ಅಮ್ಮಾ ಬಾ ಎಂದು ಮಗಳು ಕಣ್ಣೀರಿಡುತ್ತಿದ್ದಾಳೆ. ಆದರೆ, ಅದನ್ನು ನೋಡಿಯೂ ಆ ತಾಯಿಗೆ ಮಗಳನ್ನು ತಬ್ಬಿಕೊಂಡು ಸಮಾಧಾನ ಮಾಡದ ಪರಿಸ್ಥಿತಿ. ಈ ದೃಶ್ಯ ನೋಡಿ ಇಡೀ ಕರುನಾಡು ಕಣ್ಣೀರು ಹಾಕಿತ್ತು. ಕರ್ತವ್ಯಕ್ಕಾಗಿ ಎಷ್ಟೇ ನೋವಾದರೂ ಮಗಳಿಂದ ದೂರ ಉಳಿದ ಆ ಮಹಾತಾಯಿಯ ಹೆಸರು ಸುಗಂಧ. ಮಗಳು ಐಶ್ವರ್ಯಾ. ಬೆಳಗಾವಿಯ ಈ ಸ್ಟಾಫ್ ನರ್ಸ್ ಹೇಳಿದ ಅನುಭವ ಕಥನ ಇದು.
ಬ್ರಹ್ಮಾನಂದ ಹಡಗಲಿ
ಇದ್ದಕ್ಕಿದ್ದಂತೆ ಕೆಲವು ಪರಿಸ್ಥಿತಿಗೆ ನಾವು ಬಂಧಿಯಾಗಿ ಬಿಡುತ್ತೇವೆ. ನನಗೆ ಕರ್ತವ್ಯದ ಕರೆ ಬಂತು. ಆಗ ನನ್ನ ಮಗಳದು ಒಂದೇ ಹಠ. ಮಮ್ಮಿ ಎಲ್ಲಿ ಹೋಗಿದ್ದಾಳೆ, ನನ್ನ ಬಿಟ್ಟು ಏಕೆ ಹೋಗಿದ್ದಾಳೆ ಎಂದು ಕೇಳುತ್ತಲೇ ಇದ್ದಳು. ನಾನು ಎರಡು ಮೂರು ದಿನಗಳವರೆಗೆ ಮನೆಗೆ ಹೋಗಿರಲಿಲ್ಲ. ನಿತ್ಯ ನನ್ನ ಬರುವಿಕೆಯನ್ನೇ ಕಾಯುತ್ತಿದ್ದ ಮಗಳಿಗೆ ನಾನು ಒಮ್ಮೆಲೆ ಮನೆಗೆ ಬಾರದಿದ್ದಾಗ ಆ ಮುಗ್ಧ ಮನಸಿನಲ್ಲಿ ಆಗುವ ನೋವು ಏನೆಂದು ತಾಯಿಗೆ ಅರಿವಾಗದಿರದು.
ಅವಳು ಸರಿಯಾಗಿ ಊಟವನ್ನೇ ಮಾಡಿರಲಿಲ್ಲ. ಮಮ್ಮಿಯನ್ನು ನೋಡಲೇಬೇಕು ಎಂದು ಹಠ ಹಿಡಿದಾಗ ನನ್ನ ಪತಿ ಒಂದು ಸಾರಿ ಮಮ್ಮಿಯನ್ನು ನೋಡುವಿಯಂತೆ ಎಂದು ಹೇಳಿ ನಾನು ಕ್ವಾರಂಟೈನ್‌ನಲ್ಲಿದ್ದ್ಜ ಅಗಕ್ಕೆ ಕರೆದುಕೊಂಡು ಬಂದಿದ್ದರು. ಇಂಥಾ ಹೊತ್ತಲ್ಲಿ ಅಳು ತಡೆಯುವುದು ಹೇಗೆ?
ತಾಯ್ತನ ಮನೆಯಲ್ಲೇ ಬಿಟ್ಟುಬಂದೆ
ನನ್ನ ಮಗಳೊಟ್ಟಿಗೆ ನಿತ್ಯ ಕಾಲ ಕಳೆಯಬೇಕು, ಆಕೆಯ ಆರೈಕೆ ಮಾಡಬೇಕು ಎಂದು ಮನಸು ಕನವರಿಸುತ್ತಿತ್ತು. ಆದರೆ, ಸ್ವಲ್ಪ ದಿನಗಳ ಕಾಲ ಅನಿವಾರ್ಯ ಎಂಬಂತೆ ನನ್ನ ತಾಯ್ತನವನ್ನು ಮನೆಯಲ್ಲಿಯೇ ಬಿಟ್ಟು ಬಂದೆ.
ಮಗಳು ನನ್ನನ್ನೇ ಹೆಚ್ಚು ಹಚ್ಚಿಕೊಂಡಿದ್ದಾಳೆ. ಅವಳು ನನ್ನನ್ನು ಬಿಟ್ಟು ಇರುವುದಕ್ಕಾಗಲಿ, ನಾನೂ ಅವಳನ್ನು ಬಿಟ್ಟಿರುವುದಕ್ಕೆ ಸಾಧ್ಯವಿರಲಿಲ್ಲ. ಆದರೆ, ಅನಿವಾರ್ಯ ಪರಿಸ್ಥಿತಿ. ಇದು ಮಗಳಿಗೆ ಗೊತ್ತಿಲ್ಲ. ಮಮ್ಮಿ ಯಾಕೆ ಕೆಲಸಕ್ಕೆ ಹೋಗುತ್ತಿದ್ದಾಳೆ, ವಾಪಸ್ ಯಾಕೆ ಬರುತ್ತಿಲ್ಲ ಎಂಬ ಪ್ರಶ್ನೆಯಷ್ಟೇ ಅವಳದು. ಏನು ಹೇಳುವುದು.
ಕ್ವಾರಂಟೈನ್ ಮುಗಿಸಿಕೊಂಡು ಮರಳಿ ಮನೆಗೆ ಬಂದೆ. ಆಗ ಮಗಳನ್ನು ಅಪ್ಪಿಕೊಂಡಾಗ, ಆದ ಆ ಖುಷಿ ಅಷ್ಟಿಷ್ಟಲ್ಲ. ಮಗಳ ಆ ಪ್ರೀತಿ ಮುಂದೆ ನಾ ಸೋತು ಹೋದೆ. ಮಗುವಿಗೆ ಜನ್ಮ ನೀಡಿದಾಗ ಆದಷ್ಟುಖುಷಿಯನ್ನೇ ಮತ್ತೆ ಈ ಅನುಭವದ ಮೂಲಕ ಕಟ್ಟಿಕೊಟ್ಟಳು ಮಗಳು. ತಾಯ್ತನವನ್ನು ಮತ್ತೆ ಪಡೆದ ಖುಷಿ ಅಂದು ನನ್ನದಾಗಿತ್ತು.
ನೀ ನನ್ನ ಬಿಟ್ಟು ಎಲ್ಲೂ ಹೋಗಬೇಡ. ನೀನು ಡ್ಯೂಟಿಗೆ ಹೋಗಬೇಡ ಅಮ್ಮ ಎಂದು ಕಂದಮ್ಮ ಹೇಳಿದಾಗ ಕಣ್ಣೀರು ನನಗೆ ತಿಳಿಯದ ಹಾಗೆ ಸುರಿಯುತ್ತಿತ್ತು. ಇಂತಹ ಪರಿಸ್ಥಿತಿ ಬರುತ್ತದೆ ಎಂದು ನಾನು ಊಹೆ ಕೂಡ ಮಾಡಿರಲಿಲ್ಲ. ಆದರೆ ಕೊರೋನಾ ಇರುವುದರಿಂದ ನಾನು ಕೂಡ ಮಗಳನ್ನು ಹೆಚ್ಚು ಮುದ್ದು ಮಾಡದ ಪರಿಸ್ಥಿತಿ. ಕೊರೋನಾ ಹಿಡಿತಕ್ಕೆ ಬಂದ ಮೇಲೆ ಮಗಳ ಮಮತೆಯನ್ನು ತಾಯಿಯಾಗಿ ಸಂಪೂರ್ಣ ಅನುಭವಿಸುವೆ.
ಕರ್ತವ್ಯವೇ ದೊಡ್ಡ ತಾಯಿ
ಕೋವಿಡ್ ರೋಗಿಗಳ ಸೇವೆ ಮಾಡುವಾಗ ಭಯ ಬಂತು. ಈ ರೀತಿ ಕೆಲಸ ಮಾಡುವಾಗ ನಮಗೂ ಏನಾದರೂ ಇನ್ಫೆಕ್ಷನ್ ಆದರೆ ಏನು ಮಾಡೋದು ಎಂಬ ಭಯ ಕಾಡಿತು. ಏನಾದರೂ ಆಗಲಿ ಎಂದು ನಿರ್ಧಾರ ಮಾಡಿ ಡ್ಯೂಟಿಗೆ ಬಂದುಬಿಟ್ಟಿದ್ದೆ. ಮನೆಯಲ್ಲಿ ಧೈರ್ಯ ತುಂಬಿದ್ದರಿಂದ ಕೆಲಸ ಮಾಡೋಕೆ ಸ್ವಲ್ಪ ಧೈರ್ಯವೂ ಬಂತು.
ಮಕ್ಕಳಿಗೆ ಮನಿ ಪಾಠ ಮನೆಯಲ್ಲೇ ಆಗಲಿ
ಇವೆಲ್ಲದರ ನಡುವೆ ಮಗಳ ನೆನಪು ಬೇರೆ. ತಾಯ್ತನ ತ್ಯಾಗ ಮಾಡಿ ಕರ್ತವ್ಯವೇ ದೊಡ್ಡ ತಾಯಿ ಎಂದು ಕೆಲಸ ಮಾಡಲಾರಂಭಿಸಿದೆ. ನಮಗೂ ಈ ರೋಗ ವ್ಯಾಪಿಸಿದರೆ ಮುಂದೇನು ಎಂಬ ಚಿಂತೆ ನನ್ನ ಮನದಲ್ಲೂ ಇದೆ. ಅಂತಹ ಸಂದರ್ಭ ಬಂದರೆ ನಮ್ಮ ಕುಟುಂಬದ ಪರಿಸ್ಥಿತಿ ಏನು ಎಂಬ ಆಲೋಚನೆ ಕೂಡ ಇದೆ. ನಾವು ಕೂಡ ನಮ್ಮ ಕುಟುಂಬಕ್ಕೆ ನಾವೇ ಒಂದು ಪ್ರಪಂಚ ಆಗಿರುತ್ತೇವೆ. ನಮ್ಮನ್ನು ಕಳೆದುಕೊಂಡರೆ ಅವರಿಗೆ ಆಗುವ ನೋವು ಊಹಿಸಿಕೊಳ್ಳಲು ಆಗುವುದಿಲ್ಲ. ಆದರೆ, ಅದೆಲ್ಲವನ್ನೂ ಮನಸಲ್ಲಿ ಅದಿಮಿಟ್ಟುಕೊಂಡು ಕರ್ತವ್ಯಕ್ಕೆ ಬಂದಿದ್ದೇನೆ.
ನಾನು ಕೂಡ ನನ್ನ ಮಗಳು ಚಿಕ್ಕವಳು ಇದ್ದಾಳೆ ಎಂದು ಹೇಳಿ ಕೆಲಸಕ್ಕೆ ಬರದೇ ಇರಬಹುದಿತ್ತು. ಆದರೆ ಮನಸ್ಸು ಬರಲಿಲ್ಲ. ಈಗ ನಾನು ನನ್ನ ಮಗಳನ್ನು ಬಿಟ್ಟಿರುತ್ತೇನೆ ಎನ್ನುವುದಕ್ಕಿಂತ ಮಗಳು ನನ್ನನ್ನು ಬಿಟ್ಟಿರುವುದೇ ತುಂಬಾ ಕಷ್ಟವಾಗಿದೆ.