ಕೊರೋನಾ ಸಂಕಷ್ಟದಲ್ಲೂ ಬಿತ್ತುಳುವುದನ್ನು ಬಿಡದ ಅನ್ನದಾತನಿಗೆ ನಮಸ್ಕಾರ!

By Kannadaprabha News  |  First Published May 30, 2021, 5:13 PM IST

ಹತ್ತಾರು ಮಹಾಮಾರಿ ಕಾಯಿಲೆಯನ್ನು ಎದುರಿಸಿದ್ದು, ಎದುರಿಸುತ್ತಲೇ ಇದೆ. ನಾಗರಿಕತೆ ಬೆಳೆಯುವ ಪೂರ್ವ ಆತನೂ ಸಹ ಇತರ ಪ್ರಾಣಿಗಳಂತೆಯೇ ಬದುಕುತ್ತಿದ್ದು, ನಾಗರಿಕತೆ(ನಾಗರಿಕತೆ ಅನ್ನಬೇಕೇ ಎನ್ನುವುದನ್ನು ಯೋಚಿಸಬೇಕಾಗಿದೆ) ಬೆಳೆದ ಮೇಲೆ ಮನುಷ್ಯನಿಗೆ ಗಳಿಕೆ ಮತ್ತು ವ್ಯಾಪ್ತಿಯ ಮೇಲೆ ಹಿಡಿತದ ಕಲ್ಪನೆ ಯಾವಾಗ ಬಂತೋ ಆಗಲೇ ಆತ ಈ ಅಧಿಕಾರದ ಮದ ಏರಿದೆ.
 


-ಸೋಮರಡ್ಡಿ ಅಳವಂಡಿ, ಕೊಪ್ಪಳ

ಅದಕ್ಕಾಗಿ ಆತ ನಾನಾ ದಾರಿಗಳನ್ನು ಕಂಡುಕೊಂಡ ಪ್ರಭುತ್ವ ಸ್ಥಾಪನೆಗಾಗಿ ಹಲವು ಮಜಲುಗಳನ್ನು ರೂಪಿಸಿಕೊಂಡ. ಸೈನ್ಯ ಕಟ್ಟಿಕೊಂಡ. ಹೀಗೆ ಮನುಷ್ಯ ಬೆಳೆಯುತ್ತಲೇ ಬೇಗುದಿಗಳನ್ನು ಬೆಳೆಸಿಕೊಂಡ. ಪರಿಣಾಮ ಅಧಿಕಾರ ಮತ್ತು ಹಕ್ಕಿಗಾಗಿ ಹೋರಾಟ ನಡೆಯುತ್ತಲೇ ಇದೆ. ದೇಶ ದೇಶಗಳ ನಡುವೆ ಯುದ್ಧಕ್ಕಾಗಿ ರಾಕೆಟ್ ದಾಳಿ, ಸೆಲ್ ದಾಳಿ, ಅಣುಬಾಂಬ್ ಪ್ರಯೋಗಿಸುತ್ತಿದ್ದಾತ ಈಗ ಏಕಾಏಕಿ ವೈರಸ್ ದಾಳಿಯನ್ನು ಶುರು ಮಾಡಿಕೊಂಡಿದ್ದಾನೆ. ಅದು ತಂತ್ರಜ್ಞಾನ ವೈರಸ್ ದಾಳಿ, ಜೈವಿಕ ದಾಳಿ ಸೇರಿ ಹತ್ತು, ಹಲವು ಬಗೆಯಲ್ಲಿ.

Tap to resize

Latest Videos

undefined

ಹೀಗಾಗಿ, ಯುದ್ಧಗಳಿಗಿಂತ ಮಾರಕವಾಗಿ ನಿರಂತರವಾಗಿ ಕಾಡುತ್ತಿದ್ದಾನೆ. ಮಾನವೀಯತೆ ಮರೆತು ದಾಳಿ ಮಾಡುತ್ತಿದ್ದಾನೆ. ಈಗ ಬಂದಿರುವ ಕೊರೋನಾ ವೈರಸ್ ಹಿಂದೆಯೂ ಇಂಥದ್ದೇ ಷಡ್ಯಂತ್ರ ಇದೆ ಎನ್ನಲಾಗುತ್ತಿದೆ. ಇದು ಜೈವಿಕ ದಾಳಿ ಎನ್ನುವ ವಾದ, ವಿವಾದ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಲೇ ಇದೆ.

ಹೀಗೆ, ಇಂಥ ನಾನಾ ಸಂಕಷ್ಟಗಳನ್ನು ಜಗತ್ತು ಎದುರಿಸುತ್ತಲೇ ಬಂದಿದೆ. ಆದರೆ, ಇದ್ಯಾವುದರ ಪರಿವೆಯೇ ಇಲ್ಲದೆ ರೈತರು ಮಾತ್ರ ತಮ್ಮ ಕಾರ್ಯವನ್ನು ಬಿಡದೆ ಜಗತ್ತಿಗೆ ಅನ್ನ ಹಾಕುತ್ತಲೇ ಬಂದಿದ್ದಾರೆ.

ಅನ್ನ ದೇವರಿಗಿಂತ ಅನ್ಯ ದೇವರು ಇಲ್ಲ..

ಎನ್ನುವ ನಾನ್ನುಡಿ ಇದೆ. ಇದು ನೂರಕ್ಕೆ ನೂರು ಸತ್ಯ..

ಭೂಮಿಯಮೇಲೆ ಈಗ ಹಾಹಾಕಾರ ಎದ್ದಿರುವ ಆಕ್ಸಿಜನ್(ಆಮ್ಲಜನಕ) ಉಸಿರಾಡಲು ಸಹ ನೀನು ಶಕ್ತನಾಗಿರಬೇಕು ಎಂದರೇ ಅನ್ನ ಬೇಕೇಬೇಕು. ಅನ್ನವಿಲ್ಲದಿದ್ದರೇ ಕೆಲ ದಿನಗಳ ಕಾಲ ಬದುಕಬಹುದು. ಆದರೆ, ಆಮ್ಲಜನಕ ಇಲ್ಲದೆ ಒಂದು ನಿಮಿಷವೂ ಬದುಕಲು ಸಾಧ್ಯವಿಲ್ಲ. ಹಾಗಂತ ಗಾಳಿಯನ್ನೇ ಸೇವಿಸುತ್ತಾ ಬದಕಲೂ ಆಗುವುದಿಲ್ಲ. ದೇಹದಲ್ಲಿ ಶಕ್ತಿ ಕ್ಷೀಣಿಸಿದಂತೆ ಉಸಿರಾಟವೂ ಕ್ಷೀಣಿಸುತ್ತದೆ. ಅಂದರೇ ಉಸಿರಾಟಕ್ಕೂ ಶಕ್ತಿ ಬೇಕು. ಅಂದರೆ ಅನ್ನ ಬೇಕು ಎಂದರ್ಥ. ದೇಹಕ್ಕೆ ಶಕ್ತಿಯನ್ನು ನೀಡುವ ಈ ಆಹಾರ ಉತ್ಪಾದನೆಯ ಹೊಣೆ ಹೊತ್ತಿರುವ ರೈತ ಸಮುದಾಯ ಮಾತ್ರ ತಮಗೆ ಅರಿವು ಇಲ್ಲದೆಯೇ ಜಗತ್ತಿನ ತಟ್ಟೆಗೆ ಅನ್ನ ಹಾಕುತ್ತಲೇ ಇದ್ದಾರೆ.

ಹಾಲು ತರಕಾರಿ ತರಲಿಕ್ಕೂ ಸ್ಕೂಟರ್ ಬಳಸೋ ತಲೆಮಾರು ಬೇಗ ಕಾಯಿಲೆಗೆ ತುತ್ತಾಗುತ್ತೆ! 

ಇಂಥ ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಹೊಲದಲ್ಲಿ ಟೊಮೆಟೋ ಕಟಾವು ಮಾಡುತ್ತಿದ್ದ ಮಹಿಳೆಯೋರ್ವಳನ್ನು ಹಾಗೆ ಮಾತನಾಡಿಸಿದಾಗ ಆಕೆ ಹೇಳಿದ್ದು ಹೀಗೆ, ‘ಲಾಕ್‌ಡೌನ್ ಅಂತ ಮನೆಯಲ್ಲಿ ಕುಳಿತರೇ ನಮ್ಮ ಹೊಟ್ಟೆ ತುಂಬಬೇಕಲ್ಲ. ಅದ್ಕೆ ಹೊಲದಲ್ಲಿ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾಳೆ. ಅಂದರೆ ಆಕೆ ತಾನು ಮಾಡುತ್ತಿರುವ ಕಾರ್ಯ ಕೇವಲ ತನ್ನ ಹೊಟ್ಟೆಗಾಗಿ ಎಂದು ಭಾವಿಸಿದ್ದಾಳೆ ಹೊರತು ತಾನು ಕಟಾವು ಮಾಡುವ ಟೊಮೆಟೋ ಅದೆಷ್ಟೋ ಜನರ ತಟ್ಟೆಗೆ ಹೋಗುತ್ತದೆ ಎನ್ನುವ ಪರಿವೇ ಇಲ್ಲ.

ಮತ್ತೊಬ್ಬ ರೈತ, ಮನೆಯಲ್ಲಿ ನಾಲ್ಕಾರು ಜನರು ಕೊರೋನಾದಿಂದ ಬಳಲುತ್ತಿದ್ದಾರೆ. ಟೆಸ್‌ಟ್ ಮಾಡಿಸಿಕೊಂಡು ಬಂದಿದ್ದು, ಅವರಿಗೆ ಪಾಸಿಟಿವ್ ಸಹ ಬಂದಿದೆ. ಆದರೆ, ಈ ರೈತ ತಮ್ಮ ತೊಟದಲ್ಲಿನ ಜೋಳಕ್ಕೆ ನೀರು ಕಟ್ಟುತ್ತಿರುತ್ತಾನೆ. ಕೇಳಿದರೆ, ‘ಕಾಲಕ್ಕೆ ಸರಿಯಾಗಿ ನೀರು ಬಿಡದಿದ್ದರೆ ಜೋಳ ಒಣಗಿ ಹೋಗುತ್ತದೆ’ ಎನ್ನುತ್ತಾನೆ. ಅಂದರೆ ಆತನ ತನ್ನ ಮನೆಯವರ ಆರೈಕೆಗಿಂತ ಹೊಲದಲ್ಲಿನ ಬೆಳೆಯ ಆರೈಕೆಗೆ ಒತ್ತು ನೀಡುತ್ತಾನೆ.

ಮಹಾಕವಿ ಕುವೆಂಪು ಅವರ ಮುತ್ತಿಗೆ ಹಾಕಲಿ ಸೈನಿಕರೆಲ್ಲಾ ಬಿತ್ತುಳುವುದನವ ಬಿಡುವುದೇ ಇಲ್ಲ ಎನ್ನುವ ಸಾಲು ಅಕ್ಷರಶಃ ಸತ್ಯ ಎನಿಸುತ್ತದೆ.

ಉತ್ಪಾದನೆಯಲ್ಲಿ ಹೆಚ್ಚಳ:

ಮಹಾಮಾರಿ ಕೊರೋನಾ ಬಂದಿದೆ ಎಂದು ಜಗತ್ತಿನ ಜನಸಂಖ್ಯೆಯೇನು ತಗ್ಗುತ್ತಿಲ್ಲ. ಇರುವ ಜನರು ಆಹಾರವನ್ನೇನು ತಿನ್ನುವುದು ಬಿಟ್ಟಿಲ್ಲ. ಹಾಗಂತ ಸೇವಿಸುವ ಆಹಾರ ತುರ್ತು ಪರಿಸ್ಥಿತಿ ಇದೆ ಎಂದು ಯಾವುದೋ ಕಾರ್ಖಾನೆಯಲ್ಲಿ ತಯಾರು ಮಾಡಿದ್ದನ್ನು ತಿನ್ನಲು ಬರುವುದಿಲ್ಲ. ಅದು, ರೈತರು ಉಳುಮೆ ಮಾಡಿ, ಬೆಳೆದರೆ ಮಾತ್ರ ಆಹಾರೋತ್ಪಾದನೆಯಾಗಬೇಕು. ರೈತರು ಬೆಳೆದಾಗಲೇ ಮಾತ್ರ ಆಹಾರ ಪೂರೈಕೆಯಾಗುತ್ತದೆ.

ದೇಶದಲ್ಲಿ ಬಹುತೇಕ ಸೆಕ್ಟರ್‌ಗಳು ನಿಂತು ಹೋಗಿವೆ. ಉತ್ಪಾದನೆಯನ್ನು ಸ್ಥಗಿತ ಮಾಡಿವೆ. ಇದರಂತೆಯೇ ರೈತ ಸಮುದಾಯವೂ ತನ್ನ ಉತ್ಪಾದನೆಯನ್ನು ಸ್ಥಗಿತ ಮಾಡಿದರೇ ಕೊರೋನಾದಿಂದ ಸತ್ತವರಿಗಿಂತಲೂ ಹೆಚ್ಚು ಜನರು ಉಪವಾಸದಿಂದ ಸಾಯುವಂತಾಗುತ್ತಿತ್ತು. ಆ ಸಾವುಗಳನ್ನು ಯಾವ ಲಸಿಕೆ ಮತ್ತು ಔಷಧಿಯೂ ತಡೆಯಲು ಆಗುತ್ತಿರಲಿಲ್ಲ.

ಆದರೆ, ರೈತರ ಸಮುದಾಯ ಮಾತ್ರ ತನ್ನೀಕಾರ್ಯವನ್ನು ಬಿಡದೆ ಇರುವುದರಿಂದಲೇ ಈಗ ದೇಶದಾದ್ಯಂತ, ಜಗತ್ತಿನಾದ್ಯಂತ ಆಹಾರ ಉತ್ಪಾದನೆ ಹೆಚ್ಚಳವಾಗಿದೆ. ಹಸಿವು ನಿಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ ಕೊರೋನಾ ಮಹಾಮಾರಿಯ ಸಂಕಷ್ಟದ ಸಮಯದಲ್ಲಿಯೂ ಬಿತ್ತನೆ ಪ್ರಮಾಣ ಶೇಕಡಾ 110 ಆಗಿದೆ. ಅಂದರೆ ವಾರ್ಷಿಕ ಸರಾಸರಿಗಿಂತ ಅಧಿಕವಾಗಿದೆ. ಇದಕ್ಕೆ ನಾನಾ ಕಾರಣಗಳು ಇರಬಹುದು, ಸಕಾಲಕ್ಕೆ ಮಳೆಯಾಗಿರಬಹುದು. ಇಲ್ಲವೇ ಕೊರೋನಾದಿಂದ ಕಂಗೆಟ್ಟು, ನಗರ ಪ್ರದೇಶ ತ್ಯಜಿಸಿ ಹಳ್ಳಿಗೆ ಬಂದು, ಪಾಳು ಬಿದ್ದ ಭೂಮಿಯನ್ನು ಉಳುಮೆ ಮಾಡಿರಬಹುದು.

ಇನ್ನು ದೇಶದ ಆಹಾರ ಉತ್ಪಾದನೆಯಲ್ಲಿಯೂ ಗಣನೀಯ ಏರಿಕೆಯಾಗಿದೆ. ಸುಮಾರು 7.94 ಮಿಲಿಯನ್ ಟನ್ ಆಹಾರ ಉತ್ಪಾದನೆ ಹೆಚ್ಚಳವಾಗಿದೆ ಎಂದರೆ ರೈತರ ಸಮುದಾಯ ಕೃಷಿ ಚಟುವಟಿಕೆಯಿಂದ ಕೊರೋನಾ ಸಂಕಷ್ಟದಲ್ಲಿಯೂ ಹಿಂದೆ ಸರಿದಿಲ್ಲ ಎನ್ನುವುದು ಸ್ಪಷ್ಟ.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ 2020-21ನೇ ಸಾಲಿನ ಪ್ರಧಾನ ಬೆಳೆಗಳ ಮೂರನೇ ಮುಂಗಡ ಅಂದಾಜುಗಳನ್ನು ಬಿಡುಗಡೆ ಮಾಡಿದೆ. ಆಹಾರ ಧಾನ್ಯ ಉತ್ಪಾದನೆಯ ಅಂದಾಜು 305.44 ಮಿಲಿಯನ್ ಟನ್ ಎಂದಿದೆ. ಎಂದರೆ ಅದು 2019-20ನೇ ಸಾಲಿನ ಉತ್ಪಾದನೆಗಿಂತ 7.94 ಮಿಲಿಯನ್ ಟನ್ ಹೆಚ್ಚಳವಾಗಿದೆ. ಅಕ್ಕಿ ಉತ್ಪಾದನೆ 121.46 ಮೀಲಿಯನ್ ಟನ್ ದಾಖಲೆ ಉತ್ಪಾದನೆಯಾಗಿದೆ. ಗೋಧಿಯೂ 108.75 ಮಿಲಿಯನ್ ಟನ್ ಉತ್ಪಾದನೆಯಾಗಿದ್ದು, ಇದು ಸಹ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ.

ಹೀಗೆ, ಕಳೆದ ವರ್ಷದ ಕೊರೋನಾ ಸಂಕಷ್ಟವನ್ನು ಮೆಟ್ಟಿ ನಿಂತ ಕೃಷಿ ವಲಯ ಮಾತ್ರ ತನ್ನ ಉತ್ಪಾದನೆಯನ್ನು ದಾಖಲೆ ಪ್ರಮಾಣದಲ್ಲಿ ಹೆಚ್ಚಿಸಿರುವುದನ್ನು ನೋಡಿದರೇ ಗೊತ್ತಾಗುತ್ತದೆ ದೇಶದಲ್ಲಿ ಏನೇ ಆಗುತ್ತಿದ್ದರು ರೈತರು ಮಾತ್ರ ತಮ್ಮ ದುಡಿಮೆಯನ್ನು ನಿಲ್ಲಿಸುವುದಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತದೆ.

ಈಗ ಮತ್ತೆ ಹೇಳಬಹುದು ನಾವು ಕವಿ ಕುವೆಂಪು ಅವರ ಮಾತನ್ನು- ಮುತ್ತಿಗೆ ಹಾಕಲಿ ಸೈನಿಕರೆಲ್ಲಾ ಬಿತ್ತುಳುವುದನವ ಬಿಡುವುದೇ ಇಲ್ಲ ಎಂದು.

ಹಳ್ಳಿಯತ್ತ ಪ್ಯಾಟೆ ಮಂದಿ

ಈ ನಡುವೆ ಮಹತ್ವದ ಬೆಳವಣಿಗೆಯಾಗುತ್ತಿದೆ. ದೇಶದಾದ್ಯಂತ ನಗರ ವಾಸಿಗಳು ಹಳ್ಳಿಯತ್ತ ಮುಖ ಮಾಡುತ್ತಿದ್ದಾರೆ. ಅದೆಷ್ಟೋ ವರ್ಷಗಳ ಕಾಲ ಹಳ್ಳಿಯಲ್ಲಿದ್ದ ಸಂಬಂಧಿಕರಿಗೆ ಕರೆ ಮಾಡದವರು ಕರೆ ಮಾಡಿ ಮಾತನಾಡುತ್ತಿದ್ದಾರೆ. ತಮ್ಮ ಹೊಲ ಹೇಗಿದೆ ಎಂದು ವಿಚಾರಿಸುತ್ತಿದ್ದಾರೆ. ಕೆಲವರಂತೂ ಹಳ್ಳಿಗೆ ಬಂದು ತಾತ್ಕಾಲಿಕವಾಗಿ ನೆಲೆಸಿ, ತಮ್ಮ ಪಾಳು ಬಿದ್ದ ಭೂಮಿಯನ್ನು ಸ್ವಚ್ಛ ಮಾಡಿಸಿ, ಬಿತ್ತನೆ ಮಾಡಿಸಲು ಶುರು ಮಾಡಿದ್ದಾರೆ. ಹೀಗೆ ನಗರ ಪ್ರದೇಶದಿಂದ ತಿರಸ್ಕಾರವಾಗಿ ಬಂದವರನ್ನು ಭೂಮಿ ತಾಯಿ ಮಾತ್ರ ಅಪ್ಪಿಕೊಳ್ಳುತ್ತಿದ್ದಾಳೆ. ಬನ್ನಿ ಮಕ್ಕಳೇ ಎನ್ನುತ್ತಿದ್ದಾಳೆ. ಎಲ್ಲಾ ವಲಯವೂ ಕೈಕೊಟ್ಟರೇನಂತೆ ಕೃಷಿ ವಲಯ ಇದೆಯಲ್ಲಾ. ಅಲ್ಲವೇ...

click me!