂದ ಮತ್ತಷ್ಟು ಪ್ರೇಕ್ಷಕರಿಗೆ ತಲುಪಿಸಲು ಹೋರಾಡಿತು. ಪ್ರತೀ ಪ್ರದರ್ಶನದ ನಂತರ ಚಿತ್ರತಂಡದ ಒಬ್ಬೊಬ್ಬರು ಹೋಗಿ ಎಲ್ಲಾ ಪ್ರೇಕ್ಷಕರಿಗೆ ಕೈ ಮುಗಿದು ಸಿನಿಮಾ ಚೆನ್ನಾಗಿದ್ದರೆ ನಾಲ್ಕು ಮಂದಿಗೆ ಹೇಳಿ, ಚೆನ್ನಾಗಿಲ್ಲದಿದ್ದರೂ ಬರೆಯಿರಿ ಎಂದು ಕೇಳಿಕೊಂಡರು.
ಅದೆಲ್ಲದರ ಫಲವಾಗಿ ಸಿನಿಮಾ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ 80 ಪ್ರದರ್ಶನಗಳು ಸಿಕ್ಕಿವೆ. ಓಟಿಟಿ, ಡಬ್ಬಿಂಗ್ ರೈಟ್ಸ್ ಮಾತುಕತೆ ನಡೆಯುತ್ತಿದೆ. ಇದು ‘ಬ್ಲಿಂಕ್’ ತಂಡದ ಗೆಲುವಷ್ಟೇ ಅಲ್ಲ, ಉತ್ತಮ ಸಿನಿಮಾಗಳ ಗೆಲುವು. 25ರ ತರುಣ ಶ್ರೀನಿಧಿ ಬೆಂಗಳೂರು ಈ ಸಿನಿಮಾ ಮೂಲಕ ಒಂದು ಹೊಸ ಮಾದರಿ ಕಟ್ಟಿಕೊಟ್ಟಿದ್ದಾರೆ.
Blink Review ರಂಗಭೂಮಿ ಹಿನ್ನೆಲೆಯ ಟೈಮ್ ಟ್ರಾವೆಲಿಂಗ್ ಸ್ಟೋರಿ
ಈ ಸಿನಿಮಾ ಕುರಿತು ನಿರ್ದೇಶಕ ಶ್ರೀನಿಧಿ ಮಾತುಗಳು ಇಲ್ಲಿವೆ.
- ನಾನು ರಂಗಭೂಮಿ ಹುಡುಗ. ಸಿನಿಮಾ ರಂಗಕ್ಕೆ ಹೊಸಬ. ಬೆಂಗಳೂರು ನನ್ನೂರು. ಅಶೋಕ ಶಿಶುವಿಹಾರದಲ್ಲಿ 4ನೇ ಕ್ಲಾಸು ಓದುವಾಗಲೇ ನಾನು ಸ್ಕಿಟ್ ಮಾಡುತ್ತಿದ್ದೆ. ಅಲ್ಲಿಂದ ನ್ಯಾಷನಲ್ ಸ್ಕೂಲಿಗೆ ಬಂದ ಮೇಲೆ ನಾಟಕ ಮಾಡುತ್ತಿದ್ದೆ. 10ನೇ ತರಗತಿಯಲ್ಲಿ ಸುರೇಶ್ ಆನಗಳ್ಳಿಯವರ ಅನೇಕ ತಂಡಕ್ಕೆ ಸೇರಿದ ಮೇಲೆ ಹವ್ಯಾಸಿ ರಂಗಭೂಮಿ ಪರಿಚ ಆಯಿತು. ಆಮೇಲೆ ನಮ್ಮದೇ ಒಂದು ತಂಡ ಕಟ್ಟಿಕೊಂಡು ನಾಟಕ ಮಾಡುತ್ತಿದ್ದೆವು. ಒಂದು ವಿಭಿನ್ನ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಆಗ ಜೊತೆಯಾದವರು ನಮ್ಮ ನಿರ್ಮಾಪಕ ರವಿಚಂದ್ರ.
- ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ನಾನೇ ನಿರ್ಮಾಣ ಮಾಡುತ್ತೇನೆ, ಸಿನಿಮಾ ಮಾಡಿ ಎಂದರು. ಮೊದಲು ಒಂದು ಪಿಚ್ ಮಾಡೋಕೆ ವಿಡಿಯೋ ಮಾಡಿದೆವು. ಬಜೆಟ್ ಜಾಸ್ತಿ ಎಂಬ ಕಾರಣಕ್ಕೆ ಮುಂದೆ ಹೋಗಲಿಲ್ಲ. ಎರಡು ಮೂರು ಸಿನಿಮಾಗಳಿಗೆ ಕೆಲಸ ಮಾಡಿದೆ. ಅವು ರಿಲೀಸ್ ಆಗಲಿಲ್ಲ. ರವಿಚಂದ್ರ ಅವರು ಉತ್ಸಾಹ ತೋರಿಸಿದ್ದರಿಂದ ಒಂದು ಸ್ಕ್ರಿಪ್ಟ್ ಬರೆದೆ. ಆ ಸ್ಕ್ರಿಪ್ಟ್ ಇಷ್ಟವಾದರೂ ಎಲ್ಲರಿಗೂ ಧೈರ್ಯ ಇರಲಿಲ್ಲ. ದೀಕ್ಷಿತ್ ಶೆಟ್ಟಿ ರಂಗಭೂಮಿ ದಿನಗಳ ಗೆಳೆಯ. ಅವರಿಗೆ ನರೇಷನ್ ಕೊಟ್ಟ ಮೇಲೆ ಅವರು ನಾನೇ ನಟಿಸುತ್ತೇನೆ ಎಂದರು. ಬಜೆಟ್ ಜಾಸ್ತಿಯಾಯಿತು.
- ಎಲ್ಲಾ ಕಲಾವಿದರು ನಮ್ಮ ಹೊಸ ತಂಡಕ್ಕೆ ಸಿಕ್ಕಾಪಟ್ಟೆ ಸಪೋರ್ಟ್ ಮಾಡಿದರು. ಸಿನಿಮಾ ಮುಗಿಸಿ ಎಡಿಟಿಂಗ್, ಮ್ಯೂಸಿಕ್‌ಗೆ ಆರಾರು ತಿಂಗಳು ತೆಗೆದುಕೊಂಡಿದ್ದೇವೆ. ಸಿನಿಮಾ ಸಿದ್ಧವಾದ ಮೇಲೆ ಸಾಮಾನ್ಯ ಜನರಿಗೆ ಸಿನಿಮಾ ತೋರಿಸಿ ಅವರು ಹೇಳಿದ ಪಾಯಿಂಟ್‌ಗಳನ್ನು ತಿದ್ದಿದ್ದೇವೆ. ಕುತೂಹಲಕರ ವಿಚಾರ ಏನೆಂದರೆ ಸಾಮಾನ್ಯ ಜನರಿಗೆ ಸಿನಿಮಾ ಇಷ್ಟ ಆಗುತ್ತಿತ್ತು. ನಮ್ಮ ಸಿನಿಮಾ ರಂಗ ಗೊತ್ತಿದ್ದವರಿಗೆ ಸಿನಿಮಾ ಇಷ್ಟವಾಗುತ್ತಿರಲಿಲ್ಲ. ಸಾಮಾನ್ಯ ಜನ ಏನೆಲ್ಲಾ ಹೇಳಿದ್ದರೋ ಅದೇ ನಿಜವಾಯಿತು. ನಾವು ಒಂದು ವಾರದಲ್ಲಿ 3000 ಜನ ಸಿನಿಮಾ ನೋಡಬೇಕು, ಹಾಗಿದ್ದರೆ ಎರಡನೇ ವಾರಕ್ಕೆ ಹೋಗುತ್ತದೆ ಎಂದುಕೊಂಡಿದ್ದೆವು. ಮೊದಲ ದಿನವೇ 3000 ಜನ ಸಿನಿಮಾ ನೋಡಿದರು. ಈ ಸಿನಿಮಾದಿಂದ ನನಗೆ ಮೌತ್ ಪಬ್ಲಿಸಿಟಿಯ ಶಕ್ತಿ ಏನೆಂದು ಅರಿವಾಯಿತು.
- ಸಿನಿಮಾ ರಿಲೀಸ್ ಮಾಡಲೇಬೇಕಿತ್ತು. ಕೆಲವು ಪ್ರೊಡಕ್ಷನ್ ಹೌಸ್‌ಗಳಿಗೆ ಸಿನಿಮಾ ಪ್ರೆಸೆಂಟ್ ಮಾಡಲು ಕೇಳಿಕೊಂಡೆವು. ಅವರೆಲ್ಲಾ ರಿಜೆಕ್ಟ್ ಮಾಡಿದರು. ಕೊನೆಗೆ ನಾವೇ ಧೈರ್ಯ ಮಾಡಿ ಮುಂದುವರಿದೆವು. ನಮ್ಮ ಸಿನಿಮಾ ಗೆಲ್ಲಲು ಪ್ರೇಕ್ಷಕರೇ ಕಾರಣ. ಅವರೇ ಕೈ ಹಿಡಿದು ಮುನ್ನಡೆಸಿದರು.