ಸಂಬಂಧದಲ್ಲಿ ಯಾವಾಗಲೂ ಸಿಹಿಯೇ ತುಂಬಿರುವುದಿಲ್ಲ. ಕೆಲವೊಮ್ಮೆ ಕಹಿಯೂ ಇಣುಕಬಹುದು. ಅದು ನಮ್ಮ ವರ್ತನೆಯಿಂದಲೇ ಉಂಟಾಗಬಹುದು ಎನ್ನುವುದು ಮಾತ್ರ ವಿಚಿತ್ರ. ನಮ್ಮಲ್ಲಿ ತುಂಬಿರುವ ವಿವಿಧ ಭಾವನೆಗಳ ಪರಿಣಾಮವಾಗಿ ನಮ್ಮ ಲವ್ ಲೈಫ್ ಅನ್ನು ನಾವೇ ಕೈಯಾರೆ ಹಾಳು ಮಾಡಿಕೊಳ್ಳಲೂಬಹುದು.
ಪ್ರೀತಿ(Love), ಸಂಬಂಧಗಳಲ್ಲಿ (Relationship) ಎಲ್ಲವೂ ಹಿತವಾದ ಭಾವನೆಗಳೇ ಇರಬೇಕೆಂದಿಲ್ಲ. ಅಪೇಕ್ಷಿಸದ ಕೆಲವು ನಡತೆಗಳೂ ನಮ್ಮಲ್ಲಿ ನುಸುಳುಬಹುದು. ಭಾವನಾತ್ಮಕವಾಗಿ ನಾವು ಯಾರನ್ನೋ ತುಂಬ ಹಚ್ಚಿಕೊಂಡಿರುವಾಗ ಅವರೆಡೆಗೆ ನಮ್ಮ ವರ್ತನೆ (Behaviour) ಇತರರಿಗೆ ವಿಚಿತ್ರ ಎನ್ನಿಸಲೂಬಹುದು. ಸ್ವತಃ ನಮ್ಮ ಪ್ರೀತಿಪಾತ್ರರಿಗೂ ಕಿರಿಕಿರಿಯಾಗಬಹುದು.
ಬದುಕಿನ ಒಂದಲ್ಲ ಒಂದು ಹಂತದಲ್ಲಿ ನಾವೆಲ್ಲರೂ ಕೆಲವರ ಮೇಲೆ ಕ್ರಶ್ (Crush) ಹೊಂದಿರುತ್ತೇವೆ, ಪ್ರೀತಿಯ ಭಾವನೆ ಮೂಡಿರುತ್ತದೆ. ಅವರು ನಮ್ಮನ್ನು ಪ್ರೀತಿಸುವುದಿಲ್ಲ ಎಂದು ತಿಳಿದೂ ಅವರ ಬಗ್ಗೆ ಮಧುರವಾದ ಭಾವನೆಯನ್ನೇ ಹೊಂದಿರುತ್ತೇವೆ. ಅವರು ಮೊದಲ ಕ್ರಶ್ ಆಗಿರಬಹುದು, ಯಾವುದೋ ನೆಂಟರ ಮನೆಯ ಹುಡುಗನಾಗಿರಬಹುದು, ಎದುರುಮನೆಯ ಬಾಲ್ಯಕಾಲದ ಕ್ಲಾಸ್ ಮೇಟ್ (Classmate) ಆಗಿರಬಹುದು. ಆದರೆ, ಇಂಥದ್ದು ಪದೇ ಪದೆ ಪುನರಾವರ್ತನೆಯಾದಾಗ ನಮ್ಮ ಲವ್ ಲೈಫ್ (Love Life) ನಲ್ಲೊಂದು ವಿಚಿತ್ರ ವಿಧಾನ ರೂಪುಗೊಳ್ಳುತ್ತದೆ. ಅದು ಅರಿಯದೆಯೇ ನಮ್ಮ ವರ್ತನೆಯಲ್ಲಿ ಇಣುಕುತ್ತದೆ. ಇದಕ್ಕೆ ಪ್ರಮುಖವಾಗಿ ಮೂರು ಕಾರಣಗಳನ್ನು ಗುರುತಿಸಲಾಗಿದೆ. ಹೀಗಾಗಿ, ನಿಮ್ಮ ಪ್ರೀತಿಪಾತ್ರರನ್ನು ಸ್ವಾಗತಿಸುವ ಮುನ್ನ, ನಿಮ್ಮಲ್ಲಿ ಅಂತರ್ಗತವಾಗಿರಬಹುದಾದ ಈ ಮೂರು ವರ್ತನೆಗಳನ್ನು ಗುರುತಿಸಿಕೊಳ್ಳಿ.
• ಪ್ರೀತಿಪಾತ್ರರ ಕುರಿತು ಆತಂಕದ (Anxiety) ಬಾಂಧವ್ಯ
ನಿಮ್ಮ ಪ್ರೀತಿಪಾತ್ರರ ಮೇಲೆ ನೀವು ಅತಿ ಎನಿಸುವಷ್ಟು ಅಥವಾ ಅನಾರೋಗ್ಯಕರ ಆಕರ್ಷಣೆ (Attraction) ಬೆಳೆಸಿಕೊಳ್ಳುತ್ತೀರಿ. ಪ್ರೀತಿಯ ಬಗ್ಗೆ ಆತಂಕದಿಂದ ಕೂಡಿದ್ದರೆ ಹೀಗಾಗುತ್ತದೆ. ಅವರೊಂದಿಗಿನ ಬಾಂಧವ್ಯದ ಕುರಿತು ನಿಮ್ಮಲ್ಲಿ ಆತಂಕ ಇರುತ್ತದೆ. ನಿಮಗೆ ಲವರ್ ನಿಂದ ದೂರವಾಗುವ ಭಯವಾಗಬಹುದು. ಹೀಗಾಗಿ, ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕೆಂಬ ಭಾವನೆ ಮೂಡಬಹುದು. ಆತಂಕಭರಿತ ಮೆಸೇಜ್, ಫೋನ್ ಕಾಲ್ ಗಳನ್ನು ಅವರಿಗೆ ಮಾಡುತ್ತಲೇ ಇರಬಹುದು. ಇದು ಎಷ್ಟು ಅತಿರೇಕಕ್ಕೆ ಹೋಗಬಲ್ಲದು ಎಂದರೆ, ನಿಮ್ಮ ಇಂತಹ ವರ್ತನೆಯ ಕಾರಣದಿಂದ ನಿಮ್ಮ ಲವರ್ ನಿಮ್ಮಿಂದ ದೂರವೇ ಇರಲು ಯತ್ನಿಸಬಹುದು.
8,000 ಮೀಟರ್ ಎತ್ತರದ 5 ಪರ್ವತಾರೋಹಣ; ಮೊದಲ ಭಾರತೀಯಳೆಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಿಯಾಂಕಾ ಮೋಹಿತೆ
• ಆತ್ಮವಿಶ್ವಾಸದ (Confidence) ಕೊರತೆಯಿಂದ ಬಳಲುತ್ತಿರುವಿರಾ?
ಗೆಳೆಯ ಅಥವಾ ಸಂಗಾತಿಯ ಪ್ರೀತಿ ನಿಮಗಿದ್ದೇ ಇರುತ್ತದೆ. ಆದರೂ ಅದನ್ನು ಗರಿಷ್ಠ ಮಟ್ಟದಲ್ಲಿ ಬಯಸುತ್ತೀರಿ. “ಅಂಥ ಪ್ರೀತಿಗೆ ಪಾತ್ರನಾಗಿದ್ದೇನೆʼ ಎನ್ನುವ ನಂಬಿಕೆಯೂ ನಿಮ್ಮಲ್ಲಿರುತ್ತದೆ. ಆದರೂ ಪದೇ ಪದೆ ಸಂಗಾತಿ ತಮ್ಮನ್ನು ಅತಿಯಾಗಿ ಪ್ರೀತಿಸುವುದಿಲ್ಲ ಎನ್ನುವ ಭಾವನೆಯನ್ನೂ ಹೊಂದುತ್ತೀರಿ. ಆತ್ಮವಿಶ್ವಾಸದ ಕೊರತೆ ಇರುವವರು ಪದೇ ಪದೆ ತಮ್ಮ ಸಂಗಾತಿಗೆ ಈ ಕಾರಣಕ್ಕಾಗಿಯೇ ಬೇಸರ ಉಂಟುಮಾಡುತ್ತಿರುತ್ತಾರೆ. ಪ್ರೀತಿಗೆ ಪಾತ್ರರಾಗಲು ತಾವು ಅನರ್ಹ, ಪ್ರೀತಿ ಗಳಿಸಲು ತಮ್ಮಲ್ಲಿ ಏನೋ ಕೊರತೆ ಇದೆ ಎನ್ನುವ ಭಾವನೆಯಲ್ಲಿ ನರಳುತ್ತಾರೆ. ಹೀಗಾಗಿ, ಇಂತಹ ವಿಷಯಗಳತ್ತಲೇ ಅವರ ಗಮನ ನೆಟ್ಟು ಸಂಗಾತಿಯನ್ನೂ ಪದೇ ಪದೆ ಗೋಳಾಡಿಸುತ್ತಾರೆ.
• ತಿರಸ್ಕಾರದ ಭಯ (Rejection Fear)
ಸಂಗಾತಿ ನಿಮ್ಮನ್ನು ತಿರಸ್ಕರಿಸುವ ಭಯ ನಿಮ್ಮಲ್ಲಿ ಅಗಾಧವಾಗಿರಬಹುದು. ಎಲ್ಲರೂ ಪ್ರೀತಿಗೆ ಅರ್ಹರೇ ಆಗಿರುತ್ತಾರೆ. ಆದರೂ ತಿರಸ್ಕರಿಸುವ ಭಾವನೆ ನಿಮ್ಮನ್ನು ಕಂಗೆಡಿಸಬಹುದು. ನಿಮ್ಮ ಭಾವನೆಗಳಿಗೆ ಸಂಗಾತಿ ಸರಿಯಾದ ವಿಧಾನದಲ್ಲಿ ಪ್ರತಿಕ್ರಿಯಿಸದೇ ಇದ್ದಾಗ ನಕಾರಾತ್ಮಕ ಭಾವನೆಗಳು ನಿಮ್ಮಲ್ಲಿ ತುಂಬಿಕೊಳ್ಳಬಹುದು. ಆಗ ನಿಮ್ಮ ಸಂಬಂಧ ಇನ್ನಷ್ಟು ಕಹಿಯಾಗಬಹುದು.
ಹಣೆ ಕಪ್ಪಗಿದ್ದರೆ ಈ ರೀತಿ ಪರಿಹಾರ ಕಂಡುಕೊಳ್ಳಿ..
ಏನು ಮಾಡಬೇಕು?
ಸಂಗಾತಿ ನಿಜವಾಗಿಯೂ ನಿಮಗೆ ಪ್ರತಿಸ್ಪಂದಿಸದೇ ಇದ್ದಾಗ ಅದನ್ನೇ ಕೊರಗುವ ಬದಲು ವಾಸ್ತವವನ್ನು ಒಪ್ಪಿಕೊಳ್ಳುವ ಪ್ರಯತ್ನ ಮಾಡಬೇಕು. ಭಾವನಾತ್ಮಕವಾಗಿ ಅವರು ನಿಮಗೆ ನಿಲುಕದೇ ಇರುವ ಸತ್ಯವನ್ನು ಅರಗಿಸಿಕೊಳ್ಳಬೇಕು. ಅವರ ಭಾವನೆಗಳನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅವರು ಕೆಲಸದಲ್ಲಿ ವ್ಯಸ್ತರಾಗಿರಬಹುದು ಅಥವಾ ಇನ್ನೊಂದು ಸಂಬಂಧದಲ್ಲೂ ಸಿಲುಕಿರಬಹುದು. ಅದನ್ನು ತಿಳಿದುಕೊಂಡು ವರ್ತಿಸಬೇಕು. ತಿರಸ್ಕಾರದ ಭಯವನ್ನು ಪೋಷಿಸುವ ಬದಲು, ಆತ್ಮವಿಶ್ವಾಸವನ್ನು ಇನ್ನಷ್ಟು ಕುಗ್ಗಿಸಿಕೊಳ್ಳುವ ಮುನ್ನ ದೃಢವಾಗಿ ಎದ್ದು ನಿಲ್ಲಬೇಕು.