ಬಾಲ್ಯದ ಹಲವು ಅನುಭವಗಳಿಂದ ನಮ್ಮಲ್ಲಿ ಕೀಳರಿಮೆ ಮೂಡಿರುತ್ತದೆ. ಮನೆಯ ವಾತಾವರಣ, ಪಾಲಕರ ಗುಣಸ್ವಭಾವ, ಅವರು ಮಕ್ಕಳನ್ನು ಬೆಳೆಸುವ ರೀತಿಗಳಿಂದ ಮಕ್ಕಳ ಮನಸ್ಥಿತಿ ರೂಪುಗೊಳ್ಳುತ್ತದೆ. ಕೆಲವು ವರ್ತನೆಗಳು ನಿಮ್ಮಲ್ಲೂ ಇದ್ದರೆ ಅದು ಖಂಡಿತವಾಗಿ ಬಾಲ್ಯದ ಪ್ರಭಾವವೇ ಆಗಿದೆ. ಅವುಗಳನ್ನು ಅರಿತುಕೊಂಡು ನಿವಾರಣೆ ಮಾಡಿಕೊಳ್ಳಲು ಯತ್ನಿಸಿದರೆ ಯಶಸ್ಸು ಸುಲಭ.
ಕೀಳರಿಮೆ ಮನುಷ್ಯನ ಅಭ್ಯುದಯದ ಹಾದಿಗೆ ಬಹುದೊಡ್ಡ ತಡೆ ಒಡ್ಡುತ್ತದೆ. ನಾವು ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲವೆಂದಾದರೆ, ಮೊದಲು ನಮ್ಮೊಳಗನ್ನು ನಾವು ವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳುವುದು ಇಂತಹ ಕಾರಣಕ್ಕಾಗಿಯೇ. ಕನಸುಗಳನ್ನು ಸಾಧಿಸಲು ನಮ್ಮಲ್ಲಿರುವ ಕೀಳರಿಮೆಯೇ ಮೊಟ್ಟಮೊದಲು ಅಡ್ಡಗಾಲು ಹಾಕುತ್ತದೆ. ಆ ಕೀಳರಿಮೆಯ ಮೂಲ ಎಲ್ಲಿದೆ ಎಂದು ಯೋಚಿಸಬೇಕು. ನಾವೆಲ್ಲೂ ನಮ್ಮ ಬದುಕಿನಲ್ಲಿ ಇತಿಹಾಸದ ನೆರಳನ್ನು ಹೊಂದಿದ್ದೇವೆ. ಹಿಂದೆ ನಡೆದ ಕೆಲವು ಘಟನೆಗಳು, ಸನ್ನಿವೇಶಗಳು ಮಾಯದ ಗಾಯವಾಗಿ ನಮ್ಮೊಳಗನ್ನು ಆವರಿಸಿರುತ್ತವೆ. ಅವು ನಮಗೆ ಅರಿವಿಲ್ಲದೆಯೇ ನಮ್ಮಲ್ಲಿ ಕೀಳರಿಮೆ ತುಂಬಿರುತ್ತವೆ. ನಮ್ಮ ಆಳವಾದ ಪ್ರಜ್ಞೆಯಲ್ಲಿ ಬೇರೂರಿರುವ ಅದೆಷ್ಟೋ ಭಾವನೆಗಳು ಬಾಲ್ಯಕಾಲದ ಕೊಡುಗೆಯೇ ಆಗಿರುತ್ತವೆ ಎನ್ನಲಾಗುತ್ತದೆ. ಹಿಂದೆ ನಡೆದ ಹಲವು ಘಟನೆಗಳು ಆತ್ಮವಿಶ್ವಾಸವನ್ನು ಘಾಸಿ ಮಾಡಿರುತ್ತವೆ. ಅವು ನಮ್ಮ ಇಂದಿನ ಕೆಲವು ವರ್ತನೆಗಳಲ್ಲಿ ಗೋಚರಿಸುತ್ತದೆ. ಒಂದೊಮ್ಮೆ ನೀವೂ ಸಹ ಬಾಲ್ಯಕಾಲದ ಘಟನೆಗಳಿಂದ ಕುಗ್ಗಿರುವವರಾಗಿದ್ದರೆ ಈ ಕೆಲವು ವರ್ತನೆಗಳನ್ನು ಅರಿವಿಲ್ಲದೇ ವ್ಯಕ್ತಪಡಿಸುತ್ತೀರಿ. ಇವುಗಳನ್ನು ಅರಿತು ಮನೋಸ್ಥೈರ್ಯದ ಮೂಲಕ ಬದಲಾಗುವುದು ನಮ್ಮ ಕೈಯಲ್ಲೇ ಇದೆ.
• ಪ್ರೀತಿ (Love) ಬೇಕು ಎಂದಾದರೆ ಹೆಚ್ಚು ಕೆಲಸ ಮಾಡಬೇಕು
ನಿಮ್ಮೊಳಗೆ ಇಂಥದ್ದೊಂದು ನಂಬಿಕೆ ಇದ್ದರೆ ಅದು ಬಾಲ್ಯದ (Childhood) ಪ್ರಭಾವ. ನಿಮ್ಮ ಪಾಲಕರು (Parents) ಷರತ್ತುಬದ್ಧ (Conditional) ಪ್ರೀತಿ ವ್ಯಕ್ತಪಡಿಸುತ್ತಿದ್ದರೆ ಈ ಗುಣ ಬೆಳೆದು ಹೆಮ್ಮರವಾಗುತ್ತದೆ. ಮನೆಯವರ ಪ್ರೀತಿ ಬೇಕು ಎಂದಾದರೆ ಹೆಚ್ಚಿನದೇನನ್ನೋ ಮಾಡಬೇಕು ಎನ್ನುವುದು ನಿಮ್ಮೊಳಗೆ ದೃಢವಾಗಿರುತ್ತದೆ. ಆಗ ನೀವೇನು ಮಾಡಿದ್ದೀರೋ ಅದರ ಬಗ್ಗೆ ತೃಪ್ತಿ ಇರುವುದಿಲ್ಲ. ಇದು ಕೀಳರಿಮೆಯ (Low Esteem) ಲಕ್ಷಣ. ಬೇರೆಯವರಿಗಾಗಿಯೇ ಬದುಕುವವರಂತೆ ವರ್ತಿಸುತ್ತೀರಿ.
Personality Tips: ನೀವು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ರೆ ಜನ ನಿಮ್ಮನ್ನು ಹೀಗೆಲ್ಲ ಕಾಣೋದು ಸಹಜ!
• ಮೆಚ್ಚುಗೆ (Praise) ಸ್ವೀಕರಿಸುವುದು ಕಷ್ಟ
ಒಂದೊಮ್ಮೆ ನೀವು ನಿಜಕ್ಕೂ ಉತ್ತಮ ಕಾರ್ಯವನ್ನೇ ಮಾಡಿದ್ದರೂ ಅದರ ಫಲವಾಗಿ ದೊರೆಯುವ ಮೆಚ್ಚುಗೆಯನ್ನು ಖುಷಿಯಾಗಿ ಸ್ವೀಕರಿಸುವುದು ನಿಮಗೆ ಸಾಧ್ಯವಾಗುವುದಿಲ್ಲ. ಚಿಕ್ಕಪುಟ್ಟ ಸಾಧನೆ, ಒಳ್ಳೆಯ ಕೆಲಸಗಳನ್ನು ಮೆಚ್ಚಿಕೊಳ್ಳದ ಪಾಲಕರ ಮಕ್ಕಳಲ್ಲಿ ಈ ಗುಣ ಸಾಮಾನ್ಯ. ಅವರಿಗೆ ಹೊಗಳುವುದು ಅಸಹಜವೆನಿಸುತ್ತದೆ. ಕೀಳರಿಮೆಯಿಂದ ಮೆಚ್ಚುಗೆ ಸ್ವೀಕರಿಸುವುದು ಕಷ್ಟವಾಗುತ್ತದೆ.
• ಸ್ವಯಂ ಅನುಮಾನ (Doubt)
ಹಲವರು ತಮ್ಮ ಬಗ್ಗೆಯೇ ದೃಢವಾದ ವಿಶ್ವಾಸ ಹೊಂದಿರುವುದಿಲ್ಲ. ನಿರ್ದಿಷ್ಟ ಕೆಲಸವನ್ನು ಮಾಡಿ ಮುಗಿಸುವ ಸಾಮರ್ಥ್ಯವಿದ್ದರೂ “ಪ್ರಾಮಾಣಿಕವಾಗಿ ಮಾಡುತ್ತೇನೆ, ಹೇಗಾಗುತ್ತೋ ನೋಡೋಣ’ ಎಂದು ಮೇಲುಮೇಲಿನ ಹೇಳಿಕೆ ನೀಡುತ್ತಾರೆ. ಮಾಡಿ ತೋರಿಸುತ್ತೇನೆ ಎನ್ನುವ ದೃಢವಾದ (Confident) ಮಾತುಗಳು ಅವರಿಂದ ಬರುವುದಿಲ್ಲ. ನಿರ್ಧಾರ ತೆಗೆದುಕೊಳ್ಳುವಲ್ಲೂ ಇವರು ಹಿಂದಿರುತ್ತಾರೆ. ಮಕ್ಕಳಿಗೆ ಆಯ್ಕೆಯನ್ನೇ (Choice) ಮಾಡಲು ಬಿಡದ ಪಾಲಕರಿದ್ದಾಗ ಈ ಗುಣ ಬೆಳೆಯುತ್ತದೆ. ಇಂಥವರು ತಮ್ಮ ಅಂತಃಪ್ರಜ್ಞೆಯನ್ನು ಅನುಸರಿಸಲು ಕಲಿತುಕೊಂಡರೆ ಆತ್ಮವಿಶ್ವಾಸ ಬೆಳೆಯುತ್ತದೆ.
• ನೋ ಅನ್ನೋಕೆ ಆಗಲ್ಲ
ಬಹಳಷ್ಟು ಪಾಲಕರು ತಮ್ಮ ಮಕ್ಕಳ ಮಿತಿಯನ್ನು ಗುರುತಿಸಲು ವಿಫಲರಾಗುತ್ತಾರೆ. “ಸ್ವಂತಕ್ಕಿಂತ ಇತರರ ಒಳಿತಿಗಾಗಿ ಕೆಲಸ ಮಾಡು’ ಎನ್ನುವ ನೀತಿಯನ್ನು ಗಾಢವಾಗಿ ಬೋಧಿಸಿರುತ್ತಾರೆ. ಹೀಗಾಗಿ, ದೊಡ್ಡವರಾದ ಬಳಿಕವೂ ಇವರಿಗೆ ಯಾವುದಾದರೂ ಕೆಲಸಕ್ಕೆ ನೋ ಎನ್ನಲು ಸಾಧ್ಯವಾಗುವುದಿಲ್ಲ. ಆದರೆ, ಇದರಿಂದಲೂ ಸಮಸ್ಯೆಯಾಗುತ್ತದೆ, ಕೀಳರಿಮೆ ಅನುಭವಿಸುತ್ತಾರೆ. ಈ ಗುಣ ನಿಮ್ಮಲ್ಲಿದ್ದರೆ, ಯಾರನ್ನಾದರೂ ಕೆಲವೊಮ್ಮೆ ನಿರಾಶೆಗೆ (Disappointment) ಒಳಪಡಿಸಿದರೆ ತೊಂದರೆಯೇನಿಲ್ಲ ಎನ್ನುವುದನ್ನು ಅರಿತುಕೊಂಡು ನಿಮಗೆ ಯಾವುದು ಸರಿ ಎನಿಸುತ್ತದೆಯೋ ಅದನ್ನಷ್ಟೆ ಮಾಡಬೇಕು.
Personality Tips: ಸ್ಟ್ರಾಂಗ್ ಲೇಡೀಸ್ ಇಂತಹ ವಿಚಾರಗಳಿಗೆ ಎಂದಿಗೂ ರಾಜಿ ಮಾಡ್ಕೊಳೋದಿಲ್ಲ
• ನೈಜತೆಯಿಲ್ಲ
ವಯಸ್ಕರಾದ ಬಳಿಕವೂ ತಮ್ಮ ನೈಜ ಭಾವನೆಗಳನ್ನು (True Feelings) ವ್ಯಕ್ತಪಡಿಸಲು ಹಿಂಜರಿಯುವುದು ಕೀಳರಿಮೆಯ ಲಕ್ಷಣ. ಮಕ್ಕಳ ನಿಜವಾದ ಭಾವನೆಗಳಿಗೆ ಮನ್ನಣೆ ದೊರೆಯದ ಮನೆಗಳಲ್ಲಿ ಬೆಳೆದ ಮಕ್ಕಳಲ್ಲಿ ಈ ಗುಣ ಬೆಳೆದಿರುತ್ತದೆ.
• ಹೋಲಿಕೆ (Compare)
ವಿಮರ್ಶೆಯನ್ನು ತಮ್ಮ ಮೇಲಾಗುವ ದಾಳಿ ಎಂದು ಪರಿಗಣಿಸುವುದು, ಇತರರೊಂದಿಗೆ ಅತಿಯಾಗಿ ಹೋಲಿಕೆ ಮಾಡಿಕೊಳ್ಳುವುದೆಲ್ಲವೂ ಕೀಳರಿಮೆಯ ಲಕ್ಷಣ. ಇವುಗಳು ಸಹ ಬಾಲ್ಯಕಾಲದ ಮನೆಯ ವಾತಾವರಣದಿಂದ ಮೂಡಿರುತ್ತವೆ.