ಮದುವೆ ಯಾರಿಗೆ ಬೇಕ್ರೀ ಎನ್ನೋ ಮಿಲೇನಿಯಲ್ಸ್

By Suvarna News  |  First Published Jun 10, 2020, 6:14 PM IST

1800ರಿಂದೀಚಿನ ಟ್ರೆಂಡ್ ಗಮನಿಸಿದರೆ 2018 ಹಾಗೂ ಅದರಿಂದೀಚೆಗೆ ವಿವಾಹವಾಗುವವರ ಸಂಖ್ಯೆ ಶೇ.6.5ರಷ್ಟು ತಗ್ಗಿದೆ. ಇಷ್ಟು ಹೆಚ್ಚು ಜನರು ಅವಿವಾಹಿತರಾಗಿ ಉಳಿಯುತ್ತಿದ್ದ ಯಾವುದೇ ಉದಾಹರಣೆಗಳು ಹಿಂದಿಲ್ಲ.


ವಿವಾಹವಾಗುವುದೋ ಬೇಡವೋ ಎಂಬ ಅನುಮಾನ ಈಗಿನ ತಲೆಮಾರಿನವರಿಗೆ ಕಾಡುತ್ತಿರುವಷ್ಟು ಬಹುಷಃ ಹಿಂದೆಂದೂ ಯಾರನ್ನೂ ಕಾಡಿರಲಿಲ್ಲ. ಮತ್ತು ಈಗಿನಷ್ಟು ಮಂದಿ ವಿವಾಹವಾಗದೆ ಉಳಿಯಲು ನಿರ್ಧರಿಸಿರಲೂ ಇಲ್ಲ. 

ಸ್ವಲ್ಪ ನಿಮ್ಮ ಪೋಷಕರು ಹಾಗೂ ಅವರ ಹಿಂದಿನ ತಲೆಮಾರುಗಳತ್ತ ಯೋಚನೆ ಹಾಯಿಸಿ. ತಂದೆತಾಯಿ, ಅತ್ತೆ ಮಾವ, ಅಜ್ಜ, ಅಜ್ಜಅಜ್ಜಿ, ಅಂಕಲ್ ಆಂಟಿ- ಹೀಗೆ ಎಲ್ಲರೂ ವಿವಾಹವಾದವರೇ. ಎಲ್ಲೋ ಅಪರೂಪಕ್ಕೊಬ್ಬರು ಹಿರಿಯ ಅವಿವಾಹಿತರು ಸಿಕ್ಕಿದರೆ, ಅವರಿಗೇನೋ ಐಬಿರಬೇಕು, ಅವರ ಕ್ಯಾರೆಕ್ಟರ್ ಸರಿ ಇರಲಿಲ್ಲವೇನೋ ಅಥವಾ ಕುರೂಪಿಯೋ ಎಂಬೆಲ್ಲ ಕಾರಣಗಳು ಮನಸ್ಸಿನಲ್ಲಿ ಮೂಡುತ್ತವೆ ಹೊರತು, ಅವರು ಸ್ವಇಚ್ಛೆಯಿಂದ ಅವಿವಾಹಿತರಾಗಿ ಉಳಿದಿದ್ದಾರೆ ಎಂಬುದನ್ನು ಮನಸ್ಸು ತರ್ಕಿಸದು. ಆದರೆ, ಈಗಿನವರ ಬಗ್ಗೆ ಹಾಗಲ್ಲ, ಅವರಿಗೆ ಮೂವತ್ತು, ನಲವತ್ತು ವರ್ಷಗಳಾಗಿದ್ದರೂ- ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತೆ ಎಂದೋ, ಹೆಚ್ಚಿನ ಓದು ಬೇಕೆಂದೋ, ಸಂಗಾತಿಯ ಅಗತ್ಯವಿಲ್ಲವೆಂದೋ ಅವಿವಾಹಿತರಾಗಿ ಉಳಿದಿರಬಹುದು ಎನಿಸುತ್ತದೆ. ಅಲ್ಲದೆ, ಅದರಲ್ಲಿ ಯಾವ ತಪ್ಪೂ ಕಾಣಿಸುವುದಿಲ್ಲ. 

ಎಲ್ಲ ಇದ್ದೂ ನಾವೇಕೆ ಖುಷಿಯಾಗಿಲ್ಲ?

Tap to resize

Latest Videos

ಕಾಲ ಬದಲಾಗಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ? ಜನರ ವಿಚಾರ, ಯೋಚನಾ ಲಹರಿಗಳು ಬದಲಾಗಿವೆ. ವಿವಾಹಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂಬ ಮಾತು ಹಳಸಲಾಗಿದೆ. ಈಗೇನಿದ್ದರೂ ವಿವಾಹ ಬಂಧನಕ್ಕೆ ಸಿಕ್ಕದಿರುವುದೇ ಸ್ವರ್ಗ ಎಂದು ಯೋಚಿಸುತ್ತಾರೆ. 1800ರಿಂದೀಚಿನ ಟ್ರೆಂಡ್ ಗಮನಿಸಿದರೆ 2018 ಹಾಗೂ ಅದರಿಂದೀಚೆಗೆ ವಿವಾಹವಾಗುವವರ ಸಂಖ್ಯೆ ಶೇ.6.5ರಷ್ಟು ತಗ್ಗಿದೆ. ಇಷ್ಟು ಹೆಚ್ಚು ಜನರು ಅವಿವಾಹಿತರಾಗಿ ಉಳಿಯುತ್ತಿದ್ದ ಯಾವುದೇ ಉದಾಹರಣೆಗಳು ಹಿಂದಿಲ್ಲ. ಇತ್ತೀಚೆಗೆ ಡೇಟಿಂಗ್ ಆ್ಯಪ್ ಟಿಂಡರ್ ನಡೆಸಿದ ಸರ್ವೆಯಲ್ಲಿ ಭಾಗವಹಿಸಿದ್ದವರಲ್ಲಿ  ಶೇ.72ರಷ್ಟು ಯುವಜನತೆ ತಾವು ಸಿಂಗಲ್ ಆಗಿರಲು ಇಚ್ಛಿಸುವುದಾಗಿ ಹೇಳಿರುವುದು ಕೂಡಾ ಇದಕ್ಕೆ ಪೂರಕವಾಗಿದೆ. 

ಹೆಚ್ಚುತ್ತಿರುವ ಲಿವ್-ಇನ್
20 ಹಾಗೂ 30ರ ವಯೋಮಾನದವರು ಇಂದು ವಿವಾಹಕ್ಕಿಂತ ಲಿವ್ ಇನ್ ರಿಲೇಶನ್‌ಶಿಪ್‌ಗೆ ಹೆಚ್ಚು ಮಣೆ ಹಾಕುತ್ತಿದ್ದಾರೆ. ಏಕೆಂದರೆ, ದೈಹಿಕ ಕಾಮನೆಗಳನ್ನು ತಣಿಸಲು ವಿವಾಹ ಅಗತ್ಯ ಎಂಬ ಕಟ್ಟುಪಾಡು ಈಗಿನವರಿಗಿಲ್ಲ. ಉಳಿದಂತೆ ಆರ್ಥಿಕ ಸ್ವಾತಂತ್ರ್ಯ, ಭಾವನೆಗಳನ್ನು ಹಂಚಿಕೊಳ್ಳಲು ಗೆಳೆಯರು, ಲವರ್- ಇಲ್ಲದಿದ್ದಲ್ಲಿ ಸೋಷ್ಯಲ್ ಮೀಡಿಯಾವಂತೂ ಇದ್ದೇ ಇದೆಯಲ್ಲ- ವಿವಾಹವಾದರೆ ಸಿಕ್ಕುವುದೆಲ್ಲವೂ ಅದಿಲ್ಲದೆಯೇ ಸಿಗುವಾಗ ವಿವಾಹ ಬಂಧನದ ಜವಾಬ್ದಾರಿಗಳೇಕೆ ಬೇಕು? ಅತ್ತೆಮಾವ, ಮೈದುನ ಮತ್ತೈವರಿಗೆ ಹೊಂದಿಕೊಳ್ಳುವ ಸರ್ಕಸ್ಸಾದರೂ ಏಕೆ ಬೇಕು? ಮನೆಯವರಿಗೆಲ್ಲ ಬೇಯಿಸುವ, ತಂದು ಹಾಕುವ ಕರ್ತವ್ಯಗಳನ್ನೇಕೆ ವೃಥಾ ಅಂಟಿಸಿಕೊಳ್ಳಬೇಕು ಎಂಬ ಪ್ರಶ್ನೆ ಇಂದಿನ ತಲೆಮಾರಿನದ್ದು. ಜಾತಿ, ಧರ್ಮ, ದೇವರು ಎಂಬ ನಂಬಿಕೆಗಳು ಇಂದಿನವರಲ್ಲಿ ಕುಸಿದಿರುವುದು ಕೂಡಾ ಈ ಲಿವ್-ಇನ್ ಟ್ರೆಂಡ್ ಹೆಚ್ಚಲು ಒಂದು ಕಾರಣ. 

ಇನ್ನು ಕಳೆದ ತಲೆಮಾರಿನವರಲ್ಲಿ ಬಹಳಷ್ಟು ವಿಚ್ಚೇದನಗಳು ನಡೆದಿರುವುದು ಕೂಡಾ ಇಂದಿನವರು ವಿವಾಹದಿಂದ ಹೊರಗುಳಿಯಲು ನಿರ್ಧರಿಸಲು ಕಾರಣವಾಗುತ್ತಿದೆ. ವಿಚ್ಚೇದನವಾದರೆ ಪ್ರೀತಿಯೇ ಇಲ್ಲದ ಪತ್ನಿಗೆ ಜೀವನಾಂಶ ಎಂದು ತಾನು ದುಡಿದಿದ್ದೆಲ್ಲ ಕೊಡಬೇಕು, ಒಂದು ವೇಳೆ ಮಗುವಿದ್ದು ಅದು ತನ್ನೊಂದಿಗೆ ಬೆಳೆಯದಿದ್ದರೂ ಅದರ ಬೆಳವಣಿಗೆಯ ಖರ್ಚು ನೋಡಿಕೊಳ್ಳಬೇಕು, ಮಾನಸಿಕ ಜಂಜಾಟ ಬೇರೆ. ಇದು ಕೂಡಾ ದೌರ್ಜನ್ಯವಲ್ಲವೇ ಎಂಬುದು ಯುವಕರ ಯೋಚನೆ.

 ನಮ್ಮನ್ನು ಸಂತೋಷದಿಂದ ದೂರ ಕೊಂಡೊಯ್ಯುವ ಫೋಮೋ

ಹಿಂದೆ ಸಣ್ಣ ವಯಸ್ಸಿನಲ್ಲೇ ವಿವಾಹ ಮಾಡುತ್ತಿದ್ದರು. ವಿವಾಹವೇ ಜೀವನದ ಬಹುಮುಖ್ಯ ಹಂತ ಎಂದು ಹೇಳಿ ಮಕ್ಕಳನ್ನು ಬೆಳೆಸುತ್ತಿದ್ದರು. ಆದರೆ, ಇಂದು ಪೋಷಕರು ಮಕ್ಕಳಲ್ಲಿ ಅವರ ಶಿಕ್ಷಣ ಹಾಗೂ ಕೆರಿಯರ್‌ಗೆ ಒತ್ತು ಕೊಟ್ಟು ಬೆಳೆಸುತ್ತಾರೆ. ವಿವಾಹದ ಸರಾಸರಿ ವಯಸ್ಸು ಕೂಡಾ 25 ದಾಟಿದೆ. ಅಷ್ಟು ಹೊತ್ತಿಗಾಗಲೇ ಉತ್ತಮ ಶಿಕ್ಷಣ ಪಡೆದು, ಒಳ್ಳೆಯ ಉದ್ಯೋಗ ಪಡೆದಿರುವ ಯುವಯುವತಿಯರಲ್ಲಿ ತನಗೇನು ಬೇಕು, ಏನು ಬೇಡ ಎಂದು ಯೋಚಿಸುವ ಪ್ರಬುದ್ಧತೆಯೂ ಬೆಳೆದಿರುತ್ತದೆ. ಅವರು ತಮ್ಮ ಸ್ವಾತಂತ್ರ್ಯ, ಕನಸುಗಳು, ಗುರಿಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ವಿವಾಹವಾದರೆ ಇವೆಲ್ಲಕ್ಕೂ ಅಡ್ಡಿಯಾಗುತ್ತದೆ ಎಂಬುದು ಅವರ ತರ್ಕ. 

ಬದಲಾಗುತ್ತಿರುವ ಯುವಮನಸ್ಸುಗಳ ಯೋಚನೆ ಬದಲಾಗುತ್ತಿರುವ ಸಮಾಜಕ್ಕೆ ಹಿಡಿದ ಕನ್ನಡಿ. ಸಿಂಗಲ್ ಆಗಿರಲಿ, ಬಿಡಲಿ- ತಮ್ಮ ಜೀವನದ ನಿರ್ಧಾರವನ್ನು ತಾವೇ ತೆಗೆದುಕೊಳ್ಳುವ ಪ್ರಬುದ್ಧತೆ ಇದ್ದಲ್ಲಿ, ಈ ಕುರಿತ ಸ್ವಾತಂತ್ರ್ಯವನ್ನೂ ನೀಡುವುದರಲ್ಲಿ ಅಡ್ಡಿ ಇಲ್ಲ ಅಲ್ಲವೇ?

click me!