ಪ್ರೀತಿ ಇಲ್ಲದ ಮೇಲೆ ಹೂವು ಕೂಡಾ ಅರಳುವುದಿಲ್ಲ ಎನ್ನುತ್ತಾರೆ ಕವಿ. ಪ್ರೀತಿ ಎಂಬುದು ಜೀವ ವಿಕಾಸಗೊಂಡ ದಿನದಿಂದಲೂ ಹರಿದು ಬರುತ್ತಲೇ ಇದೆ. ಪೌರಾಣಿಕ ಕತೆಗಳಲ್ಲಿ ಬರುವ ಹಲವು ಪ್ರೇಮಕತೆಗಳು ಪ್ರೀತಿಯ ವಿವಿಧ ಮುಖಗಳನ್ನು ಪರಿಚಯಿಸುತ್ತವೆ.
ಪ್ರೀತಿಗೆ ಹಲವು ಮುಖಗಳು- ಅದು ಕೆಲವೊಮ್ಮೆ ಅರಳಿಸಬಲ್ಲದಾದರೆ, ಮತ್ತೆ ಕೆಲವು ಬಾರಿ ಮುದುಡಿಸಬಲ್ಲದು, ಹುಟ್ಟು ಹಾಕುವಂತೆಯೇ ನಾಶವನ್ನೂ ಮಾಡಬಲ್ಲದು. ಅದೇನೇ ಇರಲಿ, ಜೀವಿಗಳ ಉಗಮ, ಬೆಳವಣಿಗೆ ಸಂತೋಷ, ನೋವು ಎಲ್ಲದಕ್ಕೂ ಪ್ರೀತಿಯೇ ಮೂಲಸರಕು. ಪ್ರೀತಿ ಬಹಳ ಬಲವಾದ ಎಮೋಶನ್. ಪುರಾಣ ಕತೆಗಳಲ್ಲೂ ಹಲವಾರು ಲವ್ ಸ್ಟೋರಿಗಳು ಇಂದಿಗೂ ಉದಾಹರಣೆಯಾಗಿ, ಮಾದರಿಯಾಗಿ, ಚೆಂದದ ಪ್ರೀತಿಯಾಗಿ ಉಳಿದುಕೊಂಡಿವೆ.
ರಾಧಾ ಕೃಷ್ಣ
ಪ್ರೀತಿಪ್ರೇಮಕ್ಕೆ ಸಮಾಜದ ಯಾವ ನಿಯಮವೂ ಅಪ್ಲೈ ಆಗುವುದಿಲ್ಲ ಎಂಬುದನ್ನು ತೋರಿಸಿಕೊಟ್ಟವರು ರಾಧಾ ಕೃಷ್ಣ. ರಾಧೆ ಕೃಷ್ಣನಿಗಿಂತ ದೊಡ್ಡವಳಷ್ಟೇ ಅಲ್ಲ, ವಿವಾಹಿತೆ ಕೂಡಾ. ಹಾಗಿದ್ದೂ ಕೃಷ್ಣನೆಡೆಗಿನ ಆಕೆಯ ಪ್ರೇಮವನ್ನು ತಡೆಯಲು ಸ್ವತಃ ಆಕೆಗೂ ಸಾಧ್ಯವಾಗಲಿಲ್ಲ. ಪ್ರೇಮ ಆಗುವುದೇ ಹೊರತು, ಒತ್ತಾಯಪೂರ್ವಕವಾಗಿ ಹುಟ್ಟುವುದಿಲ್ಲ ಎಂಬುದನ್ನು ಇವರ ಪ್ರೇಮ ಸಾಬೀತುಗೊಳಿಸುತ್ತದೆ. ಇವರಿಬ್ಬರ ಪ್ರೀತಿಯನ್ನು ಪ್ರೀತಿಯ ಅತ್ಯುನ್ನತ ರೀತಿ ಎಂದು ಇಂದಿಗೂ ಬಹುತೇಕರು ಕೊಂಡಾಡುತ್ತೇವೆ. ಅವರಿಬ್ಬರ ಪ್ರೇಮವನ್ನು ಆಧ್ಯಾತ್ಮದ ಮಟ್ಟಕ್ಕೇರಿಸಿ ಸಂಭ್ರಮಿಸುತ್ತೇವೆ. ಸಾಮಾನ್ಯ ಮಹಿಳೆಯಾಗಿದ್ದ ರಾಧೆಯನ್ನು ಆಕೆಯ ಪ್ರೀತಿಯ ಕಾರಣದಿಂದಲೇ ದೈವೀಸ್ವರೂಪದಲ್ಲಿ ನೋಡುತ್ತೇವೆ.
ನಳ ದಮಯಂತಿ
ಇವರಿಬ್ಬರ ಪ್ರೀತಿ ಪರಸ್ಪರ ಮುಖ ನೋಡುವ ಮುಂಚೆಯೇ ಆರಂಭವಾದದ್ದು. ಹಂಸದ ಮಧ್ಯಸ್ಥಿಕೆಯಲ್ಲಿ ಇಬ್ಬರೂ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದರು. ದಮಯಂತಿಗೆ ಆಕೆಯ ತಂದೆ ಭೀಮ ಸ್ವಯಂವರ ಏರ್ಪಡಿಸುವ ಮುಂಚೆಯೇ ಆಕೆ ನಳನೇ ತನ್ನ ಪತಿ ಎಂದು ನಿರ್ಧರಿಸಿಯಾಗಿರುತ್ತದೆ. ಒಟ್ಟಿನಲ್ಲಿ ಅವರಿಬ್ಬರ ವಿವಾಹವಾಗುತ್ತದೆ. ಆದರೆ, ನಂತರದಲ್ಲಿ ಕಲಿಯ ಕಾರಣದಿಂದ ಇವರಿಬ್ಬರ ಜೀವನದಲ್ಲಿ ಅನೇಕಾನೇಕ ಅಗ್ನಿ ಪರೀಕ್ಷೆಗಳು ಎದುರಾಗುತ್ತವೆ. ಅವೆಲ್ಲವನ್ನೂ ಜಯಿಸಿ ಮತ್ತೆ ಒಂದಾಗುವ ನಳದಮಯಂತಿಯ ಕತೆ ಭಾರತೀಯ ಪುರಾಣದಲ್ಲಿ ಮಹತ್ವದ ಸ್ಥಾನ ಪಡೆದಿದೆ.
undefined
ವಿಶ್ವಾಮಿತ್ರ ಹಾಗೂ ಮೇನಕೆ
ಇದು ಹ್ಯಾಪಿ ಎಂಡಿಂಗ್ ಪ್ರೇಮಕತೆಯಲ್ಲ, ಆದರೂ ತ್ಯಾಗ, ನಂಬಿಕೆ ಮುಂತಾದ ಕಾರಣಗಳಿಂದಾಗಿ ಜನಮಾನಸದಲ್ಲಿ ಉಳಿದಿದೆ. ಋಷಿವರ್ಯ ವಿಶ್ವಾಮಿತ್ರರ ಘೋರ ತಪಸ್ಸು ತನ್ನ ಸ್ಥಾನವನ್ನೇ ಅಲ್ಲಾಡಿಸುತ್ತದೆ ಎಂದು ತಿಳಿದಾಗ ದೇವತೆಗಳ ರಾಜ ಇಂದ್ರ, ವಿಶ್ವಾಮಿತ್ರರ ತಪಸ್ಸನ್ನು ಭಂಗ ಮಾಡುವಂತೆ ಅಪ್ಸರೆ ಮೇನಕಳನ್ನು ಕಳುಹಿಸುತ್ತಾನೆ. ಋುಷಿಯ ತಪಸ್ಸನ್ನು ಭಂಗ ಮಾಡುವ ಉದ್ದೇಶದಿಂದ ಧರೆಗಿಳಿದ ಮೇನಕೆಗೆ ಅವರಲ್ಲಿ ಪ್ರೇಮವೇ ಆಗಿಹೋಗುತ್ತದೆ. ವಿಶ್ವಾಮಿತ್ರರೂ ಮೇನಕೆಯೂ ಪ್ರೇಮದ ಉತ್ಕಟತೆಯಲ್ಲಿರುವಾಗಲೇ ಒಂದು ದಿನ ಮೇನಕೆ ತಾನು ಬಂದು ಅವರೆದುರು ನರ್ತಿಸಿದ ಉದ್ದೇಶವನ್ನು ಹೇಳುತ್ತಾಳೆ. ಇದರಿಂದ ನಂಬಿಕೆದ್ರೋಹಕ್ಕೊಳಗಾದಂತೆನಿಸಿ ವಿಶ್ವಾಮಿತ್ರರು ಮೇನಕೆಗೆ ಇನ್ನೆಂದೂ ತನಗೆ ಮುಖ ತೋರಿಸಬೇಡ ಎಂದು ಶಾಪ ನೀಡುತ್ತಾರೆ. ಇದರಿಂದ ಆಕೆ ಅವರನ್ನು ಬಿಟ್ಟು ತೆರಳಲೇಬೇಕಾಗುತ್ತದೆ. ಆದರೆ ಇವರಿಬ್ಬರ ಪ್ರೇಮಕತೆ ಮಾತ್ರ ಶಾಶ್ವತವಾಗಿದೆ.
ಸತ್ಯವಾನ್ ಸಾವಿತ್ರಿ
ಮಾದ್ರ ದೇಶದ ರಾಜಕುಮಾರಿ ಸಾವಿತ್ರಿ, ಆಳಲು ದೇಶವಿಲ್ಲದೆ ಕಾಡು ಸೇರಿದ್ದ ಕುರುಡ ರಾಜ ಬಲ್ವನ ಪುತ್ರ ಸತ್ಯವಾನನನ್ನು ವಿವಾಹವಾಗಲು ನಿರ್ಧರಿಸುತ್ತಾಳೆ. ಆದರೆ, ನಾರದರು ಸತ್ಯವಾನನಿಗೆ ಒಂದೇ ವರ್ಷ ಆಯಸ್ಸಿರುವುದೆಂದು ಸಾವಿತ್ರಿಗೆ ತಿಳಿಸುತ್ತಾರೆ. ಅದು ತಿಳಿದೂ ಕೂಡಾ ಸಾವಿತ್ರಿ ತಾನು ಮನಸ್ಸಿನಲ್ಲೇ ಆತನನ್ನು ಪತಿಯಾಗಿ ಸ್ವೀಕರಿಸಿದ್ದೇನೆಂದು ಹೇಳಿ ವಿವಾಹವಾಗುತ್ತಾಳೆ. ಪರಮ ಪ್ರೀತಿಗೆ ಪತಿ ಸಾಯುತ್ತಾನೆಂದು ತಿಳಿದೂ ವಿವಾಹವಾದ ಸಾವಿತ್ರಿಯ ಕತೆಯೇ ಸಾಕು. ಆದರೆ, ಈ ಪ್ರೇಮಕತೆ ಇಷ್ಟಕ್ಕೇ ನಿಲ್ಲುವುದಿಲ್ಲ. ವಿವಾಹವಾದ ನಂತರ ರಾಜವೈಭೋಗ ಬಿಟ್ಟು ಅತ್ತೆ ಮಾವ ಪತಿಯ ಸೇವೆ ಮಾಡುತ್ತಾ ಕಾಡಿನಲ್ಲಿ ವಾಸಿಸುವ ಸಾವಿತ್ರಿ ಪತಿಯ ಪ್ರಾಣ ಉಳಿಸಲು ಹಲವಾರು ವೃಥಗಳನ್ನು ಆಚರಿಸುತ್ತಾಳೆ. ಅಷ್ಟಾಗಿಯೂ ಒಂದು ದಿನ ಸತ್ಯವಾನನ ಪ್ರಾಣ ತೆಗೆದುಕೊಂಡು ಹೋಗಲು ಯಮ ಬಂದಾಗ, ಆತನೊಂದಿಗೆ ವಾದಿಸಿ, ಮಾತಿನಲ್ಲೇ ಆತನನ್ನು ಸೋಲಿಸಿ ಪತಿಯ ಪ್ರಾಣವನ್ನು ಹಿಂದೆ ಪಡೆದುಕೊಂಡು ಬರುತ್ತಾಳೆ ಸಾವಿತ್ರಿ. ತನ್ನ ಅಚಲ ಪ್ರೇಮದಿಂದ ಪತಿಯ ಪ್ರಾಣವನ್ನುಳಿಸಿದ ಸಾವಿತ್ರಿಯದು ಅನುರೂಪವಾದ ಪ್ರೇಮಕತೆಯಲ್ಲದೆ ಮತ್ತೇನು?
ಐಶ್ವರ್ಯಾಳನ್ನು ಪ್ರೀತಿಸುತ್ತೇನೆ ಎಂದರಿತಾಗ ಅಳಲು ಶುರು ಮಾಡಿದ್ರಂತೆ ಅಭಿಷೇಕ್
ಶಿವ ಪಾರ್ವತಿ
ಶಿವ ಪಾರ್ವತಿಯ ಪ್ರೇಮ ಕತೆ ಬಹಳ ಆಸಕ್ತಿಕರವಾಗಿದೆ. ಅರ್ಧನಾರೀಶ್ವರನಾಗಿ ಪತ್ನಿಗೆ ತನ್ನ ಸಮ ಭಾಗ ಕೊಟ್ಟವನು ಶಿವನಲ್ಲವೇ? ದಕ್ಷ ರಾಜನ ಮಗಳು ಸತಿ ತಂದೆಯ ವಿರೋಧದ ಹೊರತಾಗಿಯೂ ಶಿವನನ್ನು ಪ್ರೇಮಿಸಿ ವಿವಾಹವಾಗುತ್ತಾಳೆ. ಆನಂತರ ದಕ್ಷ ರಾಜ ಯಜ್ಞವನ್ನೇರ್ಪಡಿಸಿ ಅಲ್ಲಿಗೆ ಕರೆಯದಿದ್ದರೂ, ಸತಿ ತಂದೆಯ ಮನೆಯಲ್ಲವೇ ಎಂದುಕೊಂಡು ಹೋಗುತ್ತಾಳೆ. ಎಲ್ಲರ ಸಮ್ಮುಖದಲ್ಲಿ ದಕ್ಷ ಶಿವನ ಕುರಿತು ಅವಮಾನಿಸುವ ಮಾತುಗಳನ್ನಾಡುವುದನ್ನು ಕೇಳಿದಾಗ ಕೋಪಗೊಂಡ ಸತಿ, ತನ್ನ ತಂದೆ ಶಿವನ ಕೈಯಿಂದಲೇ ಮೃತನಾಗಲಿ, ಆತ ಮತ್ತೆ ಹುಟ್ಟಿ ಬಂದಾಗ ತಾನು ಮತ್ತೆ ಆತನ ಪುತ್ರಿಯಾಗಿ ಹುಟ್ಟಲಿ- ಹಾಗೆ ಹುಟ್ಟಿದಾಗಲಾದರೂ ತಂದೆಯ ಮೇಲೆ ಗೌರವ ತನ್ನಲ್ಲಿ ಉಳಿಯುವಂತಾಗಲಿ ಎಂದು ಶಾಪವನ್ನು ಕೊಡುತ್ತಾ ಅಗ್ನಿಗೆ ಹಾರಿ ಪ್ರಾಣ ಬಿಡುತ್ತಾಳೆ. ಹೀಗೆ ಸತಿ ಪುನರ್ಜನ್ಮದಲ್ಲಿ ಪಾರ್ವತಿಯಾಗಿ ಹುಟ್ಟುತ್ತಾಳೆ. ಇತ್ತ ಶಿವ ಸತಿಯನ್ನು ಕಳೆದುಕೊಂಡು ಅಲೆಮಾರಿಯಾಗಿ ಕೋಪೋದ್ರೇಕದಿಂದ ಕುದಿಯುತ್ತಾ ದಿನ ಕಳೆಯುತ್ತಿರುತ್ತಾನೆ. ಆಗ ಪಾರ್ವತಿ ತಪಸ್ಸಿನ ಮೂಲಕ ಮತ್ತೆ ಶಿವನನ್ನು ಮೆಚ್ಚಿಸಿ ವಿವಾಹವಾಗುತ್ತಾಳೆ. ಹೀಗೆ ಪಾರ್ವತಿ ಮತ್ತು ಶಿವ ಜನ್ಮಜನ್ಮಕ್ಕೂ ಒಂದಾಗುತ್ತಾ ಪ್ರೀತಿಯನ್ನೇ ಬದುಕಾಗಿಸುತ್ತಾರೆ.
ಇವರಲ್ಲದೆ, ಲಕ್ಷ್ಮಣ ಊರ್ಮಿಳೆ, ರಾಮ ಸೀತೆ, ದುಷ್ಯಂತ ಶಕುಂತಲೆ, ಭೀಮ ಹಿಡಿಂಬೆ- ಹೀಗೆ ಹಲವಾರು ಪೌರಾಣಿಕ ಪ್ರೇಮಕತೆಗಳು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿವೆ.