ನಿಜ ಹೇಳಬೇಕು ಅಂದರೆ ತಮಿಳಿನ ‘ಅನ್ನಪೂರ್ಣಿ’ ಸಿನಿಮಾ ಬೇರೆಯದ್ದೇ ಕಾರಣಕ್ಕೆ ಸುದ್ದಿ, ಚರ್ಚೆ ಆಗಬೇಕಿತ್ತು. ಆದರೆ, ಚಿಕನ್, ಕಬಾಬ್ ರೂಪದಲ್ಲಿ ಬಂದ ಸಾಫ್ಟ್ ಪ್ರೊಪಗಂಡ ಚಿತ್ರದ ಒಳ್ಳೆಯ ಉದ್ದೇಶವನ್ನು ಮರೆಮಾಚಿದೆ. ಇಷ್ಟಕ್ಕೂ ಬೆಸ್ಟ್ ಶೆಫ್ ಆಗಲು ಬ್ರಾಹ್ಮಣರ ಹುಡುಗಿ ಪಾತ್ರವೇ ಯಾಕೆ ಬೇಕಿತ್ತು, ಚಿಕನ್ ಜಾಗದಲ್ಲಿ ಪೋರ್ಕ್ ಯಾಕೆ ಬರಲಿಲ್ಲ?
ಆರ್.ಕೇಶವಮೂರ್ತಿ
ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿರ್ದೇಶನದ ‘ಭೂಮಿಕಾ’ ಚಿತ್ರದಲ್ಲಿ ಒಂದು ಸಂಭಾಷಣೆ ಇದೆ. ‘ನೋಡು ಉಷಾ, ನೀನು ಈ ಮನೆ ಬಿಟ್ಟು ಹೊರಟರೆ ಹೆಚ್ಚೇನು ಬದಲಾವಣೆ ಆಗಲ್ಲ. ಅಡುಗೆ ಮನೆ ಒಂದು ಬಿಟ್ಟು’ ಎನ್ನುವ ಸಂಭಾಷಣೆ ಅದು. ಆ ಚಿತ್ರದ ಮಟ್ಟಿಗೆ ಈ ಮಾತಿನ ಅರ್ಥ, ಆಶಯ, ಸಂದರ್ಭ ಬೇರೆ ಅನಿಸಿದರೂ ಇಲ್ಲಿ ಹೆಣ್ಣಿಗೆ ಅಡುಗೆ ಮನೆ ಎನ್ನುವುದು ಬೀಗ ಇಲ್ಲದ ಜೈಲು ಎನ್ನುವ ಭಾವನೆಗಳನ್ನು ನಾಜೂಕಾಗಿ ಕಟ್ಟಿಕೊಡಲಾಗುತ್ತಿದೆ. ಈಗ ವಿವಾದ ಮೈಮೇಲೆ ಎಳೆದುಕೊಂಡಿರುವ ನಯನತಾರ ನಟನೆಯ ‘ಅನ್ನೂಪೂರ್ಣಿ’ ಚಿತ್ರದ ವಿಷಯಕ್ಕೆ ಬರೋಣ.
ಇಲ್ಲಿನ ಕಥಾನಾಯಕಿಗೆ ಅಡುಗೆ ಮನೆ ಎಂಬುದು ಜೈಲಲ್ಲ. ಅನ್ನಪೂರ್ಣಿಗೆ ರುಚಿ ನೋಡೋದು, ಅಡುಗೆ ಮಾಡೋದು ಎಂದರೆ ಪಂಚಪ್ರಾಣ. ಹೀಗಾಗಿ ಅಡುಗೆ ಮಾಡೋಳು ಎನ್ನುವ ತಾತ್ಸರಕ್ಕಿಂತ ಹಸಿವು ನೀಗಿಸುವ ಅತ್ಯುತ್ತಮ ಕಲೆ ಅಡುಗೆ ಎನ್ನುವ ಭಾವನೆ ಇದೆ. ಪ್ರತಿ ಮನೆಯಲ್ಲೂ ಅಡುಗೆ ಮಾಡೋದು ಅಜ್ಜಿ, ಅಮ್ಮ, ಹೆಂಡತಿ, ಅಕ್ಕ, ತಂಗಿ, ಅತ್ತಿಗೆ, ದೊಡ್ಡ-ಚಿಕ್ಕಮ್ಮ ಎನ್ನುವ ಹೆಣ್ಣು. ‘ನಮ್ಮ ಮನೆ ಅಡುಗೆಯೋವಳು’ ಎಂದು ತಾತ್ಸರದಿಂದ ಕರೆಸಿಕೊಳ್ಳುವ ಅಡುಗೆಯವಳು, ಈಗ ಶೆಫ್ ಆಗಿ ಬದಲಾಗಿದೆ. ಆದರೆ, ತಾತ್ಸರ ಬದಲಾಗಿಲ್ಲ. ಮನೆಯಲ್ಲಿ ಹಸಿವು ನೀಗಿಸುವ ಹೆಣ್ಣು, ಶೆಫ್ ಎಂದು ಗೌರವಯುತವಾಗಿ ಕರೆಸಿಕೊಳ್ಳುತ್ತಿಲ್ಲ. ಅಡುಗೆ ಕಲೆ ಬಗ್ಗೆ ಇರುವ ಈ ವ್ಯಂಗ್ಯ ಮಾತುಗಳೇ ಹೆಣ್ಣಿನ ಕೈ ತುತ್ತು ಕಿಚನ್ ಹೊಗೆಯಲ್ಲಿ, ಗ್ಯಾಸ್ ಸ್ಟೌವ್ ಸದ್ದಿನಲ್ಲಿ ಮರೆಯಾಗುತ್ತಿದೆ.
undefined
ಅನ್ನಪೂರ್ಣಿ ಸಿನಿಮಾ ಹೆಣ್ಣಿನ ಈ ಗೌರವ ಮತ್ತು ಪ್ರತಿಭೆ, ಪ್ರೀತಿ ಮತ್ತು ಮಮಕಾರದಿಂದ ಕೂಡಿದ ಅಡುಗೆ ಕಲೆ ಬಗ್ಗೆ ಮಾತನಾಡುತ್ತಲೇ ಕಿಚನ್‌ನಲ್ಲಿರುವ ಹೆಣ್ಣು, ಸಾಮಾನ್ಯ ಅಲ್ಲ ಎನ್ನುವ ಆಶಯ ಒಳಗೊಂಡಿದೆ. ಆದರೆ, ಈಗ ಏನಾಗಿದೆ ನೋಡಿ. ಒಂದಿಷ್ಟು ಜನರ ಕೆಂಗಣ್ಣಿಗೆ ಗುರಿಯಾಗಲೇಬೇಕು, ಅವರ ಅಕ್ರೋಶಕ್ಕೆ ಆಹಾರ ಆಗಿ ಗಮನ ಸೆಳೆಯಬೇಕು ಅಂತಲೇ ಚಿಕನ್, ಕಬಾಬ್ ರೂಪದಲ್ಲಿ ಚಿತ್ರದಲ್ಲಿ ಬರುವ ಸಾಫ್ಟ್ ಪ್ರೊಪಗಂಡ ಕತೆಯ ಒಳ್ಳೆಯ ಆಶಯ ದಾರಿ ತಪ್ಪಿದೆ. ಅಡುಗೆ ಮಾಡೋಳು, ಕಿಚನ್ ಮಿನಿಸ್ಟ್ರು ಎಂದು ಹೆಣ್ಣು ಮಕ್ಕಳ ಪಾಕ ಕಲೆಯನ್ನು ಜರಿಯುವವರಿಗೆ ಇದೊಂದು ಒಳ್ಳೆಯ ಕನ್ನಡಿ ಆಗಬಹುದಿತ್ತು. ಆದರೆ, ಚಿಕನ್, ಬ್ರಾಹ್ಮಣರ ಹುಡುಗಿ, ಮುಸ್ಲಿಂ ಹೀರೋ ಎನ್ನುವ ವಿಚಾರಗಳ ಸುತ್ತಲೇ ಸಿನಿಮಾ ಸದ್ದು ಮಾಡುತ್ತಿದೆ.
1.ಇಂಡಿಯಾದ ಬೆಸ್ಟ್ ಶೆಫ್ ಆಗಿ ಬ್ರಾಹ್ಮಣರ ಹುಡುಗಿಯೇ ಯಾಕೆ ಬೇಕಿತ್ತು?
2.ಅತ್ಯುತ್ತಮ ಶೆಫ್ ಎನಿಸಿಕೊಳ್ಳುವುದಕ್ಕೆ ನಾನ್‌ವೆಜ್ ರೆಸಿಪಿಗಳೇ ಯಾಕೆ ಎನ್ನುವುದಕ್ಕೆ ಚಿತ್ರದಲ್ಲಿ ಯಾವ ಕಾರಣಗಳನ್ನು ಕೊಟ್ಟಿಲ್ಲ.
3.ವೆಜ್, ನಾನ್ ವೆಜ್, ತಿನ್ನೋದು ಹಾಗೂ ತಿನ್ನದೆ ಇರೋದು ಅವರವರ ಆಯ್ಕೆ ಎಂದು ಚಿತ್ರದ ನಾಯಕನಿಂದ ಡೈಲಾಗ್ ಹೇಳಿಸುವ ಸಿನಿಮಾ, ನಾನ್ ವೆಜ್ ತಿನ್ನದೇ ಇರುವವಳ ಕೈಯಲ್ಲಿ ಕಬಾಬ್, ಬಿರಿಯಾನಿ ಮಾಡಿಸೋದು ಯಾಕೆ?
4. ಬೆಸ್ಟ್ ಶೆಫ್ ಆಗಲು ಚಿಕನ್ ಮಾತ್ರವೇ ಯಾಕೆ ಬೇಕಿತ್ತು, ಬಿರಿಯಾನಿ ಜತೆಗೆ ಪೋರ್ಕ್ ರೆಸಿಪಿನೂ ಹೇಳಿಕೊಡಬಹುದಿಲ್ಲ?
5. ನಾನ್ ವೆಜ್ ಎಂದರೆ ಚಿಕನ್ ಮಾತ್ರ ಎಂದು ಹೇಳುವ ಮೂಲಕ ಚಿತ್ರದಲ್ಲೇ ಆಹಾರ ತಾರತಮ್ಯ ತೋರಿಸಿದರೆ ಅದು ಆಹಾರ ಸೌಹಾರ್ದತೆ ಹೇಗೆ ಆಗುತ್ತದೆ?
ಫುಡ್ ಜಿಹಾದ್ ಚಿತ್ರ 'ಅನ್ನಪೂರ್ಣಿ' ನಟಿ ನಯನತಾರಾ ಮೇಲೂ ಬಿತ್ತು ಕೇಸ್!
ಇಂಥ ಪ್ರಶ್ನೆಗಳ ಜತೆಗೆ ಬ್ರಾಹ್ಮಣರ ನಾಯಕಿ, ಮುಸ್ಲಿಂ ಸಮುದಾದ ನಾಯಕ ಎನ್ನುವ ನಿರ್ಧಿಷ್ಟತೆಗಳ ಆಚೆ ಬಂದು ಸಿನಿಮಾ ಕಟ್ಟಿಕೊಟ್ಟಿದ್ದರೆ ಖಂಡಿತವಾಗಿಯೂ ‘ಅನ್ನಪೂರ್ಣಿ’ ಇಂಡಿಯಾದ ಬೆಸ್ಟ್ ಶೆಫ್ ಆಗುವ ಅವಕಾಶಗಳು ಇದ್ದವು. ಹಾಗೆ ನೋಡಿದರೆ ನಿರ್ಧಿಷ್ಟ ಸಮುದಾಯಗಳನ್ನು ಸೂಚಿಸುವ ಚಿತ್ರದ ಈ ಪಾತ್ರ ಪೋಷಣೆ ಕತೆಗೂ, ಸಿನಿಮಾ ಧ್ವನಿಸುವ ಆಶಯಕ್ಕೆ ಅಷ್ಟೇನು ಬಲ ತುಂಬಲ್ಲ. ಈ ಅನ್ನಪೂರ್ಣಿ ಹೆಸರಿನ ಜಾಗದಲ್ಲಿ ಅಲಮೇಲಮ್ಮ, ಬಸಮ್ಮ, ಮಾರಕ್ಕ, ಮುನ್ನಿಯಮ್ಮ, ಗೌರಮ್ಮ ಯಾರನ್ನ ಬೇಕಾದರೂ ಕಲ್ಪಿಸಿಕೊಳ್ಳಬಹುದಾದ ಅವಕಾಶವನ್ನು ಚಿತ್ರದ ನಿರ್ದೇಶಕರೇ ಹಾಳು ಮಾಡಿಕೊಂಡಿದ್ದಾರೆ.
ಶ್ರೀರಾಮನ ಅವಹೇಳನ.. ಲವ್ ಜಿಹಾದ್ ಪ್ರೇರಣೆ: ‘ಅನ್ನಪೂರ್ಣಿ’ಯಿಂದ ಹಿಂದೂ ಭಾವನೆಗಳಿಗೆ ಧಕ್ಕೆ!