ದುಃಖದಿಂದ ನಿಮ್ಮನ್ನು ಮೇಲೆತ್ತುವ ಎರಡು ಕತೆಗಳು

By Suvarna News  |  First Published Jan 18, 2020, 7:35 PM IST

ಈ ಕಷ್ಟಗಳೆಲ್ಲ ನನಗೇ ಯಾಕೆ ಬರುತ್ತವೆ. ಇಂಥಾ ನೋವು, ಅವಮಾನಗಳಿಂದ ಮುಕ್ತಿಯೇ ಇಲ್ಲವಾ.. ಇದು ನಿಮ್ಮೊಬ್ಬರ ಕತೆ ಅಲ್ಲ. ನಮ್ಮೆಲ್ಲರ ಕತೆ. ಇಂಥಾ ದುಃಖದಿಂದ ನಿಮ್ಮನ್ನು ಮೇಲೆತ್ತುವ, ನಿಮ್ಮಲ್ಲಿ ಸ್ಪೂರ್ತಿ ತುಂಬುವ ಕತೆಗಳು ಇಲ್ಲಿವೆ.


ಲೈಫ್ ನಲ್ಲಿ ಟರ್ನಿಂಗ್ ಪಾಯಿಂಟ್ ಗಳು ಬಹಳ. ಹೆಚ್ಚಿನ ಸಲ ಅವುಗಳಿಂದ ನಮ್ಮ ಬದುಕಿನಲ್ಲಿ ಏನಾದರೊಂದು ಬದಲಾವಣೆ ಆಗಿಯೇ ತೀರುತ್ತದೆ. ಆದರ ನಮಗೆ ಈ ನೋವು, ದುಃಖ ತರುವ ಹತಾಶೆ ಅಷ್ಟಿಷ್ಟಲ್ಲ. ಈ ಕಷ್ಟಗಳೆಲ್ಲ ನನಗೇ ಯಾಕೆ ಬರುತ್ತವೆ. ಇಂಥಾ ನೋವು, ಅವಮಾನಗಳಿಂದ ಮುಕ್ತಿಯೇ ಇಲ್ಲವಾ.. ಇದು ನಿಮ್ಮೊಬ್ಬರ ಕತೆ ಅಲ್ಲ. ನಮ್ಮೆಲ್ಲರ ಕತೆ. ಇಂಥಾ ದುಃಖದಿಂದ ನಿಮ್ಮನ್ನು ಮೇಲೆತ್ತುವ, ನಿಮ್ಮಲ್ಲಿ ಸ್ಪೂರ್ತಿ ತುಂಬುವ ಕತೆಗಳು ಇಲ್ಲಿವೆ.

ತಾಯಿ ಕೊಲೆ ನ್ಯಾಯ ಪಡೆಯಲು 89 ಬಾರಿ ಭಾರತಕ್ಕೆ ಬಂದ ವಿದೇಶಿ ಉದ್ಯಮಿ

Tap to resize

Latest Videos

ಕತೆ ೧

ಇದೊಂದು ಜೆನ್ ಕತೆ. ಒಂದೂರಿನಲ್ಲಿ ಒಬ್ಬ ಜೆನ್ ಮಾಸ್ಟರ್ ಇದ್ದ. ಆತ ಮೌನವನ್ನು ಇಷ್ಟ ಪಡುತ್ತಿದ್ದ. ಅವನಿದ್ದಾಗ ಆ ವಿಹಾರದಲ್ಲಿ ಸದ್ದು ಆಗುತ್ತಿದ್ದದ್ದೇ ಕಡಿಮೆ. ಜನರೂ ಬಂದು ಮೌನವಾಗಿ ಕೂರುತ್ತಿದ್ದರು. ಮನಸ್ಸಿಗೆ ಸಮಾಧಾನ ಅನಿಸಿದ ಮೇಲೆ ಎದ್ದು ಹೋಗುತ್ತಿದ್ದರು. ಆ ವಿಹಾರದ ಪಕ್ಕದಲ್ಲೇ ಒಬ್ಬ ಮುದುಕಿ ತನ್ನ ಪಾಡಿಗೆ ತಾನು ಹೂವು ಮಾರುತ್ತಾ ಜೀವನ ನಿರ್ವಹಿಸುತ್ತಿದ್ದಳು. ಅವಳಿಗೆ ಕಣ್ಣು ಕಾಣುತ್ತಿರಲಿಲ್ಲ. ಆದರೂ ಬೆಳಗ್ಗೆ ವಿಹಾರದ ಮುಂಭಾಗ ಕಸ ಗುಡಿಸಿ ಶುಚಿಯಾಗಿಡುತ್ತಿದ್ದಳು.

ಆ ಜೆನ್ ಮಾಸ್ಟರ್ ಗೆ ವಯಸ್ಸಾಗಿತ್ತು. ಒಂದು ದಿನ ಆತ ಮೃತಪಟ್ಟ.

ಮರುದಿನ ಅದೇ ದಾರಿಯಾಗಿ ಬಂದ ಯುವ ಸಂನ್ಯಾಸಿಯನ್ನು ಮುದುಕಿ ಪಕ್ಕ ಕರೆದಳು.

'ಏನಪ್ಪಾ, ಗುರುಗಳ ಕಾಲವಾಯಿತೇನು?' ಅಂತ ಕೇಳಿದಳು.

'ಹೌದಮ್ಮಾ, ನಿನ್ನೆ ರಾತ್ರಿ ಧ್ಯಾನ ಮಾಡುತ್ತಿದ್ದ ಹಾಗೆ ಅವರ ಪ್ರಾಣ ಪಕ್ಷಿ ಹಾರಿ ಹೋಯ್ತು' ಅಂದ ಆ ಯುವ ಭಿಕ್ಕು 'ನಿನಗೆ ಯಾರೂ ಈ ವಿಷಯ ಹೇಳಲಿಲ್ಲವೇ?' ಅಂತ ವಿಚಾರಿಸಿದ.

'ಅಯ್ಯೋ ಮಗು, ಇವತ್ತು ಬೆಳಗ್ಗೆ ವಿಹಾರದಲ್ಲಿ ಗಂಟೆಯ ಸದ್ದು ಕೇಳಿದಾಗಲೇ ನನಗೆ ಮನದಟ್ಟಾಯ್ತು, ಅವರು ಹೋದರು ಅಂತ. ನನಗೆ ಹೊರಗಣ್ಣು ಇರಲಿಕ್ಕಿಲ್ಲ. ಆದರೆ ಒಳಗಿನ ಕಣ್ಣು ಸೂಕ್ಷ್ಮ ಕಳೆದುಕೊಂಡಿಲ್ಲ' ಎಂದಳು ಮುದುಕಿ. ಆಮೇಲೆ ಮುಂದುವರಿಯುತ್ತಾ ಹೇಳಿದಳು, 'ಹುಡುಗಾ, ಈ ಗುರುಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವರು ಅಭಿನಂದನೆ ಹೇಳಿದರೆ ಅಲ್ಲಿ ಅಭಿನಂದನೆ ಮಾತ್ರ ಇರುತ್ತಿತ್ತು. ಅವರು ದುಃಖಿಸಿದರೆ ಅಲ್ಲಿ ದುಃಖ ಮಾತ್ರ ಇರುತ್ತಿತ್ತು. ನಾನು ಈವರೆಗೆ ನೋಡಿದ ಯಾರೂ ಇವರ ಹಾಗಿರಲಿಲ್ಲ. ಎದುರಿಂದ ನಗು ನಗುತ್ತಾ ಅಭಿನಂದನೆ ಹೇಳಿದರೂ ಒಳಗೊಳಗೇ ಅವರಿಗೆ ಈರ್ಷೆ ಇರುತ್ತಿತ್ತು. ಇನ್ನೊಬ್ಬರ ದುಃಖದಲ್ಲಿ ಭಾಗಿಯಾದಂತೆ ಕಂಡರೂ ಒಳಗೊಳಗೇ ಸಂತೋಷ ಪಡುತ್ತಿದ್ದರು. ತಾವು ಹೊರಗಿನಿಂದ ಏನು ಮಾಡುತ್ತಾರೋ ಒಳಗೆ ಅದರ ವಿರುದ್ಧ ಇರುತ್ತಿದ್ದರು..' ಅಂದು ಸುಮ್ಮನಾದಳು.

ಈ ಕತೆ ನಮ್ಮ ಮನಸ್ಸಿಗೆ ಕನ್ನಡಿ ಹಿಡಿದ ಹಾಗಿದೆ. ನಾವು ಖುಷಿಯಲ್ಲಿರುವಾಗ ಒಳಗೆ ದುಃಖ. ಇನ್ನೊಬ್ಬರ ನೋವಲ್ಲಿ ಭಾಗಿಯಾದ ಹಾಗೆ ತೋರಿಸಿದರೂ ಒಳಗೊಳಗೇ ಸಂತೋಷ ಪಡುವವರು. ಈ ಗುಣ ನಮ್ಮ ದುಃಖ ಹೆಚ್ಚಿಸುತ್ತದೆ. ನಗು ಬಂದರೆ ಮುಕ್ತವಾಗಿ ನಕ್ಕುಬಿಡಿ. ನೋವಾದರೆ ಅತ್ತು ಬಿಡಿ, ಆಗ ಹಾಯಾಗಿರುತ್ತೀರಾ.

ಡಸ್ಟ್ ಬಿನ್‌ನಲ್ಲಿ ಸಿಕ್ಕ ಆ ಹಾಳೆಯಲ್ಲಿ ಒಂದು ಪ್ರೀತಿ ಕತೆ ಇತ್ತು!...

ಕತೆ ೨

ಇದು ಗೋರ್ ಗೋಪಾಲದಾಸರು ಹೇಳಿದ ಕತೆ. ಅವಳೊಬ್ಬ ಕ್ಯಾನ್ಸರ್ ಪೇಶಂಟ್. ಅವಳ ವಯಸ್ಸು ಕೇವಲ ೨೭ ವರ್ಷ. ಅವಳು ಜೋರಾಗಿ ಮನದುಂಬಿ ನಗುತ್ತಿದ್ದಳು. ತೊಡೆಯ ಮೇಲೆ ಅವಳ ಎರಡು ವರ್ಷ ವಯಸ್ಸಿನ ಮಗಳೂ ನಗುತ್ತಿದ್ದಳು. ಎಂಥಾ ಕಲ್ಲೆದೆಯವರ ಮನಸ್ಸೂ ತುಂಬಿಬರುವ ಕ್ಷಣಗಳವು. ಆ ಯುವತಿಯ ಬಗ್ಗೆ ತಿಳಿದಿದ್ದ ಒಬ್ಬ ವ್ಯಕ್ತಿ ಈ ಘಟನೆಯನ್ನು ನೋಡುತ್ತಿದ್ದ. ಒಂದು ಕ್ಷಣ ಅವನಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅರೆ, ಇವಳ ಈ ನಗು ಕಂಡರೆ ಇವಳಿಗೆ ಕ್ಯಾನ್ಸರ್ ಇದೆ ಅಂತ ಯಾರಾದರೂ ನಂಬುತ್ತಾರಾ.. ಒಂದು ಕ್ಷಣ ಚಿಂತಿಸಿದ. ಅವನಿಗೆ ಅನಿಸಿತು. ಹೌದಲ್ಲಾ, ನಾವು ಕೊರಗಲಿಕ್ಕೆ, ನೋವಿಗೆ, ದೂರು ಹೇಳಲಿಕ್ಕೆ ಸದಾ ಒಂದಿಲ್ಲೊಂದು ಕಾರಣಗಳನ್ನು, ನೆಪಗಳನ್ನು ಹುಡುಕುತ್ತಾ ಇರುತ್ತೇವೆ. ಖುಷಿ ಪಡಲು ನೂರೆಂಟು ಕಾರಣಗಳು ನಮ್ಮ ಮುಂದಿದ್ದರೂ ನಾವು ಅವುಗಳನ್ನು ನಿರ್ಲಕ್ಷ್ಯ ಮಾಡಿಬಿಡುತ್ತೇವೆ. ದುಃಖವನ್ನು ಮಾತ್ರ ಎತ್ತಿ ಹಿಡಿಯುತ್ತೇವೆ. ಆಗ ದುಃಖ ನಿರಂತರವಾಗುತ್ತದೆ. ಖುಷಿ ಮರೀಚಿಕೆಯಾಗುತ್ತದೆ. ಈ ಯುವತಿಗೆ ನಾಳೆ ತಾನು ಬಹಳ ನೋವುಣ್ಣಲಿದ್ದೇನೆ ಅನ್ನುವುದು ಗೊತ್ತು. ಆದರೆ ಅದಕ್ಕಾಗಿ ಅವಳು ಈ ದಿನದ ಖುಷಿಯನ್ನು ಬಿಟ್ಟು ಕೊಡಲು ತಯಾರಿಲ್ಲ. ಅಂಥಾ ನೋವಿನಲ್ಲಿರುವವಳಿಗೇ ಇದು ಸಾಧ್ಯವಾಗುತ್ತದೆ ಅಂದರೆ ನನಗ್ಯಾಕೆ ಸಾಧ್ಯವಿಲ್ಲ. ನಾನೂ ಇಂದಿನಿಂದ ಖುಷಿಗಳನ್ನಷ್ಟೇ ಹೆಕ್ಕಿಕೊಳ್ಳುತ್ತೇನೆ. ನೋವು, ಅವಮಾನ ಅವುಗಳ ಪಾಡಿಗೆ ಅವುಗಳಿರಲಿ..

click me!