
ಸೆಲೆಬ್ರಿಟಿಗಳು ಹಂಚಿಕೊಂಡ ಪೇರೆಂಟಿಂಗ್ ಅನುಭವಗಳು
ಮಕ್ಕಳ ವಿಚಾರದಲ್ಲಿ ಈ ಕಾಲದ ಪೋಷಕರದು ಹೆಚ್ಚು ಕೇರ್ ಟೇಕಿಂಗ್ ಸ್ವಭಾವ. ಅವರನ್ನು ಎಷ್ಟುಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರೂ ಸಾಲುವುದಿಲ್ಲ. ಇದರಿಂದ ಬೇಸತ್ತ ಮಕ್ಕಳು ‘ಈ ಪೇರೆಂಟ್ಸ್ ಕಾಟ ತಡೆಯೋದಕ್ಕೆ ಸಾಧ್ಯಇಲ್ಲಪ್ಪ ’ ಅಂತ ಗೊಣಗೋದು ಮಾಮೂಲಿ. ಹಾಗಿದ್ದರೆ ಇಬ್ಬರ ವಿಚಾರಗಳಲ್ಲಿ ಸಮಾನತೆ ಮೂಡೋದು ಹೇಗೆ ಅನ್ನುವ ಪ್ರಶ್ನೆಗೆ ಸೆಲೆಬ್ರಿಟಿಗಳ ಉತ್ತರ ಇಲ್ಲಿದೆ.
ಹೆತ್ತವರನ್ನು ತಮ್ಮಿಷ್ಟಕ್ಕೆ ದಾರಿಗೆ ತರುವುದು ಮಕ್ಕಳಿಗೆ ಕಷ್ಟವಲ್ಲ. ಹಾಗೆ ಮಕ್ಕಳನ್ನೂ ತಮ್ಮಿಷ್ಟಕ್ಕೆ ತಕ್ಕ ಹಾಗೆ ನಡೆಸಿಕೊಳ್ಳುವುದು ಪೋಷಕರಿಗೂ ಕಷ್ಟವೇನಲ್ಲ. ಅದಕ್ಕೆ ಪ್ರಮುಖವಾದ ಕೆಲಸವೊಂದು ಆಗಬೇಕು. ಅದು ಇಬ್ಬರೂ ಈಗೋಗಳಿಂದ, ಹಠಗಳಿಂದ ಕಳಚಿಕೊಳ್ಳೋದು.
ತಾಳ್ಮೆ, ಶಾಂತ ಮನಸ್ಸಿನಿಂದ ಮಿತ್ರರಂತೆ ವರ್ತಿಸೋದು ಅನ್ನೋದು ನಮ್ಮ ಸ್ಟಾರ್ ಸೆಲೆಬ್ರಿಟಿಗಳ ಅಭಿಪ್ರಾಯ. ಅವರು ತಾವು ಬೆಳೆದು ಬಂದ ಹಾದಿಗಿಂತ ಭಿನ್ನವಾಗಿ, ತಮ್ಮದೇ ಶೈಲಿಯಲ್ಲಿ ಮಕ್ಕಳನ್ನು ಬೆಳೆಸುತ್ತಿದ್ದಾರೆ.
ಅಮ್ಮ ಹಾಕಿಕೊಟ್ಟಹಾದಿಯಲ್ಲೇ ಮಕ್ಕಳಿಗೂ ಮಾರ್ಗದರ್ಶನ : ಕಾಜೋಲ್
ನನ್ನ ತಾಯಿಗೆ ಮುಂದಾಲೋಚನೆ , ತಾಳ್ಮೆ, ವಿಸ್ತೃತ ಆಲೋಚನೆಗಳು ಜಾಸ್ತಿ. ನಮ್ಮ ಇಷ್ಟ-ಕಷ್ಟಗಳಿಗೆ ಯಾವತ್ತೂ ಅಡ್ಡಿಯಾಗದೆ ಪ್ರೋತ್ಸಾಹಿಸುತ್ತಾ ಬಂದರು. ಅವರು ಹೇಳಿಕೊಟ್ಟಜೀವನಾನುಭವ, ನಮ್ಮೊಂದಿಗೆ ನಡೆದುಕೊಂಡ ರೀತಿಯೇ ನಾವು ಇಷ್ಟುಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು.
ನನ್ನ ಮಕ್ಕಳನ್ನೂ ಅದೇ ರೀತಿ ನೋಡಿಕೊಳ್ಳುತ್ತಿದ್ದೇನೆ. ಇಬ್ಬರು ಮಕ್ಕಳಿಗೂ ಯಾವುದೇ ವಿಷಯದಲ್ಲಾದರೂ ನಿರ್ಧಾರ ತೆಗೆದುಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ. ಅವರು ಹೆಚ್ಚು ತಾಳ್ಮೆಯಿಂದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದರಿಂದ ಅವರಲ್ಲಿ ಸ್ವತಂತ್ರವಾಗಿ ಚಿಂತಿಸುವ, ಪ್ರತಿಯೊಂದು ವಿಷಯದಲ್ಲೂ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಿರುವುದು ನನ್ನ ಗಮನಕ್ಕೆ ಬಂದಿದೆ.
ಇದರಿಂದ ನನ್ನ ಖುಷಿ ಹೆಚ್ಚಿದೆ. ಇಷ್ಟಾಗಿಯೂ ಮಕ್ಕಳ ಕಷ್ಟಗಳಲ್ಲಿ, ಗೊಂದಲಗಳಲ್ಲಿ ಪೋಷಕರ ಒತ್ತಾಸೆಯ ಅಗತ್ಯವಿದೆ. ಅಂಥ ಸನ್ನಿವೇಶಗಳಲ್ಲಿ ನಾನು ಮಕ್ಕಳ ಜೊತೆಯಾಗಿ ನಿಲ್ಲುತ್ತೇನೆ. ಪೋಷಕರು ಸ್ನೇಹಿತರು ಅನ್ನೋ ಮನೋಭಾವ ಮಕ್ಕಳಲ್ಲಿ ಬೆಳೆದಾಗ ಮಾತ್ರ ಅವರಿಬ್ಬರ ನಡುವೆ ಉತ್ತಮ ಸಂವಹನ ಬೆಳೆಯಲು ಸಾಧ್ಯ.
ಮಕ್ಕಳಿಗೆ ಆರ್ಡರ್ ಮಾಡಬೇಡಿ, ಜಗತ್ತಿನ ಬಗ್ಗೆ ಕುತೂಹಲ ಹೆಚ್ಚಿಸಿ : ಸುಚಿತ್ರಾ ಕೃಷ್ಣಮೂರ್ತಿ, ಗಾಯಕಿ
ಬಾಲ್ಯದಲ್ಲಿದ್ದಾಗ ಹೆತ್ತವರಿಂದ ಬರುತ್ತಿದ್ದ ‘ಯಾರ ಪರ್ಮಿಷನ್‌ನಿಂದ ನೀನು ಆ ಕೆಲಸ ಮಾಡ್ದೆ’ ಎಂಬಂತಹ ಪ್ರಶ್ನೆಗಳು ನನ್ನನ್ನು ಬಹಳ ಕಾಡುತ್ತಿದ್ದವು. ಮಕ್ಕಳ ಆತ್ಮವಿಶ್ವಾಸ ಕುಗ್ಗಿಸುವಂತಹ ಪ್ರಶ್ನೆಗಳಿವು. ಮಕ್ಕಳು ತೆಗೆದುಕೊಳ್ಳುವ ತೀರ್ಮಾನ ಹಾಗೂ ಆ ಬಗ್ಗೆ ಅವರಲ್ಲಿ ನಂಬಿಕೆ ಹುಟ್ಟಿಸುವ ಕೆಲಸ ಪೇರೆಂಟ್ಸ್ ಜವಾಬ್ದಾರಿ.
ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ, ಯಾವುದರಲ್ಲಿ ಅವರಿಗೆ ಸಂತೋಷ ಇದೆ, ಅವರ ಗುರಿ ಏನು ಎಂಬುದರ ಬಗ್ಗೆ ಅವರಿಂದಲೇ ನಿಧಾನವಾಗಿ ಕೇಳಬೇಕು. ನನ್ನ ಮಗಳು ಕಾವೇರಿಯ ಸ್ಕೂಲ್ ಡೇಸ್ ಮುಗಿದ ಮೇಲೆ ಅವಳಿಗೆ ಸ್ಕಾಲರ್‌ಶಿಪ್ ಬಂತು. ಬಳಿ ಕೂರಿಸಿಕೊಂಡು ನಿಧಾನವಾಗಿ ‘ನಿನಗೆ ಯಾವುದರಿಂದ ತುಂಬಾ ಸಂತೋಷ ಸಿಗುತ್ತೆ’ ಎಂದು ಕೇಳಿದಾಗ ಅವಳಿಗೆ ಸಂಗೀತ ಇಷ್ಟಎಂದು ಗೊತ್ತಾಯಿತು.
ಹಾಗಾಗಿ ಮಗಳ ಆಸೆಯಂತೆ ಅವಳಿಗೆ ಸಪೋರ್ಟ್ ಮಾಡಿದೆ. ಹಣವೇ ಮಾನದಂಡವಾಗಿ ಮಕ್ಕಳನ್ನು ಬೆಳೆಸದೆ ಅದರಿಂದಾಚೆಗಿನ ಜಗತ್ತನ್ನು ಮಕ್ಕಳಿಗೆ ಕಟ್ಟಿಕೊಡುವ ಪ್ರಯತ್ನ ಮಾಡಬೇಕು. ಅವರ ಆಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕಬಾರದು. ಅದು ಉತ್ತಮವಾಗಿದ್ದರೆ ಅದಕ್ಕೆ ನೀರೆರೆಯುವ, ತಪ್ಪಾಗಿದ್ದರೆ ತಿದ್ದಿ ತಿಳಿಸಿ ಹೇಳುವ ಕೆಲಸ ಮಾಡಬೇಕು. ಜೊತೆಗೆ ಕುತೂಹಲ ಹುಟ್ಟಿಸುವ ವಿಚಾರಗಳನ್ನು ಹೇಳುತ್ತಾ ಬೆಳೆಸಬೇಕು.
ಮಕ್ಕಳಲ್ಲಿ ಸ್ಪೂರ್ತಿ ತುಂಬಿ, ಗುರಿ ತಪ್ಪಿಸಬೇಡಿ: ಮೇಘನಾ ನಾರಾಯಣ್, ಉದ್ಯಮಿ
‘ ನೀನೀಗ ಈಜೋದು ಬೇಡ, ಟ್ಯಾನ್ ಆಗ್ತೀಯಾ. ಟ್ಯಾನ್ ಆದ್ರೆ ನಿನ್ನ ಚೆಂದ ಹಾಳಾಗುತ್ತೆ’ ಅನ್ನುವ ಪೋಷಕರು ಹೆಚ್ಚಾಗುತ್ತಿದ್ದಾರೆ. ಇದು ಮಕ್ಕಳ ಸಾಧನೆಯ ಗುರಿ ತಪ್ಪಿಸುತ್ತದೆ. ಮಕ್ಕಳ ಗುರಿ ಸಾಧನೆಗೆ ಯಾವಾಗಲೂ ಪಾಸಿಟಿವ್ ಮಾತುಗಳನ್ನು ಹೇಳುತ್ತಿರಿ. ಆಗ ಅವರಿಗೆ ಇನ್ನಷ್ಟುಸಾಧಿಸುವ ಮನಸ್ಸು, ಆಸೆ ಮೂಡುತ್ತದೆ.
ನನಗೆ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆಯುವ ಸಾಮರ್ಥ್ಯ ಇದೆ ಎಂದಾದರೆ, ಪಡೆದ ಆ ಚಿನ್ನಕ್ಕೆ ನನ್ನ ಸೌಂದರ್ಯ, ಕಪ್ಪಗಿದ್ದೀನೊ, ಬೆಳ್ಳಗಿದ್ದೀನೊ ಎಂಬುದು ಗಣನೆಗೆ ಬರುವುದಿಲ್ಲ. ಅಲ್ಲಿ ನಮ್ಮ ಸಾಧನೆ, ಪರಿಶ್ರಮ ನೋಡಿ ಗೌರವ ಸಿಗುತ್ತದೆ. ಇದು ನನ್ನ ತಾಯಿ ನನಗೆ ನೀಡಿದ ಪಾಠ.
ಹಾಗಾಗಿ ನನಗೆ ಸ್ವಿಮ್ಮಿಂಗ್‌ನಲ್ಲಿ ಹೆಚ್ಚು ವಿಶ್ವ ಸಾಧನೆ ಮಾಡಲು ಸಾಧ್ಯವಾಯಿತು. ಸ್ವಿಮ್ಮಿಂಗ್ ಅನ್ನು ಈಗಲೂ ಮುಂದುವರಿಸಲು ಇಷ್ಟಪಡುತ್ತೇನೆ. ಜೊತೆಗೆ ಸ್ಪೂರ್ತಿ ಕತೆಗಳನ್ನು ಮಕ್ಕಳಿಗೆ ಹೇಳಿ ಬೆಳೆಸುವುದರಿಂದ ಮಕ್ಕಳಲ್ಲಿ ಒಳ್ಳೊಳ್ಳೆ ಆಲೋಚನೆಗಳು ಬೆಳೆಯುತ್ತವೆ.
ಮಕ್ಕಳಲ್ಲಿ ಪ್ರಶ್ನೆ ಕೇಳಿ, ಅವರ ಪ್ರಶ್ನೆಗೂ ಕಿವಿಯಾಗಿ: ಅನುಜಾ ಚೌಹಾಣ್ , ಸಾಹಿತಿ
ಮಕ್ಕಳು ನಮ್ಮ ಪ್ರತೀ ನಡವಳಿಕೆಯನ್ನೂ ಗಮನಿಸುತ್ತವೆ. ಅದನ್ನು ನೋಡಿಕೊಂಡೇ ಅವೂ ಬೆಳೆಯುತ್ತವೆ. ಮಕ್ಕಳಿಗೆ ನಾವು ಹೆಚ್ಚೆಚ್ಚು ಪ್ರಶ್ನೆಗಳನ್ನು ಕೇಳಬೇಕು. ಇದು ಮಕ್ಕಳ ಚಿಂತನಾ ಸಾಮರ್ಥ್ಯ ಹೆಚ್ಚಿಸುತ್ತದೆ. ಜೊತೆಗೆ ಅವರ ಪ್ರಶ್ನೆಗಳಿಗೂ ಕಿವಿಯಾಗಬೇಕು.
ಹಾಗಂತ ಮಗುವಿಗೆ ‘ನಿನಗೆ ಅಮ್ಮ ಇಷ್ಟನೋ ಅಥವಾ ಅಪ್ಪ ಇಷ್ಟನೋ’ ಎನ್ನುವಂತಹ ಪ್ರಶ್ನೆಗಳು ಕೇಳುವುದು ಅಸಂಬದ್ಧ. ಬದಲಾಗಿ ಮಕ್ಕಳಿಗೆ ಯಾವ ಹಾಡು, ಯಾವ ಪುಸ್ತಕ, ಯಾವ ಶೋ, ಇಷ್ಟವಾದ ಟೀಚರ್, ಸುತ್ತಲಿನ ಫ್ರೆಂಡ್ಸ್ ಸರ್ಕಲ್ ಇಂತಹ ಪ್ರಶ್ನೆಗಳು ಕೇಳುವುದು ಸೂಕ್ತ.
ಇದರಿಂದ ಮಕ್ಕಳು ಪೇರೆಂಟ್ಸ್ ಜೊತೆ ಓಪನ್ ಆಗಿ ಮಾತನಾಡಲು ಸಾಧ್ಯ. ಅವರಲ್ಲಿನ ಇಷ್ಟಕಷ್ಟಗಳನ್ನು ಪೇರೆಂಟ್ಸ್ ತಿಳಿಯುವ ಪ್ರಯತ್ನ ಮಾಡಬಹುದು. ಇದು ಮಕ್ಕಳಲ್ಲಿ ಪೇರೆಂಟ್ಸ್ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದುವಂತೆ ಮಾಡುತ್ತವೆ. ತಮ್ಮ ಭಾವನೆ ಹಂಚಿಕೊಳ್ಳಲು ಕಂಫರ್ಟ್ ಫೀಲ್ ನೀಡುತ್ತದೆ. ಇಂದಿನ ಸಮಾಜದ ಆಗುಹೋಗುಗಳ ಬಗ್ಗೆ ಮಕ್ಕಳಲ್ಲಿ ಜ್ಞಾನ ತುಂಬುವುದು, ಚರ್ಚಿಸುವುದು, ಅಭಿಪ್ರಾಯ ಹಂಚಿಕೊಳ್ಳುವುದೂ ಬಹಳ ಮುಖ್ಯ.
-
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.